Mysore
15
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಮಳೆಗಾಲ: ಸಾಂಕ್ರಾಮಿಕ ರೋಗ ಕಾಡುವ ಕಾಲ

ಕೆ.ಬಿ.ರಮೇಶನಾಯಕ

ಆರೋಗ್ಯ ಇಲಾಖೆಯಿಂದ ಶೀಘ್ರ ಟಾಸ್ಕ್ ಫೋರ್ಸ್ ರಚನೆ

ಯುಜಿಡಿ, ಚರಂಡಿ ನೀರು ರಸ್ತೆಗೆ ಬಾರದಂತೆ ಕಾರ್ಯನಿರ್ವಹಣೆಗೆ ಸೂಚನೆ

ಕಸ ಸಂಗ್ರಹಣೆಗೆ ತೆರಳುವ ಪೌರಕಾರ್ಮಿಕರ ಮೂಲಕ ಜಾಗೃತಿಗೆ ಚಿಂತನೆ

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜನರಿಗೆ ಅರಿವು

ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ

ಮೈಸೂರು: ಬೇಸಿಗೆ ಕಾಲ ಮುಗಿದು ಮಳೆಗಾಲ ಶುರುವಾಗುತ್ತಿದ್ದಂತೆ ಕಾಣಿಸಿಕೊಳ್ಳಬಹುದಾದ ಡೆಂಗ್ಯೂ, ಚಿಕುನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ನಗರಪಾಲಿಕೆ ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಜಂಟಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಮೇ ಅಂತ್ಯದೊಳಗೆ ಜಂಟಿ ಟಾಸ್ಕ್ ಫೋರ್ಸ್ ರಚನೆ ಮಾಡಿ ವ್ಯವಸ್ಥಿತವಾಗಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಕುಡಿ ಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ಅನುಸರಿಸ ಬೇಕಾದ ಕ್ರಮಗಳನ್ನು ಕುರಿತು ನಿರ್ಧರಿಸಲಾಗಿದೆ.

ಆ ಪ್ರಕಾರ ಶೀಘ್ರದಲ್ಲೇ ಸಾಂಕ್ರಾಮಿಕ ರೋಗಗಳ ನಿಯತ್ರಣದ ಕೆಲಸಗಳು ಶುರುವಾಗಲಿವೆ. ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಹಾಗೂ ಮಳೆ ನೀರು ಚರಂಡಿ, ಯುಜಿಡಿ ನೀರು ರಸ್ತೆ ಯಲ್ಲಿ ಹರಿಯದಂತೆ ನೋಡಿಕೊಳ್ಳುವ ಜತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹೆಚ್ಚಿನ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಅರಿವು ಮೂಡಿಸುವುದು, ರಸ್ತೆಬದಿಗಳಲ್ಲಿ ಹಣ್ಣುಗಳನ್ನು ಮಾರಾಟ ಮಾಡುವಾಗ ಸುರಕ್ಷತಾ ಕ್ರಮಗಳು, ಫಾಸ್ಟ್‌ ಫುಡ್‌ಗಳಲ್ಲಿ ಆಹಾರ ಪದಾರ್ಥಗಳ ಮೇಲೆ ನೊಣಗಳು ಕೂರದಂತೆ, ಗ್ರಾಹಕರಿಗೆ ಬಿಸಿ ನೀರು ಕೊಡುವುದನ್ನು ಪಾಲಿಸುವಂತೆ ಸೂಚನೆ ಕೊಡಲಾಗುತ್ತದೆ ಎಂದು ಹೇಳಲಾಗಿದೆ.

ಪೌರಕಾರ್ಮಿಕರು ಮನೆ ಮನೆ ಕಸ ಸಂಗ್ರಹಿಸುವಾಗ ಸಾರ್ವಜನಿಕರಿಗೆ ಅಗತ್ಯ ತಿಳಿವಳಿಕೆ ನೀಡುವುದು. ಆರೋಗ್ಯ ಶಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಮೂಲಕ ಬೇಕಾದ ಕ್ರಮಕೈಗೊಳ್ಳುವುದಕ್ಕೆ ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯುವುದಕ್ಕೆ ಬೇಕಾದ ಸಿದ್ಧತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡಿದೆ.

ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದೊಂದಿಗೆ ಯೋಜನೆ ರೂಪಿಸಲಾಗಿದೆ. ಜ್ವರ, ನೆಗಡಿ, ಶೀತ, ಕೆಮ್ಮು ಬಂದವರನ್ನು ತಕ್ಷಣವೇ ಗುರುತಿಸಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸುವುದು. ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಭೇದಿ, ವಾಂತಿ ಬಂದವರಿಗೆ ಓಆರ್‌ಎಸ್ ಪೊಟ್ಟಣ ವಿತರಿಸಿ, ನಿಗಾ ಇಡುವುದು. ಕೊಳವೆಬಾವಿ, ತೊಂಬೆ ನಲ್ಲಿಗಳ ಸುತ್ತಲೂ ಸ್ವಚ್ಛತೆ ಕಾಪಾಡುವ ಜತೆಗೆ, ಓವರ್‌ಹೆಡ್ ಟ್ಯಾಂಕ್‌ನ್ನು ಶುಚಿಗೊಳಿಸಲು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಸಮಸ್ಯೆಗಳಿದ್ದಲ್ಲಿ ತಿಳಿಸಿ 

ಮಳೆಯಿಂದ ನಿಮ್ಮ ಬಡಾವಣೆಗಳಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಹಾಗೂ ಅನಾಹುತಗಳ ಕುರಿತು ಚಿತ್ರ ಸಹಿತ ‘ಆಂದೋಲನ’ ಪತ್ರಿಕೆಗೆ ಕಳುಹಿಸಿ ಆ ಮೂಲಕ ಪರಿಹಾರ ಕಂಡುಕೊಳ್ಳಬಹುದು  9071777071

ಏನೇನು ಮುಂಜಾಗ್ರತಾ ಕ್ರಮಗಳು? : 

* ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ನೈರ್ಮಲ್ಯ ಕಾಪಾಡುವುದು. ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮವಹಿಸುವುದು. ನೀರನ್ನು ಸಂಗ್ರಹಿಸಿದ ಟ್ಯಾಂಕ್‌ಗಳನ್ನು ಬ್ಲೀಚಿಂಗ್ ಪೌಡರ್‌ನಿಂದ ಸ್ವಚ್ಛಗೊಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.

*  ಪರಿಸರದ ಸ್ವಚ್ಛತೆಯನ್ನು ಕಾಪಾಡಬೇಕು. ಪರಿಸರ, ನೀರು ಮತ್ತು ಗಾಳಿ ಕಲುಷಿತಗೊಳ್ಳದ ರೀತಿಯಲ್ಲಿ ನಾವು ಬದುಕಬೇಕಾದ ಅನಿವಾರ್ಯತೆ ಮತ್ತು ಇತರ ಜೀವ ಸಂಕುಲಗಳನ್ನು ಬದುಕಲು ಬಿಡಬೇಕು.

* ಚರಂಡಿ ಸುವ್ಯವಸ್ಥೆ, ಕೆರೆ, ತೊರೆ, ಕಾಲುವೆಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಮತ್ತು ಕೈಗಾರಿಕಾ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬೇಕು.

* ಎಲ್ಲೆಂದರಲ್ಲಿ ಕಸ ಎಸೆಯುವುದು, ತಿಪ್ಪೆಗುಂಡಿಗಳಲ್ಲಿ ನೀರು ನಿಲ್ಲುವುದು, ಘನ ಮತ್ತು ದ್ರವ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ಇತ್ಯಾದಿಗಳಿಂದ ಸೊಳ್ಳೆಗಳ ಸಂಖ್ಯೆ ವೃದ್ಧಿಸುವುದನ್ನು ತಡೆಯುವುದು.

* ಕೃತಕವಾಗಿ ನೀರು ನಿಲ್ಲುವ ತೆಂಗಿನ ಚಿಪ್ಪು, ಹೂಕುಂಡ, ಟಯರ್, ಖಾಲಿ ಡಬ್ಬ ಮತ್ತು ಕ್ಯಾನ್‌ಗಳು, ಅಕ್ವೇರಿಯಂ, ಏರ್ ಕಂಡೀಷನರ್, ಏರ್ ಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆಗಳ ವಾಸಕ್ಕೆ ಅವಕಾಶ ನೀಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.

* ಡೆಂಗ್ಯೂ ಸೊಳ್ಳೆ ಮರಿಗಳನ್ನು ತಿನ್ನುವ ಗಪ್ಪಿ ಮೀನುಗಳನ್ನು ಪೋಷಿಸಬೇಕು. ಕೀಟನಾಶಗಳ ಬಳಕೆ, ಸೊಳ್ಳೆ ನಿಯಂತ್ರಣ ಮಾಡುವ ಔಷಧಿಗಳ ಬಳಕೆ ಮುಂತಾದವುಗಳಿಂದ ಸಂತಾನಾಭಿವೃದ್ಧಿ ಆಗದಂತೆ ಮಾಡಬೇಕು. ಸೊಳ್ಳೆಗಳ ಬೆಳವಣಿಗೆಗೆ ಪೂರಕವಾಗುವಂತಹ ಯಾವುದೇ ರೀತಿಯ ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು.

” ಮಳೆಗಾಲ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಕಾರಣ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಕೆಲವು ಕಡೆಗಳಲ್ಲಿ ಸಾರ್ವಜನಿಕರು ಓಡಾಡುವ ಜಾಗದಲ್ಲೇ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ರಸ್ತೆಬದಿಯಲ್ಲಿ ಹಣ್ಣು ಮಾರಾಟ ಮಾಡುವವರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವುದು ಕಂಡುಬಂದರೆ ದಂಡ ವಿಧಿಸಬೇಕು.”

-ರವಿ, ಆಟೋ ಚಾಲಕ, ಮೈಸೂರು

” ಮೈಸೂರು ನಗರದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಗ್ಯ ನಿರೀಕ್ಷಕರ ಸಭೆ ನಡೆಸಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ರಸ್ತೆಬದಿಯಲ್ಲಿ ವ್ಯಾಪಾರ ಮಾಡುವ ಹಣ್ಣು-ಹಂಪಲುಗಳ ಮೇಲೆ ನೊಣ ಕೂರದಂತೆ ನೋಡಿಕೊಳ್ಳುವುದು. ರಸ್ತೆಬದಿ ಫಾಸ್ಟ್ಡ್‌ಫುಡ್ಗಳ ವ್ಯಾಪಾರಿಗಳಿಗೂ ಸೂಚನೆ ನೀಡಿದ್ದೇವೆ. ಪ್ರವಾಸಿ ತಾಣಗಳ ಬಳಿ ನಿಗಾ ಇಡಲಾಗಿದೆ.”

-ಡಾ.ವೆಂಕಟೇಶ್, ನಗರಪಾಲಿಕೆ ಆರೋಗ್ಯಾಧಿಕಾರಿ

” ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಒಂದು ಸುತ್ತಿನ ಸಭೆ ನಡೆಸಲಾಗಿದೆ. ನಗರಪಾಲಿಕೆ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಪಂ ನೆರವಿನಿಂದ ಕಾಲರಾ ತಡೆಗೆ ಗಮನಹರಿಸಲಾಗುವುದು.”

-ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮೈಸೂರು.

Tags:
error: Content is protected !!