ಮಹೇಂದ್ರ ಹಸಗೂಲಿ
ಬುಧವಾರ ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿರುವ ಶಾಸಕರು
ಗುಂಡ್ಲುಪೇಟೆ: ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ (ಎಂಸಿಡಿಸಿಸಿ ಬ್ಯಾಂಕ್)ನ ನಿರ್ದೇಶಕರ ಚುನಾವಣೆಯು ಜೂ.೨೬ರಂದು ನಡೆಯಲಿದ್ದು, ಗುಂಡ್ಲುಪೇಟೆ ತಾಲ್ಲೂಕು ಭಾಗದಿಂದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮೊದಲ ಬಾರಿಗೆ ಸಹಕಾರ ಕ್ಷೇತ್ರದ ಚುನಾವಣೆ ಎದುರಿಸುತ್ತಿದ್ಧಾರೆ.
ತಾಲ್ಲೂಕಿನಲ್ಲಿ ೩೫ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳಿದ್ದು, ಗುಂಡ್ಲುಪೇಟೆ ಪಟ್ಟಣ, ಬೊಮ್ಮಲಾಪುರ, ರಂಗೂಪುರ, ಕಸಬಾ ಪಿಎಸಿಸಿ ಗಳಿಗೆ ಮತದಾನದ ಹಕ್ಕು ಇಲ್ಲ. ೨೨ರಲ್ಲಿ ಕಾಂಗ್ರೆಸ್ ಬೆಂಬಲಿತರ ಆಡಳಿತವಿದೆ.
೯ರಲ್ಲಿ ಬಿಜೆಪಿ ಬೆಂಬ ಲಿತರ ಆಡಳಿತವಿದೆ. ೩೧ ಪಿಎಸಿಸಿಗಳ ಪೈಕಿ ೨೨ರಲ್ಲಿ ಕಾಂಗ್ರೆಸ್ ಬೆಂಬಲಿತರಿದ್ದು, ತಮ್ಮ ಪಕ್ಷದ ಶಾಸಕರೇ ಸ್ಪರ್ಧೆ ಮಾಡುವುದರಿಂದ ಸಹಕಾರ ಸಂಘದ ಮತ ಚಲಾಯಿಸುವ ಹಕ್ಕು ಪಡೆದವರು ಕಾಂಗ್ರೆಸ್ ವಿರುದ್ಧ ಮತ ಹಾಕುವ ಧೈರ್ಯ ಮಾಡುವುದಿಲ್ಲ.
ಹಾಗಾಗಿ ನಿರಾಯಾಸವಾಗಿ ಗಣೇಶ್ ಪ್ರಸಾದ್ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ. ಇನ್ನು ಬಿಜೆಪಿಯಿಂದ ಹುಂಡೀಪುರ ಪಿಎಸಿಸಿಎಸ್ ಬ್ಯಾಂಕ್ ಅಧ್ಯಕ್ಷ ಶೆಟ್ಟಹಳ್ಳಿ ವೀರಪ್ಪ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರ ವಿರುದ್ಧ ಇವರು ಗೆಲುವು ಸಾಧಿಸುವುದು ಕಷ್ಟಕರ ಎಂಬ ಮಾತುಗಳು ಕೇಳಿಬರುತ್ತಿವೆ.
ಕಾಂಗ್ರೆಸ್‌ನಲ್ಲಿ ಸ್ಪರ್ಧೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್, ತಾ.ಪಂ. ಮಾಜಿ ಸದಸ್ಯ ಎಚ್.ಎನ್.ನಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಕೆ. ಎಸ್.ಮಹೇಶ್ ಸೇರಿದಂತೆ ಇನ್ನೂ ಅನೇಕರು ಶಾಸಕರ ದುಂಬಾಲು ಬಿದ್ದಿದ್ದರು. ಕಳೆದ ಬಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಿತ್ತು. ಇಂತಹ ಘಟನೆ ಮರುಕಳಿಸಬಾರದು ಎಂಬ ಕಾರಣಕ್ಕೆ ಶಾಸಕರೇ ಕಣಕ್ಕಿಳಿದಿದ್ದಾರೆ.
” ಕಾಂಗ್ರೆಸ್ ಹೈಕಮಾಂಡ್ ಸೂಚನೆಯನ್ನು ನಾನು ಪಾಲಿಸಬೇಕಿದೆ. ಶಾಸಕರೇ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಇಲ್ಲವೇ ಎಂದು ಮಾಜಿ ಶಾಸಕರು ಹೇಳಿಕೆ ನೀಡಿದ್ದಾರೆ. ಅವರೇ ನನ್ನ ವಿರುದ್ಧ ಸ್ಪರ್ಧಿಸಿದ್ದರೆ ಚೆನ್ನಾಗಿರುತ್ತಿತ್ತು. ವಂಶ ಪಾರಂಪರ್ಯ ರಾಜಕಾರಣ ಎನ್ನುವ ಶಾಸಕರಿಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಕ್ಕಳಿಬ್ಬರು ರಾಜಕೀಯದಲ್ಲಿ ಇರುವುದು ಗೊತ್ತಿಲ್ಲವೇ? ನಿರಂಜನಕುಮಾರ್ ಅವರ ತಂದೆ ಶಿವಮಲ್ಲಪ್ಪ ಸಾಕಷ್ಟು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ನಂತರ ಇವರು ಬೇರೆಯವರಿಗೆ ಅವಕಾಶ ನೀಡದೆ ಶಾಸಕರಾಗಲಿಲ್ಲವೇ ?”
-ಎಚ್.ಎಂ.ಗಣೇಶ್‌ಪ್ರಸಾದ್, ಶಾಸಕರು





