-ಲಕ್ಷ್ಮೀಕಾಂತ್ ಕೊಮಾರಪ್ಪ
ಫೆ.1ಕ್ಕೆ ಅಗ್ನಿ ಶಾಮಕ ವಾಹನದ ಎಫ್‌ಸಿ ಲ್ಯಾಪ್ಸ್ ; ಅಗ್ನಿ ಅವಘಡ ಸಂಭವಿಸಿದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣ
ಸೋಮವಾರಪೇಟೆ: ಪಟ್ಟಣದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಠಾಣೆಯಲ್ಲಿ ಅಗ್ನಿ ಶಾಮಕ ವಾಹನ ಇಲ್ಲದಂತಾಗಿದೆ.
2025 ಫೆಬ್ರವರಿ 1ಕ್ಕೆ ಎಫ್‌ಸಿ ಲ್ಯಾಪ್ಸ್ ಆಗಿ, ಅನಾಥವಾಗಿ ಶೆಡ್‌ನಲ್ಲಿ ಗುಜರಿ ವಾಹನದಂತೆ ನಿಂತಿದೆ. ಮೀಸಲು ಅರಣ್ಯಕ್ಕೆ ಬೆಂಕಿ ಬಿದ್ದು ಅನಾಹುತವಾದರೆ ಅರಣ್ಯ ಇಲಾಖೆಯವರು ಬಾಯಿ ಬಡಿದುಕೊಂಡರೂ ೪ ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಅಗ್ನಿ ಶಾಮಕ ವಾಹನ ಬರುವುದಾದರೂ ಎಲ್ಲಿಂದ ಎಂಬ ಪ್ರಶ್ನೆ ಉದ್ಭವವಾಗಿದೆ.
ಕೊಡಗು ಗುಡ್ಡಗಾಡು ಪ್ರದೇಶ. ಅದರಲ್ಲೂ ಸೋಮವಾರಪೇಟೆ ಅತೀ ಹೆಚ್ಚು ಅರಣ್ಯ ಸಂಪತ್ತನ್ನು ಹೊಂದಿರುವ ತಾಲ್ಲೂಕಾಗಿದೆ. ಬೆಂಕಿ ಅವಘಡದಿಂದ ರಕ್ಷಿಸಿಕೊಳ್ಳಲು ಅರಣ್ಯ ಇಲಾಖೆಯೊಂದಿಗೆ ಆಗ್ನಿಶಾಮಕ ಠಾಣೆ ಜವಾಬ್ದಾರಿ ಹೊಂದಿದೆ. ಆದರೆ, ದುರದೃಷ್ಟವಶಾತ್ ಹಳೆಯ ಅಗ್ನಿ ಶಾಮಕ ವಾಹನ ಗುಜರಿ ಸೇರುವ ಹಂತಕ್ಕೆ ತಲುಪಿದೆ. ಕಾಡ್ಗಿಚ್ಚು ನಂದಿಸಲು ಬೇರೆ ತಾಲ್ಲೂಕಿನಿಂದ ಅಗ್ನಿಶಾಮಕ ವಾಹನ ಬರಬೇಕು. ಅದೇ ಸಮಯದಲ್ಲಿ ಆಯಾ ತಾಲ್ಲೂಕಿನಲ್ಲಿ ಬೆಂಕಿ ಅನಾಹುತವಾದರೆ ಏನು ಮಾಡಲೂ ಸಾಧ್ಯವಿಲ್ಲದಂತಾಗಿದೆ.
ಕುಶಾಲನಗರ, ಮಡಿಕೇರಿ, ಗೋಣಿಕೊಪ್ಪ ಅಗ್ನಿಶಾಮಕ ಠಾಣೆಗಳಲ್ಲಿ ತಲಾ ಒಂದರಂತೆ ಅಗ್ನಿಶಾಮಕ ವಾಹನಗಳು ಲಭ್ಯವಿವೆ. ಆ ವಾಹನಗಳು ಕೂಡ ತುಂಬಾ ಹಳೆಯದಾಗಿವೆ. ಬೆಂಕಿ ಅವಘಡ ಸಂಭವಿಸಿದ ಘಟನಾ ಸ್ಥಳಕ್ಕೆ ತಲುಪಿ ಕಾಡ್ಗಿಚ್ಚಿನ ಅವಶೇಷಗಳಿಗೆ ನೀರು ಹಾರಿಸಿ ಬರಬೇಕು ಎನ್ನುವಂತಾಗಿದೆ.
ಕುಶಾಲನಗರದಿಂದ ಸೋಮವಾರಪೇಟೆ ತಾಲ್ಲೂಕಿಗೆ ಅಗ್ನಿ ಶಾಮಕ ವಾಹನ ಬರಬೇಕಾದರೆ 30 ಕಿ.ಮೀ. ಹಾಗೂ ಮಡಿಕೇರಿಯಿಂದ 45 ಕಿ.ಮೀ., ಗೋಣಿಕೊಪ್ಪದಿಂದ 70 ಕಿ.ಮೀ. ಕ್ರಮಿಸಿ ಬರಬೇಕಾಗಿದೆ. ಸೋಮವಾರಪೇಟೆ ಅಗ್ನಿಶಾಮಕ ಠಾಣೆಗೆ ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳು ಸೇರಿವೆ. ಈ ಪ್ರದೇಶದಲ್ಲಿ ಏನೇ ಅಗ್ನಿ ಅನಾಹುತವಾದರೂ ಅಗ್ನಿಶಾಮಕ ಠಾಣೆಗೆ ಜನರು ಕರೆ ಮಾಡಿ ಸಹಾಯ ಕೋರುತ್ತಾರೆ.
ಅಗ್ನಿಶಾಮಕ ಠಾಣೆಯಲ್ಲಿ 24 ಹುದ್ದೆಗಳಲ್ಲಿ14 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 10 ಹುದ್ದೆಗಳು ಖಾಲಿ ಬಿದ್ದಿವೆ. ಠಾಣಾಧಿಕಾರಿ ಹುದ್ದೆ1, ಎಎಸ್‌ಐ 1, 6 ಮಂದಿ ಅಗ್ನಿಶಾಮಕ ಸಿಬ್ಬಂದಿ, 2 ಚಾಲಕರ ಹುದ್ದೆಗಳು ಖಾಲಿ ಇವೆ. ಸದ್ಯಕ್ಕೆ ೧ ಸಾವಿರ ಲೀಟರ್ ನೀರು ತುಂಬಿಸುವ ಪಿಕಪ್ ಮಾದರಿಯ ತ್ವರಿತ ರಕ್ಷಣಾ ವಾಹನದ ಮೂಲಕ ಅಗ್ನಿಶಾಮಕ ಠಾಣೆ ಕಾರ್ಯ ನಿರ್ವಹಿಸುತ್ತಿದೆ.
ಫೆಬ್ರವರಿಯಿಂದ ಮೇ ತನಕ ಬಿಸಿಲಿನ ತಾಪ ಹೆಚ್ಚಿರುತ್ತದೆ. ಅರಣ್ಯ ಪ್ರದೇಶದಲ್ಲಿ ಗಿಡಗಂಟಿಗಳು ಒಣಗಿರುತ್ತವೆ. ಕಾಡ್ಗಿಚ್ಚಿನಿಂದ ಅಪರೂಪದ ಪ್ರಾಣಿ ಪಕ್ಷಿಗಳು, ಬೆಲೆಬಾಳುವ ಮರಗಳನ್ನು ರಕ್ಷಿಸಬೇಕಾದರೆ ಸುಸಜ್ಜಿತ ಅಗ್ನಿಶಾಮಕ ಠಾಣೆಯ ಅವಶ್ಯಕತೆ ಇದೆ.
ಫೆಬ್ರವರಿಯಿಂದ ಮೇ ತನಕ ಪ್ರತಿನಿತ್ಯ ಸರಾಸರಿ 2 ರಿಂದ 3 ಕರೆಗಳು ಅಗ್ನಿಶಾಮಕ ಠಾಣೆಗೆ ಬರುತ್ತವೆ. ಜನವರಿಯಿಂದ ಇಲ್ಲಿಯವರೆಗೆ 6 ಸ್ಥಳಗಳಿಗೆ ಆಗ್ನಿಶಾಮಕ ಸಿಬ್ಬಂದಿಗಳು ತೆರಳಿ ಬೆಂಕಿ ನಂದಿಸಿದ್ದಾರೆ. 2024 ರಲ್ಲಿ ಜನವರಿಯಿಂದ ಡಿಸೆಂಬರ್ ತನಕ 28 ಬೆಂಕಿ ಅನಾಹುತ ಪ್ರಕರಣಗಳನ್ನು ನಿರ್ವಹಿಸಲಾಗಿದೆ.
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದೆ. ಅಗ್ನಿ ಅನಾಹುತ ಸಂಭವಿಸಿದ ಸ್ಥಳಗಳಿಗೆ ತೆರಳಬೇಕಾದರೆ ಹರಸಾಹಸ ಮಾಡಬೇಕು. ಅದರಲ್ಲೂ ಸುಸಜ್ಜಿತ ವಾಹನಗಳು ಇರಬೇಕು. ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಗೃಹಮಂತ್ರಿಗಳೊಂದಿಗೆ ಚರ್ಚಿಸಿ, ಜಲವಾಹನ ಖರೀದಿಗೆ ಪ್ರಯತ್ನಿಸುತ್ತೇನೆ. ಖಾಲಿ ಹುದ್ದೆಗಳ ಭರ್ತಿಗೂ ಮನವಿ ಮಾಡುತ್ತೇನೆ.
– ಡಾ.ಮಂಥರ್‌ಗೌಡ, ಶಾಸಕರು, ಮಡಿಕೇರಿ ಕ್ಷೇತ್ರ.