Mysore
21
broken clouds

Social Media

ಬುಧವಾರ, 14 ಜನವರಿ 2026
Light
Dark

ಕೆರೆಯಂತಾದ ಮುಖ್ಯರಸ್ತೆಗಳು; ಸಾರ್ವಜನಿಕರಿಗೆ ನರಕಯಾತನೆ

ಮಂಜು ಕೋಟೆ

ಕೋಟೆ: ರಸ್ತೆ ಗುಂಡಿಗಳಲ್ಲಿ ಕೊಳಚೆ ನೀರು, ಮಳೆ ನೀರು ಸಂಗ್ರಹ; ಸವಾರರಿಗೆ, ಸಾರ್ವಜನಿಕರಿಗೆ ಪರದಾಟ

ಎಚ್.ಡಿ.ಕೋಟೆ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಮತ್ತು ಕೊಳಚೆ ನೀರು ಶೇಖರಣೆಗೊಂಡು ಕೆರೆಯಂತಾಗಿ ಪ್ರಯಾಣಿಕರು, ಸಾರ್ವಜನಿಕರು ಹಲವು ದಿನಗಳಿಂದ ನರಕಯಾತನೆ ಪಡುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ ಹ್ಯಾಂಡ್‌ಪೋಸ್ಟ್ ಮುಖ್ಯರಸ್ತೆಯ ಎಂ.ಶಿವಣ್ಣ ಪೆಟ್ರೋಲ್ ಬಂಕ್ ಸಮೀಪದಲ್ಲಿ ಕೃಷ್ಣಾಪುರ, ಪೌರ ಕಾರ್ಮಿಕರ ಕಾಲೋನಿಯ ಮನೆಗಳ ನೀರು ಮತ್ತು ತಾರಕ ಜಲಾಶಯದ ನಾಲೆ ನೀರು ಹರಿದು ಬರುತ್ತಿದ್ದು, ಇದು ಸಮರ್ಪಕವಾಗಿ ಚರಂಡಿಯಲ್ಲಿ ಹೋಗದೆ ರಸ್ತೆಯಲ್ಲಿ ಶೇಖರಣೆಗೊಂಡು ಕೆರೆಯಂತಾಗಿದೆ.

ಇದು ಮುಖ್ಯರಸ್ತೆ ಆಗಿರುವುದರಿಂದ ವಿವಿಧ ಬಗೆಯ ನೂರಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿರುತ್ತವೆ. ಆದರೆ,ಕೆರೆಯಂತಾಗಿರುವ ಕೊಳಚೆ ನೀರಿನಲ್ಲಿ ವಾಹನಗಳು ಚಲಿಸಿದಾಗ ಅಕ್ಕ ಪಕ್ಕದಲ್ಲಿ ಹೋಗುವ ಸಾರ್ವಜನಿಕರಿಗೆ, ಸವಾರಿಗೆ ಕೊಳಚೆ ನೀರು ಸಿಂಪಡಣೆಯಾಗಿ ಕಿರಿಕಿರಿ ಅನುಭವಿಸುವಂತಾಗಿದೆ.

ಚರಂಡಿ ಹೂಳು ತೆಗೆಸಿ, ಸ್ವಚ್ಛತೆ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳದೇ ಇರುವುದರಿಂದ ಒಂದು ತಿಂಗಳಿನಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.

ಈ ರಸ್ತೆಯಲ್ಲಿ ಶಾಸಕರೂ ಸೇರಿದಂತೆ ತಾಲ್ಲೂಕು ಮಟ್ಟದ ಪ್ರತಿಯೊಬ್ಬ ಅಧಿಕಾರಿಯೂ, ರಾಜಕೀಯ ಮುಖಂಡರೂ ಕಂಡರೂ ಕಾಣದಂತೆ ತಮ್ಮ ವಾಹನಗಳಲ್ಲಿ ಸಂಚರಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೊಂದೆಡೆ ಪಟ್ಟಣದ ಬೆಳಗನಹಳ್ಳಿ ಮತ್ತು ಮುಸ್ಲಿಂ ಬ್ಲಾಕ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ತೀವ್ರ ಹದಗೆಟ್ಟು, ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿ, ಬಿಸಿಲು ಬಂದರೆ, ದೂಳು ಎದ್ದು ಸಮಸ್ಯೆ ಉಂಟುಮಾಡುತ್ತಿದೆ. ಅಲ್ಲದೆ, ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಾ ದುರ್ನಾತ ಬೀರುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಆದರೆ, ಈ ಭಾಗದ ಪುರ ಸಭೆಯ ಸದಸ್ಯರು ಇತ್ತ ಗಮನಹರಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

ಮೊದಲನೇ ಮುಖ್ಯರಸ್ತೆಯ ವಾರಾಹಿ ಮತ್ತು ಮಾರಮ್ಮ ದೇವಸ್ಥಾನದ ಬಳಿ ರಸ್ತೆಯ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರಿಗೆ ಕಂಟಕವಾಗಿದೆ. ಈ ಹದಗೆಟ್ಟ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಂಡೋತ್ಸವದ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮತ್ತು ದೇವಸ್ಥಾನ ಸಮಿತಿಯವರು, ಮುಖಂಡರು ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ಈ ಹದಗೆಟ್ಟ ರಸ್ತೆಗಳ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕಿದೆ.

” ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೊಳಚೆ ನೀರು ಕೆರೆಯಂತೆ ಸಂಗ್ರಹವಾಗಿ ವಾಹನ ಸವಾರರು, ಸಾರ್ವಜನಿಕರು ಸಂಚರಿಸಲು ಆಗದಂತಾಗಿದೆ. ಇಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದ್ದಾರೋ ಇಲ್ಲವೋ ಎಂಬುದೇ ತಿಳಿಯುತ್ತಿಲ್ಲ.”

-ಮನೋಜ್, ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ 

” ಪಟ್ಟಣದ ಮೊದಲನೇ ಮುಖ್ಯರಸ್ತೆಯಲ್ಲಿ ಮಾರಮ್ಮ ದೇವಸ್ಥಾನದ ಹತ್ತಿರ ಗುಂಡಿಗಳು ಉಂಟಾಗಿ ಮಳೆ ಬಂದಾಗ ನೀರು ಶೇಖರಣೆಗೊಳ್ಳುತ್ತದೆ. ಬಿಸಿಲಿದ್ದಾಗ ವಾಹನಗಳ ಓಡಾಟದಿಂದ ದೂಳುಮಯವಾಗಿ ನಿವಾಸಿಗಳು, ವ್ಯಾಪಾರಸ್ಥರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ರಸ್ತೆಯನ್ನು ದುರಸ್ತಿ ಪಡಿಸಲು ಶಾಸಕರೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ.”

-ಎಚ್.ಆರ್.ವೇಣುಗೋಪಾಲ್, ನಿವಾಸಿ, ಕಾಂಗ್ರೆಸ್ ಮುಖಂಡ

Tags:
error: Content is protected !!