Mysore
21
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಜಿಲ್ಲೆಯಲ್ಲಿ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆ ಯಶಸ್ವಿ

ಕೆ.ಪಿ.ಮದನ್

ಮೈಸೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಕಾರ್ಮಿಕ ಇಲಾಖೆ ವತಿಯಿಂದ ಜಾರಿಗೊಳಿಸಿರುವ ಸಂಚಾರಿ ಹೈಟೆಕ್ ಆರೋಗ್ಯ ಕ್ಲಿನಿಕ್ ಯೋಜನೆಗೆ ಜಿಲ್ಲೆಯಕಾರ್ಮಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೈಸೂರಿನಲ್ಲಿ ೪ ಸಂಚಾರಿ ಹೈಟೆಕ್ ಆರೋಗ್ಯ ಕ್ಲಿನಿಕ್‌ಗಳಿದ್ದು, ಕಾರ್ಮಿಕರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಇಲಾಖೆಯಿಂದ ಕಾರ್ಮಿಕರ ಕಾರ್ಡ್ ಪಡೆದಿರುವ ಜಿಲ್ಲೆಯ ೧,೪೮,೫೩೬ ಕಾರ್ಮಿಕರು ಹಾಗೂ ಅವರ ಕುಟುಂಬದವರು ಸೇರಿ ಒಟ್ಟು ೬ ಲಕ್ಷ ಜನರಿಗೆ ಈ ಕ್ಲಿನಿಕ್‌ಗಳಿಂದ ಆರೋಗ್ಯ ಸೇವೆ ದೊರೆಯುತ್ತಿದೆ.

ರಾಜ್ಯ ಸರ್ಕಾರ ೨೦೨೨-೨೩ನೇ ಸಾಲಿನಲ್ಲಿ ರಾಜ್ಯದ ೩೧ ಜಿಲ್ಲೆಗಳಲ್ಲಿಯೂ ಒಟ್ಟು ೧೦೦ ಸಂಚಾರಿ ಆರೋಗ್ಯ ಕ್ಲಿನಿಕ್‌ಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿತ್ತು. ಈ ಯೋಜನೆಯನ್ನು ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಲಾಗಿದ್ದು, ೪ ಸಂಚಾರಿ ಹೈಟೆಕ್  ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ.

ಕಾರ್ಮಿಕ ಇಲಾಖೆಯಡಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೇವೆ ಪಡೆಯಬಹುದಾಗಿದೆ. ಪ್ರತಿ ತಿಂಗಳ ಮಾಹಿತಿ ಪ್ರಕಾರ ಸರಾಸರಿ ೧,೦೦೦ಕ್ಕೂ ಹೆಚ್ಚು ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ೩,೫೦೦ಕ್ಕೂ ಹೆಚ್ಚು ಫಲಾನುಭವಿಗಳು ಇದರ ಅನುಕೂಲ ಪಡೆದಿದ್ದಾರೆ.

ಮೈಸೂರು ನಗರ ಹಾಗೂ ತಾಲ್ಲೂಕು ವ್ಯಾಪ್ತಿಗೆ ೨, ತಿ.ನರಸೀಪುರ- ನಂಜನಗೂಡು- ಎಚ್.ಡಿ. ಕೋಟೆಗೆ ಸೇರಿ ೧, ಕೃಷ್ಣರಾಜನಗರ- ಹುಣಸೂರು- ಪಿರಿಯಾಪಟ್ಟಣಕ್ಕೆ ೧ ಸಂಚಾರಿ ಆರೋಗ್ಯ ಕ್ಲಿನಿಕ್ ವಾಹನಗಳು ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಸೇವೆ ಒದಗಿಸುತ್ತಿವೆ.

ಪ್ರತಿ ಸಂಚಾರಿ ಕ್ಲಿನಿಕ್‌ನಲ್ಲಿಯೂ ಒಬ್ಬರು ವೈದ್ಯಕೀಯ ಅಧಿಕಾರಿ, ಇಬ್ಬರು ಶುಶ್ರೂಷಕಿಯರು, ಒಬ್ಬ ಫಾರ್ಮಸಿಸ್ಟ್ ಕಮ್ ಅಡ್ಮಿನಿಸ್ಟ್ರೇ ಟಿವ್ ಅಸಿಸ್ಟೆಂಟ್, ಒಬ್ಬ ಪ್ರಯೋಗಾಲಯ ತಜ್ಞರು, ಒಬ್ಬರು ಚಾಲಕರು ಕಾರ್ಯ ನಿರ್ವಹಿಸುವರು. ಈ ಸುಸಜ್ಜಿತ ತಂಡ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ಕಡೆ, ಮಧ್ಯಾಹ್ನದ ನಂತರ ಮತ್ತೊಂದು ವಾರ್ಡ್, ಗ್ರಾಮಗಳ ಬಸ್ ನಿಲ್ದಾಣದ ಬಳಿ ಕನಿಷ್ಠ ೪ ಗಂಟೆ ಕಾರ್ಯ ನಿರ್ವಹಿಸಲಿದೆ.

ಈ ಕ್ಲಿನಿಕ್ ಅನ್ನು ಯಾವಾಗ ಎಲ್ಲೆಲ್ಲಿ ನಡೆಸಲಾಗುತ್ತದೆ ಎಂಬ ಒಂದು ತಿಂಗಳ ರೂಟ್ ಮ್ಯಾಪನ್ನು ೧೫ ದಿನ ಮುಂಚಿತವಾಗಿಯೇ ಸಿದ್ಧಪಡಿಸಿ ಸಂಬಂಧಿಸಿದ ವಾರ್ಡ್, ತಾಪಂ, ಗ್ರಾಪಂ, ಹೋಬಳಿ, ಕಾರ್ಮಿಕ ಸಂಘಟನೆಗಳಿಗೆ ರವಾನಿಸಲಾಗುತ್ತದೆ. ಮಂಡಳಿಯಿಂದ ಪಡೆದಿರುವ ಕಾರ್ಡ್ ತೋರಿಸಿ ಸೇವೆ ಪಡೆಯಬಹುದು.

ಸಂಚಾರಿ ಘಟಕದಲ್ಲಿ ೨೫ ಮಾದರಿಯ ಪರೀಕ್ಷೆ ಮಾಡಬಹುದಾದ ವೈದ್ಯಕೀಯ ಉಪಕರಣಗಳನ್ನು ಸಿದ್ಧಪಡಿಸಿಡಲಾಗಿದೆ. ಬಯೋಕೆಮಿಸ್ಟ್ರಿ ಅನಲೈಸರ್, ಇಎಸ್‌ಆರ್, ಯೂರಿನ್ ಅನಲೈಸರ್, ಎಚ್‌ಬಿ ಮೀಟರ್ ಸೇರಿದಂತೆ ಒಟ್ಟು ೫ ಪ್ರಯೋಗಾಲಯ ಉಪಕರಣಗಳು, ಚಿಕಿತ್ಸೆಗೆ ಪೂರಕವಾದ ೩೭ ನಾನಾ ವೈದ್ಯಕೀಯ ವಸ್ತುಗಳು ವಾಹನದಲ್ಲಿವೆ. ಕಾರ್ಮಿಕರಿಗೆ ಎಲ್ಲ ರೀತಿಯ ಆಧುನಿಕ ವೈದ್ಯಕೀಯ ಪರೀಕ್ಷೆಗಳನ್ನು ನಿಖರವಾಗಿ ಮಾಡಿ ವರದಿ ನೀಡುವಂತಹ ವೈದ್ಯಕೀಯ ಉಪಕರಣಗಳನ್ನು ವಾಹನದಲ್ಲಿ ಅಳವಡಿಸಲಾಗಿದೆ.

ಕಟ್ಟಡ ಕಾರ್ಮಿಕರಿಗೆ ತುರ್ತು ಚಿಕಿತ್ಸೆಯ ಪರಿಸ್ಥಿತಿ ಕಂಡುಬಂದ ಸಂದರ್ಭದಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಮಾದರಿಯಲ್ಲೂ ಸೇವೆಯನ್ನು ಒದಗಿಸಿ ತದನಂತರ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಮಿಕರಿಗೆ ಅಗತ್ಯ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಮುಖ್ಯವಾಗಿ ತಾಯಿಯ ಆರೋಗ್ಯ, ಗರ್ಭಾವಸ್ಥೆ, ರಕ್ತಹೀನತೆ, ನವ ಜನನ ಮತ್ತು ಶಿಶು ಆರೋಗ್ಯ, ಮಗು ಮತ್ತು ಹದಿಹರಯದವರ ಆರೋಗ್ಯ, ನಿರ್ಜಲೀಕರಣ, ಜ್ವರ, ಸಮಾಲೋಚನೆ, ತೀವ್ರ ಅಪೌಷ್ಟಿಕತೆ, ಮೂರ್ಛೆ, ಕಣ್ಣಿನ ಆರೈಕೆ, ದಂತ ಆರೈಕೆ, ಡಿ-ಅಡಿಕ್ಷನ್, ಮಾನಸಿಕ ಅಸ್ವಸ್ಥತೆಯ ನಿರ್ವಹಣೆ, ಸಾಂಕ್ರಾಮಿಕವಲ್ಲದ ರೋಗಗಳು, ಮೂಲಭೂತ ಒಪಿಡಿ ಆರೈಕೆ, ಕ್ಷಯರೋಗ, ಎಚ್‌ಐವಿ, ಕುಷ್ಠರೋಗ, ಮಲೇರಿಯಾ, ಫೈಲೇರಿಯಾಸಿಸ್, ಅಂಗವೈಕಲ್ಯ ಸೇರಿ ನಾನಾ ಆರೋಗ್ಯ ಸಮಸ್ಯೆಗಳಿಗೆ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯಬಹುದಾಗಿದೆ.

” ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ರಕ್ಷಣೆಗೆ ಕಾರ್ಮಿಕ ಇಲಾಖೆಯಿಂದ ಜಾರಿಯಾಗಿರುವ ಸಂಚಾರಿ ಹೈಟೆಕ್ ಆರೋಗ್ಯ ಕ್ಲಿನಿಕ್ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ೨೦ಕ್ಕೂ ಹೆಚ್ಚು ಬಗೆಯ ಆರೋಗ್ಯ ಪರೀಕ್ಷೆಗಳಿಗೆ ಅಗತ್ಯವಾದ ಎಲ್ಲ ವೈದ್ಯಕೀಯ ಉಪಕರಣಗಳನ್ನೂ ವಾಹನದೊಳಗೆ ಅಳವಡಿಸಲಾಗಿದೆ.”

– ಚೇತನ್, ಜಿಲ್ಲಾ ಕಾರ್ಮಿಕ ಅಧಿಕಾರಿ, ಮೈಸೂರು

” ಸಂಚಾರಿ ಆರೋಗ್ಯ ಕ್ಲಿನಿಕ್‌ನಲ್ಲಿ ಹೊರ ರೋಗಿಗಳಾಗಿ (ಒಪಿಡಿ) ಪಡೆಯುವ ಎಲ್ಲ ಚಿಕಿತ್ಸೆಗಳ ಸೇವೆಯನ್ನೂ ನೀಡಲಾಗುತ್ತದೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ನಾನಾ ಕಾಯಿಲೆಗಳನ್ನು ಪರೀಕ್ಷಿಸಿ ಔಷಧಗಳನ್ನು ವಿತರಿಸಲಾಗುವುದು. ೨೦ಕ್ಕೂ ಹೆಚ್ಚು ಪರೀಕ್ಷೆಗಳನ್ನು ಸ್ಥಳದಲ್ಲಿಯೇ ಮಾಡಲಾಗುತ್ತದೆ.”

Tags:
error: Content is protected !!