Mysore
19
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಮುಂದಿನ ಶೈಕ್ಷಣಿಕ ವರ್ಷದಿಂದ ಕಾನೂನು ಕಾಲೇಜು ಆರಂಭ

ಪ್ರಾಂಶುಪಾಲರು, ಬೋಧಕರ ನೇಮಕ; ಮೊದಲ ವರ್ಷ ೬೦ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಿದ್ಧ 

ಪ್ರಸಾದ್ ಲಕ್ಕೂರು

ಚಾಮರಾಜನಗರ: ಕಳೆದ ೭ ವರ್ಷಗಳ ಹಿಂದೆ ನಗರದಲ್ಲಿ ಸ್ಥಾಪಿಸಲಾಗಿದ್ದ ಸರ್ಕಾರಿ ಕಾನೂನು ಪದವಿ ಕಾಲೇಜಿನ ತರಗತಿಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ. ನಗರದ ಸಂತೇಮರಹಳ್ಳಿ ರಸ್ತೆ ಬದಿಯಲ್ಲಿರುವ ರೇಷ್ಮೆ ಇಲಾಖೆ ಕಟ್ಟಡದಲ್ಲಿ ಕಾನೂನು ಕಾಲೇಜಿದೆ. ಹುಬ್ಬಳ್ಳಿ ಕಾನೂನು ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ಬರುವ ಈ ಕಾಲೇಜಿಗೆ ಈಗಾಗಲೇ ಪ್ರಾಂಶುಪಾಲರು, ಐವರು ಉಪನ್ಯಾಸಕರು, ಗುಮಾಸ್ತರು, ಡಿ-ದರ್ಜೆ ನೌಕರರನ್ನು ನೇಮಿಸಲಾಗಿದೆ.

ಕಾನೂನು ವಿಶ್ವವಿದ್ಯಾನಿಲಯದ ತಜ್ಞರ ತಂಡ ಇತ್ತೀಚೆಗೆ ಭೇಟಿ ನೀಡಿ ನೂತನ ಕಾಲೇಜಿನಲ್ಲಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದ್ದು, ಕಾರ್ಯಾರಂಭಕ್ಕೆ ಒಪ್ಪಿಗೆ ಸೂಚಿಸಿದೆ.

ಆದ್ದರಿಂದ ಮುಂಬರುವ ಮೇ-ಜೂನ್ ತಿಂಗಳಲ್ಲಿ ಕಾಲೇಜಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಲಿದೆ. ಸುಮಾರು ೬೦ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುವುದು. ಪ್ರವೇಶಾತಿ ನಡೆದ ಬಳಿಕ ನೇಮಕವಾಗಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯ ಶುರು ಮಾಡಲಿದ್ದಾರೆ.

೨೦೧೩ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಿದ್ದ ಸಂದರ್ಭದಲ್ಲಿ ಬೀದರ್‌ಗೆ ಕಾನೂನು ಕಾಲೇಜು ಮಂಜೂರಾಯಿತು. ಆದರೆ, ಜಾಗದ ಸಮಸ್ಯೆಯಿಂದ ಸ್ಥಾಪನೆ ಸಾಧ್ಯವಾಗಲಿಲ್ಲ. ಇದೇ ವೇಳೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಆರ್.ಧ್ರುವನಾರಾಯಣ ಮತ್ತು ಶಾಸಕರಾಗಿದ್ದ ಸಿ.ಪುಟ್ಟರಂಗ ಶೆಟ್ಟಿ ಅವರು ಅಂದಿನ ಕಾನೂನು ಸಚಿವ ಜಯಚಂದ್ರ ಅವರ ಮನವೊಲಿಸಿ ಚಾಮರಾಜನಗರಕ್ಕೆ ಸ್ಥಳಾಂತರಗೊಳಿಸಿದ್ದರು. ನಗರದ ಸಂತೇಮರಹಳ್ಳಿ ರಸ್ತೆಯ ಬದಿಯಲ್ಲಿದ್ದ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡದಲ್ಲಿದ್ದ ಕೇಂದ್ರೀಯ ವಿದ್ಯಾಲಯ ತನ್ನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಾಗ ಅದೇ ಕಟ್ಟಡದಲ್ಲಿ ಕಾನೂನು ಕಾಲೇಜು ಆರಂಭಿಸುವ ಪ್ರಕ್ರಿಯೆ ಆರಂಭಿಸಿದ್ದರು.

ಆ ವೇಳೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡು ಬಿಜೆಪಿ ಸರ್ಕಾರ ಅಽಕಾರಕ್ಕೆ ಏರಿತ್ತು. ನಂತರ ಹೊಸ ಕಾನೂನು ಕಾಲೇಜು ಆರಂಭಿಸುವುದು ಬೇಡ ಎಂಬ ಸರ್ಕಾರದ ನಿರ್ಧಾರದಿಂದ ನಗರದಲ್ಲಿ ಕಾನೂನು ಕಾಲೇಜು ತರಗತಿಗಳ ಆರಂಭಕ್ಕೆ ತೊಡಕಾಯಿತು.

ಬಳಿಕ ಮಾಜಿ ಸಂಸದರಾಗಿದ್ದ ಧ್ರುವನಾರಾಯಣ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಜೊತೆಯಾಗಿ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಮೂಲಕ ಅಂದಿನ ಕಾನೂನು ಸಚಿವ ಮಾಧುಸ್ವಾಮಿ ಅವರಿಗೆ ಕಾಲೇಜನ್ನು ಪ್ರಾರಂಭಿಸುವ ಕುರಿತು ಮನವರಿಕೆ ಮಾಡಿದ್ದರು.

ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಕಾನೂನು ಕಾಲೇಜು ಆರಂಭಕ್ಕೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಕ್ರಮ ವಹಿಸಿದ್ದಾರೆ. ಕಾಲೇಜಿಗೆ ಅಗತ್ಯವಾದ ಮೂಲ ಸೌಕರ್ಯವನ್ನು ಕಲ್ಪಿಸಲು, ನೌಕರರಿಗೆ ವೇತನ ನೀಡಲು ೧.೫ ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ.

” ಮುಂದಿನ ಶೈಕ್ಷಣಿಕ ವರ್ಷದಿಂದ ನಗರದಲ್ಲಿ ಕಾನೂನು ಕಾಲೇಜಿನ ತರಗತಿಗಳು ಆರಂಭವಾಗಲಿವೆ. ಬೋಧಕರ, ಬೋಧಕೇತರರ ನೇಮಕಾತಿ ಆಗಿದೆ. ೬೦ ವಿದ್ಯಾರ್ಥಿಗಳನ್ನು ದಾಖಲು ಮಾಡಲಾಗುವುದು.”

-ಲಕ್ಷಿ ಬಾಯಿ, ಪ್ರಾಂಶುಪಾಲರು, ಕಾನೂನು ಕಾಲೇಜು.

” ಕಾನೂನು ಕಾಲೇಜು ಆರಂಭಿಸಬೇಕೆಂದು ಕಾನೂನು ಸಚಿವರಲ್ಲಿ ಮನವಿ ಮಾಡಿದ್ದೆ. ಸರ್ಕಾರ ೧.೫ ಕೋಟಿ ರೂ. ನೀಡಿದೆ. ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾನಿಲಯದ ತಜ್ಞರ ತಂಡವು ಭೇಟಿ ನೀಡಿ ಪರಿಶೀಲಿಸಿ ಒಪ್ಪಿಗೆ ಸೂಚಿಸಿದೆ.”

-ಸಿ.ಪುಟ್ಟರಂಗಶೆಟ್ಟಿ, ಶಾಸಕರು.

Tags:
error: Content is protected !!