Mysore
24
scattered clouds

Social Media

ಭಾನುವಾರ, 14 ಡಿಸೆಂಬರ್ 2025
Light
Dark

300 ನಿವೇಶನಗಳ ಹರಾಜಿಗೆ ಎಂಡಿಎ ಸಿದ್ಧತೆ

ಕೆ.ಬಿ.ರಮೇಶನಾಯಕ

ದಸರಾ ನಂತರ ಪ್ರಕ್ರಿಯೆ ಆರಂಭಕ್ಕೆ ಚಿಂತನೆ: ಎಂಡಿಎ ಅಭಿವೃದ್ಧಿ, ಸಂಪನ್ಮೂಲ ಕ್ರೋಢೀಕರಣಕ್ಕೆ ಯೋಜನೆ 

ಮೈಸೂರು: ಹಲವು ಆರೋಪ, ಅವ್ಯವಹಾರಗಳಿಂದಾಗಿ ಕಳಂಕಕ್ಕೆ ಒಳಗಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು, ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ)ವಾಗಿ ಪರಿವರ್ತನೆಯಾದ ಬಳಿಕ ಅಭಿವೃದ್ಧಿ,ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡಿದೆ. ದಸರಾ ಮಹೋತ್ಸವದ ಬಳಿಕ ೩೦೦ ನಿವೇಶನಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲು ಸಜ್ಜಾಗಿದೆ.

ಕಳೆದ ತಿಂಗಳು ನಡೆದ ಇ-ಹರಾಜಿನಲ್ಲಿ ವಿಜಯನಗರ ನಾಲ್ಕನೇ ಹಂತದ ನಿವೇಶನವೊಂದು ಅತ್ಯಧಿಕ ಮೊತ್ತಕ್ಕೆ ಬಿಡ್ ಆಗಿ ರಿಯಲ್ ಎಸ್ಟೇಟ್ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ಇದೀಗ ನಾಡಹಬ್ಬ ದಸರಾ ಮುಕ್ತಾಯವಾದ ನಂತರ ವಿವಿಧ ಬಡಾವಣೆಗಳಲ್ಲಿರುವ ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಎಂಡಿಎ ಕೈಗೆತ್ತಿಕೊಳ್ಳಲಿದೆ. ಇದರಿಂದಾಗಿ ಎಂಡಿಎಗೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರುವ ಸಾಧ್ಯತೆ ಇದೆ.

ಎಂಡಿಎ ರಚನೆ ಬಳಿಕ ಕಳೆದ ತಿಂಗಳು ಮೊದಲ ಬಾರಿ ನಿವೇಶನಗಳ ಇ-ಹರಾಜು ನಡೆಸಲಾಯಿತು. ಇದಕ್ಕೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಮಾಲೀಕರು, ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದರಿಂದ ಪ್ರಾಧಿಕಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ನೆರವಾಯಿತು. ನಿವೇಶನಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೆ ೩೦೦ ನಿವೇಶನಗಳ ಇ-ಹರಾಜಿಗೆ ಸಿದ್ಧತೆ ನಡೆಸಲಾಗುತ್ತಿದೆ.

ಸಾರ್ವಜನಿಕರಿಗೆ ಪಾರದರ್ಶಕವಾಗಿ ನಿವೇಶನ ವಿತರಣೆ ಜತೆಗೆ ಪ್ರಾಧಿಕಾರದ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಲು ಹಾಗೂ ಅನಧಿಕೃತ ಮಾರಾಟ ಹಾಗೂ ಮಧ್ಯವರ್ತಿಗಳ ಹಸ್ತಕ್ಷೇಪ ತಡೆಯುವುದಕ್ಕೆ ಎಂಡಿಎ ಆದ್ಯತೆ ನೀಡಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಅಧಿಕೃತ ವೆಬ್‌ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಿರ್ದಿಷ್ಟ ಮೊತ್ತವನ್ನು ಠೇವಣಿ (ಇಎಂಡಿ) ರೂಪದಲ್ಲಿ ಜಮಾ ಮಾಡಬೇಕು. ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಗರಿಷ್ಟ ಮೊತ್ತ ಕೋರಿದವರಿಗೆ ನಿವೇಶನ ಹಂಚಿಕೆ ಆಗುತ್ತದೆ.

ಅಭಿವೃದ್ಧಿಗೆ ಒತ್ತು: ಹೊಸ ಬಡಾವಣೆಗಳ ರಚನೆ, ಬಹುಮಹಡಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಎಂಡಿಎ, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದೆ. ವಿಶೇಷವಾಗಿ ಗುಂಪು ಮನೆಗಳನ್ನು ನಿರ್ಮಾಣ ಮಾಡಲು ಅನುದಾನ ಮೀಸಲಿಡುವ ಜತೆಗೆ, ಹೊರವಲಯದ ಪ್ರದೇಶಗಳ ಅಭಿವೃದ್ಧಿ ಹೊಣೆ ಹೊತ್ತಿದೆ. ಹೀಗಾಗಿಯೇ, ಹಲವಾರು ವರ್ಷಗಳಿಂದ ಖಾಲಿ ಬಿದ್ದಿರುವ ನಿವೇಶನಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ ಎಂದರು.

” ಹರಾಜು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆಯ ಮೂಲಕವೇ ನಡೆಯುತ್ತದೆ. ಜತೆಗೆ ನಿವೇಶನಗಳ ವಿವರ,ವಿಸ್ತೀರ್ಣ, ದರಗಳನ್ನು ಪ್ರಕಟಿಸಲಾಗುತ್ತದೆ. ಯಶಸ್ವಿ ಹರಾಜುದಾರರು ನಿಗದಿತ ಅವಽಯಲ್ಲಿ ಹಣ ಪಾವತಿಸಿ ನಿವೇಶನದ ಹಕ್ಕು ಪಡೆಯಬೇಕು.”

ಕೆ.ಆರ್.ರಕ್ಷಿತ್, ಎಂಡಿಎ ಆಯುಕ್ತ

Tags:
error: Content is protected !!