ಮೂರನೇ ಬಾರಿಗೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಪ್ರಕಟ
ಸತತ ನಾಲ್ಕನೇ ಅವಧಿಗೆ ಆಡಳಿತ ನಡೆಸಲಿರುವ ಮಹಿಳಾ ಅಧ್ಯಕ್ಷರು
ಮಡಿಕೇರಿ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಮಡಿಕೇರಿ ನಗರಸಭೆ ಅಧ್ಯಕ್ಷ ಸ್ಥಾನ ಸತತ ಮೂರನೇ ಬಾರಿಗೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಲ್ಲದೆ ಮಡಿಕೇರಿ ನಗರಸಭೆಯನ್ನು ಸತತ ನಾಲ್ಕನೇ ಅವಧಿಗೆ ಮಹಿಳಾ ಅಧ್ಯಕ್ಷರು ಮುನ್ನಡೆಸಲಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಗಳಿಗೆ ಮೀಸಲು ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡ ಬೇಕೆಂದು ಕೋರಿ ಸಯ್ಯದ್ ನಸ್ರುಲ್ಲಾ ಸೇರಿ ಚಿತ್ರದುರ್ಗ, ಬನ್ನೂರು ಮತ್ತು ಕುಶಾಲನಗರ ಸ್ಥಳೀಯ ಸಂಸ್ಥೆಗಳ ಚುನಾ ಯಿತ ಪ್ರತಿನಿಧಿಗಳು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಗೆಜೆಟ್ ಪ್ರತಿಸಲ್ಲಿಸುವ ಮೂಲಕ ಮಾಹಿತಿ ನೀಡಿದೆ. ಅದರಂತೆ ಮಡಿಕೇರಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸದಸ್ಯರಿಗೆ ಮೀಸಲಾಗಿದೆ. ಸತತ ಮೂರನೇ ಬಾರಿಗೆ ಸಾಮಾನ್ಯ ಮಹಿಳೆ ಮತ್ತು ನಾಲ್ಕನೇ ಬಾರಿಗೆ ಮಹಿಳಾ ಅಧ್ಯಕ್ಷರಾಗಲಿದ್ದಾರೆ.
ಬಿಜೆಪಿಯ ಅನಿತಾ ಪೂವಯ್ಯ ಅಧ್ಯಕ್ಷರಾಗಿದ್ದರು. ಅದಕ್ಕೂ ಮೊದಲ ಅವಧಿಯಲ್ಲಿಯೂ ಸಾಮಾನ್ಯ ಮಹಿಳೆಗೆ ಮೀಸಲಾತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನ ಕಾವೇರಮ್ಮ ಸೋಮಣ್ಣ ಅಧ್ಯಕ್ಷರಾಗಿದ್ದರು. ಹೀಗೆ ಸತತ ಮೂರನೇ ಬಾರಿಗೆ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ಕಾವೇರಮ್ಮ ಸೋಮಣ್ಣ ಅವರ ಹಿಂದಿನ ಅವಧಿಯಲ್ಲಿ ಬಿಸಿಎಂ(ಎ) ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ಆ ಅವಧಿಯನ್ನು ಕಾಂಗ್ರೆಸ್‌ನ ಜುಲೈಕಾಬಿ ಮತ್ತು ಶ್ರೀಮತಿ ಬಂಗೇರ ಹಂಚಿಕೊಂಡಿದ್ದರು.
ಇದರಿಂದ ಮಡಿಕೇರಿ ನಗರಸಭೆಗೆ ಸತತ ನಾಲ್ಕನೇ ಬಾರಿಗೆ ಮಹಿಳಾ ಅಧ್ಯಕ್ಷರ ಆಯ್ಕೆ ಆಗಲಿದ್ದು, ಸತತ ಮೂರನೇ ಬಾರಿಗೆ ಸಾಮಾನ್ಯ ಮಹಿಳೆಗೆ ಅವಕಾಶ ಸಿಕ್ಕಿದೆ.
ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಒಟ್ಟು 16 ಸದಸ್ಯರನ್ನು ಹೊಂದಿದ್ದು, ಎಸ್‌ಡಿಪಿಐ 5 ಹಾಗೂ ಕಾಂಗ್ರೆಸ್ ಮತ್ತು ಜಾ.ದಳ ತಲಾ ಓರ್ವ ಸದಸ್ಯ ಬಲವನ್ನು ಹೊಂದಿವೆ. ಹೀಗಾಗಿ ನಗರಸಭೆ ಆಡಳಿತ ಬಿಜೆಪಿ ತೆಕ್ಕೆಯಿಂದ ಜಾರುವ ಸಾಧ್ಯತೆಯಿಲ್ಲ. ಬಿಜೆಪಿಯಲ್ಲೀಗ ಯಾರು ಅಧ್ಯಕ್ಷರು, ಯಾರು ಉಪಾಧ್ಯಕ್ಷರೆಂಬ ಚರ್ಚೆ ಆರಂಭವಾಗಿದೆ. ಒಟ್ಟು 16 ಸದಸ್ಯರನ್ನು ಹೊಂದಿರುವ ಬಿಜೆಪಿಯಲ್ಲಿ ಒಟ್ಟು 9 ಮಂದಿ ಮಹಿಳಾ ಸದಸ್ಯರಿದ್ದು, 7 ಮಂದಿ ಪುರುಷ ಸದಸ್ಯರಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಈ 9 ಮಂದಿ ನಡುವೆ ಪೈಪೋಟಿ ಏರ್ಪಡಲಿದೆ.
ಬಿಜೆಪಿಯ 9 ಮಂದಿ ಮಹಿಳಾ ಸದಸ್ಯರ ಪೈಕಿ ಹಿರಿಯರು ಮತ್ತು 2ನೇ ಬಾರಿಗೆ ಆಯ್ಕೆಯಾಗಿರುವ ಅನಿತಾ ಪೂವಯ್ಯ ಮತ್ತು ಸವಿತಾ ರಾಕೇಶ್ ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನುಳಿದ 7 ಮಂದಿ ಈ ಬಾರಿ ಮೊದಲ ಬಾರಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾದವರಾಗಿದ್ದು, ಈಗಾಗಲೇ ಹಿರಿಯ ರಿಬ್ಬರಿಗೆ ಅಧಿಕಾರ ನೀಡಲಾಗಿರುವುದರಿಂದ ಹೊಸ ಬರಿಗೆ ಮಣೆ ಹಾಕಲು ಪಕ್ಷ ಮುಂದಾದರೆ ಮೊದಲ ಬಾರಿಗೆ ಆಯ್ಕೆಯಾದವರು ಅಧ್ಯಕ್ಷ ಸ್ಥಾನಕ್ಕೇರುವ ಸಾಧ್ಯತೆಯಿದೆ. ಉಪಾಧ್ಯಕ್ಷಗಾದಿಗೆ ಸಾಮಾನ್ಯ ಮೀಸಲಾತಿ ನಿಗದಿಯಾಗಿರುವುದರಿಂದ ಪುರುಷರನ್ನು ಪಕ್ಷ ಪರಿಗಣಿಸುವ ಸಾಧ್ಯತೆಯಿದೆ.
ಸವಿತಾ ರಾಕೇಶ್‌ಗೆ ಅಧ್ಯಕ್ಷ ಸ್ಥಾನ..?
ಮಡಿಕೇರಿ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಕಸರತ್ತು ಆರಂಭಿಸಿದ್ದಾರೆ. ಮೂಲಗಳ ಪ್ರಕಾರ ಹಿರಿಯ ಸದಸ್ಯೆ ಸವಿರಾ ರಾಕೇಶ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರಿಗೆ ಪೈಪೋಟಿ ನೀಡಲು ಶ್ವೇತಾ ಪ್ರಶಾಂತ್ ಕೂಡ ಕಣದಲ್ಲಿದ್ದಾರೆ ಎನ್ನಲಾಗಿದೆ. ಉಳಿದಂತೆ ಉಷಾ ಕಾವೇರಪ್ಪ, ಮಂಜುಳಾ, ಶಾರದಾ ನಾಗರಾಜ್, ಸಬಿತಾ, ಚಿತ್ರಾವತಿ ಹಾಗೂ ಕಲಾವತಿ ಹುದ್ದೆಗೆ ಅರ್ಹರಾಗಿದ್ದಾರೆ. ಪಕ್ಷದ ತೀರ್ಮಾನವೇ ಅಂತಿಮ ಎನ್ನಲಾಗಿದ್ದರೂ ಆಕಾಂಕ್ಷಿಗಳು ತಮ್ಮದೇ ಶೈಲಿಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.
ನಗರಸಭೆಯ ಬಿಜೆಪಿ ಆಡಳಿತ ಪಕ್ಷದ ಸದಸ್ಯರ ವಿವರ:
ಮಹಿಳಾ ಸದಸ್ಯರು: ಅನಿತಾ ಪೂವಯ್ಯ, ಸವಿತಾ ರಾಕೇಶ್, ವೈ.ಡಿ.ಶ್ವೇತ, ಸಬಿತಾ, ಕೆ.ಸಿ.ಮಂಜುಳಾ, ಬಿ.ಪಿ.ಚಿತ್ರಾವತಿ, ಪಿ.ಕಲಾವತಿ, ಕೆ.ಉಷಾ, ಎಚ್.ಎನ್. ಶಾರದಾ.
ಪುರುಷ ಸದಸ್ಯರು: ಕೆ.ಎಸ್.ರಮೇಶ್, ಮಹೇಶ್ ಜೈನಿ, ಉಮೇಶ್ ಸುಬ್ರಹ್ಮಣಿ, ಕೆ.ಎಂ.ಅಪ್ಪಣ್ಣ, ಪಿ.ಚಂದ್ರಶೇಖರ್, ಅರುಣ್ ಶೆಟ್ಟಿ, ಸತೀಶ್.