ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ ಸಿಎಂ ಆಗಿ ಆಡಳಿತ ನಡೆಸಿದ ಅವರು, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ೨೦೧೪ರಲ್ಲಿ ಪ್ರಧಾನಮಂತ್ರಿಯಾಗಿ ದೇಶದ ಆಡಳಿತದ ಚುಕ್ಕಾಣಿ ಹಿಡಿದರು. ಒಟ್ಟಾರೆ ಅವರು ರಾಜಕೀಯ ಅಧಿಕಾರಕ್ಕೇರಿ ೨೦೨೬ರ ಅ.೧೭ಕ್ಕೆ ೨೫ ವರ್ಷಗಳು ಪೂರ್ಣಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಸೆ.೧೭ರಿಂದ ಅ.೧೭ರವರೆಗೆ ಬಿಜೆಪಿ ವತಿಯಿಂದ ಅಭಿಯಾನದ ರೂಪದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಮೋದಿ ಅವರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಕೈಗೊಂಡ ಯೋಜನೆಗಳು, ಅಭಿವೃದ್ಧಿ ಕಾರ್ಯ ಇತ್ಯಾದಿ ವಿಚಾರಗಳನ್ನು ಕುರಿತು ಕಾಂಗ್ರೆಸ್-ಬಿಜೆಪಿ ನಾಯಕರೀರ್ವರು ಇಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
ಅಭಿವೃದ್ಧಿ ಹಾದಿಯಲ್ಲಿ ಮೋದಿ ಸಾರ್ವಕಾಲಿಕ ಮೈಲಿಗಲ್ಲು:
ಆರ್ ರಘು ( ಕೌಟಿಲ್ಯ), ವಿಧಾನಪರಿಷತ್ ಸದಸ್ಯ
ಮೋದಿಯವರು ಗುಜರಾತ್ ಸಿಎಂ ಆಗಿ ಹಾಗೂ ಭಾರತದ ಪ್ರಧಾನ ಮಂತ್ರಿಯಾಗಿ ಅಭಿವೃದ್ಧಿ ಹಾದಿಯಲ್ಲಿ ಇಟ್ಟ ಪ್ರತಿಯೊಂದು ಹೆಜ್ಜೆಯೂ ಸಾರ್ವ ಕಾಲಿಕ ಮೈಲಿಗಲ್ಲುಗಳಾಗಿವೆ.
ವಿಶ್ವದ ಅತ್ಯಂತ ಎತ್ತರದ ಪ್ರಜಾತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಹೆಮ್ಮೆಯ ಭಾರತವನ್ನು ವಿಶ್ವದ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ಮೋದಿಯವರ ದ್ದಾಗಿದೆ. ವಿಕಸಿತ ಭಾರತ ೨೦೪೭ ಗುರಿಸಾಧನೆಗೆ ಮಹಾ ಸಂಕಲ್ಪವನ್ನು ತೊಟ್ಟಿದ್ದಾರೆ. ಮೇಕ್ ಇನ್ ಇಂಡಿಯಾ, ಕೌಶಲ ಭಾರತ, ಮುದ್ರಾಯೋಜನೆಗಳು ಯುವ ಜನರ ಕನಸು ಸಾಕಾರಗೊಳಿಸುವ ಯೋಜನೆಗಳಾಗಿವೆ.
ಶ್ರೀರಾಮ ಮಂದಿರ ನಿರ್ಮಾಣದ ಮೂಲಕ ಭಾರತೀಯರ ಕನಸು ನನಸಾಗಿದೆ. ಆರ್ಟಿಕಲ್ ೩೭೦ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ಭಾರತೀಯರ ಸಂರಕ್ಷಣೆಗೆ ಸುರಕ್ಷಿತ ಬೇಲಿ ಹಾಕಿದ್ದಾರೆ. ಸ್ವತಂತ್ರ ಭಾರತದ ಸುದೀರ್ಘ ಆಡಳಿತದ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಸರಿಗಟ್ಟಿದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇವಲ ಒಬ್ಬ ಜನಪ್ರಿಯ ಪ್ರಧಾನಿಯಾಗಿ ಉಳಿದಿಲ್ಲ; ಅವರು ದೇಶದ ಭರವಸೆಯ ಬೆಳಕಾಗಿದ್ದಾರೆ.
ರಾಜ್ಯದಲ್ಲಿ ನಿರ್ಮಿಸಿರುವ ಹೆದ್ದಾರಿಗಳು, ದೈತ್ಯ ಸೇತುವೆಗಳು, ‘ವಂದೇ ಭಾರತ್’ ರೈಲು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಭವ್ಯ ಟರ್ಮಿನಲ್-೨ ಮೋದಿ ಅವರ ಆಧುನಿಕತೆಯ ದೃಷ್ಟಿಗೆ ಮನಸ್ಸು ಮೂಕವಿಸ್ಮಿತವಾಗುವಂತೆ ಮಾಡುತ್ತವೆ. ಮೋದಿ ಅವರ ಆಡಳಿತ ಕೇವಲ ಕಾಂಕ್ರೀಟ್ ಗೋಡೆಗಳನ್ನಷ್ಟೇಕಟ್ಟಲಿಲ್ಲ, ಅದು ಕನ್ನಡಿಗರ ಸ್ವಾಭಿಮಾನದ ಗೋಪುರವನ್ನೂ ಕಟ್ಟಿತು. ಈ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳು ಪ್ರಭಾವಿ ರಾಜಕಾರಣಿಗಳ ಸಚಿವಾಲಯದಿಂದ ಹೊರ ಬಂದು, ಕರ್ನಾಟಕದ ಹಳ್ಳಿ-ಹಳ್ಳಿಗಳ ಗುಡಿಸಲುಗಳನ್ನೂತಲುಪಿವೆ. ತುಮಕೂರಿನಲ್ಲಿ ತಲೆಯೆತ್ತಿರುವ ಏಷ್ಯಾದ ಅತಿ ದೊಡ್ಡ ಹೆಲಿಕಾಪ್ಟರ್ ಕಾರ್ಖಾನೆ ಇಂದು ಭಾರತದ ರಕ್ಷಣಾ ವಲಯದಲ್ಲಿ ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಮಿನುಗುವಂತೆ ಮಾಡಿದೆ. ಹಳ್ಳಿಗಳ ತಾಯಂದಿರು ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ನಡೆಯುವ ಕಷ್ಟವನ್ನು ಅರಿತ ಮೋದಿ, ‘ಜಲಜೀವನ್ ಮಿಷನ್’ ಮೂಲಕ ಪ್ರತಿಯೊಂದು ಮನೆಗೂ ಗಂಗೆ ತಲುಪಿಸಿದ್ದಾರೆ. ಬ್ಯಾಂಕಿಂಗ್ ವಸ್ಥೆಯನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಂದ ‘ಜನ್ ಧನ್’, ಸ್ವಾವಲಂಬಿ ಬದುಕಿಗೆ ಆಸರೆಯಾದ ‘ಮುದ್ರಾ’, ‘ಸ್ವನಿಧಿ’, ‘ಸ್ಟಾರ್ಟ್ಅಪ್’ ಹಾಗೂ ‘ಸ್ಟಾ ಂಡ್ ಅಪ್ ಇಂಡಿಯಾ’ ದೇಶದ ಆರ್ಥಿಕ ತೆಗೆ ಹೊಸ ಚೈತನ್ಯ ನೀಡಿವೆ.
ಅನ್ನದಾತನಿಗೆ ಬೆಂಬಲವಾಗಿ ನಿಂತ ‘ಕಿಸಾನ್ ಸಮ್ಮಾನ್ ನಿಧಿ’, ‘ಫಸಲ್ ಬಿಮಾ’, ಶ್ರಮಿಕರ ಕಲ್ಯಾಣದ ‘ಶ್ರಮ ಯೋಗಿ ಮಾನ್ಧನ್’ ಮತ್ತು ‘ಪಿಎಂ ವಿಶ್ವಕರ್ಮ’ ಯೋಜನೆ ದುಡಿಯುವ ಕೈಗಳಿಗೆ ಗೌರವ ತಂದು ಕೊಟ್ಟಿವೆ. ‘ಉಜ್ವಲ’ ಅನಿಲ ಸಂಪರ್ಕ, ‘ಆವಾಸ್ ಯೋಜನೆ’ ಯಡಿ ಸುಸಜ್ಜಿತ ಮನೆ, ‘ಜಲ್ ಜೀವನ್ ಮಿಷನ್’ ಮೂಲಕ ಮನೆಮನೆಗೆ ಗಂಗೆ ಹಾಗೂ ‘ಆಯುಷ್ಮಾನ್ ಭಾರತ್’ ಮತ್ತು ‘ಮಾತೃ ವಂದನಾ’ ಯೋಜನೆಗಳ ಮೂಲಕ ಸಿಗುತ್ತಿರುವ ಆರೋಗ್ಯ ಸುರಕ್ಷತೆ ಭಾರತೀಯರ ಜೀವನ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ. ‘ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಹಸಿವು ಮುಕ್ತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುತ್ತಿದ್ದರೆ, ‘ಡಿಜಿಟಲ್ ಇಂಡಿಯಾ’, ‘ಸ್ಮಾರ್ಟ್ ಸಿಟಿ’ ಮತ್ತು ‘ಅಮೃತಾ ಭಾರತ್ ಸ್ಟೇಷನ್’ ಯೋಜನೆಗಳು ಭಾರತವನ್ನು ಆಧುನೀಕರಣದತ್ತ ಮುನ್ನಡೆಸುತ್ತಿವೆ. ಈ ಎಲ್ಲ ಜನಪರ ಯೋಜನೆಗಳ ಮೂಲಕ ಭಾರತೀಯರ ಬದುಕನ್ನು ಹಸನಾಗಿಸಿದ್ದಾರೆ
” ಕಳೆದ ೧೨ ವರ್ಷಗಳಲ್ಲಿ ಭಾರತವು ಕಂಡಿರುವ ಅಭಿವೃದ್ಧಿಯ ಪರ್ವಕ್ಕೆ ಮೋದಿ ಅವರ ದೂರದೃಷ್ಟಿಯಯೋಜನೆಗಳೇ ಸಾಕ್ಷಿ. ಅವರ ನೇತೃತ್ವದಲ್ಲಿ ಜಾರಿಯಾದ ಯೋಜನೆಗಳು ದೇಶ ಹಾಗೂ ಕರ್ನಾಟಕದ ಪ್ರತಿಯೊಂದು ಕುಟುಂಬವನ್ನೂ ನೇರವಾಗಿ ಸ್ಪರ್ಶಿಸಿವೆ. ಆಡಳಿತದ ವಿಷಯದಲ್ಲಿ ಪಕ್ಷ ಸಂಕೋಲೆ ದಾಟಿ ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಮೋದಿಯವರು ಕೇಂದ್ರದಿಂದ ಸಹಕಾರದ ಬಾಗಿಲು ತೆರೆದಿದ್ದಾರೆ. ನವ ಭಾರತದ ಜೊತೆಗೆ ನವ ಕರ್ನಾಟಕವನ್ನು ಸಮೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿದ್ದಾರೆ.”
ಮೋದಿ ಅವರದು ವೈಫಲ್ಯಗಳ ಮೈಲಿಗಲ್ಲು:
ಎಂ.ಲಕ್ಷ ಣ, ಕೆಪಿಸಿಸಿ ವಕ್ತಾರರು
ನಿರುದ್ಯೋಗ ನಿವಾರಣೆಗೆ ೨ ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಪಡಿಸುವುದು, ದೇಶಾದ್ಯಂತ ೧೦೦ ಸ್ಮಾರ್ಟ್ ಸಿಟಿಗಳ ನಿರ್ಮಾಣ, ೫ ಟ್ರಿಲಿಯನ್ ಆರ್ಥಿಕ ಬೆಳವಣಿಗೆ, ಪ್ರತಿಯೊಬ್ಬರಿಗೂ ಮನೆ ನಿರ್ಮಾಣ, ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರೂ.ಜಮೆ, ಡಾಲರ್ ಬೆಲೆಯನ್ನು ೨೫ ರೂ. ಒಳಗೆ ತರುವುದು, ಡ್ರಗ್ ಮುಕ್ತ ಭಾರತ, ಹಸಿರು ಕ್ರಾಂತಿ, ರೈತರಿಗೆ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವುದು ಇತ್ಯಾದಿ ಭರವಸೆಗಳನ್ನು ೨೦೧೪ರಿಂದ ಜನರಿಗೆ ನೀಡುತ್ತಾ ಬಂದಿದ್ದಾರೆ.
ಆದರೆ ಇವುಗಳಲ್ಲಿ ಒಂದನ್ನೂ ಕಾರ್ಯರೂಪಕ್ಕೆ ತರಲಿಲ್ಲ. ಮಹಿಳೆಯರಿಗೆ ಉಜ್ವಲ್ ಯೋಜನೆಯಡಿ ಉಚಿತ ಸಿಲಿಂಡರ್ ಎಂದು ಹೇಳಿ, ಯೋಜನೆಯನ್ನೇ ನಿಲ್ಲಿಸಿರುವುದು. ನೋಟು ಅಮಾನ್ಯೀಕರಣದಿಂದ ನೂರಾರು ಜನರ ಸಾವು, ಸಣ್ಣ ಕೈಗಾರಿಕೆಗಳು ಮುಚ್ಚಲು ಉತ್ತೇಜನ, ದೇಶದ ಉನ್ನತ ತನಿಖಾ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ, ಎನ್ಐಎ ಇವುಗಳನ್ನು ವಿರೋಧ ಪಕ್ಷದವರ ಧ್ವನಿ ಅಡಗಿಸಲು ಉಪಯೋಗಿಸುತ್ತಿರುವುದು, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದಿಂದ ಎಸ್ಐಆರ್ ಮೂಲಕ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿ, ಚುನಾವಣೆಗಳನ್ನು ಗೆಲ್ಲುತ್ತಿರುವುದು, ಪರೀಕ್ಷೆ ನಡೆಸುವುದರಲ್ಲಿ ಭ್ರಷ್ಟಾಚಾರ ನಡೆಸಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ, ಯುವ ಸಮುದಾಯದ ಭವಿಷ್ಯವನ್ನೇ ಕೊಲ್ಲುತ್ತಿರುವುದು, ಇತ್ತೀಚಿನ ದಿನಗಳಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ೨೨ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಮೌಲ್ಯ ಮಾಪನದಲ್ಲಿ ಭ್ರಷ್ಟಾಚಾರ ಇತ್ಯಾದಿಗಳು, ಇಂಧನ ಬೆಲೆ ಏರಿಕೆ, ದೇಶದಲ್ಲಿ ಹಿಂದು-ಮುಸ್ಲಿಂ ಮಧ್ಯೆ ಕಂದಕ ಸೃಷ್ಟಿಸಿ, ಕೋಮು ಗಲಭೆಗಳನ್ನು ಸೃಷ್ಟಿಸಿ ಜನರು ನಾವೆಲ್ಲರೂ ಭಾರತೀಯರು ಎನ್ನುವ ಮನೋಭಾವನೆ ಹಾಳುಗೆಡವಿರುವುದು, ಬಿಜೆಪಿ ಐಟಿ ಸೆಲ್ ಮೂಲಕ ತಪ್ಪು ಸಂದೇಶಗಳನ್ನು ಬಿತ್ತುತ್ತಿರುವುದು, ದೇಶದ ಭದ್ರತೆಗೆ ಧಕ್ಕೆ ತಂದಿರುವುದರಿಂದ ಚೀನಾ ದೇಶದವರು ನಮ್ಮ ದೇಶದ ಪರಿಮಿತಿ ಒಳಗೆ ನುಗ್ಗಿ ಅವರ ಮಿಲಿ ಟರಿಯ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುತ್ತಿ ರುವುದು, ದೇಶದ Intelligence failure ನಿಂದ ಫಹಲ್ಲಾಮ್ ದಾಳಿ ಮತ್ತು ಫುಲ್ವಾಮಾ ದಾಳಿಗಳಾದವು.
ದೇಶದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ, ಮಹಿಳೆಯರ ಅಭದ್ರತೆ, ದೇಶದ ಬಹುದೊಡ್ಡ ಕಂಪೆನಿಗಳಾದ ಬಿಇಎಂಎಲ್, ಎಚ್ಎಎಲ್, ಏರ್ ಇಂಡಿಯಾ, ಬಿಎಸ್ ಎನ್ಎಲ್, ಏರ್ಪೋರ್ಟ್ಸ್ ಇಂತಹ ಸಂಸ್ಥೆಗಳನ್ನು ಉಚಿತವಾಗಿ ಆದಾನಿಗೆ ನೀಡುತ್ತಿರುವುದರಿಂದ ಜನರ ಉದ್ಯೋಗ ಕಸಿಯಲಾಗುತ್ತಿದೆ. ಮೋದಿಯವರು ಗುಜ ರಾತ್ ಸಿಎಂ ಆಗಿದ್ದಾಗ ೨೦೦೨ರ ಗೋಧ್ರಾ ರೈಲು ದುರಂತದಿಂದ ಸೃಷ್ಟಿಸಲ್ಪಟ್ಟ ಗಲಭೆ ಯಿಂದ ಸುಮಾರು ೩,೦೦೦ ಮುಸ್ಲಿಂ ಸಮುದಾಯದವರ ನರ ಮೇಧ, ೨೦೦೧ರಿಂದ ೨೦೧೪ ರವರೆಗೆ ಕಾನೂನುಸುವ್ಯ ವಸ್ಥೆ ಹಾಳಾಗಿತ್ತು. ರಾಜ್ಯದಲ್ಲಿ ಮಕ್ಕಳಲ್ಲಿ ಕಂಡಂತಹ ದೌರ್ಬಲ್ಯತೆ, ಸಾವು ಇತ್ಯಾದಿ. ರಾಜ್ಯದಲ್ಲಿ ಸುಮಾರು ೩,೫೦೦ ಸರ್ಕಾರಿ ಶಾಲೆಗಳನ್ನು ಮುಚ್ಚಲಾಯಿತು. ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರು. ರೈತರ ಜಮೀನನ್ನು ಅವರ ಅನುಮತಿ ಇಲ್ಲದೆ ಬಹಳ ಕಡಿಮೆ ದರಕ್ಕೆ ಕಿತ್ತುಕೊಳ್ಳಲಾಯಿತು. ರಾಜ್ಯದ ಮೇಲಿನ ಸಾಲ ಹಲವಾರು ಪಟ್ಟು ಜಾಸ್ತಿ ಮಾಡಲಾಯಿತು.
ಇಡೀ ರಾಜ್ಯದ ಸಂಸ್ಥೆಗಳೆಲ್ಲ ಖಾಸಗಿಯವರಿಗೆ ವಹಿಸಲ್ಪಟ್ಟಿವೆ. ಲಕ್ಷಾಂತರ ಕೋಟಿ ರೂ. ಹೂಡಿಕೆಯ ಬಂದರು, ರಸ್ತೆ ನಿರ್ಮಾಣ, ಏರ್ಪೋರ್ಟ್, ಬ್ರಿಡ್ಜ್ಗಳ ನಿರ್ಮಾಣ ಎಲ್ಲವನ್ನೂ ಅದಾನಿ ಕಂಪೆನಿಗೆ ವಹಿಸಲಾಗಿದೆ. ಅತಿಹೆಚ್ಚು ನಿರುದ್ಯೋಗ ಗುಜರಾತ್ನಲ್ಲಿ ಕಾಣಬಹುದು.
” ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಸಾಲ ೨೪೫ ಲಕ್ಷ ಕೋಟಿ ರೂ., ಆದರೆ ೧೯೪೭ ರಿಂದ ೨೦೧೪ ರವರೆಗೆ ಇದ್ದಂತಹ ಸಾಲ ೫೪ ಲಕ್ಷ ಕೋಟಿ ರೂ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಚಿನ್ನದ ದರ ಬಾರಿ ಏರಿಕೆ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕಿ ದೊಡ್ಡ ಕೈಗಾರಿಕೋದ್ಯಮಗಳ ಸಾಲ ಸುಮಾರು ೧೫ ಲಕ್ಷ ಕೋಟಿ ರೂ. ಮನ್ನಾ ಮಾಡಿದ್ದಾರೆ.”


