Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಒಂದು ಕಾಲದಲ್ಲಿ ದಾಂದಲೆಕೋರನಾಗಿದ್ದ ಮಹೇಂದ್ರ

 

ಮೈಸೂರು: ಒಂದು ಕಾಲದಲ್ಲಿ ಜಮೀನು, ತೋಟ, ಗದ್ದೆಗಳಿಗೆ ನುಗ್ಗಿ ದಾಂದಲೆ ನಡೆಸಿ ಪುಂಡಾಟಿಕೆ ಮೆರೆದಿದ್ದ ‘ಕರಿ’ಯ ಇದೀಗ ಫುಲ್ ಸೈಲೆಂಟ್ ಆಗಿದ್ದಾನೆ! ಸಿಕ್ಕಾಪಟ್ಟೆ ವೈಲೆಂಟ್ ಅಂತ ಕುಖ್ಯಾತಿ ಪಡೆದಿದ್ದ ಒಂಟಿ ಸಲಗ ಬಹಳ ಬೇಗ ಪಳಗಿ, ಶಾಂತ ಸ್ವಭಾವ ಮೈಗೂಡಿಸಿಕೊಂಡಿದೆ. ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಇದೀಗ ಅರಮನೆ ನಗರಿಗೂ ಬಂದಿದ್ದಾನೆ!

ಇದು ದಸರಾ ಮಹೋತ್ಸವದಲ್ಲಿ ಭಾಗಿ ಯಾಗಲು ಕಾಡಿನಿಂದ ನಾಡಿಗೆ ಗಜಪಡೆಯ ಎರಡನೇ ತಂಡದಲ್ಲಿ ಬಂದಿರುವ ‘ಮಹೇಂದ್ರ’ ಆನೆ ಲೈಫ್ ಸ್ಟೋರಿ.

2016ರ ಸಂದರ್ಭ. ರಾಮನಗರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ದಾಂದಲೆ ನಡೆಸಿ ಸ್ಥಳೀ ಯರ ಆತಂಕಕ್ಕೆ ಕಾರಣವಾಗಿದ್ದ ಪುಂಡಾನೆಯನ್ನು ಸೆರೆ ಹಿಡಿಯಲು ಆ ಭಾಗದ ರೈತರು ಹಾಗೂ ಜನಪ್ರತಿನಿಧಿಗಳು ಆಗ್ರಹಿಸಿದ್ದರು.

ಕೊನೆಗೂ ತೋಟವೊಂದರಲ್ಲಿ ಯಾವುದೇ ಅಳುಕಿಲ್ಲದೇ ಬೀಡುಬಿಟ್ಟಿದ್ದ ಪುಂಡಾನೆಯನ್ನು ಸೆರೆ ಹಿಡಿಯಲಾಗಿತ್ತು.

ಬಳಿಕ ಅದನ್ನು ನಾಗರಹೊಳೆಯ ಬಳ್ಳೆ ಆನೆ ಶಿಬಿರಕ್ಕೆ ಕರೆತಂದು ಪಳಗಿಸಲಾಯಿತು. ಆರಂಭದ ದಿನಗಳಲ್ಲಿ ರೋಷಾವೇಶದಿಂದ ವರ್ತಿಸುತ್ತಿದ್ದ ಮಹೇಂದ್ರ ದಿನಕಳೆದಂತೆ ಶಿಬಿರದ ವಾತಾವರಣಕ್ಕೆ ಒಗ್ಗಿದ. ಬಹಳ ಬೇಗ ಪುಂಡಾಟಿಕೆಯನ್ನೆಲ್ಲ ಮರೆತು ಶಾಂತ ಸ್ವಭಾವ ಮೈಗೂಡಿಸಿಕೊಂಡ ಆನೆಗೆ ‘ಮಹೇಂದ’ ಎಂದು ಹೆಸರಿಡಲಾಯಿತು.

ಮೊದಲಿಗೆ ಮಾವುತ ವಿನೋದ್ ರಾಜ್ ಎಂಬಾತ ನೀಡಿದ ಅತ್ಯುತ್ತಮ ತರಬೇತಿ ಯಿಂದಾಗಿ ಆರೇಳು ತಿಂಗಳಲ್ಲೇ ಮಾವುತರ ಆಜ್ಞಾಧಾರಕ ಆನೆಯಾಗಿ ಪರಿವರ್ತನೆಗೊಂಡಿದ್ದು ಮಹೇಂದ್ರ ಆನೆಯ ವಿಶೇಷ. ಸದ್ಯ ಮಹೇಂದ್ರ, ಮಾವುತ ರಾಜಣ್ಣ ಅವರ ಉಸ್ತುವಾರಿಯಲ್ಲಿದ್ದಾನೆ. ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಲು ಗುರುವಾರ ಮೈಸೂರಿಗೆ ಆಗಮಿಸಿರುವ ಮಹೇಂದ್ರ, ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದಾನೆ.

ಮಾವುತನ ಮಾತು ತಪ್ಪದ ಮಹೇಂದ್ರ!
ಎಷ್ಟು ಸೌಮ್ಯ ಸ್ವಭಾವವೋ ಅಷ್ಟೇ ಧೈರ್ಯ ಮತ್ತು ದಿಟ್ಟ ಮನೋಭಾವ ಹೊಂದಿರುವ ಮಹೇಂದ್ರ, ಮಾವುತ ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ. ಜತೆಗೆ ಶಿಬಿರದಲ್ಲಿ ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಯೂ ಆಗಿದ್ದಾನೆ.

ಶ್ರೀರಂಗಪಟ್ಟಣ ದಸರಾದ ಅಂಬಾರಿ ಆನೆ
2022 ಮತ್ತು 2023ರ ಶ್ರೀರಂಗಪಟ್ಟಣ ದಸರಾದಲ್ಲಿ ಮಹೇಂದ್ರ ಸತತವಾಗಿ 2 ಬಾರಿ ಅಂಬಾರಿ ಹೊತ್ತು ಯಶಸ್ವಿಯಾಗಿದ್ದಾನೆ. ಆ ಮೂಲಕ ನಾನೂ ಮೈಸೂರಿನ ರಾಜ ಮಾರ್ಗದಲ್ಲಿ ಚಿನ್ನದ ಅಂಬಾರಿ ಹೊರಲು ಸಮರ್ಥನಿದ್ದೇನೆ ಎಂಬ ಸಂದೇಶ ನೀಡಿದ್ದಾನೆ.

ಈತ ಎಲ್ಲರ ಆಕರ್ಷಣೆ
ಮಹೇಂದ್ರ ಆನೆ ಸತತ 3 ವರ್ಷಗಳಿಂದ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದೆ. ನಾಗರಹೊಳೆಯ ಮತ್ತಿಗೋಡು ಕ್ಯಾಂಪಿನಿಂದ ಮೂರನೇ ಬಾರಿಗೆ ಮೈಸೂರಿಗೆ ಬಂದಿದ್ದು, ಎಲ್ಲರ ಆಕರ್ಷಣೆಯಾಗಿದ್ದಾನೆ. 41 ವರ್ಷದ ಮಹೇಂದ್ರ 4,910 ಕೆಜಿ ತೂಗುತ್ತಾನೆ. 2.75 ಮೀ. ಎತ್ತರ ಹಾಗೂ 3.25 ಮೀ. ಉದ್ದ ಇದ್ದಾನೆ.

Tags: