Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಮಹದೇಶ್ವರ ಬೆಟ್ಟ: 1.23 ಕೋಟಿ ರೂ. ಆದಾಯ ಸಂಗ್ರಹ

ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವಕ್ಕೆ ಹರಿದು ಬಂದಿದ್ದ ಲಕ್ಷಾಂತರ ಜನರು

ಮಹಾದೇಶ್ ಎಂ.ಗೌಡ

ಹನೂರು: ಶ್ರೀ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸಿದ್ದ ಹಿನ್ನೆಲೆಯಲ್ಲಿ ಮೂರು ದಿನಗಳ ಅವಧಿಯಲ್ಲಿ ಸುಮಾರು 1.23 ಕೋಟಿ ರೂ. ಆದಾಯ ಬಂದಿದೆ.

ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವದ ದಿನಗಳಲ್ಲಿ ಹೆಚ್ಚಿನ ಜನರು ಆಗಮಿಸಿ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಹುಲಿ ವಾಹನ, ರುದ್ರಾಕ್ಷಿ ವಾಹನ, ಬಸವ ಮಂಟಪ, ಲಾಡು ಮಾರಾಟ, ವಿವಿಧ ಸೇವೆಗಳು, ಅಕ್ಕಿ ಸೇವೆ, ಮಿಶ್ರಪ್ರಸಾದ, ಪುದುವಟ್ಟು, ಮಾಹಿತಿ ಕೇಂದ್ರ ಹಾಗೂ ತಾಳಬೆಟ್ಟ ಭವನಗಳಿಂದ, ಪಾರ್ಕಿಂಗ್ ಶುಲ್ಕ, ಕಲ್ಲುಸಕ್ಕರೆ, ತೀರ್ಥ, ಬ್ಯಾಗ್ ಮಾರಾಟದಿಂದ ಸುಮಾರು 1,23,91,458 ರೂ. ಆದಾಯ ಸಂಗ್ರಹವಾಗಿದೆ.

ಮೂರು ದಿನಗಳ ಅವಧಿಯಲ್ಲಿ ವಿವಿಧ ಉತ್ಸವಗಳಾದ 468 ಚಿನ್ನದ ರಥೋತ್ಸವ, 34 ಬೆಳ್ಳಿ ರಥೋತ್ಸವ, 574 ಬಸವ ವಾಹನೋತ್ಸವ, 7,112 ಹುಲಿ ವಾಹನ, 288 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಕೆಯ ಮೂಲಕ 38,48,251 ರೂ. ಆದಾಯ ಸಂಗ್ರಹವಾಗಿದೆ.

ಅ.3ರಿಂದ ನವರಾತ್ರಿ ಪ್ರಾರಂಭವಾಗಿದ್ದು, ದೀಪಾವಳಿ, ಕಾರ್ತಿಕ ಮಾಸದ ಪ್ರಯುಕ್ತ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಇನ್ನೂ ಹೆಚ್ಚಿನ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ.

ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವ ಸಂಬಂಧ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದ್ದ ಹಿನ್ನೆಲೆಯಲ್ಲಿ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘುರವರು ಸ್ಥಳದಲ್ಲಿಯೇ ಇದ್ದು, ಸಾರ್ವಜನಿಕರಿಗೆ ಬೇಕಾದ ಕುಡಿಯುವ ನೀರು, ವಿಶೇಷ ದಾಸೋಹ, ನೆರಳಿನ ವ್ಯವಸ್ಥೆ ಹಾಗೂ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಿದ್ದಾರೆ.

ಮುಂದಿನ ದಿನಗಳಲ್ಲಿ ವಿಜಯದಶಮಿ ಹಾಗೂ ದೀಪಾವಳಿ ಜಾತ್ರಾ ಮಹೋತ್ಸವ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
• ಎ.ಇ.ರಘು, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ.

 

Tags: