Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ಜೂ.೧೫ರೊಳಗೆ ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ

ಕೆ.ಬಿ.ರಮೇಶನಾಯಕ

ಹೈಕೋರ್ಟ್ ಸೂಚನೆಯ ಬೆನ್ನಲ್ಲೇ ಚುನಾವಣೆ ನಡೆಸಲು ಸಜ್ಜು

ಮೈಸೂರು: ಹಲವು ಕಾರಣಗಳಿಂದಾಗಿ ಒಂದೂವರೆ ವರ್ಷಗಳಿಂದ ಮುಂದೂಡುತ್ತಲೇ ಬಂದಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು ಮೇ ಅಥವಾ ಜೂನ್ ತಿಂಗಳಲ್ಲಿ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ.

ಜೂನ್ ೧೫ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸುವಂತೆ ಉಚ್ಚ ನ್ಯಾಯಾಲಯ ನೀಡಿದ ಸೂಚನೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಸಹಕಾರ ಇಲಾಖೆಗೆ ಹಸಿರು ನಿಶಾನೆ ತೋರಿಸಿರುವುದರಿಂದ ಸಹಕಾರ ವಲಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಏನಿದು ಪ್ರಕರಣ?: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿಗೆ ಕಡೆಯದಾಗಿ ೨೦೧೮ ನ.೧೨ಕ್ಕೆ ಚುನಾವಣೆ ನಡೆದಿತ್ತು. ೨೦೨೩ರ ನ.೧೧ಕ್ಕೆ ಆಡಳಿತ ಮಂಡಳಿಯ ಐದು ವರ್ಷಗಳ ಕಾಲಾವಧಿ ಮುಗಿದಿತ್ತು. ಆಡಳಿತ ಮಂಡಳಿಯ ಅವಧಿ ಮುಗಿಯುವ ೬ ತಿಂಗಳು ಮುಂಚಿತವಾಗಿ ಚುನಾವಣೆ ನಡೆಸುವಂತೆ ಕೋರಿ ೨೦೨೩ರ ಮೇ ೪ರಂದು ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ೨೦೨೩-೨೮ರ ಅವಧಿಗೆ ೨೦೨೩ರ ಅ.೨೭ರಿಂದ ನ.೪ರೊಳಗೆ ಚುನಾವಣೆ ನಡೆಸಲು ೨೦೨೩ರ ಸೆ.೧ರಂದು ಚುನಾವಣಾಧಿಕಾರಿಯೂ ಆಗಿದ್ದ ಹಿಂದಿನ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿ ದ್ದರು. ಈ ಮಧ್ಯೆ ಮತದಾರರ ಪಟ್ಟಿಯಲ್ಲಿನ ಗೊಂದಲಗಳ ಹಿನ್ನೆಲೆಯಲ್ಲಿ ಸೆ.೨ರಂದು ಚುನಾವಣಾ ವೇಳಾಪಟ್ಟಿಯನ್ನು ದಿಢೀರನೆ ಹಿಂಪಡೆಯಲಾಗಿತ್ತು. ಸರ್ಕಾರದ ಪ್ರಭಾವ ದಿಂದಾಗಿ ಚುನಾವಣೆ ಮುಂದೂಡಲಾಗಿದೆ ಎಂದು ಆರೋಪಿಸಿ ಬ್ಯಾಂಕಿನ ಕೆಲ ನಿರ್ದೇಶಕರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದರು. ಆದರೆ, ಸರ್ಕಾರ ತನಗಿರುವ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ಆರು ತಿಂಗಳ ಕಾಲ ಚುನಾವಣೆ ಮುಂದೂಡಿತ್ತು. ನ್ಯಾಯಾಲಯದಲ್ಲೂ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಇದೀಗ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಅವಧಿ ಮುಗಿ ದಿರುವ ಸಹಕಾರ ಬ್ಯಾಂಕ್‌ಗಳಿಗೆ ಚುನಾವಣೆ ನಡೆಸುವಂತೆ ಆದೇಶ ನೀಡುತ್ತಿದ್ದಂತೆ ಸರ್ಕಾರ ಅನಿವಾರ್ಯವಾಗಿ ಅಸ್ತು ಎಂದಿದೆ.

ಶೀಘ್ರದಲ್ಲೇ ವೇಳಾಪಟ್ಟಿ ನಿಗದಿ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಚುನಾವಣೆ ನಡೆಸಲು ಸರ್ಕಾರ ಸಜ್ಜಾಗಿದ್ದು, ಬ್ಯಾಂಕಿನ ೧೮ ಮಂದಿ ನಿರ್ದೇಶಕರುಗಳ ಆಯ್ಕೆಗೆ ಶೀಘ್ರದಲ್ಲೇ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಜೂನ್ ೧೫ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸುವಂತೆ ಸೂಚಿಸಿರುವ ಕಾರಣ ೪೫ ದಿನಗಳ ಮುಂಚಿತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು. ಆದರೆ, ಮೂಲಗಳ ಪ್ರಕಾರ ಯುಗಾದಿ ಹಬ್ಬ ಕಳೆಯುತ್ತಿದ್ದಂತೆ ದಿನಾಂಕ ಪ್ರಕಟಿಸಲು ಅಗತ್ಯ ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.

ಶಾಸಕ ಹರೀಶ್‌ ಗೌಡ ಅವರ ಬಣಕ್ಕೆ ಸವಾಲು: 

ಮೈಸೂರು: ಕಳೆದ ಬಾರಿ ಬಹುಮತದೊಂದಿಗೆ ಐದು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಜಿ.ಡಿ.ಹರೀಶ್‌ಗೌಡರ ಬಣಕ್ಕೆ ಪ್ರತಿ ಸ್ಪರ್ಧೆಯೊಡ್ಡಲು ಎದುರಾಳಿ ಬಣಗಳು ಸಜ್ಜಾಗಿವೆ. ಸಹಕಾರ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಜಿ.ಟಿ.ದೇವೇಗೌಡರ ಬಣದಲ್ಲಿ ಸದಾನಂದ, ಹನೂರು ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ ಮತ್ತಿತರರು ಇದ್ದಾರೆ. ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಚಂದ್ರಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಲಯದಲ್ಲಿ ಗುರುತಿಸಿಕೊಂಡಿರುವ ಪರಿಣಾಮವಾಗಿ ಈ ಬಾರಿ ಜಿ.ಡಿ.ಹರೀಶ್‌ಗೌಡರ ಬಣದ ವಿರುದ್ಧ ಸೆಣಸಾಡುವ ಸಾಧ್ಯತೆ ಇದೆ. ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಈಗ ಮಾಜಿ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಗುರುತಿಸಿ ಕೊಂಡಿದ್ದು, ಪ್ರತ್ಯೇಕವಾಗಿ ಕಣಕ್ಕಿಳಿಯುವ ಮುನ್ಸೂಚನೆ ಇದೆ.

ಮೈಮುಲ್ ಚುನಾವಣೆಯಲ್ಲಿ ತಟಸ್ಥರಾಗಿದ್ದ ಜಿಟಿಡಿ:  ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಪಿ.ಎಂ.ಪ್ರಸನ್ನ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆ ಶಾಸಕ ಜಿ.ಟಿ.ದೇವೇಗೌಡರು ತಟಸ್ಥವಾಗಿ ಉಳಿದಿದ್ದರು. ಪೂರ್ಣ ಬಹುಮತ ಹೊಂದಿದ್ದರೂ ಕೂಡ ಸರ್ಕಾರದ ಜೊತೆಗೆ ವಿರಸ ಕಟ್ಟಿಕೊಳ್ಳಲು ಬಯಸದೇ ಇದ್ದದ್ದು ತಿ.ನರಸೀಪುರ ತಾಲ್ಲೂಕಿನಿಂದ ಪ್ರತಿನಿಧಿಸಿದ್ದ ಆರ್.ಚೆಲುವರಾಜು ಅಧ್ಯಕ್ಷರಾಗಿ ಆಯ್ಕೆಯಾಗಲು ಕಾರಣವಾಗಿತ್ತು. ಹೀಗಾಗಿ, ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಯಾವ ರಾಜಕೀಯ ದಾಳ ಉರುಳಿಸುವರೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

” ಸಾಮಾನ್ಯ ಸಭೆಯಲ್ಲಿ ಭಾಗವಹಿಸದೆ ಇರುವವರು, ಸತತ ಮೂರು ಸಭೆಗಳಲ್ಲಿ ಗೈರಾಗಿದ್ದವರನ್ನು ಪರಿಶೀಲಿಸಿ ಅರ್ಹರು ಮತ್ತು ಅನರ್ಹರ ಪಟ್ಟಿಯನ್ನು ಬೇರ್ಪಡಿಸಿದ ಬಳಿಕ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಯನ್ನು ತಯಾರಿಸುವಾಗ ಪ್ರತಿಯೊಂದನ್ನೂ ಪರಿಶೀಲಿಸಬೇಕಿರುವ ಕಾರಣ ಕನಿಷ್ಠ ೨೦ ದಿನಗಳಾದರೂ ಬೇಕಾಗುತ್ತದೆ.”

-ಆರ್.ಜೆ.ಕಾಂತರಾಜ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಎಂಸಿಡಿಸಿಸಿ ಬ್ಯಾಂಕ್

Tags:
error: Content is protected !!