ಪುನೀತ್ ಮಡಿಕೇರಿ
ಪ್ಲಾಸ್ಟಿಕ್‌ನ ಮೊರ, ಬುಟ್ಟಿಗಳ ನಡುವೆ ಬಿದಿರಿನ ವಸ್ತುಗಳತ್ತ ಜನರು ಗುಡಿ ಕೈಗಾರಿಕೆ ನಂಬಿ ಬದುಕುವ ಕೊರಗ, ಮೇದ ಜನಾಂಗಕ್ಕೆ ಬೇಕಿದೆ ಸರ್ಕಾರದ ನೆರವು
ಮಡಿಕೇರಿ: ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಳಂಜಿ ಮಾರಾಟ ಬಲು ಜೋರಾಗಿ ನಡೆಯುತ್ತಿದ್ದು, ಸಾರ್ವಜನಿಕರು ಖರೀದಿಗೆ ಮುಂದಾಗಿದ್ದಾರೆ.
ಮಡಿಕೇರಿಯಲ್ಲಿ ಉತ್ತಮ ಮಳೆಯೊಂದಿಗೆ ಮೈಕೊರೆಯುವ ಚಳಿಯ ವಾತಾವರಣ ಇರುವುದರಿಂದ ಜನರು ಬಟ್ಟೆ ಒಣಗಿಸಲು ಸಾಕಷ್ಟು ಕಷ್ಟ ಅನುಭವಿಸುತ್ತಾರೆ. ಇದಕ್ಕೆ ಪರಿಹಾರವೆಂಬಂತೆ ಕೊಡಗಿನಲ್ಲಿ ಹಿಂದಿನಿಂದಲೂ ಬಟ್ಟೆ ಒಣಗಿಸಲು ಗ್ರಾಮೀಣ ಜನರು ಕಂಡುಕೊಂಡಿದ್ದ ಬಳಂಜಿಗೆ ನಗರದಲ್ಲಿ ಈ ವರ್ಷ ಬೇಡಿಕೆ ಕಡಿಮೆಯಾಗಿದೆ ಎಂದು ವ್ಯಾಪಾರಿಗಳಾದ ಗೋಪಾಲ್, ಕೃಷ್ಣ ಹೇಳುತ್ತಾರೆ.
ಬಿದಿರಿನಿಂದ ತಯಾರಿಸುವುದನ್ನು ತಮ್ಮ ಜೀವನದ ಸಾಂಪ್ರದಾಯಿಕ ಕುಲಕಸುಬು ಮಾಡಿಕೊಂಡಿರುವ ಗಿರಿಜನರು, ಕಾಡುಮೇಡು ಅಲೆದು ಬಿದಿರನ್ನು ಸಂಗ್ರಹಿಸಿ, ಅದರಿಂದ ಅಗತ್ಯ ವಸ್ತುಗಳನ್ನು ತಯಾರಿಸುತ್ತಾರೆ. ನಂತರ ನಗರಗಳಿಗೆ ತೆರಳಿ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದಾರೆ. ಈ ರೀತಿಯ ಗುಡಿಕೈಗಾರಿಕೆಯನ್ನು ಕುಶಾಲನಗರ ಸಮೀಪದ ಕೊಪ್ಪದಲ್ಲಿ ಕಾರ್ಮಿಕರು ಮಾಡುತ್ತಿದ್ದಾರೆ.
ಶತಮಾನಗಳಿಂದಲೂ ಬುಟ್ಟಿ ನೇಯ್ದು ಬದುಕುವ ಕೊರಗ ಮತ್ತು ಮೇದ ಜನಾಂಗವು ಕೊಡಗು ಜಿಲ್ಲೆಯಲ್ಲೂ ನೆಲೆಸಿದ್ದು, ಅವರು ಗುಡಿ ಕೈಗಾರಿಕೆಯನ್ನು ನಡೆಸುತ್ತಾ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳ ತೀವ್ರ ಪೈಪೋಟಿಯಿಂದ ಗುಡಿ ಕೈಗಾರಿಕೆಗಳು ವಿನಾಶದ ಅಂಚಿನಲ್ಲಿವೆ ಎಂಬ ಕೊರಗು ಕಾಡುತ್ತಿದೆ. ತೀವ್ರ ಸ್ಪರ್ಧೆಯ ನಡುವೆ ಬೇಡಿಕೆಗೆ ಅನುಗುಣವಾಗಿ ಬಿದಿರು ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಬಿದಿರಿನ ವಸ್ತುಗಳ ನೇಯ್ಗೆ ಕಸುಬನ್ನು ನಂಬಿ ಬದುಕುತ್ತಿರುವ ಕೊರಗ ಮತ್ತು ಮೇದರ ವೃತ್ತಿ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ.
ಇಂದಿನ ತಾಂತ್ರಿಕ ಯುಗದಲ್ಲಿ ಪ್ಲಾಸ್ಟಿಕ್ ಬಳಕೆ ಅತಿಯಾಗಿದ್ದು, ಬಿದಿರಿನ ಬಳಕೆ ಕಡಿಮೆಯಾಗಿದೆ. ಬಿದಿರಿನ ವಸ್ತುಗಳ ಜಾಗಕ್ಕೆ ಪ್ಲಾಸ್ಟಿಕ್‌ನ ಕೇರುವ ಮೊರ, ಬುಟ್ಟಿ, ಕುಕ್ಕೆ, ಮಂಕರಿ ಬಂದಿದ್ದು ತುಂಬಾ ಅಪಾಯಕಾರಿಯಾಗಿದೆ. ಅಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಪ್ಲಾಸ್ಟಿಕ್ ಬಳಕೆ ಹಾನಿಕರ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಾದರೆ ಬಿದಿರಿನ ವಸ್ತುಗಳ ಬಳಕೆಗೆ ಸರ್ಕಾರ ಒತ್ತು ನೀಡಬೇಕಿದೆ.
ಅಲ್ಲದೆ ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಮೇದ ಜನಾಂಗದ ಜನರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂದುವರೆಯುವಂತೆ ಮಾಡುವ ಕೆಲಸದಲ್ಲಿ ಸರ್ಕಾರ ಗಮನಹರಿಸಬೇಕಿದೆ.
೧ ಬಿದಿರಿಗೆ ೨೦೦ರಿಂದ ೨೫೦ ರೂ.: ಬಿದಿರು ನಾಶವಾಗುತ್ತಿರುವ ಪರಿಣಾಮ ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪ, ಮೇಕೇರಿ ಭಾಗಗಳಿಂದ ಖರೀದಿ ಮಾಡಿ ತರಲಾಗುತ್ತದೆ. ಒಂದು ಲೆಂತ್‌ಗೆ ೨೦೦-೨೫೦ ರೂ. ಸಾಗಾಟದ ವೆಚ್ಚ ಸೇರಿದಂತೆ ೩೫೦ ರೂ. ತಗುಲಲಿದೆ. ಒಂದು ಬಳಂಜಿ ಮಾಡಲು ೧೫ ಅಡಿ ಬಿದಿರು ಬೇಕಾಗುತ್ತದೆ. ಒಂದು ಪೂರ್ಣ ಬಿದಿರಿನಿಂದ ಕೇವಲ ೩ ಬಳಂಜಿ ಮಾಡಬಹುದಷ್ಟೇ. ಒಂದು ಬಳಂಜಿಯನ್ನು ೫೦೦ರಿಂದ ೭೦೦ ರೂ.ಗಳಿಗೆ ಮಾರಾಟ ಮಾಡಿದರೆ ದಿನ ಕೂಲಿ ಕಳೆದು ೧೫೦ ರೂ. ಸಿಗಲಿದೆ ಎಂದು ವ್ಯಾಪಾರಿ ಕೃಷ್ಣ ಹೇಳುತ್ತಾರೆ.
ಬಳಂಜಿಗೆ ೫೦೦ರಿಂದ ೮೦೦ ರೂ.: ನಗರದಲ್ಲಿ ಇಂದು ಮಾರಾಟ ಮಾಡಲಾಗುತ್ತಿರುವ ದೊಡ್ಡ ಗಾತ್ರದ ಬಳಂಜಿಗೆ ೭೦೦ರಿಂದ ೮೦೦ ರೂ., ಸಣ್ಣ ಗಾತ್ರದ ಬಳಂಜಿಗೆ ೫೦೦ರಿಂದ ೬೦೦ ರೂ.ಗಳಿಗೆ ಮಾರಾಟವಾಗುತ್ತಿದೆ. ನಗರದ ಮಂಗೇರಿರ ಮುತ್ತಣ್ಣ ವೃತ್ತದ ಸಮೀಪ ವ್ಯಾಪಾರಿ ಕೃಷ್ಣರವರು ಮಾರಾಟ ಮಾಡುತ್ತಿದ್ದಾರೆ. ಕೆಲವರು ಮನೆಮನೆಗೂ ತೆರಳಿ ವ್ಯಾಪಾರ ನಡೆಸುತ್ತಾರೆ.
” ಜಿಲ್ಲೆಯಲ್ಲಿ ಮಳೆ ಸರಿಯಾಗಿ ಇನ್ನು ಆರಂಭವಾಗಿಲ್ಲ. ಪರಿಣಾಮ ಬಳಂಜಿಗೆ ಸ್ವಲ್ಪ ಬೇಡಿಕೆ ಕಡಿಮೆಯಾಗಿದೆ. ಧಾರಾಕಾರ ಮಳೆಯಾದರೆ ಬಳಂಜಿಗೆ ಬೇಡಿಕೆ ಹೆಚ್ಚುವ ಸಾಧ್ಯತೆಯಿದೆ. ಜತೆಗೆ ವಾಶಿಂಗ್ ಮಿಷನ್, ಹೀಟರ್ ಬಳಕೆ ನಮ್ಮ ಜೀವನಕ್ಕೆ ಪೆಟ್ಟು ನೀಡಿದೆ.”
-ಕೃಷ್ಣ, ಬಳಂಜಿ ವ್ಯಾಪಾರಿ
” ಕೊಡಗಿನಲ್ಲಿ ಗಾಳಿ, ಮಳೆ ಹೆಚ್ಚಾಗಿರುತ್ತದೆ. ದಿನನಿತ್ಯ ಮೋಡ ಕವಿದ ವಾತಾವರಣ ಹಿನ್ನೆಲೆಯಲ್ಲಿ ಬಟ್ಟೆ ಒಣಗಿಸಲು ಕಷ್ಟವಾಗುತ್ತದೆ. ಬಳಂಜಿ ಇದ್ದರೆ ಬಟ್ಟೆಗಳನ್ನು ಒಣಗಿಸಲು ಸಹಕಾರಿಯಾಗಿದೆ. ದುಬಾರಿಯಾದರೂ ಪ್ರಯೋಜನಕಾರಿ ವಸ್ತುವಾಗಿದೆ.”
-ಎನ್.ಕೆ.ಸುಶೀಲ, ಗ್ರಹಿಣಿ





