ಮಂಜು ಕೋಟೆ
ಕೋಟೆ: ರಾಜೇಂದ್ರ, ಸಿ.ವಿ.ನಾಗರಾಜು, ಯೋಗಾನರಸಿಂಹೇಗೌಡ, ಗುಂಡತ್ತೂರು ಪ್ರಕಾಶ್ ಪ್ರಬಲ ಆಕಾಂಕ್ಷಿಗಳು
ಎಚ್.ಡಿ.ಕೋಟೆ: ಜಾ.ದಳ ತಾಲ್ಲೂಕು ಅಧ್ಯಕ್ಷರನ್ನು ನೇಮಕ ಮಾಡಲು ಪಕ್ಷದ ವರಿಷ್ಠರು ಒಲವು ತೋರಿಸಿರುವುದರಿಂದ ಅನೇಕ ಮುಖಂಡರಲ್ಲಿ ಪೈಪೋಟಿ ಎದುರಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾ.ದಳ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ಕಾರ್ಯಕರ್ತರು, ಮುಖಂಡರಲ್ಲಿ ಆತಂಕ ಎದುರಾಗಿತ್ತು. ಇತ್ತೀಚೆಗೆ ಜಾ.ದಳಕ್ಕೆ ಸೇರ್ಪಡೆಗೊಂಡ ಕೆ.ಎಂ. ಕೃಷ್ಣನಾಯಕ ಮತ್ತು ಕೆಲ ಮುಖಂಡರು ಪಕ್ಷದ ಸಂಘಟನೆಯ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಉತ್ಸಾಹ ತುಂಬುತ್ತಿದ್ದಾರೆ. ಇದರ ಬೆನ್ನಲ್ಲೇ ಶಾಸಕರಾದ ಜಿ.ಡಿ.ಹರೀಶ್‌ಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ಜಿಲ್ಲಾಧ್ಯಕ್ಷರಾದ ಅಶ್ವಿನ್ ಕುಮಾರ್, ತಾಲ್ಲೂಕು ಜಾ.ದಳ ಉಸ್ತುವಾರಿ ಕೆ.ಎಂ.ಕೃಷ್ಣನಾಯಕ ಅವರು ತಾಲ್ಲೂಕಿನ ಜಾ.ದಳ ಪಕ್ಷದ ನೂತನ ಅಧ್ಯಕ್ಷರ ನೇಮಕ ಮತ್ತು ಇದೇ ತಿಂಗಳಿನಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿರುವುದರಿಂದ ಪಕ್ಷದಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ.
ಈಗ ಜಾ.ದಳ ತಾಲ್ಲೂಕು ಅಧ್ಯಕ್ಷರಾಗಿರುವ ರಾಜೇಂದ್ರ, ಮಾಜಿ ಅಧ್ಯಕ್ಷರಾದ ಸಿ.ವಿ.ನಾಗರಾಜು, ಟಿಎಪಿಸಿಎಂಎಸ್ ನಿರ್ದೇಶಕರಾದ ಯೋಗಾನರಸಿಂಹೇಗೌಡ, ಅಂತರಸಂತೆ ವಿಎಸ್‌ಎಸ್‌ಎನ್ ನಿರ್ದೇಶಕ ಗುಂಡತ್ತೂರು ಪ್ರಕಾಶ್ ಅವರು ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಅನೇಕ ವರ್ಷಗಳಿಂದ ತಾಲ್ಲೂಕು ಅಧ್ಯಕ್ಷರ ನೇಮಕದಲ್ಲಿ ವರಿಷ್ಠರ ನಡೆಯಿಂದ ಗೊಂದಲ, ಪೈಪೋಟಿ, ಕುತೂ ಹಲ ಕಂಡುಬರುತ್ತಿತ್ತು. ಈ ಬಾರಿಯ ಅಧ್ಯಕ್ಷರ ಆಯ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ನಾಲ್ವರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲಪೈಪೋಟಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಸರುಗಳು ಚಾಲನೆಗೆ ಬರಲಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಪಕ್ಷದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪಡೆದಿರುವ ಕೆ.ಎಂ.ಕೃಷ್ಣನಾಯಕ ಅವರ ನಿರ್ಧಾರವೇ ಅಂತಿಮವಾಗಲಿದೆ. ಯಾರೇ ಅಧ್ಯಕ್ಷರಾ ದರೂ ಮತ್ತು ಪಕ್ಷದ ಉಸ್ತುವಾರಿ ಪಡೆದರೂ ತಾಲ್ಲೂಕಿನಲ್ಲಿ ಸಕ್ರಿಯವಾಗಿ ಪಕ್ಷದ ಸಂಘಟನೆ ಜತೆಗೆ ತಾಲ್ಲೂಕಿನ ಜನರ ಸಮಸ್ಯೆಗಳು, ನಡೆಯುತ್ತಿರುವ ಅವ್ಯವಹಾರಗಳಿಗೆ ಕಡಿವಾಣ ಹಾಕುವುದು, ಜನಸಾಮಾನ್ಯರ ಕಷ್ಟ ಸುಖಗಳಲ್ಲಿ ಭಾಗವಹಿಸಿದಾಗ ಮಾತ್ರ ಪಕ್ಷಕ್ಕೆ ಉಳಿಗಾಲ ಎಂಬ ಅಭಿಪ್ರಾಯ ನಿಷ್ಠಾವಂತ ಕಾರ್ಯ ಕರ್ತರು, ಮುಖಂಡರಲ್ಲಿ ವ್ಯಕ್ತವಾಗುತ್ತಿದೆ.
” ಪಕ್ಷದ ಮತ್ತಷ್ಟು ಸಂಘಟನೆಗಾಗಿ ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಅರ್ಜಿ ಕರೆಯಲಾಗಿದೆ. ಜಿಲ್ಲೆಯ ಮತ್ತು ರಾಜ್ಯದ ಪಕ್ಷದ ವರಿಷ್ಠರು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ತಾಲ್ಲೂಕಿನಲ್ಲಿ ಬೃಹತ್ ಸಮಾವೇಶ ನಡೆಸಲಿರುವುದರಿಂದ ಕಾರ್ಯಕರ್ತರು, ಮುಖಂಡರ ಜತೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ.”
-ಕೆ.ಎಂ.ಕೃಷ್ಣನಾಯಕ, ಜಾ.ದಳ ಹಿರಿಯ ಮುಖಂಡ




