Mysore
15
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಮಾರ್ಚ್.‌25ರಂದು ಶ್ರೀ ದೊಡ್ಡಮ್ಮತಾಯಿ, ಚಿಕ್ಕಮ್ಮತಾಯಿ ಹಬ್ಬ

ತಿ.ನರಸೀಪುರದ ಹಳೇ ಸಂತೇಮಾಳದಲ್ಲಿ ಭರದಿಂದ ಸಾಗಿದ ಸಿದ್ಧತೆ ಕಾರ್ಯ

 ಎಂ.ನಾರಾಯಣ್

ತಿ.ನರಸೀಪುರ: ಪಟ್ಟಣದ ಹಳೇ ಸಂತೇಮಾಳದಲ್ಲಿ ಮಾ.೨೫ರ ಮಂಗಳವಾರ ಶ್ರೀ ದೊಡ್ಡಮ್ಮತಾಯಿ, ಶ್ರೀ ಚಿಕ್ಕಮ್ಮತಾಯಿ ಅಮ್ಮನವರ ದೊಡ್ಡ ಹಬ್ಬ ವಿಶೇಷವಾಗಿ ನಡೆಯಲಿದ್ದು, ದೇವಾಲಯದ ಆಸುಪಾಸಿನ ಬಯಲು ಪ್ರದೇಶದಲ್ಲಿ ಹಬ್ಬ ಆಯೋಜನೆಗೊಳ್ಳುವ ಹಿನ್ನೆಲೆಯಲ್ಲಿ ಸಿದ್ಧತೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.

ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಶ್ರೀ ದೊಡ್ಡಮ್ಮತಾಯಿ, ಶ್ರೀ ಚಿಕ್ಕಮ್ಮತಾಯಿ ಅಮ್ಮನವರ ದೊಡ್ಡಹಬ್ಬ ವಿಶೇಷವಾಗಿ ನಡೆಯುತ್ತದೆ. ಗೋಪಾಲಪುರ ಹಾಗೂ ಹಳೇ ಪಟ್ಟಣದ ನಿವಾಸಿಗಳು ತಮ್ಮ ಊರನ್ನು ತೊರೆದು ಹಳೇ ಸಂತೇಮಾಳದ ಸುತ್ತಲಿನ ಬಯಲು ಪ್ರದೇಶದಲ್ಲಿ ಬಿಡಾರ ಹೂಡುತ್ತಾರೆ. ಅಲ್ಲಿಯೇ ಹಬ್ಬದ ಪ್ರಯುಕ್ತ ಅಡುಗೆಯನ್ನು ತಯಾರಿಸಿ, ದೇವಿಯರಿಗೆ ಎಡೆ ಇಡುತ್ತಾರೆ. ಬಂದ ನೆಂಟರಿಷ್ಟರನ್ನು ಆಹ್ವಾನಿಸಿ ಆತಿಥ್ಯವನ್ನು ನೀಡುತ್ತಾರೆ.

ನಂಬಿ ಆರಾಧಿಸುವ ಭಕ್ತರಿಗೆ ರೋಗರುಜಿನಗಳು ಬಾರದಂತೆ, ಪ್ರವಾಹವನ್ನು ತಡೆದು, ಕುಲಸ್ಥರ ನೆಲೆಯನ್ನು ರಕ್ಷಿಸಲು ಊರಿಗೆ ಕಾವಲಾಗಿ ನೆಲೆ ನಿಂತವರೇ ಶ್ರೀ ದೊಡ್ಡಮ್ಮತಾಯಿ, ಶ್ರೀ ಚಿಕ್ಕಮ್ಮತಾಯಿ ದೇವಿಯರು ಎಂಬ ನಂಬಿಕೆ ಇದೆ. ಕಾವೇರಿ ನದಿ ತೀರದಲ್ಲಿ ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆಗೊಂಡಿರುವ ದೇವಿಯರು ಸಾವಿರಾರು ಕುಲಸ್ಥರನ್ನು ಹೊಂದಿದ್ದು, ಈ ಭಾಗದ ನೆಚ್ಚಿನ ಆರಾಧ್ಯ ದೇವತೆಗಳಾಗಿದ್ದಾರೆ. ಪ್ರವಾಹ ಕಾಲದಲ್ಲಿ ವಾಸದ ನೆಲೆಗಳನ್ನು ರಕ್ಷಿಸಲು ಹಾಗೂ ವಾಂತಿ, ಭೇದಿ, ಕಾಲರಾದಂತಹ ಸಾಂಕ್ರಾಮಿಕ ರೋಗಗಳಿಂದ ಜನರನ್ನು ಕಾಪಾಡುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ.

ದೇವಾಲಯಗಳ ನೆಲೆಬೀಡಾಗಿರುವ ಹಳೇ ಸಂತೇಮಾಳದಲ್ಲಿ ಮೂರ್ನಾಲ್ಕು ದಶಕಗಳಿಂದ ಪುಟ್ಟದೊಂದು ಗುಡಿಯಲ್ಲಿ ನೆಲೆಗೊಂಡಿರುವ ಶ್ರೀ ದೊಡ್ಡಮ್ಮತಾಯಿ, ಶ್ರೀ ಚಿಕ್ಕಮ್ಮತಾಯಿ ಅಮ್ಮನವರ ದೇವಾಲಯವನ್ನು ಭಕ್ತರು ಹಾಗೂ ಕುಲಸ್ಥರು ದೇಣಿಗೆ ಸಂಗ್ರಹಿಸಿ ನಿರ್ಮಾಣ ಮಾಡಿದ್ದಾರೆ. ಪ್ರತಿ ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಪೂಜೆ ನಡೆಯುತ್ತದೆ. ಶುಕ್ರವಾರ ದೇವಿಯರಿಯರಿಗೆ ಎಣ್ಣೆ ದೀಪ ಹಚ್ಚಲಾಗುತ್ತದೆ. ಅಮಾವಾಸ್ಯೆ, ಹುಣ್ಣಿಮೆ ಹಾಗೂ ಹಬ್ಬದ ವಿಶೇಷ ದಿನಗಳಲ್ಲಿ ಪೂಜೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ. ಈ ದೇವಿಯರ ದರ್ಶನದಿಂದ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಅಪಾರವಾದ ನಂಬಿಕೆ ಜನರಲ್ಲಿದೆ.

ದೇವಿಯರಿಗೆ ಸಿಹಿ, ಖಾರದ ಎಡೆ

ಹಬ್ಬದ ದಿನದಂದು ದೇವಾಲಯದಲ್ಲಿ ಇಡಲಾಗುವ ಸಿಹಿ ಮತ್ತು ಖಾರದ ಎಡೆಯನ್ನು ಊರಿನ ಆಚೆ ನಿಗದಿಪಡಿಸಿರುವ ಸ್ಥಳದಲ್ಲಿ ಅರ್ಚಕರು ಹಾಗೂ ಕುಲಸ್ಥರು ರಾತ್ರಿ ೧೦ ಗಂಟೆಗೆ ಇಟ್ಟು ತಿರುಗಿ ನೋಡದೆ ಬರುತ್ತಾರೆ. ಬೆಳಿಗ್ಗೆಯಾಗುವುದರೂಳಗೆ ಆ ಎಡೆ ಅಲ್ಲಿ ಇರುವುದಿಲ್ಲ. ಇದು ಹಬ್ಬದಲ್ಲಿ ಒಂದು ವಿಶೇಷ ಕೂಡ. ಮಾರಿಕಾಂಬೆ ದೇವಿಯರಿಗೆ ಮೇಕೆಯನ್ನು ಬಲಿಕೊಟ್ಟು, ಗೋಪಾಲಪುರ ಹಾಗೂ ಹಳೇ ಟೌನಿನಲ್ಲಿ ಪೀಡೆ ಮರಿ ಎಳೆಯುವುದು ವಾಡಿಕೆಯಾಗಿದೆ ಎಂದು ಯಜಮಾನರುಗಳಾದ ಶಾಂತರಾಜು, ಸತೀಶ್, ಪುರುಷಕಾರಿ ಮಹದೇವ, ಮಹದೇವಪ್ಪ, ಗೋಪಾಲಪುರ ರಾಜಣ್ಣ, ತಬಲ ಮೂರ್ತಿ, ಅರ್ಚಕ ದೇವರಾಜು ತಿಳಿಸಿದ್ದಾರೆ.

Tags:
error: Content is protected !!