ಮಹಾದೇಶ್ ಎಂ.ಗೌಡ
ಮಳೆ ಬಂದರೆ ಸೋರುವ ಕೊಠಡಿಗಳು; ಉದುರಿ ಬೀಳುತ್ತಿರುವ ಸಿಮೆಂಟ್ ಚಕ್ಕೆಗಳು; ಆಟದ ಮೈದಾನವಿಲ್ಲದೆ ರಸ್ತೆಯಲ್ಲೇ ಮಕ್ಕಳ ಆಟೋಟ
ಹನೂರು: ಹನೂರು ಶೈಕ್ಷಣಿಕ ವಲಯದ ಕೂಡ್ಲೂರು ಕ್ಲಸ್ಟರ್ ವ್ಯಾಪ್ತಿಯ ಅಂಚಿಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಚಾವಣಿ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಳೆಯ ನೀರು ಸೋರುತ್ತಿದ್ದು ಕಾಂಕ್ರೀಟ್ ಚಕ್ಕೆಗಳು ಕೆಳಗೆ ಉದುರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೀವ್ರ ತೊಂದರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಹನೂರು ಶೈಕ್ಷಣಿಕ ವಲಯದ ಬಹುತೇಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಕೊಠಡಿಗಳು ಶಿಥಿಲಗೊಂಡಿರುವುದರಿಂದ ವಿದ್ಯಾರ್ಥಿಗಳು ಮಳೆಗಾಲದ ಸಂದರ್ಭದಲ್ಲಿ ಆತಂಕದಲ್ಲಿಯೇ ಪಾಠ ಪ್ರವಚನದಲ್ಲಿ ತೊಡಗಿಸಿಕೊಳ್ಳುವಂತಾಗಿದೆ. ಕಳೆದ ತಿಂಗಳು ಶಾಲೆಗೆ ಮೂಲಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಪೆದ್ದನಪಾಳ್ಯ ಗ್ರಾಮದ ೬೨ ವಿದ್ಯಾರ್ಥಿಗಳನ್ನು ೯ ದಿನಗಳ ಕಾಲ ಶಾಲೆಗೆ ಕಳುಹಿಸದೆ ಪೋಷಕರು ಪ್ರತಿಭಟನೆ ನಡೆಸಿದ್ದರು.
ಅಂಚಿಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ೪೧ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಯಲ್ಲಿ ಆಟದ ಮೈದಾನ, ಶೌಚಾಲಯ, ಶುದ್ಧ ಕುಡಿಯುವ ನೀರು, ಶಾಲಾ ಕಾಂಪೌಂಡ್ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳು ಇಲ್ಲದೆ ವಿದ್ಯಾರ್ಥಿಗಳು ಪರಿತಪಿಸುತ್ತಿದ್ದಾರೆ.
ಆಟದ ಮೈದಾನವೇ ಇಲ್ಲ: ಅಂಚಿಪಾಳ್ಯ ಗ್ರಾಮದ ಶಾಲೆಯಲ್ಲಿ ಆಟದ ಮೈದಾನ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಆಟವಾಡುವಂತಾಗಿದೆ. ವಾಹನಗಳು ಅತಿ ವೇಗವಾಗಿ ಬಂದು ಯಾವುದಾದರೂ ಅನಾಹುತ ಸಂಭವಿಸಿದರೆ ಇದಕ್ಕೆ ಯಾರು ಹೊಣೆ? ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನೆ ಮಾಡಿದ್ದಾರೆ.
ಶೌಚಾಲಯದ ಕೊರತೆ: ಅಂಚಿಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಮಲಮೂತ್ರ ವಿಸರ್ಜನೆಗೆ ಬಯಲು ಪ್ರದೇಶವನ್ನೇ ಆಶ್ರಯಿಸಿದ್ದಾರೆ. ವಿದ್ಯಾರ್ಥಿನಿಯರ ಪಾಡಂತೂ ಹೇಳತೀರದಾಗಿದೆ. ಶಾಲೆಯಲ್ಲಿ ಶೌಚಾಲಯ ಇಲ್ಲದಿರುವ ಬಗ್ಗೆ ಶಾಲೆಯ ವಿದ್ಯಾರ್ಥಿನಿ ವಿಡಿಯೋದಲ್ಲಿ ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿ ಶೌಚಾಲಯ ನಿರ್ಮಾಣ ಮಾಡಿ ಕೊಡು ವಂತೆ ಮನವಿ ಮಾಡಿರುವುದು ವಿಪರ್ಯಾಸವೆ ಸರಿ.
ಅಂಚಿಪಾಳ್ಯ ಸರ್ಕಾರಿ ಶಾಲೆಯ ಚಾವಣಿಯ ಸಿಮೆಂಟ್ ಕಿತ್ತುಬಂದು ಕಬ್ಬಿಣದ ರಾಡುಗಳು ಕಾಣಿಸುತ್ತಿವೆ. ಮಳೆಗಾಲದ ಸಂದರ್ಭದಲ್ಲಿ ಕಟ್ಟಡದ ಚಾವಣಿಯಲ್ಲಿ ಮಳೆಯ ನೀರು ಶೇಖರಣೆಯಾಗಿ ನೀರು ಶಾಲಾ ಕೊಠಡಿಯ ಒಳಗೆ ಸೋರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಶಾಲೆಯಲ್ಲಿ ನಾಲ್ಕು ಕೊಠಡಿಗಳಿದ್ದು ಇರುವ ಕೊಠಡಿಗಳೆಲ್ಲ ಶಿಥಿಲ ಗೊಂಡಿರುವುದರಿಂದ ಹಾಗೂ ಮಳೆಯ ನೀರು ಸೋರುವುದಲ್ಲದೆ, ಸೀಲಿಂಗ್ ಕಾಂಕ್ರೀಟ್ನ ಚಕ್ಕೆಗಳು ನಿರಂತರವಾಗಿ ಕೆಳಗೆ ಬೀಳುತ್ತಿವೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸಿಮೆಂಟ್ ಚಕ್ಕೆಗಳು ವಿದ್ಯಾರ್ಥಿಗಳ ಮೇಲೆ ಬಿದ್ದು ಅಪಾಯವಾದರೆ ಯಾರು ಹೊಣೆ ಎಂಬುದು ಪೋಷಕರ ಪ್ರಶ್ನೆ.
ಅಂಚಿಪಾಳ್ಯ ಶಾಲೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಯಾವುದೇ ಬೆಂಚ್ ವ್ಯವಸ್ಥೆ ಇಲ್ಲದೆ ಇರುವುದರಿಂದ ನೆಲದ ಮೇಲೆ ಕುಳಿತು ಪಾಠ ಕೇಳಬೇಕು. ಮಳೆಗಾಲದ ಸಂದರ್ಭದಲ್ಲಿ ಮಳೆಯ ನೀರು ಕೆಳಗೆ ಬೀಳುತ್ತಿದ್ದು ಮಳೆಯ ನೀರಿನಲ್ಲಿಯೇ ಕುಳಿತುಕೊಂಡು ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ದಾನಿಗಳು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಮಾಡಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.
” ಶಾಲೆಯಲ್ಲಿ ಅಂಗವಿಕಲ ಮಕ್ಕಳು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಮೂರು ಶೌಚಾಲಯಗಳಿವೆ. ಆಟದ ಮೈದಾನ ಇಲ್ಲದಿರುವ ಬಗ್ಗೆ ಹಾಗೂ ಮಳೆಯ ನೀರು ಸೋರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.”
-ಆರೋಗ್ಯಮ್ಮಾಳ್, ಪ್ರಭಾರ ಮುಖ್ಯಶಿಕ್ಷಕಿ,
” ಅಂಚಿಪಾಳ್ಯ ಶಾಲೆಯಲ್ಲಿ ಒಂದನೇ ತರಗತಿಯಿಂದ ೫ನೇ ತರಗತಿಯವರೆಗೆ ೪೧ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ ೨ ಕೊಠಡಿಗಳು ಮಾತ್ರ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಮಳೆಯ ನೀರು ಸೋರುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನಾದರೂ ನಮ್ಮ ಮಕ್ಕಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು.
ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷರು, ಅಂಚಿಪಾಳ್ಯ
” ಅಂಚಿಪಾಳ್ಯ ಗ್ರಾಮದ ಶಾಲೆಗೆ ಮೂಲಸೌಲಭ್ಯ ಕಲ್ಪಿಸಿಕೊಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಆಟದ ಮೈದಾನ, ಕೊಠಡಿ ದುರಸ್ತಿ ಕಾಮಗಾರಿ ಆಗದೆ ಇರುವುದರಿಂದ ಮಾಧ್ಯಮದವರ ಮೊರೆ ಹೋಗಿದ್ದೇವೆ.”
-ಮೇಘಲ, ಪೋಷಕರು





