ಮೈಸೂರು: ಸೆ.29ರಂದು ‘ಮಹಿಷ ಧಮ್ಮೋತ್ಸವ’ ಎಂಬ ಹೆಸರಿನಲ್ಲಿ ವಿಭಿನ್ನವಾಗಿ ಮಹಿಷ ದಸರಾ ಆಚರಣೆ ಮಾಡುತ್ತೇವೆ ಎಂದು ಮಾಜಿ ಮಹಾಪೌರ ಹಾಗೂ ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದ ಆವರಣ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಂದೂ ಸಾಂಪ್ರದಾಯಿಕ ಮೈಸೂರು ದಸರಾ ಮಹೋತ್ಸವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿಲ್ಲ. ಮಹಿಷನ ಇತಿಹಾಸವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಸಂವಿಧಾನದಲ್ಲಿ ನಮ್ಮ ಆಚರಣೆಗಳಿಗೆ ಅವಕಾಶವಿದೆ. ಇದು ನಮ್ಮ ಹಕ್ಕು. ಈ ಆಚರಣೆಯನ್ನು ತಡೆಯಲು ಯಾರಾದರೂ ಮುಂದಾದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕಳೆದ ಹತ್ತು ವರ್ಷಗಳಿಂದಲೂ ಮಹಿಷ ದಸರಾ ಆಚರಣೆ ಮಾಡಿಕೊಂಡ ಬಂದಿದ್ದೇವೆ. ಚಾಮುಂಡಿ ಬೆಟ್ಟದ ಮೇಲಿರುವ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬರುತ್ತೇವೆ. ನಾವು ಎಲ್ಲೂ ಸಾಂಪ್ರದಾಯಿಕ ದಸರೆಗೆ ಅಡ್ಡಿಪಡಿಸಿಲ್ಲ. ಕಿಡಿಗೇಡಿಗಳು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಅದನ್ನೇ ನಂಬಿ ಪೊಲೀಸರು ನಮಗೆ ಆಚರಣೆ ಮಾಡಲು ಅನುಮತಿ ನೀಡಲು ಮೀನಮೇಷ ಎಣಿಸುತ್ತಾರೆ ಎಂದು ಕಿಡಿಕಾರಿದರು. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಯಾರ ಆಚರಣೆಗೆ ಯಾರೂ ಅಡ್ಡಿಪಡಿಸಬಾರದು. ಮಹಿಷ ಈ ನಾಡಿದ ದೊರೆ ಎಂದು ಜನರಿಗೆ ತಿಳಿಸಲು ಮಹಿಷಾಸುರ ಪ್ರತಿಮೆಗೆ ಪುಷ್ಪರ್ಚನೆ ಮಾಡುತ್ತೇವೆ. ಯಾರ ಧಾರ್ಮಿಕ ಭಾವನೆಗೆ ಧಕ್ಕೆ ತರುವುದಿಕ್ಕೆ ಅಲ್ಲ. ಮಹಿಷ ಮಂಡಲ ಕೇವಲ ಮೈಸೂರಿಗೆ ಸೀಮಿತವಲ್ಲ. ಇಡೀ ದೇಶದ ವಿವಿಧ ಮೂಲೆಗಳಲ್ಲಿ ಮಹಿಷನ ಆರಾಧನೆ ಮಾಡುತ್ತಾರೆ. ಉದ್ದೇಶಪೂರ್ವಕವಾಗಿ, ರಾಜಕೀಯ ಪ್ರೇರಿತವಾಗಿ ಮಾತನಾಡುವುದು ಮೂರ್ಖತನ ಎಂದರು.