ಶ್ರೀಧರ ಆರ್.ಭಟ್
ಮಾಹಿತಿ ಹಕ್ಕು ಕಾಯ್ದೆಯಡಿಯೂ ವಿವರ ನೀಡದ ಅಧಿಕಾರಿಗಳು; ಬೆಳೆದ ಅನುಮಾನದ ಹುತ್ತ
ಚಿತ್ರನಗರಿಗೆ ಭೂಮಿ ನೀಡಿದವರ ಬದಲು ಪರರಿಗೆ ಪರಿಹಾರ ನೀಡಲಾಗಿದೆ ಎಂಬ ಆರೋಪ
ನಂಜನಗೂಡು: ರಾಜ್ಯ ಸರ್ಕಾರ ತಾಲ್ಲೂಕಿನ ಛತ್ರ ಹೋಬಳಿಯಲ್ಲಿ ನಿರ್ಮಿಸಲು ಉದ್ದೇಶಿ ಸಿರುವ ಚಿತ್ರನಗರಿಗೆ ನೂರಾರು ಎಕರೆ ಭೂಮಿ ನೀಡಿದೆ. ಆ ಭೂಮಿಯನ್ನು ಈಗಾಗಲೇ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಹಸ್ತಾಂತರಿ ಸಿದ್ದು, ಇದೀಗ ಅಲ್ಲಿ ಕಾಂಪೌಂಡ್ ನಿರ್ಮಿಸಲು ಇಲಾಖೆ ಮುಂದಾಗಿದೆ. ಆದರೆ, ಈ ಕಾರ್ಯಕ್ಕೀಗ ಭೂಮಿಯ ಮೂಲ ಸಾಗುವಳಿದಾರರ ವಿರೋಧ ಎದುರಾಗಿದೆ.
ಸರ್ಕಾರ ಈ ಭೂಮಿಯ ವಾರಸುದಾರರಿಗೆ ಎಕ್ಸ್-ಗ್ರೇಷಿಯಾ ಹಣವೆಂದು ಪ್ರತಿ ಎಕರೆಗೆ ೪ ಲಕ್ಷ ರೂ. ನಿಗದಿ ಮಾಡಿ ಮೀಸಲಿಟ್ಟಿದ್ದ ೧೮ ಕೋಟಿ ರೂ.ಗಳಲ್ಲಿ ಕಂದಾಯ ಇಲಾಖೆ ಈಗಾಗಲೇ ೧೨ ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಇಮ್ಮಾವು, ಇಮ್ಮಾವು ಹುಂಡಿ, ತಾಂಡವಪುರ, ಅಡಕನಹುಂಡಿ ಗ್ರಾಮಸ್ಥರು ‘ಮೂಲ ಸಾಗುವಳಿದಾರರು ನಾವು. ಆದರೆ ಹೊರಗಿನವರು ನಕಲಿ ದಾಖಲೆ ಸೃಷ್ಟಿಸಿ ಭೂ ಪರಿಹಾರ ಪಡೆದಿದ್ದಾರೆ’ ಎಂದು ಆರೋಪಿಸುತ್ತಿದ್ದಾರೆ. ರೈತರ ಪ್ರಶ್ನೆಗಳಿಗೆ ಪಾರದರ್ಶಕವಾಗಿ ಪರಿಹಾರ ಪಡೆದ ಫಲಾನುಭವಿಗಳ ವಿವರ ನೀಡ ಬೇಕಿದ್ದ ಕಂದಾಯ ಇಲಾಖೆಯ ಅಧಿಕಾರಿಗಳ ಜಾಣ ಮೌನ ಈ ಪರಿಹಾರ ವಿತರಣೆಯಲ್ಲಿ ಹಗರಣ ನಡೆದಿರಬಹುದು ಎಂಬ ಸಂಶಯಕ್ಕೆ ಪುಷ್ಟಿ ನೀಡುತ್ತಿದೆ. ಕೋಟ್ಯಂತರ ರೂ. ಪರಿಹಾರದ ಹಿಂದೆ ಷಡ್ಯಂತ್ರದ ಸುಳಿಯಿದೆ ಎಂಬ ರೈತರ ಆರೋಪಕ್ಕೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ತಹಸಿಲ್ದಾರ್ ನೀಡಿರುವ ಉತ್ತರ ಸಾಕ್ಷಿಯಾಗು ವಂತಿದೆ.
ಪರಿಹಾರ ಪಡೆದುಕೊಂಡವರ ವಿವರ ನೀಡಿ ಎಂದು ರೈತ ಪ್ರೇಮ ರಾಜ್ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಕೇಳಿದ್ದಕ್ಕೆ ತಹಸಿಲ್ದಾರ್ ಹೆಸರಲ್ಲಿ ಬಂದ ಉತ್ತರ ಮಾಹಿತಿ ಹಕ್ಕಿನ ಸಾರ್ವಭೌಮತ್ವವನ್ನೇ ಅಣಕಿಸುವಂತಿದೆ. ಭೂ ಸ್ವಾಧೀನಕ್ಕಾಗಿ ಸರ್ಕಾರ ನೀಡುವ ಪರಿಹಾರದ ಹಣ ಸಾರ್ವಜನಿಕರಿಗೆ ಸೇರಿಲ್ಲವೆ ಎಂಬ ಪ್ರಶ್ನೆ ಎದ್ದಿದೆ.
ಇಮ್ಮಾವು ಗ್ರಾಮದ ಸರ್ವೆ ನಂ.೩೯೦ರಿಂದ ೪೩೦ ರವರೆಗಿನ ಜಮೀನುಗಳಿಗೆ ಸಂಬಂಧಿಸಿದಂತೆ ಸರ್ಕಾರ ಸ್ವಾಧೀನ ಮಾಡಿಕೊಂಡ ಭೂಮಿಗೆ ನೀಡಿದ ಪರಿಹಾರ ಎಷ್ಟು? ಪರಿಹಾರಕ್ಕಾಗಿ ಅರ್ಜಿ ನೀಡಿದವರು ಎಷ್ಟು ಮಂದಿ? ಈಗಾಗಲೇ ಪರಿಹಾರ ಪಡೆದವರೆಷ್ಟು ಮಂದಿ? ಎಂಬ ವಿವರ ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ತಹಸಿಲ್ದಾರ್ ಲಿಖಿತವಾಗಿ ನೀಡಿರುವ ಉತ್ತರ ಸರ್ಕಾರ ಮಾಹಿತಿ ಹಕ್ಕಿನ ಅಧಿನಿಯಮ ಕಾಯ್ದೆ ೮ (ಜೆ) ಪ್ರಕಾರ ಸಾರ್ವಜನಿಕ ಹಿತಾಸಕ್ತಿಗೆ ಒಳಪಡದ ಕಾರಣ ಅರ್ಜಿ ವಿಲೇವಾರಿಗೊಳಿಸಲಾಗಿದೆ ಎಂದಿರುವುದು ೧೨ ಕೋಟಿ ರೂ. ವಿಲೇವಾರಿಯ ಬಗ್ಗೆ ಸಂಶಯಗಳಿಗೆ ಪುಷ್ಟಿ ನೀಡುವಂತಿದೆ.
ಜನರು ಪಾವತಿಸಿದ ತೆರಿಗೆಯ ಹಣದಿಂದ ಮಾತ್ರ ಸರ್ಕಾರ ನಡೆಸಲು ಸಾಧ್ಯ. ಹೀಗಿರುವಾಗ ಅದೇ ಸರ್ಕಾರ ನೀಡಿದ ಈ ಪರಿಹಾರ ಸಾರ್ವಜನಿಕ ಹಿತಾಸಕ್ತಿಗೇಕೆ ಒಳಪಡುವುದಿಲ್ಲ? ಪಾರದರ್ಶಕವಾಗಿ ಪರಿಹಾರನೀಡಿದ್ದರೆ ಕಂದಾಯ ಇಲಾಖೆ ಏಕೆ ೧೮ ಕೋಟಿ ರೂ. ಪರಿಹಾರ ಪಡೆದವರ ವಿವರ ನೀಡಲು ಹಿಂಜರಿಯುತ್ತಿದೆ? ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ಬೇಕಿದೆ
” ಪರಿಹಾರ ಪಡೆದವರ ನೀಡಲು ಮಾಹಿತಿ ಹಕ್ಕು ೮(ಜೆ) ಪ್ರಕಾರ ಸಾಧ್ಯವಿಲ್ಲ. ನಿರ್ದಿಷ್ಟ ಹೆಸರುಗಳನ್ನು ಕೇಳಿದರೆ ಪರಿಶೀಲಿಸಲಾಗುವುದು.”
-ಶಿವಕುಮಾರ್ ಕ್ಯಾಸನೂರು, ತಹಸಿಲ್ದಾರ್, ನಂಜನಗೂಡು
” ೧೮ ಕೋಟಿ ರೂ.ಗಳಲ್ಲಿ ೧೨ ಕೋಟಿ ರೂ.ಗಳನ್ನು ಈಗಾಗಲೇ ಅಧಿಕಾರಿಗಳು ವಿಲೇವಾರಿ ಮಾಡಿದ್ದು, ಈ ಭೂಮಿಗೆ ಸಂಬಂಧಿಸಿಲ್ಲದ ಬೇರೆ ಬೇರೆ ತಾಲ್ಲೂಕಿನವರಿಗೂ ಪರಿಹಾರ ನೀಡಲಾಗಿದೆ. ಒಂದು ಎಕರೆ ಭೂಮಿಗೆ ೪ ಲಕ್ಷ ರೂ. ಮಾತ್ರ ಎಕ್ಸ್-ಗ್ರೇ ಷಿಯಾ ಪರಿಹಾರ ನೀಡಿದ್ದು, ೧ ಎಕರೆ ಭೂಮಿ ಎಂದು ನಮೂದಿಸಿ ಆ ಕುಟುಂಬದ ನಾಲ್ವರಿಗೆ ತಲಾ ೪ ಲಕ್ಷ ರೂ.ಗಳಂತೆ ಒಟ್ಟಾರೆ ೧೬ ಲಕ್ಷ ರೂ. ಪರಿಹಾರ ನೀಡಲಾಗಿದೆ.”
-ಹೊಸಕೋಟೆ ಬಸವರಾಜು, ವಿಭಾಗೀಯ ಕಾರ್ಯದರ್ಶಿ, ರೈತ ಸಂಘ
” ಸರ್ಕಾರ ವಿತರಿಸುವ ಯಾವುದೇ ಪರಿಹಾರ ಮಾಹಿತಿಹಕ್ಕು ಕಾಯ್ದೆ ವ್ಯಾಪ್ತಿಯಡಿ ಬರುತ್ತದೆ.”
-ಆಸಪ್ಪ ಪೂಜಾರಿ, ಉಪವಿಭಾಗಾಧಿಕಾರಿ, ಮೈಸೂರು
” ಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ಮಾಲೀಕರು ಇರುವುದು ಇಮ್ಮಾವು, ಇಮ್ಮಾವು ಹುಂಡಿ, ತಾಂಡವಪುರ, ಅಡಕನಹುಂಡಿ ಗ್ರಾಮಗಳಲ್ಲಿ. ಆದರೆ ಪರಿಹಾರ ನೀಡಿರುವುದು ಮೈಸೂರು, ತಿ.ನರಸೀಪುರ ಸೇರಿದಂತೆ ಬೇರೆ ತಾಲ್ಲೂಕಿನವರಿಗೆ. ಪರಿಹಾರ ನೀಡಿದ ವಿವರವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲು ನಿರಾಕರಿಸಲು ಇದೇ ಕಾರಣ.”
-ಪ್ರೇಮರಾಜ್, ಜಿಲ್ಲಾ ರೈತ ಸಂಘದ ಯುವ ಘಟಕದ ಅಧ್ಯಕ್ಷ





