೫ ತಿಂಗಳ ಹಿಂದೆ ಯುವಕನನ್ನು ಮೈಸೂರಿನಿಂದ ಅಪಹರಿಸಿ ಕರೆದೊಯ್ದಿದ್ದ ತಂಡ
ಮಂಗಳೂರಿನಿಂದ ತಪ್ಪಿಸಿಕೊಂಡು ಬಂದು ಲಷ್ಕರ್ ಠಾಣೆಗೆ ದೂರು
ಮೈಸೂರು: ಹಾಡಹಗಲೇ ನಂಜನಗೂಡು ಯುವಕನೊಬ್ಬನನ್ನು ಮೈಸೂರಿನಿಂದ ಅಪಹರಿಸಿದ ಮಂಗಳಮುಖಿ ಹಾಗೂ ಆಕೆಯ ಕಡೆಯವರು, ಯುವಕನಿಗೂ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ ಲಕ್ಷಾಂತರ ರೂ. ಹಣ ಗಳಿಸಿರುವ ಬಗ್ಗೆ ದೂರು ದಾಖಲಾಗಿದೆ.
ನಂಜನಗೂಡಿನ ತ್ಯಾಗರಾಜ ಕಾಲೋನಿಯ ಯುವಕ ಅನಿಲ್‌ಕುಮಾರ್ ನೊಂದ ಯುವಕ. ಮಂಗಳೂರು ಮೂಲದ ಅನಿತಾ ಆರೋಪ ಹೊತ್ತ ಮಂಗಳಮುಖಿ. ೫ ತಿಂಗಳ ಹಿಂದೆ ಈ ಅಪಹರಣ ನಡೆದಿದೆ. ಅಪಹರಣಕ್ಕೊಳಗಾದ ಯುವಕ ರಾತ್ರಿ ವೇಳೆ ಮಂಗಳೂರಿನಿಂದ ತಪ್ಪಿಸಿಕೊಂಡು ಬಂದು ಲಷ್ಕರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಡೆದದ್ದಾದರೂ ಏನು?: ೫ ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಬಂದಿದ್ದ ಅನಿಲ್‌ಕುಮಾರ್ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ನಂಜನಗೂಡು ಬಸ್‌ಗಾಗಿ ಕಾಯುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ಮಂಗಳಮುಖಿ ಅನಿತಾ ಮತ್ತು ತಂಡದವರು ಅನಿಲ್‌ಕುಮಾರ್‌ಗೆ ಮುಸುಕು ಹಾಕಿ ಮತ್ತು ಬರುವಂತೆ ಮಾಡಿ ಬಲವಂತವಾಗಿ ಕಾರಿನಲ್ಲಿ ಅಪಹರಿಸಿ ಮಂಗಳೂರಿಗೆ ಕರೆದೊಯ್ದಿದ್ದಾರೆ.
ನಂತರ ಆತನಿಗೆ ಸೀರೆ ತೊಡಿಸಿ, ಕಿವಿಗೆ ಓಲೆ, ಮೂಗುಬಟ್ಟು ಹಾಕಿಸಿ ಮಂಗಳಮುಖಿ ವೇಷ ಹಾಕಿ ಬಲವಂತವಾಗಿ ಬೀದಿಗಳಲ್ಲಿ ಅಂಗಡಿಗಳ ಮುಂದೆ ಭಿಕ್ಷೆ ಬೇಡಿಸಿದ್ದಾರೆ. ಆತನನ್ನು ಬಳಸಿ ಪ್ರತಿ ದಿನ ೨ ರಿಂದ ೩ ಸಾವಿರ ರೂ. ಸಂಪಾದಿಸಿದ್ದಾರೆ. ಇದರ ಜೊತೆಗೆ ರೀಲ್ಸ್ ತಯಾರಿಸಿ ಸಾಮಾಜಿಕ ಜಾಲತಾಣದಲ್ಲೂ ಅಪ್‌ಲೋಡ್ ಮಾಡಿದ್ದಾರೆ.
ಅಲ್ಲದೆ, ಮಂಗಳೂರು, ಕೇರಳ ಭಾಗಗಳಿಗೆ ಆತನನ್ನು ಕಳಿಸಿ ಲೈಂಗಿಕ ಕ್ರಿಯೆಗೂ ಬಳಸಿದ್ದಾರೆ. ಇದರಲ್ಲೂ ಅನಿಲ್‌ಕುಮಾರ್‌ನಿಂದ ಸಾವಿರಾರು ರೂ. ವಸೂಲಿ ಮಾಡಿದ್ದಾರೆ. ನಂತರ ಆಧಾರ್ ಕಾರ್ಡ್‌ನಲ್ಲಿ ಟ್ರಾನ್ಸ್‌ಜೆಂಡರ್ ಎಂದು ನಮೂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಸಹ ಅಧಿಕೃತ ಪ್ರಮಾಣಪತ್ರ ಕೊಡಿಸಿದ್ದಾರೆ. ಮುಂದಿನ ತಿಂಗಳು ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಮಂಗಳಮುಖಿಯಾಗಿ ಬದಲಾಯಿಸಲು ತೀರ್ಮಾನಿಸಿದ್ದರಂತೆ.
ಇದರ ಮಾಹಿತಿ ಅರಿತ ಅನಿಲ್ ಕುಮಾರ್ ಕರಾಳ ದಂಧೆಯ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿ ತನ್ನ ಸಂಪಾದನೆ ೩ ಲಕ್ಷ ರೂ. ಕೊಡುವಂತೆ ಕೇಳಿದಾಗ ಅನಿತಾ ಉಲ್ಟಾ ಹೊಡೆದಿದ್ದಾರೆ. ತನ್ನ ಮನೆಯಿಂದ ೫ ಲಕ್ಷ ನಗದು ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಸುಳ್ಳು ಕಂಪ್ಲೇಂಟ್ ದಾಖಲಿಸಿ ಜೈಲಿಗೆ ಹಾಕಿಸುತ್ತೇನೆಂದು ಅನಿತಾ ಬೆದರಿಸಿದ್ದಾರೆ. ಮನನೊಂದ ಅನಿಲ್‌ಕುಮಾರ್ ರಾತ್ರಿ ವೇಳೆ ಅಲ್ಲಿಂದ ತಪ್ಪಿಸಿಕೊಂಡು ನಂಜನಗೂಡು ಸೇರಿಕೊಂಡಿದ್ದಾನೆ. ಮತ್ತೆ ದಂಧೆ ಮಾಡಿಸಲು ಹವಣಿಸಿದ ಅನಿತಾ ಮಂಗಳಮುಖಿಯರನ್ನು ಅನಿಲ್‌ಕುಮಾರ್ ಮನೆಗೆ ಕಳಿಸಿ ಗಲಾಟೆ ಮಾಡಿಸಿದ್ದಾರೆ.
ಕಣ್ಣು ದೃಷ್ಟಿ ಕಡಿಮೆ ಇರುವ ಅನಿಲ್‌ಕುಮಾರ್‌ನಲ್ಲಿ ಯಾವುದೇ ಲೈಂಗಿಕ ದೌರ್ಬಲ್ಯ ಇಲ್ಲ. ಅನಿಲ್ ಕುಮಾರ್ ಮಂಗಳಮುಖಿಯಾಗಲು ಅನರ್ಹನಾಗಿದ್ದರೂ ಸಮಾಜ ಕಲ್ಯಾಣ ಇಲಾಖೆ ಟ್ರಾನ್ಸ್‌ಜಂಡರ್ ಪ್ರಮಾಣಪತ್ರ ಕೊಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ
ತನಿಖೆ ನಡೆಸುತ್ತಿದ್ದೇವೆ…:
ಅನಿಲ್‌ಕುಮಾರ್ ಹೇಳುತ್ತಿರುವುದು ಸುಳ್ಳೋ ಅಥವಾ ಸತ್ಯವೋ ಎಂಬ ಗೊಂದಲವಿದೆ. ಈ ಸಂಬಂಧ ಮತ್ತಷ್ಟು ತನಿಖೆ ಅಗತ್ಯವಿದೆ. ಅಲ್ಲಿನ ಮಂಗಳಮುಖಿಯರು ಮಂಗಳೂರಿನ ಕಂಕನವಾಡಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈತ ಮಂಗಳಮುಖಿ ಎಂದು ಹೇಳಿಕೊಂಡು ನಮ್ಮ ಬಳಿ ಬಂದು ತೃತೀಯ ಲಿಂಗಿ ಪ್ರಮಾಣಪತ್ರ ಮಾಡಿಸಿಕೊಳ್ಳಲು ನಮ್ಮ ಸಹಾಯ ಪಡೆದಿದ್ದಾನೆ. ಮಂಗಳಮುಖಿ ಅಲ್ಲದಿದ್ದರೂ, ಸೌಲಭ್ಯ ಪಡೆಯಲು ಮುಂದಾಗಿದ್ದಾನೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಹೀಗಾಗಿ ಎರಡೂ ಕಡೆಯವರಿಂದ ಹೇಳಿಕೆ ಪಡೆದು ತನಿಖೆ ನಡೆಸಲಾಗುತ್ತದೆ. ಆತ ಹೇಳುತ್ತಿರುವುದು ಸತ್ಯವೇ ಆಗಿದ್ದಲ್ಲಿ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ.
-ಪೊಲೀಸ್ ಅಧಿಕಾರಿ




