ಪುನೀತ್ ಮಡಿಕೇರಿ
ಬೀದಿನಾಯಿಗಳ ಹಾವಳಿ ಮಿತಿಮೀರಿದ ಹಿನ್ನೆಲೆ; ೨ ಎಕರೆ ಪ್ರದೇಶದಲ್ಲಿ ಆಶ್ರಯ ತಾಣ ನಿರ್ಮಿಸಲು ಟೆಂಡರ್
ಮಡಿಕೇರಿ: ಬೇರೆಡೆಗೆ ಸ್ಥಳಾಂತರ ಮಾಡುವ ಸಲುವಾಗಿ ನಗರದಲ್ಲಿ ೧೨೫ ಬೀದಿನಾಯಿಗಳನ್ನು ಮಡಿಕೇರಿ ನಗರಸಭೆ ಗುರುತಿಸಿದೆ.
ನಗರದ ಹೊರವಲಯದಲ್ಲಿ ೨ ಎಕರೆ ಪ್ರದೇಶದಲ್ಲಿ ಆಶ್ರಯ ತಾಣ ನಿರ್ಮಿಸಲು ಟೆಂಡರ್ ಕೂಡ ಕರೆದಿದ್ದು, ಕೆಲವೇ ದಿನಗಳಲ್ಲಿ ಈ ನಾಯಿಗಳನ್ನು ಆಶ್ರಯ ತಾಣಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ನಗರದಲ್ಲಿ ಒಟ್ಟು ೧,೨೭೩ ಬೀದಿ ನಾಯಿಗಳಿವೆ ಎಂದು ಅಂದಾಜು ಮಾಡಲಾಗಿದೆ.ಅವುಗಳ ಪೈಕಿ ೪೮೩ ಗಂಡು, ೪೦೫ ಹೆಣ್ಣು, ಉಳಿದಂತೆ ೩೮೫ ಮರಿಗಳಿವೆ. ಅವುಗಳ ಪೈಕಿ ಸ್ಥಳಾಂತರಿಸಲು ೧೨೫ ಬೀದಿನಾಯಿಗಳನ್ನು ಆಯ್ಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯ ಅನ್ವಯ ಶಾಲೆ, ಕಾಲೇಜು ಗಳು, ಆಸ್ಪತ್ರೆಗಳು, ಬಸ್ ನಿಲ್ದಾಣ ಹಾಗೂ ಕ್ರೀಡಾ ಸಂಕೀರ್ಣದಲ್ಲಿರುವ ೧೨೫ ಬೀದಿ ನಾಯಿಗಳನ್ನು ಗುರುತಿಸಲಾಗಿದೆ. ಈ ನಾಯಿಗಳನ್ನಷ್ಟೇ ಆಶ್ರಯತಾಣಕ್ಕೆ ಸ್ಥಳಾಂತರ ಮಾಡಲಾಗು ತ್ತದೆ. ಇನ್ನುಳಿದ ನಾಯಿಗಳು ಎಲ್ಲಿ ಇವೆಯೋ ಅಲ್ಲ ಇರಲಿವೆ.
ಆಶ್ರಯತಾಣ ಎಲ್ಲಿ?: ನಗರದ ಹೊರವಲಯದ ಸ್ಟುವರ್ಟ್ ಹಿಲ್ ಸಮೀಪ ನಗರದ ಕಸ ಹಾಕುವ ಜಾಗಕ್ಕಿಂತ ಇನ್ನೂ ಮುಂದೆ ೨ ಎಕರೆ ಪ್ರದೇಶವನ್ನು ಬೀದಿನಾಯಿಗಳ ಆಶ್ರಯ ತಾಣ ನಿರ್ಮಿಸಲು ಗುರುತಿಸಲಾಗಿದೆ. ಇಲ್ಲಿ ೭.೯೭ ಲಕ್ಷ ರೂ. ವೆಚ್ಚದಲ್ಲಿ ಎಲ್ಲ ಬಗೆಯ ಸೌಲಭ್ಯಗಳಿರುವ ಆಶ್ರಯತಾಣ ಸದ್ಯದ ನಿರ್ಮಾಣವಾಗಲಿದೆ. ಇದಕ್ಕಾಗಿ ಈಗ ಟೆಂಡರ್ ಕೂಡ ಕರೆಯಲಾಗಿದೆ. ಇವೆಲ್ಲವೂ ಸುಪ್ರೀಂ ಕೋರ್ಟ್ ಸೂಚನೆಯಂತೆಯೇ ನಡೆದಿವೆ ಎಂದು ನಗರಸಭೆಯ ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ನಗರಸಭೆಯು ನಗರದಲ್ಲಿ ಬೀದಿನಾಯಿಗಳಿಗೆ ಆಹಾರ ನೀಡಲು ಕೆಲವೊಂದು ಸ್ಥಳಗಳನ್ನು ನಿಗದಿಪಡಿಸಿದೆ. ಈಗಾಗಲೆ ರಾಣಿಪೇಟೆ, ದಾಸವಾಳ, ಮಾರುಕಟ್ಟೆ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ಈ ಸಂಬಂಧ ಫಲಕಗಳನ್ನು ಅಳವಡಿಸಲಾಗಿದೆ. ಇನ್ನುಳಿದ ಕಡೆಯೂ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
ಕೊಡಗು ಜಿಲ್ಲೆಯ ಕೆಲವೆಡೆ ಬೀದಿನಾಯಿಗಳಿಗಿಂತ ಹೆಚ್ಚಾಗಿ ಸಾಕುನಾಯಿಗಳೇ ಜನರಿಗೆ ಉಪಟಳ ನೀಡುತ್ತಿವೆ. ಮಡಿಕೇರಿಯ ಮುತ್ತಪ್ಪ ದೇವಸ್ಥಾನದ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿರುವ ಬೀದಿ ನಾಯಿಗಳು ಯಾರ ಮೇಲೂ ದಾಳಿ ನಡೆಸಿದ ಉದಾಹರಣೆಗಳಿಲ್ಲ. ಆದರೆ, ಅಲ್ಲಿನ ಮನೆಯೊಂದರ ಸಾಕು ನಾಯಿ ಮಾತ್ರ ಸಾಕಷ್ಟು ಶಾಲಾ ವಿದ್ಯಾರ್ಥಿಗಳನ್ನು ಕಚ್ಚಿ ಗಾಯಗೊಳಿಸಿದೆ. ಈ ಸಾಕು ನಾಯಿಯಿಂದ ಉಂಟಾಗುತ್ತಿರುವ ಉಪಟಳವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೀದಿನಾಯಿಗಳು ಮನುಷ್ಯರಿಗೆ ಕಚ್ಚಿದರೆ ಅದಕ್ಕೆ ಸೂಕ್ತವಾದ ಲಸಿಕೆಗಳು ಜಿಲ್ಲೆಯ ಆಸ್ಪತ್ರೆಗಳಲ್ಲಿ ಲಭ್ಯವಿವೆ. ಆದರೆ,ಮುಂಜಾಗ್ರತೆ ವಹಿಸುವುದು ಸಾರ್ವಜನಿಕರ ಕರ್ತವ್ಯ. ಬೀದಿ ನಾಯಿಗಳು ಹೆಚ್ಚಿರುವ ಕಡೆಗಳಲ್ಲಿ ಒಂಟಿಯಾಗಿ ಓಡಾಡುವುದು, ಗುಂಪು ಗುಂಪಾಗಿ ಬರುವ ಬೀದಿನಾಯಿಗಳಿಗೆ ಆಹಾರ ಹಾಕುವುದು, ಬೀದಿ ನಾಯಿಗಳ ಜೊತೆ ಸಲುಗೆಯಿಂದ ಇರುವುದು.. ಹೀಗೆ ಕೆಲವು ವಿಚಾರಗಳಲ್ಲಿ ಮುಂಜಾ ಗ್ರತೆ ವಹಿಸಿ ಬೀದಿನಾಯಿಗಳಿಂದ ಆದಷ್ಟು ದೂರ ಇರಬೇಕು. ಸಾಕು ನಾಯಿಗಳಿಗೆ ಅವುಗಳ ಮಾಲೀಕರು ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ,
ಮುಂಜಾನೆ ವಾಕಿಂಗ್‌ಗೆ ಹೋಗುವ ಸಂದರ್ಭದಲ್ಲಿ ಬೀದಿನಾಯಿಗಳಿಂದ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಬೀದಿನಾಯಿಗಳ ಹಾವಳಿಯಿಂದ ದ್ವಿಚಕ್ರ ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ.
ರೇಬಿಸ್ ಮುಕ್ತ ಜಿಲ್ಲೆ: ಬೀದಿ ನಾಯಿಗಳ ಸಂಖ್ಯೆ ಹೆಚ್ಚಳದೊಂದಿಗೆ ಬೀದಿ ನಾಯಿಗಳ ಕಡಿತ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕೊಡಗು ಜಿಲ್ಲೆ ರೇಬಿಸ್ ಮುಕ್ತ ಜಿಲ್ಲೆಯಾಗಿದೆ. ಇದುವರೆಗೂ ಒಂದು ರೇಬಿಸ್ ಪ್ರಕರಣವೂ ದಾಖಲಾಗಿಲ್ಲ. ಇದಕ್ಕೆ ಜಿಲ್ಲೆಯಲ್ಲಿ ಸುಧಾರಿಸಿರುವ ಆರೋಗ್ಯ ಇಲಾಖೆಯ ವ್ಯವಸ್ಥೆ ಕಾರಣವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರೇಬಿಸ್ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರೋಗ ನಿರೋಧಕ ಲಸಿಕೆಗಳು ಅಗತ್ಯಕ್ಕಿಂತ ಹೆಚ್ಚಾಗಿ ಸಂಗ್ರಹ ಇರುವುದರಿಂದ ಕೊಡಗು ಜಿಲ್ಲೆ ರೇಬಿಸ್ ಮುಕ್ತವಾಗಿದೆ
” ಬೀದಿನಾಯಿಗಳಿಗೆ ಆಹಾರ ನೀಡಲು ೭ ಸ್ಥಳಗಳನ್ನು ಹಾಗೂ ಆಶ್ರಯ ತಾಣ ನಿರ್ಮಿಸಲು ೨ ಎಕರೆ ಜಾಗವನ್ನು ಗುರುತಿಸಲಾಗಿದೆ. ಟೆಂಡರ್ ಕರೆಯಲಾಗಿದೆ. ಅರ್ಜಿಗಳು ಬಂದ ನಂತರ ಕ್ರಮ ವಹಿಸಲಾಗುವುದು.”
-ಎಚ್.ಆರ್.ರಮೇಶ್, ನಗರಸಭೆ ಪೌರಾಯುಕ್ತರು, ಮಡಿಕೇರಿ
ಟೆಂಡರ್‌ಗೆ ಅರ್ಜಿ ಹಾಕುವವರಿಲ್ಲ..!: ಮಡಿಕೇರಿ ನಗರದಲ್ಲಿ ೨೦೨೨ರಲ್ಲಿ ಒಟ್ಟು ೯೫೦ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದೇ ಕೊನೆ. ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಬೀದಿನಾಯಿಗೂ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಿಲ್ಲ.ಇದರಿಂದ ನಗರದಲ್ಲಿ ಎಂದರಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಿದೆ. ಮಡಿಕೇರಿ ನಗರದಲ್ಲಿರುವ ಎಲ್ಲ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಿ, ರೇಬಿಸ್ ನಿರೋಧಕ ಲಸಿಕೆ ಹಾಕಲು ನಗರಸಭೆ ೪ ಬಾರಿ ಟೆಂಡರ್ ಕರೆದರೂ ಯಾರೊಬ್ಬರೂ ಅರ್ಜಿ ಹಾಕಿಲ್ಲ. ಈಗ ೫ನೇ ಬಾರಿಗೆ ಟೆಂಡರ್ ಕರೆಯಲಾಗಿದೆ. ಒಂದು ಬೀದಿನಾಯಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ೧,೬೫೦ ರೂ. ಹಾಗೂ ರೇಬಿಸ್ ನಿರೋಧಕ ಲಸಿಕೆ ನೀಡಲು ೨೫೦ ರೂ. ನೀಡಲಾಗುತ್ತದೆ. ಆದರೆ ಒಬ್ಬರೂ ಅರ್ಜಿ ಹಾಕಿಲ್ಲ.





