ಗಿರೀಶ್ ಹುಣಸೂರು
ಜ್ವರ, ಶೀತ, ಕೆಮ್ಮು ಕಾಯಿಲೆಗಳ ಭೀತಿ; ಆಸ್ಪತ್ರೆಗಳಿಗೆ ಎಡತಾಕುವ ಪರಿಸ್ಥಿತಿ
ಮೈಸೂರು: ರಾಜ್ಯದಲ್ಲಿ ತಾಪಮಾನ ಕುಸಿತದಿಂದಾಗಿ ಚಳಿಯ ತೀವ್ರತೆ ಹೆಚ್ಚುತ್ತಿದ್ದು, ಹಗಲಲ್ಲೂ ಕನಿಷ್ಠ ತಾಪ ಮಾನ ಮತ್ತು ಶೀತಗಾಳಿ ಬೀಸುವಿಕೆಯಿಂದಾಗಿ ಉಂಟಾಗಿರುವ ಶೀತ ಮಾರುತ ವಾತಾವರಣದಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಜ್ವರ, ಕೆಮ್ಮು, ಶೀತ ಮುಂತಾದ ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ. ಹೀಗಾಗಿ ಜನ ಆಸ್ಪತ್ರೆಗಳಿಗೆ ಎಡತಾಕುವಂತಾಗಿದೆ.
ಏನಿದು ಲಾ-ನಿನಾ?: ಈ ಋತುಮಾನದ ಚಳಿಗಾಲದಲ್ಲಿ ಶುಭ್ರ ಆಕಾಶ, ಒಣಗಾಳಿ ಮತ್ತು ಪೆಸಿಫಿಕ್ ಮಹಾಸಾಗರದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಸಮುದ್ರ ಮೇಲ್ಮೈ ತಾಪಮಾನದಿಂದ ನಿರೂಪಿಸಲ್ಪಟ್ಟ ಹವಾಮಾನ ವಿದ್ಯಮಾನವಾದ ಲಾ-ನಿನಾ ಪ್ರಭಾವದ ಸಂಯೋಜನೆಯಿಂದಾಗಿ ಶೀತ ಪರಿಸ್ಥಿತಿಗಳು ಉಂಟಾಗುತ್ತವೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.
ಲಾ ನಿನಾ ವಿಶ್ವಾದ್ಯಂತ ವಾತಾವರಣದ ಪರಿಚಲನೆ ಮಾದರಿಗಳನ್ನು ಬದಲಾಯಿಸುತ್ತದೆ. ಉತ್ತರ ಪ್ರದೇಶಗಳಿಂದ ತಂಪಾದ ಗಾಳಿಯ ದ್ರವ್ಯರಾಶಿಗಳು ದಕ್ಷಿಣಕ್ಕೆ ನುಸುಳಲು ಅನುವು ಮಾಡಿಕೊಡುತ್ತದೆ. ಇದು ದಕ್ಷಿಣ ರಾಜ್ಯಗಳಲ್ಲಿ ರಾತ್ರಿಯ ತಾಪಮಾನದಲ್ಲಿನ ಕುಸಿತವನ್ನು ತೀವ್ರಗೊಳಿಸುತ್ತದೆ. ಇದರ ಪರಿಣಾಮ ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೆಚ್ಚಿನ ಶೀತ ವಾತಾವರಣದ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯ ನೈಋತ್ಯ ಮತ್ತು ಶ್ರೀಲಂಕಾ ಕರಾವಳಿಯ ಪೂರ್ವ ಸಮಭಾಜಕ ಹಿಂದೂ ಮಹಾಸಾಗರದ ಪಕ್ಕದ ಪ್ರದೇಶಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ ೫.೮ ಕಿ.ಮೀ. ಎತ್ತರದಲ್ಲಿ ಚಂಡಮಾರುತದ ಪ್ರಸರಣವಿದೆ. ಹೀಗಾಗಿ ರಾಜ್ಯದ ಕೆಳ ಉಷ್ಣ ವಲಯದ ಮಟ್ಟದಲ್ಲಿ ಪೂರ್ವದಿಕ್ಕಿನ ಗಾಳಿ ಬೀಸುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಬೇಸಿಗೆ ಬಿಸಿಲಿನಿಂದ ವಾತಾರಣದಲ್ಲಿ ಹೊರಹೊಮ್ಮುತ್ತಿರುವ ದೂಳಿನಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು:
* ಶೀತ ತರಂಗಕ್ಕೆ ಒಡ್ಡಿಕೊಂಡಾಗ, ದೇಹದ ಭಾಗಗಳಲ್ಲಿ ಮರಗಟ್ಟುವಿಕೆ, ಬಿಳಿ ಅಥವಾ ಹಳದಿ ಬೆರಳುಗಳು ಮತ್ತು ಕಾಲ್ಬೆರಳುಗಳು, ಕಿವಿ ಹಾಲೆಗಳು ಮತ್ತು ಮೂಗಿನ ಮೇಲ್ಭಾಗದಂತಹ ಶೀತ ಪೀಡಿತ ಲಕ್ಷಣಗಳ ಮೇಲೆ ನಿಗಾವಿರಿಸಬೇಕು
* ಶೀತ ಅಲೆಯ ಅತಿಯಾದ ಪ್ರಭಾವದಿಂದಾಗಿ ಚರ್ಮವು ಹಳದಿ, ಗಟ್ಟಿಯಾಗಿ ಮತ್ತು ಮರಗಟುವಿಕೆಗೆ ಒಳಗಾಗಬಹುದು ಮತ್ತು ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಇದು ಗ್ಯಾಗ್ರೀನ್ ಎಂದೂ ಕರೆಯಲ್ಪಡುವ ಗಂಭೀರ ಸ್ಥಿತಿಯಾಗಿದೆ. ಇದನ್ನು ಬದಲಾಯಿಸಲಾಗದು. ಆದ್ದರಿಂದ, ಶೀತ ಅಲೆಯ ಮೊದಲ ಲಕ್ಷಣದಲ್ಲಿ ವೈದ್ಯರನ್ನು ಸಂಪರ್ಕಿಸಿ ಮತ್ತು ಅಲ್ಲಿಯವರೆಗೆ ದೇಹದ ಭಾಗಗಳನ್ನು ಬೆಚ್ಚಗಾಗಿಸಲು ಪ್ರಯತ್ನಿಸಬೇಕು
* ಶೀತ ಅಲೆಯ ಪ್ರಭಾವದಿಂದಾಗಿ ಲಘು ಉಷ್ಣತೆ ಉಂಟಾಗಬಹುದು. ದೇಹದಲ್ಲಿನ ಶಾಖದ ನಷ್ಟದಿಂದಾಗಿ ನಡುಕ, ಮಾತನಾಡಲು ತೊಂದರೆ, ನಿದ್ರಾಹೀನತೆ, ಸ್ನಾಯುಗಳಲ್ಲಿ ಬಿಗಿತ, ಉಸಿರಾಟದ ತೊಂದರೆ, ಪ್ರಜ್ಞಾಹೀನ ಸ್ಥಿತಿ ಉಂಟಾಗಬಹುದು. ಇದು ತುಂಬಾ ಗಂಭೀರ ಸ್ಥಿತಿಯಾಗಿದ್ದು, ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಬೇಕು
* ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ನಿಮ್ಮ ತಲೆ, ಕುತ್ತಿಗೆ, ಬೆರಳುಗಳು ಮತ್ತು ಕಾಲ್ಬೆರಳುಗಳನ್ನು ಸರಿಯಾಗಿ ಮುಚ್ಚಿಕೊಳ್ಳಿ ಮತ್ತು ಕೈ ವಸುಗಳು ಕ್ಯಾಪ್, ಮಪ್ಲರ್ ಮತ್ತು ನೀರು ನಿರೋಧಕ ಬೂಟುಗಳಂತಹ ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ಧರಿಸಿ, ಶೀತ ಅಲೆಯ ಸಮಯದಲ್ಲಿ ಸಾಧ್ಯವಾದಷ್ಟು ಒಳಾಂಗಣದಲ್ಲಿಯೇ ಇರಿ ಮತ್ತು ತೀರಾ ಅಗತ್ಯವಿದ್ದರೆ ಮಾತ್ರ ಹೊರಗೆ ಪ್ರಯಾಣಿಸಲು ಪ್ರಯತ್ನಿಸಬೇಕು
* ಈ ಸಮಯದಲ್ಲಿ ಜ್ವರ, ಶೀತ, ಕೆಮ್ಮು ಮುಂತಾದ ವಿವಿಧ ರೀತಿಯ ಕಾಯಿಲೆಗಳ ಸಾಧ್ಯತೆ ಹೆಚ್ಚಾಗುತ್ತದೆ. ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.
” ಡಿ.೧೭ರವರೆಗೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡಿನ ಜಿಲ್ಲೆಗಳು ಕನಿಷ್ಠ ತಾಪಮಾನವನ್ನು ಅನುಭವಿಸುವ ಸಾಧ್ಯತೆ ಇದೆ. ಅಂದರೆ ಸಾಮಾನ್ಯಕ್ಕಿಂತ ೪ ಡಿಗ್ರಿ ಸೆಲ್ಸಿಯಸ್‌ನಿಂದ ೬ ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ. ಈ ಅವಽಯಲ್ಲಿ ಈ ಪ್ರದೇಶದ ಕೆಲವು ಸ್ಥಳಗಳಲ್ಲಿ ತೀವ್ರ ಶೀತ ಅಲೆಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು.”
-ಡಾ.ಎನ್.ಪುವಿಯರಸನ್, ಮುಖ್ಯಸ್ಥರು, ಹವಾಮಾನ ಕೇಂದ್ರ, ಬೆಂಗಳೂರು
” ಲಾ-ನಿನಾ ಪ್ರಭಾವದ ಸಂಯೋಜನೆಯಿಂದಾಗಿ ಶೀತ ಪರಿಸ್ಥಿತಿಗಳು ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಮುಂದಿನ ಐದು ದಿನಗಳವರೆಗೆ ರಾತ್ರಿಯ ತಾಪಮಾನ ೧೧ರಿಂದ ೧೨ ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ಈ ಚಳಿ ಪ್ರವೃತ್ತಿ ಜನವರಿ ಮತ್ತು ಫೆಬ್ರವರಿಯಲ್ಲಿಯೂ ಮುಂದುವರಿಯುವ ಸಾಧ್ಯತೆಯಿದೆ.”
-ಡಾ.ಜಿ.ವಿ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ
” ನಾಗನಹಳ್ಳಿ ಚಳಿಗೆ ಮುಖ್ಯವಾಗಿ ಹೃದ್ರೋಗಿಗಳು ಮತ್ತು ಮಧುಮೇಹಿಗಳು ಬಹಳ ಎಚ್ಚರಿಕೆ ವಹಿಸಬೇಕು. ಚಳಿಗಾಲದಲ್ಲಿ ರಕ್ತ ಬಹಳ ಬೇಗ ಹೆಪ್ಪುಗಟ್ಟುವುದರಿಂದ ಪಾರ್ಶ್ವವಾಯು ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕುಡಿಯಲು ಬಿಸಿ ನೀರು ಬಳಸಬೇಕು, ಬೆಳಗಿನ ಮತ್ತು ಸಂಜೆಯ ವಾಕಿಂಗ್ ನಿಯಂತ್ರಿಸಿ, ಉಷ್ಣತೆಯನ್ನು ಕಾಪಾಡಿಕೊಳ್ಳಬೇಕು.”
-ಡಾ.ಮಾದೇಶ್ ಮಂಜುನಾಥ್, ವೈದ್ಯರು





