ಮಂಜು ಕೋಟೆ
ಎಚ್.ಡಿ.ಕೋಟೆ: ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಸಹಕಾರ ಕ್ಷೇತ್ರ ಪ್ರವೇಶಿಸಲು ಮುಂದಾಗಿ ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಸೌಮ್ಯ ಅವರು ಎಂಸಿಡಿಸಿಸಿ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿ ಪತಿಗೆ ಸಾಥ್ ನೀಡಿದ್ದಾರೆ.
ಜೂ.೨೬ರಂದು ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಎಚ್.ಡಿ.ಕೋಟೆ ಕ್ಷೇತ್ರದಿಂದ ಶಾಸಕ ಅನಿಲ್ ಚಿಕ್ಕಮಾದು ಸ್ಪರ್ಧೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ೨೦೧೬ರಲ್ಲಿ ಈ ಬ್ಯಾಂಕಿನ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರ್ಪಡೆ ಗೊಂಡಿದ್ದ ಅವರ ಪತ್ನಿ ಸೌಮ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅಂಗೀಕಾರವಾಗಿದೆ.
ಸಹಕಾರ ಕ್ಷೇತ್ರದ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ಯಾರೇ ಸ್ಪರ್ಧಿಸಬೇಕಾಗಿದ್ದರೂ ಅವರ ಕುಟುಂಬ ವರ್ಗದವರು ಸಹಕಾರ ಕ್ಷೇತ್ರದ ಬ್ಯಾಂಕ್ ಗಳಲ್ಲಿ ಅಧಿಕಾರಿಗಳಾಗಿ, ನೌಕರರಾಗಿ ಕೆಲಸ ನಿರ್ವಹಿಸುವಂತಿಲ್ಲ ಎಂಬ ಕಾಯ್ದೆ ಇರುವುದರಿಂದ ಶಾಸಕರ ಪತ್ನಿ ಸೌಮ್ಯ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
” ಸಹಕಾರ ಕ್ಷೇತ್ರದಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಲು ಅನುವು ಮಾಡಿಕೊಡುವುದಕ್ಕಾಗಿ ನನ್ನ ಪತ್ನಿ ಸೌಮ್ಯ ಅವರು ಬ್ಯಾಂಕ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಾಲ್ಲೂಕಿನ ಜನತೆ ಮತ್ತು ರೈತರಿಗಾಗಿ ಕಾಳಜಿ ತೋರಿರುವುದಕ್ಕೆ ಕೃತಜ್ಞನಾಗಿದ್ದೇನೆ.”
-ಅನಿಲ್ ಚಿಕ್ಕಮಾದು, ಶಾಸಕರು
” ನನ್ನ ಪತಿ ಶಾಸಕರಾಗಿ ಕಳೆದ ೭ ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಸಾರ್ವಜನಿಕರಿಗೆ ಸ್ಪಂದಿಸುತ್ತಿದ್ದಾರೆ. ರೈತರ ಅಭಿವೃದ್ಧಿಗೆ ಮತ್ತಷ್ಟು ಕೆಲಸ ಮಾಡಬೇಕಾದರೆ ಸಹಕಾರ ಕ್ಷೇತ್ರಕ್ಕೆ ಅನಿಲ್ ಅವರು ಬರಬೇಕಾಗಿದೆ.”
-ಸೌಮ್ಯ ಅನಿಲ್ ಚಿಕ್ಕಮಾದು, ಶಾಸಕರ ಪತಿ





