ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಹಾಲಿನ ದರ ಹೆಚ್ಚಳದಿಂದ ಒಂದೆಡೆ ಗ್ರಾಹಕರಿಗೆ ಬೇಸರವಾಗಿದ್ದರೆ ರೈತರಲ್ಲಿ ಸಂತಸ ಮೂಡಿಸಿದೆ.
ಚಾಮುಲ್ ವತಿಯಿಂದ ಜಿಲ್ಲಾ ಹೈನುಗಾರರಿಗೆ ಯುಗಾದಿ ಹಬ್ಬದ ಪ್ರಯುಕ್ತ ಖರೀದಿ ದರವನ್ನು ೪ ರೂ. ಹೆಚ್ಚಳ ಮಾಡುವ ಮೂಲಕ ಯುಗಾದಿ ಉಡುಗೊರೆ ನೀಡಲಾಗಿದೆ.
ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು ಒಟ್ಟು ೪೬೧ ಹಾಲು ಉತ್ಪಾದಕ ಸಹಕಾರ ಸಂಘಗಳಿಂದ ಪ್ರತಿನಿತ್ಯ ೨.೬೧ ಲಕ್ಷ ಕೆಜಿ ಹಾಲು ಸಂಗ್ರಹಿಸುತ್ತಿದೆ. ಒಕ್ಕೂಟ ವ್ಯಾಪ್ತಿಯಲ್ಲಿ ಹಾಗೂ ತಮಿಳುನಾಡು, ಕೇರಳ ಮಾರುಕಟ್ಟೆಗಳಿಗೆ ಪ್ರತಿದಿನ ೬೫ ಸಾವಿರ ಲೀಟರ್ ಹಾಲು, ೧೬,೮೪೫ ಕೆಜಿ ಮೊಸರು, ದೇಶದ ವಿವಿಧ ಭಾಗಗಳಿಗೆ ೬೪,೭೮೯ ಲೀಟರ್ ಯುಹೆಚ್‌ಟಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ.
ಸರ್ಕಾರದ ಕ್ಷೀರ ಭಾಗ್ಯ ಯೋಜನೆಗೆ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ. ಹೈನುಗಾರರ ಹಿತದೃಷ್ಟಿಯಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಮಾ.೨೯ ರಂದು ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ೪ ರೂ.ಗಳನ್ನು ಏಪ್ರಿಲ್ ೧ರಿಂದ ಅನ್ವಯವಾಗುವಂತೆ ಹೆಚ್ಚಿಸಲಾಗಿದೆ.
ಹಾಲು ಉತ್ಪಾದಕರು ಸರಬರಾಜು ಮಾಡುವ ಶೇ.೪.೦ ಜಿಡ್ಡು ಹಾಗೂ ೮.೫ ಜಿಡ್ಡೇತರ ಘನಾಂಶದ ಪ್ರತಿ ಲೀಟರ್ ಹಾಲಿಗೆ ಒಕ್ಕೂಟದಿಂದ ೩೫.೨೦ ರೂ. ಹಾಗೂ ಸರ್ಕಾರದ ಪ್ರೋತ್ಸಾಹಧನ ಪ್ರತಿ ಲೀಟರ್‌ಗೆ ೫ ರೂ. ಸೇರಿದಂತೆ ಉತ್ಪಾದಕರಿಗೆ ಒಟ್ಟು ೪೦.೨೦ ರೂ. ಪಾವತಿಯಾಗಲಿದೆ.
ಒಟ್ಟಾರೆ ಜೀವನೋಪಾಯಕ್ಕಾಗಿ ಒಂದೆರಡು ಹಸುಗಳನ್ನು ಸಾಕುವ ರೈತರಿಗೆ ಇದರಿಂದ ಅನುಕೂಲವಾಗಿದೆ.
” ಲೀಟರ್‌ಗೆ ೪ ರೂ. ಹೆಚ್ಚಳವಾಗಿರುವುದಕ್ಕೆ ನಮಗ ಬೇಸರವಿಲ್ಲ. ಏಕೆಂದರೆ ಅದು ನೇರವಾಗಿ ರೈತರಿಗೆ ತಲುಪುತ್ತದೆ. ರೈತರ ಶ್ರಮದ ಮುಂದೆ ಹಾಲಿನ ದರ ಹೆಚ್ಚಳ ಮಾಡಿರುವುದು ಅಂತಹ ಹೊರೆಯಾಗದು.”
-ಮಂಜುನಾಥ್, ಗ್ರಾಹಕ.
” ರೈತರು ಕಷ್ಟಪಟ್ಟು ಹಸು ಸಾಕಿ ಜೀವನ ಸಾಗಿಸುತ್ತಾರೆ. ಒಂದು ಲೀಟರ್ ನೀರಿನ ಬೆಲೆಯೇ ೨೦ ರೂ. ಇದೆ. ಈಗ ಕೇವಲ ೪ ರೂ. ಹಾಲಿನ ಬೆಲೆ ಹೆಚ್ಚಳ ಮಾಡಿದ್ದು ದೊಡ್ಡದಲ್ಲ. ರೈತರಿಗೆ ತಕ್ಕಮಟ್ಟಿಗೆ ಸಮಾಧಾನ ತಂದಿದೆ.”
-ಮಹೇಶ್, ರೈತ