ಗಿರೀಶ್ ಹುಣಸೂರು
ಆಗ್ನೇಯ ಶ್ರೀಲಂಕಾದಲ್ಲಿ ವಾಯುಭಾರ ಕುಸಿತದಿಂದ ಬಿಸಿಗಾಳಿ
ಮಾರ್ಚ್ ತಿಂಗಳ ಕೊನೆಯಲ್ಲಿ ರಾಜ್ಯದಲ್ಲಿ ಬೇಸಿಗೆ ಮಳೆ ಸಾಧ್ಯತೆ
ಫೆಬ್ರವರಿ ತಿಂಗಳಲ್ಲೇ ಎಸಿ, ಫ್ಯಾನ್ ಇಲ್ಲದೇ ದಿನದೂಡಲಾರದ ಪರಿಸ್ಥಿತಿ
ಮೈಸೂರು: ಬೇಸಿಗೆ ಆರಂಭದಲ್ಲೇ ಹೆಚ್ಚುತ್ತಿರುವ ಬಿಸಿಲಿನ ಝಳಕ್ಕೆ ಜನರು ತತ್ತರಿಸುವಂತಾಗಿದೆ. ಪಿಂಚಣಿಗರ ಸ್ವರ್ಗ ಮೈಸೂರು, ದಕ್ಷಿಣದ ಕಾಶ್ಮೀರ ಕೊಡಗು, ಸಕ್ಕರೆ ನಾಡು ಮಂಡ್ಯ ಹಾಗೂ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಗಳ ಜನರು, ಹಗಲು ಸೂರ್ಯನ ತಾಪದ ಜೊತೆಗೆ ಬಿಸಿಗಾಳಿಯಿಂದಾಗಿ ಹೊರಗೆ ಕೆಲಸ ಮಾಡುವವರು ಪರಿತಪಿಸುವಂತಾಗಿದ್ದರೆ, ಎಸಿ, ಫ್ಯಾನ್ ಇಲ್ಲದೇ ಕಚೇರಿ ಒಳಗೂ ಕೆಲಸ ಮಾಡಲಾಗಲ್ಲ, ರಾತ್ರಿ ಕೂಡ ನೆಮ್ಮದಿಯಾಗಿ ನಿದ್ದೆ ಮಾಡಲಾರದ ಸ್ಥಿತಿ ಎದುರಿಸುವಂತಾಗಿದೆ.
ಬಂಗಾಳಕೊಲ್ಲಿಯ ಭಾಗದಿಂದ ಬೀಸುತ್ತಿರುವ ಬಿಸಿಗಾಳಿಯ ಪ್ರಭಾವದಿಂದ ಈಗಿನ ಈ ವಾತಾವರಣವು ಉಂಟಾಗಿರ ಬಹುದು, ಜೊತೆಗೆ ‘ಲಾ ನಿನಾ’ ಪ್ರಭಾವವೂ ಜೊತೆ ಯಾಗಿದೆ ಎಂದು ಹವಾ ಮಾನವತಜ್ಞರು ಹೇಳುತ್ತಾರೆ.
ಫೆಬ್ರವರಿ ತಿಂಗಳ ಹವಾ ಮಾನ ವರದಿ ಪ್ರಕಾರ ಈಗಾಗಲೇ ರಾಜ್ಯದ ಅಲ್ಲಲ್ಲಿ ಮೋಡದ ವಾತಾ ವರಣ ಉಂಟಾಗುತ್ತಿದ್ದು, ಹಗಲಿನ ಉಷ್ಣಾಂಶವೂ ಏರಿಕೆಯಾಗುತ್ತಿದೆ.
ಫೆ.೨೦ರ ನಂತರ ಆಗ್ನೇಯ ಶ್ರೀಲಂಕಾ ಸಮೀಪ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಆರಂಭವಾಗುವ ಲಕ್ಷಣಗಳಿರುವುದರಿಂದ ಈಗ ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ಗಾಳಿಯ ದಿಕ್ಕು ಬದಲಾಗುವ ಸಾಧ್ಯತೆಗಳಿವೆ. ಇದರ ಪರಿಣಾಮದಿಂದ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ರಾತ್ರಿಯ ವೇಳೆ ಸಹ ಉಷ್ಣಾಂಶ ಮತ್ತು ವಾತಾವರಣದ ತೇವಾಂಶ ಸ್ವಲ್ಪ ಮಟ್ಟಿಗೆ ಏರಿಕೆಯಾಗುವ ಸಾಧ್ಯತೆಗಳಿವೆ.
ಆದರೆ, ಒಳನಾಡು ಭಾಗಗಳಲ್ಲಿ ಮಳೆಯ ಸಾಧ್ಯತೆಗಳಿಲ್ಲದಿದ್ದರೂ ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಕಾಣಿಸುತ್ತಿದೆ. ಹೆಚ್ಚಿನ ಭಾಗಗಳಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಬಹುದು.
ಫೆ.೨೫ರಿಂದ ತಿರುವಿಕೆಯು ಶಿಥಿಲಗೊಳ್ಳುತ್ತಿದ್ದಂತೆಯೇ ರಾಜ್ಯದಲ್ಲಿ ಉಷ್ಣಾಂಶವೂ ಸ್ವಲ್ಪ ಮಟ್ಟಿಗೆ ತಗ್ಗಬಹುದು ಮತ್ತು ಬಿಸಿಲಿನ ವಾತಾವರಣ ಮುಂದುವರಿಯಬಹುದು.
‘ಲಾ ನಿನಾ’ ಪ್ರಭಾವ ಇರುವುದರಿಂದ ಮಾರ್ಚ್ ತಿಂಗಳ ಕೊನೆಯಲ್ಲಿ ರಾಜ್ಯದಲ್ಲಿ ಬೇಸಿಗೆ ಮಳೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್ ಕುಮಾರ್ ತಿಳಿಸಿದ್ದಾರೆ. ಹವಾಮಾನ ಮುನ್ಸೂಚನೆ: ಫೆ.೨೧ರ ಬೆಳಿಗ್ಗೆ ೮ ಗಂಟೆವರೆಗಿನ ಮುನ್ಸೂಚನೆ ಪ್ರಕಾರ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಗಳ ಅಲ್ಲಲ್ಲಿ ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ ಕೆಳಗಿನ ಪ್ರದೇಶಗಳಾದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಕಾರ್ಕಳ ಸುತ್ತಮುತ್ತಲಿನ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಈ ವಾತಾವರಣವು ಫೆ.೨೪ರ ತನಕ ಮುಂದುವರಿಯುವ ಲಕ್ಷಣಗಳಿದ್ದು ೨೫ರಿಂದ ಮೋಡ ಕಡಿಮೆ ಯಾಗಿ ಬಿಸಿಲಿನ ಸಾಧ್ಯತೆ ಇರಬಹುದು. ಕೊಡಗು, ಹಾಸನ, ಚಿಕ್ಕಮಗಳೂರು ಜಿಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.
ಹಾಸನದ ಸಕಲೇಶಪುರ, ಚಿಕ್ಕಮಗಳೂರಿನ ಮೂಡಿಗೆರೆ, ಬಾಳೆಹೊನ್ನೂರು, ಶೃಂಗೇರಿ, ಕುದುರೆ ಮುಖ, ಆಗುಂಬೆ ಸುತ್ತಮುತ್ತಲಿನ ಭಾಗಗಳಲ್ಲಿ ಸಂಜೆ, ರಾತ್ರಿ ತುಂತುರು ಮಳೆಯ ಮುನ್ಸೂಚನೆ ಇದೆ. ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆ ಮೋಡ ಮಾತ್ರ ಇರಬಹುದು. ಕರಾವಳಿ ಜಿಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ -.೨೪ರ ತನಕ ತುಂತುರು ಮಳೆಯ ಸಾಧ್ಯತೆ ಇದೆ. ನಂತರ ಹೆಚ್ಚಿನ ಅವಧಿ ಬಿಸಿಲಿನ ವಾತಾವರಣ ಇರಬಹುದು. ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದು ವರಿಯುವ ಲಕ್ಷಣಗಳಿದ್ದು, ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಫೆ.೧೯ರಂದು ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ ೧೩.೧ ಡಿಗ್ರಿ ಸೆಲ್ಸಿಯಸ್ ಚಾಮರಾಜನಗರ ಸ್ವಯಂ ಚಾಲಿತ ಹವಾಮಾನ ಕೇಂದ್ರದಲ್ಲಿ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಹೆಚ್ಚು ಉಷ್ಣಾಂಶ ೩೭.೪ ಡಿಗ್ರಿ ಸೆಲ್ಸಿಯಸ್ ಕಲ್ಬುರ್ಗಿಯಲ್ಲಿ ದಾಖಲಾಗಿದೆ.
” ರಾಜ್ಯಾದ್ಯಂತ ಮುಂದಿನ ಐದು ದಿನಗಳವರೆಗೆ ಗರಿಷ್ಟ ಮತ್ತು ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರಲ್ಲ. ಗರಿಷ್ಟ ತಾಪಮಾನವು ಉತ್ತರ ಒಳನಾಡಿನಲ್ಲಿ ೨-೪ ಡಿಗ್ರಿ ಸೆಲ್ಸಿಯಸ್, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ೨-೩ ಡಿಗ್ರಿ ಸೆಲ್ಸಿಯಸ್ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ.”
-ಡಾ.ಎನ್.ಪುವಿಯರಸನ್, ಮುಖ್ಯಸ್ಥರು, ಬೆಂಗಳೂರು ಹವಾಮಾನ ಕೇಂದ್ರ
” ಈಗಾಗಲೇ ರಾಜ್ಯದ ಅಲ್ಲಲ್ಲಿ ಮೋಡದ ವಾತಾವರಣ ಉಂಟಾಗುತ್ತಿದ್ದು, ಹಗಲಿನ ಉಷ್ಣಾಂಶವೂ ಏರಿಕೆಯಾಗುತ್ತಿದೆ. ಫೆ.೨೦ರ ನಂತರ ಆಗ್ನೇಯ ಶ್ರೀಲಂಕಾ ಸಮೀಪ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಆರಂಭವಾಗುವ ಲಕ್ಷಣಗಳಿರುವುದರಿಂದ ಈಗ ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ಗಾಳಿಯ ದಿಕ್ಕು ಬದಲಾಗುವ ಸಾಧ್ಯತೆಗಳಿವೆ.”
-ಡಾ.ಜಿ.ವಿ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ
” ಈಗಾಗಲೇ ರಾಜ್ಯದ ಅಲ್ಲಲ್ಲಿ ಮೋಡದ ವಾತಾವರಣ ಉಂಟಾಗುತ್ತಿದ್ದು, ಹಗಲಿನ ಉಷ್ಣಾಂಶವೂ ಏರಿಕೆಯಾಗುತ್ತಿದೆ. ಫೆ.೨೦ರ ನಂತರ ಆಗ್ನೇಯ ಶ್ರೀಲಂಕಾ ಸಮೀಪ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಆರಂಭವಾಗುವ ಲಕ್ಷಣಗಳಿರುವುದರಿಂದ ಈಗ ಬಂಗಾಳಕೊಲ್ಲಿಯಲ್ಲಿ ಬೀಸುತ್ತಿರುವ ಗಾಳಿಯ ದಿಕ್ಕು ಬದಲಾಗುವ ಸಾಧ್ಯತೆಗಳಿವೆ.”
-ಡಾ.ಜಿ.ವಿ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ





