ಜೀವನಾವಶ್ಯಕ ಪದಾರ್ಥಗಳ ಬೆಲೆ ಹೆಚ್ಚಳದಿಂದ ಕಂಗಾಲು
ಮೈಸೂರು: ನಂದಿನಿ ಹಾಲಿನ ದರವನ್ನು ಒಂದು ಲೀಟರ್‌ಗೆ ೪ ರೂ. ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.ಈಗಾಗಲೇ ಬಹಳಷ್ಟು ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಈಗ ಹಾಲಿನ ಬೆಲೆ ಹೆಚ್ಚಳ ಮಾಡಿರುವುದು ಬಡವರು, ಮಧ್ಯಮ ವರ್ಗಗಳ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ ಎಂಬುದಾಗಿ ಸಾರ್ವಜನಿಕರು ಕಿಡಿಕಾರಿದ್ದಾರೆ. ಇದರ ನಡುವೆಯೇ ಕೆಲ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು, ಪರಿಷ್ಕೃತ ಮೊತ್ತವನ್ನು ನೇರವಾಗಿ ಹಾಲು ಉತ್ಪಾದಕರಿಗೆ ನೀಡುವುದಾಗಿ ಸರ್ಕಾರ ಹೇಳಿರುವುದನ್ನು ಸ್ವಾಗತಿಸಿದ್ದಾರೆ. ಆದರೆ, ಹಾಲಿನ ದರ ಹೆಚ್ಚಳದಿಂದ ಕಾಫಿ- ಚಹ ದರವನ್ನೂ ಪರಿಷ್ಕರಿಸಲು ಚಿಂತನೆ ನಡೆಸುವುದು ಅನಿವಾರ್ಯ ಎಂಬುದು ಹೋಟೆಲ್ ಉದ್ಯಮದ ಸಮರ್ಥನೆಯಾಗಿದೆ.
” ಗ್ರಾಹಕರಿಗೆ ಹೊರೆ: ನಾವು ನಿತ್ಯ ಒಂದರಿಂದ ಒಂದೂವರೆ ಲೀ. ಹಾಲನ್ನು ಬಳಕೆ ಮಾಡುತ್ತೇವೆ. ಸರ್ಕಾರ ಸತತವಾಗಿ ಹಾಲಿನ ದರ ಏರಿಕೆ ಮಾಡುತ್ತಿದೆ. ಇದು ಗ್ರಾಹಕರಿಗೆ ಹೊರೆಯಾಗಲಿದೆ. ಆದ್ದರಿಂದ ಸರ್ಕಾರ ಹಾಲಿನ ದರವನ್ನು ಇಳಿಕೆ ಮಾಡಬೇಕು.”
-ಚೇತನ್, ಕೆ.ಬೆಳತ್ತೂರು, ಸರಗೂರು ತಾ.
” ಹಾಲು ಉತ್ಪಾದಕರಿಗೆ ಅನುಕೂಲ: ಸರ್ಕಾರ ಹಾಲಿನ ದರ ಏರಿಕೆ ಮಾಡಿ, ಆ ಮೊತ್ತವನ್ನು ಹಾಲು ಉತ್ಪಾದಕರಿಗೆ ನೇರವಾಗಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ನಮ್ಮ ಕುಟುಂಬದಿಂದ ಮುಂಜಾನೆ ೨೦-೨೫ ಲೀ. ಮತ್ತು ಸಂಜೆ ೨೦-೨೫ ಲೀ. ಹಾಲನ್ನು ಡೇರಿಗೆ ಹಾಕುತ್ತಿದ್ದು, ಈ ದರ ಏರಿಕೆಯಿಂದ ನಮಗೆ ಅನುಕೂಲವಾಗಲಿದೆ.”
-ಭರತ್, ಹಾಲು ಉತ್ಪಾದಕರ ರೈತ, ‘ಎ’ ನೂರಲಕುಪ್ಪೆ, ಕೋಟೆ ತಾ.
“ ಜೀವನ ಮತ್ತಷ್ಟು ದುಬಾರಿ: ಹಾಲು, ಪೆಟ್ರೋಲ್, ಡೀಸೆಲ್‌ನಂತಹ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿ ಉಚಿತ ಗ್ಯಾರಂಟಿ ಕೊಡ್ತೀವಿ ಎಂದರೆ ಏನು ಪ್ರಯೋಜನ? ಇದರಿಂದ ನಮ್ಮ ಜೀವನ ಮತ್ತಷ್ಟು ದುಬಾರಿಯಾಗಲಿದೆ. ಗ್ಯಾರಂಟಿ ಯೋಜನೆ ಕೊಡಿ ಅಂತ ಯಾರು ಕೇಳಿದ್ದರು? ಈಗ್ಯಾಕೆ ರೈತರ ಹೆಸರಿನಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ?”
-ಹನುಮಂತು, ಮೈಸೂರು
” ಯುಗಾದಿಯಲ್ಲಿ ಬೆಲೆ ಏರಿಕೆ ಕಹಿ: ಯುಗಾದಿಯ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳ ಮಾಡಿ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿದೆ. ಇತ್ತೀಚೆಗಷ್ಟೇ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಈಗ ಹಾಲಿನ ದರವನ್ನೂ ಹೆಚ್ಚಳ ಮಾಡಲಾಗಿದೆ. ಬೇರೆ ದಿನ ಬಳಕೆಯ ವಸ್ತುಗಳ ಬೆಲೆ ಇದೇ ರೀತಿ ಹೆಚ್ಚಳ ವಾದರೆ, ಜನಸಾಮಾನ್ಯರು ಬದುಕುವುದು ಹೇಗೆ?”
-ಸತೀಶ್, ಕನಕಪುರ
” ವರ್ಷದಲ್ಲೇ ೨ ಬಾರಿ ಹೆಚ್ಚಳ ವಿಪರ್ಯಾಸ: ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿನ ದರ ಏರಿಕೆ ಮಾಡುವ ಸುಳಿವು ನೀಡಿದ್ದರು. ೨೦೨೪ರ ಲೋಕಸಭೆ ಚುನಾವಣೆ ಬೆನ್ನಲ್ಲೇ ಹಾಲಿನ ದರವನ್ನು ಪರಿಷ್ಕರಿಸಲಾಗಿತ್ತು. ಈಗ ಒಂದು ವರ್ಷ ತುಂಬುವ ಮೊದಲೇ ಎರಡನೇ ಬಾರಿಗೆ ದರ ಏರಿಕೆ ಮಾಡಿರುವುದು ವಿಪರ್ಯಾಸ.”
-ರಾಜೇಶ್, ಗುಂಡ್ಲುಪೇಟೆ
” ಬಡವರ ಹೊಟ್ಟೆ ಮೇಲೆ ಹೊಡೆದಂತೆ: ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವಲ್ಲಿ ಸರ್ಕಾರ ಅತಿಯಾದ ಕಾಳಜಿ ವಹಿಸುತ್ತಿದೆ. ಇದೀಗ ಏಕಾಏಕಿ ಹಾಲಿನ ದರವನ್ನು ೪ ರೂ. ಹೆಚ್ಚಳ ಮಾಡಿದೆ. ಇದು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿ ಬಡವರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ.”
-ರಂಜಿತಾ, ವಿನಾಯಕ ನಗರ, ಮೈಸೂರು.
” ಹೋಟೆಲ್ ಉದ್ಯಮಕ್ಕೆ ನಷ್ಟ: ಸಾಲು ಸಾಲು ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹೋಟೆಲ್‌ನಲ್ಲಿ ಕಾಫಿ, ಚಹ ಬೆಲೆಯಲ್ಲಿ ೨ ರೂ. ಏರಿಕೆಗೆ ಹೋಟೆಲ್ ಮಾಲೀಕರು ಚಿಂತನೆ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.”
-ಮಲ್ಲೇಶ್, ಮಾಲೀಕರು, ಲಕ್ಷ್ಮೀ ಟಿ-ನೀಸ್, ಮೈಸೂರು
” ಮಧ್ಯಮ ವರ್ಗಕ್ಕೆ ತೊಂದರೆ: ಸರ್ಕಾರ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿರುವುದರಿಂದ ಮಧ್ಯಮ ವರ್ಗದವರಿಗೆ ಭಾರೀ ತೊಂದರೆಯಾಗಲಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಎಲ್ಲ ಪದಾರ್ಥಗಳ ಬೆಲೆಗಳನ್ನೂ ಹೆಚ್ಚಿಸುತ್ತಿರುವುದು ಸರಿಯಲ್ಲ. ಬೆಲೆ ಹೆಚ್ಚಳ ಮಾಡುತ್ತಿರುವುದು ಖಂಡನೀಯ.”
-ಎನ್.ಶಿವಸ್ವಾಮಿ, ರೈತ, ನಗುವನಹಳ್ಳಿ, ಶ್ರೀರಂಗಪಟ್ಟಣ ತಾ.
“ ಮೊಸರಿನ ಹಣ ಯಾರಿಗೆ?: ಕಾಂಗ್ರೆಸ್ ಸರ್ಕಾರ ಬಂದ ನಂತರ ೩ನೇ ಬಾರಿಹಾಲಿನ ದರ ಏರಿಕೆ ಮಾಡಲಾಗಿದೆ. ಪರಿಷ್ಕೃತ ೪ ರೂ.ಗಳನ್ನು ಹಾಲು ಉತ್ಪಾದಕರಿಗೆ ನೀಡುತ್ತೇವೆ ಎಂದು ಹೇಳಿರುವ ಸರ್ಕಾರ, ಮೊಸರಿನ ಹಣವನ್ನು ಯಾರಿಗೆ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿಲ್ಲ.”
–ವಿ.ಎ.ಅಲೋಕ, ರೈತಸಂಘದಮುಖಂಡರು, ವಳಗೆರೆಹಳ್ಳಿ, ಮದ್ದೂರು ತಾ.
” ಗಾಯದ ಮೇಲೆ ಬರೆ: ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಎಲ್ಲಾ ಪದಾರ್ಥಗಳ ದರ ಏರಿಕೆ ಮಾಡಿದರೆ ಹೇಗೆ ಜೀವನ ಸಾಗಿಸಬೇಕೆಂಬುದೇ ತಿಳಿಯುತ್ತಿಲ್ಲ. ಈಗ ಹಾಲಿನ ದರ ಕೂಡ ಏರಿಕೆ ಮಾಡಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.”
-ಸತೀಶ್, ಮಾದಾಪುರ, ಕೊಡಗು
” ದರ ಇಳಿಕೆಗೆ ಸರ್ಕಾರ ಮುಂದಾಗಲಿ: ಸರ್ಕಾರಗಳು ಜನತೆಗೆ ನೆರವಾಗುವಂತಹ ಯೋಜನೆಗಳನ್ನು ರೂಪಿಸಬೇಕು. ಆರಂಭದಲ್ಲಿ ಕೆಲವೊಂದು ಉತ್ತಮ ಯೋಜನೆಗಳನ್ನು ಘೋಷಿಸಿದ ರಾಜ್ಯ ಸರ್ಕಾರ, ನಂತರದಲ್ಲಿ ಪದೇ ಪದೇ ಬೆಲೆ ಏರಿಕೆ ಮಾಡುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ವಸ್ತುಗಳ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು.”
–ಚರಣ್, ಮಡಿಕೇರಿ, ಕೊಡಗು
“ ಸಂಕಷ್ಟದಲ್ಲಿ ಜನರ ಜೀವನ: ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ತಿಂಗಳ ಹಿಂದೆ ಹಾಲಿನ ದರ ಏರಿಕೆ ಮಾಡಿದ್ದ ಸರ್ಕಾರ ಮತ್ತೆ ದರ ಏರಿಸಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ.”
– ಅಶೋಕ್, ಕುದೇರು, ಚಾಮರಾಜನಗರ ತಾ.
” ಸಮರ್ಥನೆ ಸರಿಯಲ್ಲ: ರಾಜ್ಯ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ವಿದ್ಯುತ್, ಹಾಲಿನ ಬೆಲೆ ಏರಿಕೆ ಮಾಡಿದೆ. ಪ್ರಶ್ನೆ ಮಾಡಿದರೆ, ಇದೇನು ಜಾಸ್ತಿಯಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿ ದರೆ ನಮ್ಮಲ್ಲಿ ಕಡಿಮೆಯಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ.”
– ಕುಮಾರಸ್ವಾಮಿ, ಚಾ.ನಗರ





