ಮಹಿಳಾ ಪರ ಹೋರಾಟದ ಶಕ್ತಿಯಾಗಿದ್ದ ಮಂಜುಳಾ
ಎಂ.ಎನ್.ಕವಿತಾ, ಮೈಸೂರು
“ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಇರೋದನ್ನು ಬಿಡು, ಅಡುಗೆ ಮನೆಗೆ ಎಷ್ಟು ಅವಶ್ಯಕತೆ ಇದೆಯೋ, ಅಷ್ಟು ಸಮಯ ಕೊಡು ಸಾಕು. ಕೆಲಸ ಇರುತ್ತೆ ಕಡಿಮೆ ಮಾಡ್ಕೊ ಬೇಕಿರೋದು ನಾವೇ. ಯಾರು ಹೇಳಿದ್ದಾರೆ ನಿಂಗೆ ಅಡುಗೆ ಮನೆಯಲ್ಲೇ ಜಾಸ್ತಿ ಇರೋಕೆ” ಅಂತ ಪ್ರೀತಿಯಿಂದ ಗದರುವ, ನನ್ನ ನಿಜವಾದ ಜವಾಬ್ದಾರಿ ಏನು ಅಂತ ತಿಳಿಸೋಕೆ ಸಾಧ್ಯ ಇದ್ದಿದ್ದು ಮಂಜುಳಾ ಮೇಡಂಗೆ ಮಾತ್ರ. ಮೇಡಂ ಅವರ ಮಾತು ಯಾವಾಗಲೂ ನೇರ, ದಿಟ್ಟ.
ಹಿಂದೆ ಮುಂದೆ ಯೋಚಿಸಿಕೊಂಡು ಕೂತವರೇ ಅಲ್ಲ. ಅನಿಸಿದ್ದನ್ನು ನೇರಾನೇರ ಹೇಳಿ ಹಗುರಾಗಿಬಿಡುತ್ತಿದ್ದರು. ದೂರದಿಂದ ನೋಡುವವರಿಗೆ ಮೇಡಂ ಸ್ವಲ್ಪ ಒರಟು ಸ್ವಭಾವದವರು ಅನಿಸಿರಬಹುದು. ಆದರೆ ಅವರಂತಹ ತಾಯಿಕರುಳಿನವರನ್ನು ನಾನು ನೋಡಿದ್ದು ಕಡಿಮೆ. ಇವತ್ತಿನ ಜಗತ್ತಿಗೆ ಬೇಕಿರುವ ಮನುಷ್ಯ ಪ್ರೀತಿಯನ್ನು ನಿರ್ವಂಚನೆಯಿಂದ ಹಂಚುವ ಮಾನವ ಪ್ರೇಮಿಯನ್ನು ನಾವೆಲ್ಲ ಇಂದು ಕಳೆದುಕೊಂಡಿದ್ದೇವೆ.
ಬಿ.ಸಿ.ಮಂಜುಳಾ ಅವರು ಮೂಲತಃ ಹಾಸನ ಜಿಲ್ಲೆಯ ಬುಸ್ತೇನಹಳ್ಳಿಯ ರೈತ ಕುಟುಂಬಕ್ಕೆ ಸೇರಿದವರು. ೧೯೫೯ರ ಮೇ ೧೩ರಂದು ಲಕ್ಕಮ್ಮ ಮತ್ತು ಚಿಕ್ಕಲಿಂಗೇಗೌಡ ದಂಪತಿಯ ಪುತ್ರಿಯಾಗಿ ಜನಿಸಿ, ಮೂವರು ಸಹೋದರಿಯರು, ಇಬ್ಬರು ಸಹೋದರರೊಂದಿಗೆ ಕೂಡುಕುಟುಂಬದಲ್ಲಿ ಬೆಳೆದ ಇವರ ಜೀವನಾನುಭವ ದೊಡ್ಡದು. ತಾಯಿ ತವರು ಭುವನಹಳ್ಳಿಯಲ್ಲಿ ಪ್ರಾಥಮಿಕ ಹಾಗೂ ತಂದೆ ಊರು ಬುಸ್ತೇನಹಳ್ಳಿಯಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವ್ಯಾಸಂಗ ಮಾಡಿದ ಮಂಜುಳಾ ಅವರು, ಅದೇ ಊರಿನ ಖಾಸಗಿ ಕಾಲೇಜೊಂದರಲ್ಲಿ ಪಿಯುಸಿ ಮುಗಿಸುತ್ತಾರೆ. ಬಳಿಕ ಹಾಸನದ ಖಾಸಗಿ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಕಲಿತರು. ಬಳಿಕ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಗ್ರಾಮೀಣ ಪರಿಸರದ ಹೆಣ್ಣುಮಕ್ಕಳಿಗೆ ಕಲಿಕೆ ಕಷ್ಟ ಎನ್ನುವವರ ನಡುವೆಯೇ ಕನ್ನಡ ಎಂ.ಎ. ಪದವಿಧರರಾಗಿ ಸ್ವತಂತ್ರವಾಗಿ ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆ. ಮನೆಯವರನ್ನು ಒಪ್ಪಿಸಿ ರಾಜಪ್ಪ ದಳವಾಯಿ ಅವರೊಂದಿಗೆ ಅಂತರ್ಜಾತಿ ವಿವಾಹ ಮಾಡಿಕೊಂಡರು. ಈ ದಂಪತಿ ಒಬ್ಬನೇ ಮಗ ಭಾರತೀನಂದ. ಭಾರತೀಯ ಸೇನೆ (ನೇವಿ)ಯ ಅಽಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಚಿಕ್ಕ ಚೊಕ್ಕ ಸಂಸಾರದ ಸಾರಥ್ಯ ಮೂವರಿಗೂ ಸೇರಿದ್ದಾದರೂ ಕುಟುಂಬ ನಿರ್ವಹಣೆಯಲ್ಲಿ ಮಂಜುಳಾ ಅವರ ಪಾಲುದಾರಿಕೆಯೇ ಹೆಚ್ಚು.
ದಳವಾಯಿ ಮೇಷ್ಟ್ರ ಬರವಣಿಗೆಗೆ ಸ್ಛೂರ್ತಿ ತುಂಬುತ್ತಾ, ಓದುತ್ತಾ, ಸಂತೋಷಪಟ್ಟು, ತಾವು ಬರೆಯದೆ ಸುಮ್ಮನಾದರೂ ಅವರಲ್ಲಿ ಸದಾ ಒಬ್ಬ ಕವಯಿತ್ರಿ, ವಿಮರ್ಶಕಿ ಜಾಗೃತವಾಗಿದ್ದಂತೂ ಸತ್ಯ. ಮಂಜುಳಾ ಅವರು ಬರೆದದ್ದು ಕಡಿಮೆಯೇ ಆದರೂ, ಬರೆಯಲು ನನ್ನಂತಹವರನ್ನು ಉತ್ತೇಜಿಸಿದ್ದು ಹೆಚ್ಚು. ಅವರ ಸಂಪರ್ಕಕ್ಕೆ ಬಂದವರೆಲ್ಲ ಮೈಭಾರ ಬಿಟ್ಟು ಮಹಿಳಾ ಸಂಘಟನೆ, ಜಾಗೃತಿ, ಹೋರಾಟಗಳಲ್ಲಿ ಭಾಗಿದಾರರಾಗಲು ಮಂಜುಳಾ ಪ್ರೇರೇಪಣೆಯಾಗಿದ್ದರು.
ಮೈಸೂರಿನಲ್ಲಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ರೂಪ ತಳೆಯಲು ಇವರ ಪಾತ್ರ ಸಾಕಷ್ಟಿದೆ. ೨೦೧೩ರ ಮಾರ್ಚ್ ೭ ಮತ್ತು ೮ರಂದು ಮೈಸೂರಿನಲ್ಲಿ ನಡೆದ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಸಮಾವೇಶದ ಯಶಸ್ಸಿಗೆ ಇವರ ಕೊಡುಗೆ ಅಪಾರವಾದುದು. ಪ್ರತಿ ಜಿಲ್ಲೆಯ ಸಮಾವೇಶಕ್ಕೂ ಉತ್ಸಾಹದಿಂದ ಮುಂದೆ ಇರುತ್ತಿದ್ದ ಈ ಅಕ್ಕನನ್ನು ಕಳೆದುಕೊಂಡು ಒಕ್ಕೂಟದ ಎಲ್ಲ ಸಂಗಾತಿಗಳೂ ನೋವಿನಲ್ಲಿದ್ದಾರೆ. ಸಮತಾದ ಕ್ರಿಯಾಶೀಲತೆಗೂ ಕೊಡುಗೆಯಾಗಿದ್ದ ಇವರನ್ನು ಮೈಸೂರಿನ ಸಂಗಾತಿಗಳು ಮರೆಯಲು ಎಂದೆಂದಿಗೂ ಸಾಧ್ಯವೇ ಇಲ್ಲ. ಕನ್ನಡ ಅಧ್ಯಾಪಕಿಯಾಗಿ ಮೂರು ದಶಕಗಳಿಗೂ ಹೆಚ್ಚಿನ ಕಾಲ ಮೈಸೂರಿನ ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ, ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಬೆಳಗಿದ್ದಾರೆ.
ಮಂಜುಳಾ ಅವರು ತಮ್ಮ ವೃತ್ತಿ ಜೀವನದ ಕಡೆಯ ೧೪ ವರ್ಷಗಳಿರುವಾಗ ಖಾಯಂ ಹುದ್ದೆ ಪಡೆದರೂ, ಎಂದೂ ಯಾರ ಬಗೆಗೂ ಬೇಸರಿಸದೆ ತಮ್ಮ ಪಾಲಿಗೆ ಬಂದದ್ದನ್ನು ಪ್ರೀತಿಯಿಂದ ಸ್ವೀಕರಿಸಿದ ಸರಳತೆ ಅವರದು. “ರಾಜಪ್ಪ ಅವರು ಬೆಂಗಳೂರಿಂದ ಬಂದರೆ ನನಗೆ ಆರಾಮ, ಯಾಕಂದ್ರೆ ರಾಜಪ್ಪನೇ ಅಡುಗೆ ಮಾಡೋದ್ರಿಂದ ನನಗೆ ಯಾವ ತಲೆ ಬಿಸಿಯೂ ಇರಲ್ಲ” ಅಂತ ದಳವಾಯಿ ಸರ್ ಅವರ ಉಪಸ್ಥಿತಿಯನ್ನು ಬಯಸುತ್ತಿದ್ದರು.
ಕಳೆದ ವರ್ಷ ನಿವೃತ್ತರಾದ ದಳವಾಯಿ ಅವರು ಹೆಚ್ಚು ಸಮಯ ಪತ್ನಿ, ಮಗನೊಂದಿಗೆ ಕಳೆಯಬೇಕೆಂದು ಅಂದುಕೊಂಡದ್ದು, ಹೆಚ್ಚುದಿನ ಈಡೇರಲೇ ಇಲ್ಲ. ಇದ್ದಷ್ಟು ದಿನ ಪ್ರೀತಿಯಿಂದ ನೋಡಿಕೊಂಡ ಆನಂದ ತಂದೆ-ಮಗ ಇಬ್ಬರಿಗೂ ಇದೆ. ಮಂಜುಳಾ ಅವರು ಭಾರತೀನಂದನಿಗೂ ತಮ್ಮದೇ ಆತ್ಮವಿಶ್ವಾಸ ತುಂಬಿ ಬೆಳೆಸಿದ್ದಾರೆ. ಜೀವನದ ಬಗೆಗೆ ಅಪಾರ ಅಭಿಮಾನ ಹೊಂದಿದ್ದ ಅವರು ಇನ್ನಷ್ಟು ಕಾಲ ನಮ್ಮೊಂದಿಗೆ ಇರಬೇಕಿತ್ತು ಎನ್ನುವ ಕೊರಗು ಅವರನ್ನು ಹತ್ತಿರದಿಂದ ನೋಡಿದ್ದ, ಅವರ ಕ್ರಿಯಾಶೀಲತೆ, ಉತ್ಸಾಹ, ಪ್ರೋತ್ಸಾಹ ಕಂಡಿದ್ದ ಎಲ್ಲರಿಗೂ ಉಳಿದಿದೆ.
” ಬಿ.ಸಿ.ಮಂಜುಳಾ ಅವರು ತಮ್ಮ ಆಲೋಚನೆ, ಸಿದ್ಧಾಂತಗಳನ್ನು ಬೇರೆಯವರೂ ಒಪ್ಪಬೇಕು ಅಥವಾ ಅಂತಹವರ ಸ್ನೇಹ ಮಾತ್ರ ಬೆಳೆಸಬೇಕು ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿರಲಿಲ್ಲ. ಅವರು ತಪ್ಪಾದ ಆಚರಣೆಗಳನ್ನು ತಿದ್ದಿ ತೀಡಿ, ಪ್ರತಿಯೊಬ್ಬರನ್ನೂ ಅವರವರ ಗುಣದೊಂದಿಗೆಪ್ರೀತಿಸುತ್ತಿದ್ದರೂ ತಾವು ಮಾತ್ರ ತಮ್ಮ ಆಲೋಚನೆಗಳಿಗೆ, ಚಿಂತನೆಗಳಿಗೆ ಬದ್ಧವಾಗಿಯೇ ಕಡೆಯವರೆಗೂ ಬದುಕಿದರು.”





