ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಆಯೋಜನೆಗೊಂಡಿರುವ ಲೆವಿಸ್ಟಾ ಕೊಡವ ಹಾಕಿಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಮೂರ್ನಾಡಿನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಹಾಕಿ ಕೂರ್ಗ್, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಏಕಲವ್ಯ ಪ್ರಶಸ್ತಿ ವಿಜೇತರಾದ ಒಲಿಂಪಿಯನ್ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ, ಪೋಷಕರು ತಮ್ಮ ಕನಸನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ಕನಸನ್ನು ನನಸು ಮಾಡಲು ಮುಂದಾಗಬೇಕು ಮತ್ತು ಕ್ರೀಡಾಸಕ್ತಿಗೆ ಉತ್ತೇಜನ ನೀಡಬೇಕೆಂದು ಸಲಹೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳ ಆಸಕ್ತಿಯ ವಿಷಯಗಳನ್ನು ಪೋಷಕರು ಅರಿತುಕೊಳ್ಳುತ್ತಿಲ್ಲ. ತಮ್ಮ ಕನಸನ್ನು ಮಕ್ಕಳಿಂದ ನನಸು ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಪೋಷಕರು ಮಕ್ಕಳ ಇಚ್ಛೆಗೆ ತಕ್ಕಂತೆ ಸ್ಛೂರ್ತಿ ತುಂಬಬೇಕು ಮತ್ತು ಪ್ರೋತ್ಸಾಹ ನೀಡಬೇಕು. ನನ್ನ ಕ್ರೀಡಾಸಕ್ತಿಗೆ ತಂದೆ, ಸಹೋದರ ಹಾಗೂ ಪತಿ ಪ್ರೋತ್ಸಾಹ ನೀಡಿದ ಪರಿಣಾಮ ನಾನು ಒಲಿಂಪಿಯನ್ ಆಗಿದ್ದೇನೆ ಎಂದರು.
ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಮಾಜಿ ಕ್ರೀಡಾಪಟು ಮಂಡೇಪಂಡ ಪುಷ್ಪಾ ಕುಟ್ಟಣ್ಣ ಮಾತನಾಡಿ, ಸಮಾಜದ ಅಡಿಪಾಯವಾಗಿರುವ ಕುಟುಂಬಗಳ ಮೂಲಕವೇ ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಬೆಳೆಸಬೇಕೆನ್ನುವ ಪಾಂಡಂಡ ಕುಟ್ಟಪ್ಪ ಅವರ ಚಿಂತನೆ ಶ್ರೇಷ್ಠವಾಗಿದೆ. ಈ ಪ್ರಯತ್ನ ಇಂದು ಎಲ್ಲರಿಗೂ ಸ್ಛೂರ್ತಿಯಾಗಿದ್ದು, ಜಿಲ್ಲೆಯ ಹಲವೆಡೆ ಕ್ರೀಡಾ ಕೂಟಗಳು ನಡೆಯುತ್ತಿವೆ. ಮಕ್ಕಳು ಒಗ್ಗೂಡಿ ಹಾಕಿ ಕ್ರೀಡೆಯಲ್ಲಿ ಆಟವಾಡುವ ಅವಕಾಶವಿರುವುದು ಕೊಡಗಿನಲ್ಲಿ ಮಾತ್ರ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಅಂತರರಾಷ್ಟ್ರೀಯ ಮಾಜಿ ಹಾಕಿಪಟು ಕಾಳಿಮಾಡ ಎಂ.ಸೋಮಯ್ಯ ಮಾತನಾಡಿ, ಪ್ರೋತ್ಸಾಹ ಮತ್ತು ಪ್ರಾಯೋಜಕತ್ವದ ಸಹಕಾರವಿಲ್ಲದಿದ್ದರೆ ಯಾವುದೇ ಕ್ರೀಡೆಗಳನ್ನು ಅಥವಾ ಕ್ರೀಡಾಪಟುಗಳನ್ನು ಬೆಳೆಸಲು ಸಾಧ್ಯವಿಲ್ಲ. ಆದ್ದರಿಂದ ಹಾಕಿಯ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಎಸ್‌ಎಲ್‌ಎನ್ ಗ್ರೂಪ್‌ನ ಸಿಇಒ ಸಾಹಿಬ್ ಸಿಂಗ್ ಮಾತನಾಡಿ, ಹಾಕಿ ಕ್ರೀಡೆಗೆ ಕೊಡಗಿನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹ ದೊರೆಯುತ್ತಿರುವುದು ಶ್ಲಾಘನೀಯ. ಇನ್ನು ಮುಂದೆಯೂ ಹಾಕಿ ಉಳಿಯಲಿ, ಬೆಳೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅವರು, ಹಾಕಿ ಅಕಾಡೆಮಿ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಪಾಂಡಂಡ ಕುಟ್ಟಪ್ಪ ಅವರ ಹಲವು ವರ್ಷಗಳ ಕನಸನ್ನು ನನಸು ಮಾಡಿದ ತೃಪ್ತಿ ನಮಗಿದೆ ಎಂದರು. ಎಸ್‌ಎಲ್‌ಎನ್ ಗ್ರೂಪ್‌ನ ಪ್ರಮುಖರಾದ ವೆಂಕಟಾಚಲಂ ಸಾತಪ್ಪನ್, ವೇಲಾಯುಧಂ ಮಣಿ, ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಚೆಪ್ಪುಡಿರ ಎಸ್.ಪೂಣಚ್ಚ, ಉಪಾಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್ ಪೂಣಚ್ಚ, ಗೌರವ ಕಾರ್ಯದರ್ಶಿ ಕುಲ್ಲೇಟಿರ ಅರುಣ್ಬೇ ಬ, ಜಂಟಿ ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರುಗಳಾದ ಮುದ್ದಂಡ ರಶಿನ್ ಸುಬ್ಬಯ್ಯ, ಬೊಳ್ಳೆಪಂಡ ಜೆ.ಕಾರ್ಯಪ್ಪ, ಕಾಳಿಯಂಡ ಸಂಪನ್ ಅಯ್ಯಪ್ಪ, ಮುಕ್ಕಾಟಿರ ಎಸ್.ಸೋಮಯ್ಯ, ಚೆಕ್ಕೇರ ಆದರ್ಶ್, ಮಂಡೇಪಂಡ ಮುಖೇಶ್ ಮೊಣ್ಣಯ್ಯ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಹಾಕಿ ಕೂರ್ಗ್, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಾಂತ್ರಿಕ ಸಮಿತಿಯವರಿಗೆ ಸನ್ಮಾನ…: ಉದ್ಘಾಟನಾ ಸಮಾರಂಭದಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಆರಂಭಿಕ ೧೯೯೭ರಲ್ಲಿ ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದವರನ್ನು ಹಾಗೂ ವೀಕ್ಷಕ ವಿವರಣೆಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ೨೫ ವರ್ಷಗಳ ಕಾಲ ಹಾಕಿ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಿರುವ ೨೫ ಕೊಡವ ಕುಟುಂಬಗಳ ಪಟ್ಟೆದಾರರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದರು





