Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ಚುನಾವಣೆ ಕಾಣುವ ಮುನ್ನವೇ ವಿಲೀನ ಸಂಭವ

ಕೆ.ಬಿ.ರಮೇಶನಾಯಕ

ಮತ್ತೆ ಪಾಲಿಕೆ ವ್ಯಾಪ್ತಿಗೆ ಸೇರಲಿರುವ ಮುಡಾ ಅನುಮೋದಿತ ಬಡಾವಣೆಗಳು

ಹೊಸದಾಗಿ ರಚನೆಯಾಗಿದ್ದ ೪ ಪಟ್ಟಣ ಪಂಚಾಯಿತಿ,೧ನಗರಸಭೆ

ಮೈಸೂರು: ಗ್ರಾಮ ಪಂಚಾಯಿತಿ ಮಟ್ಟದಿಂದ ಪಟ್ಟಣ ಪಂಚಾಯಿತಿಯಾಗಿ, ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದ ನಾಲ್ಕು ಪಪಂ, ಒಂದು ನಗರಸಭೆ ಚುನಾವಣೆ ಕಾಣುವ ಮುನ್ನವೇ ಬೃಹತ್ ನಗರ ಪಾಲಿಕೆಯೊಂದಿಗೆ ವಿಲೀನಗೊಳ್ಳುವ ಸ್ಥಿತಿ ಎದುರಾಗಿದೆ.

ಮೈಸೂರು ಮಹಾ ನಗರಪಾಲಿಕೆಯನ್ನು ಬೃಹತ್ ನಗರ ಪಾಲಿಕೆಯನ್ನಾಗಿ ರಚಿಸುವ ಪ್ರಸ್ತಾವನೆಯು ಶೀಘ್ರದಲ್ಲಿ ಕಾರ್ಯಗತವಾದರೆ ೨೦೨೧ರಲ್ಲಿ ಹೊಸದಾಗಿ ರಚನೆಯಾಗಿದ್ದ ಮೈಸೂರಿನ ಹೊರವಲಯದ ಐದು ಸ್ಥಳೀಯ ಸಂಸ್ಥೆಗಳಿಗೆ ರಾಜ್ಯಸರ್ಕಾರ ಚುನಾವಣೆ ನಡೆಸಲು ಮುಂದಾಗದೆ ಆಡಳಿತಾಧಿಕಾರಿಗಳನ್ನು ನಿಯೋಜಿಸಿದ್ದು, ಒಂದು ಅವಧಿಗೂ ಚುನಾಯಿತ ಪ್ರತಿನಿಧಿಗಳನ್ನು ಕಾಣದೆ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ.

ಮೈಸೂರು ನಗರದ ವರ್ತುಲ ರಸ್ತೆಯ ಹೊರಗಿನ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿ ರಮ್ಮನಹಳ್ಳಿ, ಬೋಗಾದಿ, ಶ್ರೀರಾಂಪುರ, ಕಡಕೊಳವನ್ನು ಪಟ್ಟಣ ಪಂಚಾಯಿತಿಗಳನ್ನಾಗಿ, ಹೂಟಗಳ್ಳಿಯನ್ನು ನಗರಸಭೆಯಾಗಿ ರಚನೆ ಮಾಡಲಾಯಿತು. ಗ್ರಾಪಂ ಕಟ್ಟಡಗಳಲ್ಲೇ ಕಾರ್ಯಾರಂಭ ಮಾಡುವ ಜತೆಗೆ ಆಡಳಿತಾಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಹೀಗಾಗಿ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದ ಗ್ರಾಮಗಳಿಗೆ ಕುಡಿಯುವ ನೀರು, ಚರಂಡಿ, ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಬಂದರೆ, ತೆರಿಗೆ ಪ್ರಮಾಣದಲ್ಲೂ ಏರಿಕೆಯಾಗಿತ್ತು. ವಿಧಾನಸಭಾ ಚುನಾವಣೆ ಬಳಿಕ ಈ ಐದೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಈಗ ಬೃಹತ್ ನಗರಪಾಲಿಕೆಯೊಂದಿಗೆ ವಿಲೀನಗೊಳಿಸುವ ತೀರ್ಮಾನಕ್ಕೆ ಮುಂದಾಗಿರುವುದರಿಂದ ಈ ಸ್ಥಳೀಯ ಸಂಸ್ಥೆಗಳು ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ.

ಆಕಾಂಕ್ಷಿಗಳಿಗೆ ನಿರಾಶೆ: ಗ್ರಾಪಂನಿಂದ ಮೇಲ್ದರ್ಜೆಗೇರಿದ ಬಳಿಕ ಚುನಾವಣೆ ನಡೆದರೆ ಸ್ಪಽಸಲು ತಯಾರಿ ಮಾಡಿಕೊಂಡಿದ್ದ ಆಕಾಂಕ್ಷಿಗಳಲ್ಲಿ ನಿರಾಶೆ ಮೂಡಿಸಿದೆ. ೪ ವರ್ಷಗಳಿಂದ ಕಾದಿರುವ ರಾಜಕೀಯ ಪಕ್ಷಗಳ ಮುಖಂಡರು ಬೃಹತ್ ನಗರಪಾಲಿಕೆ ರಚನೆಯಾಗಿ ಚುನಾವಣೆ ನಡೆಸುವ ಹೊತ್ತಿಗೆ ಮತ್ತೆರಡು ವರ್ಷಗಳಾದರೂ ಬೇಕಾಗುತ್ತದೆ.ಅಲ್ಲಿಯವರೆಗೂ ಕಾಂಗ್ರೆಸ್,ಬಿಜೆಪಿ ಮತ್ತು ಜಾ.ದಳದಿಂದ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಪಾಲಿಕೆ ಹಿಡಿತಕ್ಕೆ ಖಾಸಗಿ ಬಡಾವಣೆಗಳು: ರಿಯಲ್ ಎಸ್ಟೇಟ್ ಉದ್ಯಮದಿಂದಾಗಿ ನಗರಪಾಲಿಕೆಗೆ ಸೇರಿಸಬೇಕೆಂದು ಒತ್ತಡ ಹೇರುತ್ತಲೇ ಬಂದಿದ್ದ ಉದ್ಯಮಿಗಳಲ್ಲಿ ಸಂತಸ ಮೂಡಿದೆ. ಮುಡಾದಿಂದ ರಚನೆಯಾದ ಮತ್ತು ಅನುಮೋದನೆ ಪಡೆದು ರಚಿಸಲಾಗಿರುವ ಖಾಸಗಿ ಬಡಾವಣೆಗಳಲ್ಲಿ ಈಗಾಗಲೇ ೪೦೦ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲಾಗಿದೆ. ಮುಡಾದಿಂದ ದಾಖಲೆಗಳು ಸಲ್ಲಿಕೆಯಾಗುತ್ತಿದ್ದಂತೆ ಖಾತೆ ಮಾಡುವ ಕೆಲಸವೂ ನಡೆಯುತ್ತಿದೆ. ಈ ನಡುವೆ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಗಳು ಅಸ್ತಿತ್ವ ಕಳೆದುಕೊಂಡು ಬೃಹತ್ ನಗರಪಾಲಿಕೆ ವ್ಯಾಪ್ತಿಗೆ ಸೇರುವುದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ.

ಅಧಿಕಾರಿಗಳಿಗೂ ಸಂಕಟ: ನಗರಪಾಲಿಕೆಗೆ ಸೇರ್ಪಡೆಯಾದ ಮೇಲೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವರ್ಗಿ ನಡೆಯಲಿದೆ. ೪ ಪಟ್ಟಣ ಪಂಚಾ ಯಿತಿ, ಒಬ್ಬರು ನಗರಸಭೆಯ ಮುಖ್ಯಾಧಿಕಾರಿಗಳು, ಪೌರಾಯುಕ್ತರು ಪೌರಾಡಳಿತ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರಪಾಲಿಕೆಗೆ ಸೇರಿದ ಮೇಲೆ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರಬೇಕು. ಪೌರಾಡಳಿತದಿಂದ ನಗರಾಭಿವೃದ್ಧಿ ಇಲಾಖೆಗೆ ನಿಯೋಜನೆ ಮಾಡಿದರೂ ಆಯಕಟ್ಟಿನ ಹುದ್ದೆಗಳು ಸಿಗದೆ ವಲಯ ಆಯುಕ್ತರು ಅಥವಾ ಬೇರೆ ಬೇರೆ ಹುದ್ದೆಗಳಿಗೆ ನಿಯೋಜನೆಗೊಳ್ಳಬೇಕು. ಇಲ್ಲದಿದ್ದರೆ ಬೇರೆ ಕಡೆ ವರ್ಗಾವಣೆಯಾಗಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

Tags:
error: Content is protected !!