ಚಾಮರಾಜನಗರ: ಪೂರ್ವ ಮುಂಗಾರು ಅವಧಿಯಲ್ಲಿ ಅಧಿಕ ಮಳೆ ಬಿದ್ದು ಸುಮಾರು ೫೭೧ ರೈತರ ೨೪೧.೦೩ ಹೆಕ್ಟೇರ್ ಪ್ರದೇಶದ ಬೆಳೆಹಾನಿಯಾಗಿದ್ದು, ಜಿಲ್ಲೆಯಲ್ಲಿ ಸದ್ಯದ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳು ಮಳೆ ಕೊರತೆ ಎದುರಿಸ ಲಾರಂಭಿಸಿವೆ. ಈ ನಡುವೆ ಮೋಡ ಕವಿದ ವಾತಾವರಣ ಆವರಿಸಿ ತುಂತುರು ಹನಿ ಬೀಳುತ್ತಿದ್ದು, ಗಟ್ಟಿ ಮಳೆ ಆಗಬೇಕಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ೨೦೨೫ರ ಮಾರ್ಚ್, ಏಪ್ರಿಲ್, ಮೇ ಮಾಹೆಯ ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿತ್ತು.
ಮಾರ್ಚ್‌ನಲ್ಲಿ ೧೫.೩ ಮಿ.ಮೀ. ವಾಡಿಕೆಗಿಂತ ೧೬.೪ ಮಿ. ಮೀ. ಮಳೆ ಬಿದ್ದಿತ್ತು.ಅಂತೆಯೇ ಏಪ್ರಿಲ್‌ನಲ್ಲಿ ೬೬.೮ ಮಿ.ಮೀ. ವಾಡಿಕೆಗಿಂತ ೮೬.೦೬ ಮಿ.ಮೀ., ಮೇ ನಲ್ಲಿ ೧೧೪ ಮಿ.ಮೀ. ವಾಡಿಕೆಗಿಂತ ೧೧೯.೦೨ ಮಿ.ಮೀ. ಮಳೆ ಸುರಿದಿತ್ತು. ಕ್ರಮವಾಗಿ ಈ ಮೂರೂ ತಿಂಗಳುಗಳಲ್ಲಿ ಶೇ.೭, ಶೇ.೩೬, ಶೇ.೫ರಷ್ಟು ಹೆಚ್ಚು ಮಳೆಯಾಗಿ ಸುಮಾರು ೫೭೧ ರೈತರ ೨೪೧.೦೩ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, ಪರಿಹಾರ ಕ್ಕಾಗಿ ರೈತರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.
ಪೂರ್ವ ಮುಂಗಾರಿನಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿಹೆಚ್ಚು ೧೫೧.೧೮ ಹೆಕ್ಟೇರ್, ಚಾಮರಾಜನಗರ ತಾಲ್ಲೂಕಿನಲ್ಲಿ ೭೫.೬೨ ಹೆಕ್ಟೇರ್, ಹನೂರು ತಾಲ್ಲೂಕಿನಲ್ಲಿ ೧೪.೫೫ ಹೆಕ್ಟೇರ್, ಕೊಳ್ಳೇಗಾಲ ತಾಲ್ಲೂಕಿನಲ್ಲಿ ೦.೫ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿರುವ ಈ ವರದಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಅವರಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಖಾಂತರ ಕಳೆದ ತಿಂಗಳೇ ಸಲ್ಲಿಕೆಯಾಗಿದೆ. ಅಲ್ಲಿ ಅನುಮತಿ ದೊರೆತ ಕೂಡಲೇ ಜಿಲ್ಲಾಧಿಕಾರಿಯವರ ಪ್ರಕೃತಿ ವಿಕೋಪ ನಿಧಿಯ ವೈಯಕ್ತಿಕ ಠೇವಣಿ ಖಾತೆಯಿಂದ ಡಿಬಿಟಿ ಮುಖಾಂತರ ರೈತರ ಖಾತೆಗೆ ನೇರವಾಗಿ ಪರಿಹಾರ ಹಣ ಜಮೆ ಆಗಲಿದೆ.
ಬಹುತೇಕ ಬಾಳೆ ಬೆಳೆಯೇ ಹೆಚ್ಚು ಹಾನಿಗೊಳಗಾಗಿದ್ದು, ಎನ್‌ಡಿ ಆರ್‌ಎಫ್ ಮಾರ್ಗಸೂಚಿ ಪ್ರಕಾರ ಬಾಳೆ ಬೆಳೆಗೆ (ನೀರಾವರಿ) ೧೭ ಸಾವಿರ ರೂ., ಮಳೆ ಆಶ್ರಿತಕ್ಕೆ ೮,೫೦೦ ರೂ.ಗಳನ್ನು ಪ್ರತಿ ಹೆಕ್ಟೇರ್‌ಗೆ ನಿಗದಿಪಡಿಸಲಾಗಿದೆ. ೨೦೨೪ರ ಪೂರ್ವ ಮುಂಗಾರು ಅವಧಿಯಲ್ಲಿ ೯೮೫.೩೮ ಹೆ.ಬಾಳೆ, ೧೫.೯ ಹೆಕ್ಟೇರ್ ಜೋಳದ ಬೆಳೆ ಅತಿವೃಷ್ಟಿಯಿಂದ ಹಾನಿಗೊಳಗಾಗಿ ೨,೧೭೦ ರೈತರಿಗೆ ಒಟ್ಟು ೧,೫೭,೪೩,೧೭೫ ರೂ. ಪರಿಹಾರವು ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯ ಅನುದಾನದಿಂದ ಪಾವತಿಯಾಗಿತ್ತು. ಈ ಬಾರಿಯ ಪೂರ್ವ ಮುಂಗಾರು ಬೆಳೆ ಹಾನಿ ಪರಿಹಾರ ಇಷ್ಟರಲ್ಲೇ ಸಂದಾಯ ಆಗಲಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ
” ಸೋಮವಾರವೂ ದಟ್ಟ ಮೋಡ ಕವಿದು ಚಾಮರಾಜನಗರದಲ್ಲಿ ಹನಿ ತೊಟ್ಟಿಕ್ಕುತ್ತಲೇ ಇತ್ತು. ಈ ಜಿನುಗು ಮಳೆಯಿಂದ ಬೆಳೆದು ನಿಂತಿರುವ ಬೆಳೆಗಳಿಗೆ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ. ಮಳೆ ಜೋರಾಗಿ ಬೀಳಬೇಕು.”
– ಬೂದಿತಿಟ್ಟು ಮಲ್ಲೇಶ್, ರೈತ
” ಜೂನ್, ಜುಲೈನಲ್ಲಿ ಮಳೆ ಕೊರತೆ ಯಾಗಿದೆಯಾದರೂ ಬೆಳೆಗಳಿಗೆ ತೊಂದರೆ ಉಂಟಾಗಿಲ್ಲ. ಸೂರ್ಯಕಾಂತಿ, ಜೋಳದ ಬೆಳೆ ಕಟಾವು ಹಂತದಲ್ಲಿವೆ. ರಾಗಿ ಬಿತ್ತನೆ ಇನ್ನೂ ನಡೆಯುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಈ ವಾರ ಜಿಲ್ಲೆಯಲ್ಲಿ ಮಳೆ ಆಗಲಿದೆ.”
– ಬಿ.ಬಿ.ಅಬೀದ್, ಜಂಟಿ ಕೃಷಿ ನಿರ್ದೇಶಕರು
ಆಗ ಮಳೆ ಪ್ರಭಾವ, ಈಗ ಅಭಾವ: ಪೂರ್ವ ಮುಂಗಾರು ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರೆ ಮುಂಗಾರು ವೇಳೆ (ಜೂನ್, ಜುಲೈ) ಮಳೆ ಕೊರತೆ ಬಾಧಿಸಿ ಸಹಜವಾಗಿಯೇ ನಾನಾ ಬೆಳೆಗಳು ತುಸು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಜೂನ್‌ನಲ್ಲಿ ಶೇ.೪೬ರಷ್ಟು ಮತ್ತು ಜುಲೈನಲ್ಲಿ ಇದೇ ೨೮ರ ಸೋಮವಾರದತನಕ ಶೇ.೨೯ರಷ್ಟು ಮಳೆ ಕೊರತೆಯನ್ನು ಜಿಲ್ಲೆ ಎದುರಿಸುತ್ತಿದೆ. ಜುಲೈನಲ್ಲಿ ಇಲ್ಲಿಯ ತನಕ ೧೧೬ ಮಿ.ಮೀ. ಮಳೆ ವಾಡಿಕೆಯಂತೆ ಬೀಳಬೇಕಿತ್ತು. ಬಿದ್ದಿರುವುದು ೮೨ ಮಿ.ಮೀ. ಮಾತ್ರ. ಇನ್ನು ಜೂನ್‌ನಲ್ಲಿ ವಾಡಿಕೆಯಂತೆ ೫೮.೪ ಮಿ.ಮೀ. ಆಗಬೇಕಿತ್ತು, ಆಗಿರುವುದು ೩೧.೮ ಮಿ.ಮೀ. ಮಾತ್ರ! ಮೋಡ ಕವಿದ ವಾತಾವರಣ, ತುಂತುರು ಹನಿಗೆ ಸೀಮಿತವಾಗದೇ ಮುಂದೆ ಮಳೆ ಸುರಿದರೆ ಬೆಳೆಗಳಿಗೆ ಹೇಳಿಕೊಳ್ಳುವಂತಹ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಮಳೆ ಅಭಾವ ಯಥಾಸ್ಥಿತಿಯಲ್ಲಿ ಸಾಗಿದರೆ ಬೆಳೆಗಳು ಕ್ರಮೇಣ ಒಣಗಿ ಬರಪರಿಸ್ಥಿತಿ ಎದುರಾಗುವ ಅಪಾಯವಿದೆ ಎಂದು ತಿಳಿದು ಬಂದಿದೆ.





