Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮ.ಬೆಟ್ಟ: ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ

ಮಹಾದೇಶ್ ಎಂ.ಗೌಡ

ಅ.೧೮ರಿಂದ ೨೨ರವರೆಗೆ ಐದು ದಿನಗಳ ಕಾಲ ವಿಶೇಷ ಪೂಜೆ; ಸಾರ್ವಜನಿಕರಿಗೆ ಸಕಲ ವ್ಯವಸ್ಥೆ 

ಹನೂರು: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಅ.೧೮ರಿಂದ ೨೨ರವರೆಗೆ ಐದು ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ಜರುಗಲಿದ್ದು, ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಽಕಾರದ ವತಿಯಿಂದ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.

ದೀಪಾವಳಿ ಜಾತ್ರಾ ಮಹೋತ್ಸವ ಅ.೧೮ರಂದು ಪ್ರಾರಂಭವಾಗಲಿದ್ದು, ಅಂದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ೧೯ರಂದು ದೀಪಾವಳಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಎಣ್ಣೆ ಮಜ್ಜನ ಸೇವೆ ವಿವಿಧ ಉತ್ತವಗಳು ನಡೆಯಲಿವೆ. ೨೦ರಂದು ಸ್ವಾಮಿಗೆ ನರಕ ಚತುರ್ದಶಿ ವಿಶೇಷ ಪೂಜೆ ಸೇವೆ, ಉತ್ಸವಗಳು ನಡೆಯಲಿದ್ದು, ಅ.೨೧ರಂದು ದೀಪಾವಳಿ ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಉತ್ಸವಗಳು ಜರುಗಲಿವೆ. ಬೆಳಿಗ್ಗೆ ೯.೧೫ರ ನಂತರ ಹಾಲ್ಹರವಿ ಉತ್ಸವವು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಲಿದೆ. ಬೆಳಿಗ್ಗೆ ೯.೧೫ರಿಂದ ೨೨ರಂದು ಮಹಾರಥೋತ್ಸವು ಜರುಗಲಿದ್ದು, ನಂತರ ಗುರು ಬ್ರಹ್ಮೋತ್ಸವ ಮತ್ತು ಅನ್ನ ಬ್ರಹ್ಮೋತ್ಸವ, ಅದೇ ದಿನ ರಾತ್ರಿ ಅಭಿಷೇಕದ ಪೂಜೆ ಮುಗಿದ ನಂತರ ತೆಪ್ಪೋತ್ಸವ ನಡೆಯಲಿದೆ.

ಮಹದೇಶ್ವರ ಬೆಟ್ಟಕ್ಕೆ ಪಾದ ಯಾತ್ರೆಯ ಮೂಲಕ ಆಗಮಿಸುವ ಜನರಿಗೆ ತಾಳಬೆಟ್ಟದಿಂದ ಮ.ಬೆಟ್ಟದವರೆಗಿನ ಮಾರ್ಗ ಮಧ್ಯದಲ್ಲಿ ೧೦ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ದಾಸೋಹ ಭವನದಲ್ಲಿ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು ಒಂದು ಬಾರಿಗೆ ೧,೫೦೦ ಜನರು ಪ್ರಸಾದ ಸ್ವೀಕರಿಸಬಹುದಾಗಿದೆ.

ನಾಲ್ಕು ಲಕ್ಷ ಲಾಡು ದಾಸ್ತಾನು: ಈ ಬಾರಿಯ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಈಗಾಗಲೇ ಸುಮಾರು ನಾಲ್ಕು ಲಕ್ಷದವರೆಗೆ ಲಾಡುಗಳನ್ನು ತಯಾರು ಮಾಡಿ ದಾಸ್ತಾನು ಮಾಡಿಕೊಳ್ಳಲಾಗಿದೆ.

ನೆರಳಿನ ವ್ಯವಸ್ಥೆ: ರಾಜಗೋಪುರದ ಎಡ ಹಾಗೂ ಬಲಭಾಗದಲ್ಲಿ ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಭಕ್ತಾದಿಗಳಿಗೆ, ಹಾಗೂ ವಾಸ್ತವ್ಯ ಹೂಡುವವರಿಗೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಂಗಮಂದಿರದಲ್ಲಿ ಐದು ದಿನಗಳ ಕಾಲ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಶೌಚಾಲಯದ ಜೊತೆಗೆ ತಾಳಬೆಟ್ಟದಲ್ಲಿ ೨೦ ಹಾಗೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಂತರಗಂಗೆಯ ಸಮೀಪ ೨೫ ಹಾಗೂಅಗತ್ಯವಿರುವ ಕಡೆ ೫ ಸೇರಿದಂತೆ ಒಟ್ಟು ೫೦ ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.

ದ್ವಿಚಕ್ರ ವಾಹನಗಳಿಗೆ ನಿರ್ಬಂಧ: ಟ್ರಾಫಿಕ್ ಜಾಮ್ ತಡೆಗಟ್ಟಲು ಅ.೧೯ರ ಬೆಳಿಗ್ಗೆ ೬ ಗಂಟೆಯಿಂದ ೨೨ರ ಸಂಜೆ ೬ ಗಂಟೆಯವರೆಗೆ ಮ.ಬೆಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವುದನ್ನು ನಿರ್ಬಂಽಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಬರುವ ಭಕ್ತರಿಗೆ ಕೌದಳ್ಳಿಯಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಲ್ಲಿಂದ ಕೆಎಸ್‌ಆರ್‌ಟಿಸಿ ಬಸ್ ಮುಖಾಂತರ ಮಹದೇಶ್ವರ ಬೆಟ್ಟಕ್ಕೆ ತೆರಳಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಕೆಎಸ್‌ಆರ್‌ಟಿಸಿಯಿಂದ ೩೫೦ ಬಸ್‌ಗಳು: ಮ.ಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ೩೫೦ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಹನೂರು ತಾಲ್ಲೂಕು ಕೇಂದ್ರದಿಂದ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಅಶೋಕ್ ಮಾಹಿತಿ ನೀಡಿದರು.

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ : ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯಲಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ದರ್ಶನಕ್ಕೆ ನೇರ ವ್ಯವಸ್ಥೆ: ಪಾದಯಾತ್ರೆಯ ಮೂಲಕ ಮ.ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ೨೪೦ ರೂ. ಟಿಕೆಟ್ ಕ್ಯೂ, ೬೦ ವರ್ಷ ಮೇಲ್ಪಟ್ಟವರಿಗೆ ರಾಜಗೋಪುರದ ಮಹಾದ್ವಾರದ ಬಳಿ ಪ್ರತ್ಯೇಕ ಕ್ಯೂ, ಅತಿಥಿ ಗಣ್ಯರಿಗೆ ಗೇಟ್ ನಂಬರ್ ೪ರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಽಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.

ಪೊಲೀಸ್ ಬಂದೋಬಸ್ತ್: ಲಕ್ಷಾಂತರ ಜನರು ಶ್ರೀ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ೧ ಡಿವೈಎಸ್ಪಿ, ೬ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ೧೭, ಎಎಸ್‌ಐ ೩೫, ಮಹಿಳಾ ಪೇದೆಗಳು ೪೫, ಪೊಲೀಸ್ ಪೇದೆಗಳು ೩೦೦, ಗೃಹ ರಕ್ಷಕ ದಳದ ಸಿಬ್ಬಂದಿ ೪೦೦, ೨ ಡಿಆರ್, ೨ ಕೆಎಸ್‌ಆರ್‌ಪಿ ತುಕಡಿ ಹಾಗೂ ವಿದ್ಯಾರ್ಥಿಗಳನ್ನೂ ನಿಯೋಜಿಸಲಾಗಿದೆ.

” ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್, ಶಾಸಕ ಎಂ.ಆರ್. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ.”

ಎ.ಇ.ರಘು, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ 

Tags:
error: Content is protected !!