ಸಕಾಲದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಲಭ್ಯವಾಗದೆ ಸಮಸ್ಯೆ; ನೌಕರರ ನೇಮಕಕ್ಕೆ ರೈತರ ಆಗ್ರಹ
ವೀರನಹೊಸಹಳ್ಳಿ: ಹುಣಸೂರು ತಾಲ್ಲೂಕಿನಲ್ಲಿ ಪಶು ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹಾಗೂ ‘ಡಿ’ ದರ್ಜೆ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಸಕಾಲದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಲಭ್ಯವಾಗದೆ ಮೂಕ ಪ್ರಾಣಿಗಳ ಸಾವು ನೋವು ಸಂಭವಿಸುತ್ತಿರುವುದರಿಂದ ರೈತರು ಜಾನುವಾರು ಸಾಕಣೆಗೆ ಹಿಂದೇಟು ಹಾಕುವಂತಾಗಿದೆ.
ಕೃಷಿ ಪ್ರಧಾನವಾದ ತಾಲ್ಲೂಕಿನಲ್ಲಿ ಬೇಸಾಯ ಚಟುವಟಿಕೆ, ಹೈನುಗಾರಿಕೆ ಹಾಗೂ ಪಶು ಸಂಗೋಪನೆಗೆ ಆಧಾರಸ್ತಂಭವಾಗಬೇಕಾದ ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಕೊರತೆಯಿಂದ ನಿತ್ರಾಣಗೊಂಡಿದೆ.
ತಾಲ್ಲೂಕಿನಲ್ಲಿ ೭೨ ಸಾವಿರ ದನಗಳಿವೆ. ೨೩ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ, ಪಶು ಕೇಂದ್ರ ಸೇರಿ ಒಟ್ಟು ೨೫ ಆಸ್ಪತ್ರೆಗಳಿವೆ. ಇವುಗಳಲ್ಲಿ ೪೦ ‘ಡಿ’ ದರ್ಜೆ ನೌಕರರು, ೫ ಪಶುವೈದ್ಯಾಧಿಕಾರಿಗಳು, ೧೫ ಪಶುವೈದ್ಯ ಸಹಾಯಕರೇ ಇಲ್ಲ. ಕೆಲವು ಕಡೆ ಪಶುವೈದ್ಯರೇ ‘ಡಿ’ ದರ್ಜೆ ನೌಕರರ ಕೆಲಸವನ್ನೂ ಮಾಡುತ್ತಿದ್ದಾರೆ.
ಪಶು ಇಲಾಖೆಗೆ ‘ಡಿ’ ದರ್ಜೆ ನೌಕರರೇ ಬೆನ್ನೆಲುಬು. ಚಿಕಿತ್ಸೆಗೆ ಕರೆ ತರುವ ಹಸು, ಎತ್ತು, ಎಮ್ಮೆಗಳನ್ನು ಕೆಲವೊಮ್ಮೆ ನೆಲಕ್ಕೆ ಕೆಡವಿ ಚಿಕಿತ್ಸೆ ಕೊಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಕೆಲವು ಪುಂಡ ಜಾನುವಾರುಗಳುದಾಳಿ ಮಾಡುತ್ತವೆ. ಇಂತಹ ದನಗಳನ್ನು ನಿಯಂತ್ರಿಸಲು ಸೂಕ್ತ ತರಬೇತಿ ಹೊಂದಿದ ನೌಕರರ ಅಗತ್ಯವಿದೆ. ಜಾನುವಾರು ಗಳಿಗೆ ರೋಗ ಬಂದಾಗ ನೆಲಕ್ಕೆ ಕೆಡವಿ ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ನಮಗೆ ಆಗುತ್ತಿಲ್ಲ. ಇದರಿಂದ ದನಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಕೆಲವರ ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ ಎನ್ನುತ್ತಾರೆ ರೈತರು.
ಗ್ರಾಮೀಣ ಭಾಗದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರ ಅಭಾವದಿಂದ ಕಾಯಿಲೆ ನಿಯಂತ್ರಣ ಹಾಗೂ ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆ ಪ್ರಮಾಣ ಪತ್ರ ದೃಢೀಕರಣಕ್ಕೆ ಹಿನ್ನಡೆಯಾಗುತ್ತಿದೆ.
ಕಾಡಂಚಿನ ಕಚುವಿನಹಳ್ಳಿ, ನೇರಳಕುಪ್ಪೆ, ವೀರನಹೊಸಹಳ್ಳಿ ಸೇರಿದಂತೆ ಸುತ್ತಲಿನ ಹಾಡಿಗಳ ಜನರು ಕೃಷಿ ಜತೆಗೆ ಹೈನುಗಾರಿಕೆ ಹಾಗೂ ಕುರಿಸಾಕಾಣಿಕೆಯನ್ನೇ ನೆಚ್ಚಿಕೊಂಡಿ ದ್ದಾರೆ. ಒಂದೊಂದು ಗ್ರಾಮಗಳಲ್ಲೂ ಸಾವಿರಕ್ಕೂ ಹೆಚ್ಚು ಕುರಿಗಳಿವೆ. ಆದರೆ, ಉತ್ತಮ ಪಶು ಆಸ್ಪತ್ರೆ ಇಲ್ಲದ ಕಾರಣ ರೈತರು ಸಮಸ್ಯೆ ಎದುರಿಸುವಂತಾಗಿದೆ.
ಹುಣಸೂರು ತಾಲ್ಲೂಕಿನಲ್ಲಿನ ೨೫ಕ್ಕೂ ಅಽಕ ಪಶು ಆಸ್ಪತ್ರೆಗಳ ಪೈಕಿ ೯ ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆ ಮಾತ್ರ ಇದ್ದು ಇನ್ನು ಉಳಿದ ಕಡೆ ಖಾಲಿ ಇವೆ. ಪಶು ವೈದ್ಯಕೀಯ ಪರೀಕ್ಷಕರೇ ವೈದ್ಯರಾಗಿ ಚಿಕಿತ್ಸೆ ನೀಡುವ ಕೆಲಸ ನಿರ್ವಹಿಸುತ್ತಿದ್ದಾರೆ. ಪಟ್ಟಣದಲ್ಲಿ ಇರುವ ಪಶು ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಹುದ್ದೆಗಳು ಮಂಜೂರಾಗಿದ್ದು, ರಡು ಹುದ್ದೆಗಳೂ ಖಾಲಿಯಾಗಿವೆ. ಹೀಗಾಗಿ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಿಂದ ಬರುವ ರೈತರ ಜಾನುವಾರುಗಳ ಚಿಕಿತ್ಸೆಗೆ ಬಹಳ ಸಮಸ್ಯೆಯಾಗುತ್ತಿದೆ.
ನೌಕರರಿಲ್ಲದೆ ನಮಗೆ ಕಷ್ಟ ಪಶು ಆಸ್ಪತ್ರೆಗಳಲ್ಲಿ ‘ಡಿ’ ದರ್ಜೆಯ ನೌಕರರು ಇಲ್ಲದೆ ಇರುವುದರಿಂದ ನಮಗೆ ಕಷ್ಟ ಆಗುತ್ತಿದೆ. ಆದರೂ ಅನಿವಾರ್ಯ ವಾಗಿ ಕೆಲಸ ಮಾಡಬೇಕಿದೆ. ಇದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ಹೇಳುತ್ತಾರೆ.
ಜಾನುವಾರು ಹಾಗೂ ಕುರಿಗಳ ಆರೋಗ್ಯ ರಕ್ಷಣೆಗೆ ವ್ಯವಸ್ಥಿತ ಹೊಸ ಪಶು ಆಸ್ಪತ್ರೆ ಬೇಕು. -ವೃಷಭೇಂದ್ರ, ಹಸುಗಳ ಸಾಕಣೆದಾರ, ಕಡೆಮನುಗನಹಳ್ಳಿ



