Mysore
25
scattered clouds

Social Media

ಭಾನುವಾರ, 25 ಜನವರಿ 2026
Light
Dark

ಮೈಮುಲ್; ನಿತ್ಯ ದಾಖಲೆ ಪ್ರಮಾಣದ ಹಾಲು ಸಂಗ್ರಹ

ಕೆ.ಬಿ.ರಮೇಶ ನಾಯಕ

ಮೈಸೂರು: ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಜಿಲ್ಲೆಗಳ ಪೈಕಿ ಒಂದಾಗಿರುವಮೈಸೂರಿನ ಮೈಮುಲ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರತಿನಿತ್ಯ ೨.೩೭ ಲಕ್ಷ ಲೀಟರ್ ಹೆಚ್ಚುವರಿ ಹಾಲು ಉತ್ಪಾದನೆಯಾಗು ತ್ತಿರುವುದು ಗಮನಾರ್ಹ.

ಕಳೆದ ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಹಾಲು ಉತ್ಪಾದನೆಯಲ್ಲಿಏರಿಕೆಯಾಗಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶದ ಹೈನುಗಾರರಲ್ಲಿ ಸಂತಸ ಮನೆ ಮಾಡಿದೆ. ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಜಾನುವಾರುಗಳಿಗೆ ಕಾಡುತ್ತಿದ್ದ ಕಂದುರೋಗ, ಚರ್ಮಗಂಟು ರೋಗ, ಕಾಲುಬಾಯಿ ಜ್ವರ ಈಗ ನಿವಾರಣೆಯಾಗಿರುವುದರಿಂದ ರಾಸುಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡು, ಹಾಲು ಉತ್ಪಾದನೆಯ ಹೆಚ್ಚಳಕ್ಕೂ ಕಾರಣವಾಗಿದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಿಂದ ಹಸಿರು ಮೇವು, ಮತ್ತಿತರಆಹಾರದ ಕಿಟ್‌ಗಳನ್ನು ವಿತರಿಸುತ್ತಿರುವುದರಿಂದ ಕೃಷಿಯನ್ನೇ ನಂಬಿದ್ದ ರೈತರು ಈಗ ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಇದ್ದಾಗಿನಿಂದಲೂ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿತ್ತು. ೨೦೧೫ರಲ್ಲಿ ಚಾಮರಾಜನಗರ ಜಿಲ್ಲೆಯನ್ನು ಬೇರ್ಪಡಿಸಿ ಮೈಮುಲ್ ಆಗಿ ಒಂದೇ ಜಿಲ್ಲೆಗೆ ಸೀಮಿತವಾದರೂ ಹಾಲು ಉತ್ಪಾದನೆಯಲ್ಲಿ ಮಾತ್ರ ಕುಂಠಿತಗೊಂಡಿಲ್ಲ.

ಕಳೆದ ಮೂರು ವರ್ಷಗಳಿಂದ ಹಾಲು ಉತ್ಪಾದನೆಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ರೈತರಿಗೆ ಬಂಪರ್ ಬಟಾವಡೆಯಾಗುತ್ತಿದೆ. ಪ್ರತಿನಿತ್ಯ ಹೆಚ್ಚುವರಿ ೨.೩೭ ಲಕ್ಷ ಲೀಟರ್: ಹೈನುಗಾರರಿಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ವತಿಯಿಂದ ಗುಣಮಟ್ಟದ ಸೇವೆ, ಜಾನುವಾರುಗಳ ಆರೋಗ್ಯ ರಕ್ಷಣೆಯಿಂದಾಗಿ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ೨೦೨೨-೨೩ನೇ ಸಾಲಿನಲ್ಲಿ ಸರಾಸರಿ ೬.೯೦ ಲಕ್ಷ ಲೀಟರ್ ಉತ್ಪಾದನೆಯಾಗಿದ್ದರೆ, ೨೦೨೫-೨೬ರಲ್ಲಿ ಪ್ರತಿದಿನ ೯.೨೭ ಲಕ್ಷ ಲೀಟರ್ ಉತ್ಪಾದನೆ ಯಾಗುತ್ತಿದೆ. ಮೈಮುಲ್ ಅಧಿಕಾರಿಗಳ ಪ್ರಕಾರ, ಡಿಸೆಂಬರ್‌ನಿಂದ ಜನವರಿಯಲ್ಲಿ ಸಂಕ್ರಾಂತಿ ಹಬ್ಬ ಕಳೆಯುವ ವರೆಗೆ ಚಳಿಗಾಲದಲ್ಲಿ ಸರಾಸರಿ ೧೦ ಲಕ್ಷ ಲೀಟರ್ ಹಾಲು ಸಂಗ್ರಹವಾಗಬಹುದೆಂದು ಅಂದಾಜಿಸಲಾಗಿದೆ.

ಉಪ ಉತ್ಪನ್ನಗಳ ತಯಾರಿಕೆ: ನಂದಿನಿ ಹಾಲಿನ ಉತ್ಪಾದನೆ ಹೆಚ್ಚಾದರೂ ಮಾರಾಟ ಪ್ರಮಾ ಣದಲ್ಲಿ ಏರಿಕೆಯಾಗಿಲ್ಲ. ಇದರ ಜತೆಗೆ ಉಪ ಉತ್ಪನ್ನಗಳ ತಯಾರಿಕೆಯನ್ನೂ ಮಾಡಲಾಗುತ್ತಿದೆ. ಪ್ರತಿನಿತ್ಯ ಒಂದೂವರೆ ಲಕ್ಷ ಲೀಟರ್ ಹಾಲನ್ನು ಪೌಡರ್ ಆಗಿ ಪರಿವರ್ತಿಸಲಾಗುತ್ತಿದೆ. ನಂದಿನಿ ‘ಶುಭಂ, ಸ್ಪೆಷಲ್ ಟೋನ್ಡ್, ಹೋಮೊಜೆನೈಸ್ಡ್ ಹಾಗೂ ಪಾಶ್ಚರೀಕರಿಸಿದ ಟೋನ್ಡ್’ ಹಾಲು ಮಾರುಕಟ್ಟೆಯಲ್ಲಿ ಲಭ್ಯವಿದೆ. ಲಸ್ಸಿ ಹಾಗೂ ಮೊಸರಿಗೆ ನಿತ್ಯ ೮೦ ಸಾವಿರ ಲೀಟರ್ ಬಳಸಲಾಗುತ್ತದೆ. ಅದೇ ರೀತಿ ಬಾದಾಮ್ ಬರ್ಫಿ, ಕ್ಯಾಷ್ಯು ಬರ್ಫಿ, ಚಾಕೋಲೇಟ್ ಬರ್ಫಿ, ಕೋಕೊನಟ್ ಬರ್ಫಿ, ಧಾರವಾಡ ಪೇಡ ಸೇರಿದಂತೆ ಇನ್ನಿತರ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಿತರಿಸುವ ಹಾಲು ಒಕ್ಕೂಟಕ್ಕೆ ಸ್ವಲ್ಪ ಮಟ್ಟಿಗೆ ನೆರವಾಗಿದೆ ಎಂದು ಹೇಳಲಾಗಿದೆ.

” ಜಿಲ್ಲೆಯಲ್ಲಿ ಜಾನುವಾರುಗಳಿಗೆ ರೋಗ ಬಾರದಂತೆ ತಡೆಯುವುದಕ್ಕೆ ಲಸಿಕೆ ಹಾಕಲಾಗಿದೆ.ಹೈನುಗಾರರಿಗೆ ಸರ್ಕಾರ ನೀಡುವ ಪ್ರೋತ್ಸಾಹಧನ ಸಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಪ್ರತಿನಿತ್ಯ ೨.೩೭ ಲಕ್ಷಲೀಟರ್ ಹೆಚ್ಚುವರಿ ಹಾಲು ಉತ್ಪಾದನೆಯಾಗುತ್ತಿರುವುದು ವಿಶೇಷ. ಹೈನುಗಾರರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರವಹಿಸಿದೆ.”

-ಡಾ.ನಾಗರಾಜು, ಉಪ ನಿರ್ದೇಶಕ, ಮೈಮುಲ್

” ರೈತರಿಂದ ಎಷ್ಟೇ ಹಾಲು ಉತ್ಪಾದನೆಯಾಗಿ ಬಂದರೂ ಅದನ್ನು ಸಂಗ್ರಹಿಸುತ್ತೇವೆ. ರೈತರ ಹಿತ ಕಾಪಾಡುವುದು ಒಕ್ಕೂಟದ ಹೊಣೆಯಾಗಿದೆ. ಮುಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಪ್ರಾಂಚೈಸಿಗಳನ್ನು ಹೆಚ್ಚು ಮಾಡಲಾಗುವುದು. ಸರ್ಕಾರಿ ಸ್ವಾಮ್ಯದ ಕಚೇರಿ, ಇತರೆ ಸ್ಥಳಗಳಲ್ಲಿ ನಂದಿನಿ ಬೂತ್ ತೆರೆಯಲು ಅವಕಾಶ ಮಾಡಿಕೊಡಲಾಗುವುದು.”

-ಕೆ.ಈರೇಗೌಡ, ಅಧ್ಯಕ್ಷ, ಮೈಮುಲ್

೫ ರೂ. ಪ್ರೋತ್ಸಾಹಧನ: 

” ಪ್ರತಿ ಲೀಟರ್‌ಗೆ ಒಕ್ಕೂಟದಿಂದ ೩೬.೧೦ ರೂ. ಹಾಗೂ ರಾಜ್ಯ ಸರ್ಕಾರದಿಂದ ೫ ರೂ. ಸೇರಿಸಿ ಒಟ್ಟು ೪೧.೧೦ ರೂ. ಪಾವತಿಸಲಾಗುತ್ತಿದೆ. ಸರ್ಕಾರದಿಂದ ಸೆಪ್ಟೆಂಬರ್ ತನಕ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯವರೇ ಆಗಿರುವ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಪ್ರೋತ್ಸಾಹಧನ ಬಾಕಿ ಉಳಿಯದಂತೆ ಆಗಿಂದ್ದಾಗ್ಗೆ ಬಿಡುಗಡೆಗೆ ಗಮನ ಹರಿಸುತ್ತಿರುವುದರಿಂದ ರೈತರಿಗೆ ಸಕಾಲದಲ್ಲಿ ದೊರೆಯುತ್ತಿದೆ.”

Tags:
error: Content is protected !!