ಕೆ.ಎಂ.ಅನುಚೇತನ್
ರಸ್ತೆ ಒಳಚರಂಡಿ ಸಮಸ್ಯೆ, ಮನೆ ಮುಂದೆ ನಿಂತ ಕೊಳಚೆ
ಸ್ಥಳೀಯರ ಪರದಾಟ
ಮಳೆ ಬಂದರೆ ರಸ್ತೆ ಮೇಲೆ ಹರಿಯುವ ಕೊಳಚೆ ನೀರು
ನಗರಪಾಲಿಕೆ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ
ಮೈಸೂರು: ಆ ರಸ್ತೆಯಲ್ಲಿ ಒಳಚರಂಡಿಯ ದುರ್ನಾತ ಜನರನ್ನು ಕಂಗೆಡಿಸಿದೆ… ಅಲ್ಲಿ ಓಡಾಡುವವರು ಮೂಗುಮುಚ್ಚಿಕೊಳ್ಳಲೇಬೇಕು… ಅಲ್ಲದೆ, ಮಕ್ಕಳು ಆಯತಪ್ಪಿ ಚರಂಡಿಗೆ ಬಿದ್ದರೆ ಊಹಿಸಲಾಗದ ಅನಾಹುತ ನಡೆಯುವ ಆತಂಕವೂ ಎದುರಾಗಿದೆ. ಇಷ್ಟೆಲ್ಲ ಅವ್ಯವಸ್ಥೆಗೆ ಕಾರಣವೇನೆಂದರೆ ಆ ಒಳಚರಂಡಿಯಲ್ಲಿ ಮುಂದೆ ಹರಿದು ಹೋಗುವುದಕ್ಕೆ ದಾರಿ ಇಲ್ಲದೆ, ಸ್ಥಗಿತಗೊಂಡಿರುವ ಕೊಳಚೆ ನೀರು.
ನಗರ ಪಾಲಿಕೆಯ ವಾರ್ಡ್ ನಂ.೩೫ರ ವ್ಯಾಪ್ತಿಯ ಕ್ಯಾತಮಾರನ ಹಳ್ಳಿ ೪ನೇ ಹಂತದ ಕೆ.ಎಸ್.ಅಶ್ವಥ್ ರಸ್ತೆಯ೨ನೇ ಅಡ್ಡರಸ್ತೆ ಬದಿಯಲ್ಲಿ ಒಳಚರಂಡಿಯ ಕೊಳಚೆ ನೀರು ಮುಂದೆ ಹರಿಯಲಾಗದೆ ಸ್ಥಗಿತಗೊಂಡಿದೆ. ಸುಮಾರು ೩೦ ವರ್ಷಗಳಿಗೂ ಹಿಂದೆ ಕಲ್ಲಿನ ಚಪ್ಪಡಿಗಳನ್ನು ಅಳವಡಿಸಿ ಈ ಒಳಚರಂಡಿ ನಿರ್ಮಿಸಲಾ ಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸಮರ್ಪಕವಾದ ಒಳಚರಂಡಿ ಕಾಮಗಾರಿಗಳು ನಡೆದಿಲ್ಲ ಎನ್ನುತ್ತಾರೆ ಸ್ಥಳೀಯರು.
ಈ ಒಳಚರಂಡಿಯ ಕೊಳಚೆ ನೀರು ಸರಾಗವಾಗಿ ಹರಿದುಹೋಗಲು ರಸ್ತೆಯ ಇನ್ನೊಂದು ಬದಿಯಲ್ಲಿರುವ ಉದ್ಯಾನದಲ್ಲಿರುವ ಒಳಚರಂಡಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಕೆಲ ತಿಂಗಳುಗಳಿಂದ ಉದ್ಯಾನದ ಒಳಚರಂಡಿಗೆ ಕೊಳಚೆ ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ಹಾಗಾಗಿ ಹಳೆ ಚರಂಡಿಯಲ್ಲೇ ನಿಲ್ಲುತ್ತಿದ್ದು, ದುರ್ನಾತ ಬೀರುತ್ತಿದೆ. ಈ ಒಳಚರಂಡಿ ಮಗ್ಗುಲಿನಲ್ಲೇ ಚಂದ್ರಶೇಖರ್ ಎಂಬವರ ಮನೆ ಇದೆ. ಕೊಳಚೆ ನೀರು ಹಾಗೂ ತ್ಯಾಜ್ಯ ಒಂದೆಡೆ ಶೇಖರಣೆಯಾಗಿರುವ ಕಾರಣದಿಂದ ಅವರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಒಳಚರಂಡಿ ನೀರು ಸ್ಥಗಿತಗೊಂಡಿರುವ ಸ್ಥಳದಲ್ಲಿ ಪ್ಲಾಸ್ಟಿಕ್ ಕವರ್‌ಗಳು, ನೀರಿನ ಖಾಲಿ ಬಾಟಲ್‌ಗಳು ಸಂಗ್ರಹಗೊಂಡಿದ್ದು, ದುರ್ನಾತ ಮತ್ತಷ್ಟು ಹೆಚ್ಚಾಗಿದೆ.
ಕಳೆದ ವರ್ಷ ನಗರಪಾಲಿಕೆಯಿಂದ ೨ನೇ ಅಡ್ಡರಸ್ತೆಯಲ್ಲಿಮ್ಯಾನ್ ಹೋಲ್ ಸಂಪರ್ಕ ಕಾಮಗಾರಿ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಉದ್ಯಾನದ ಒಳಚರಂಡಿಗೆ ಕಲ್ಪಿಸಿದ್ದ ಸಂಪರ್ಕವನ್ನು ಕಡಿತ ಮಾಡಿದ್ದಾರೆ. ಕಳೆದ ೬ ತಿಂಗಳಿಂದ ಈ ಸಮಸ್ಯೆ ಎದುರಾಗಿದೆ. ಕೊಳಚೆ ನೀರಿನ ಸಮಸ್ಯೆಯಿಂದ ರಸ್ತೆಯಲ್ಲಿ ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ವಿಷ ಜಂತುಗಳ ಕಾಟ: ಕಳೆದ ೬ ತಿಂಗಳುಗಳಿಂದ ಮನೆಯ ಮುಂದೆ ನೀರು ನಿಲುಗಡೆಯಾಗುತ್ತಿದ್ದು, ಕಸದ ರಾಶಿ ಮನೆಯ ಮುಂದೆ ಗುಡ್ಡೆಯಾಗುತ್ತದೆ. ಇದಲ್ಲದೇ ಕೊಳಚೆ ನೀರಿನಲ್ಲಿ ಹಾವುಗಳು ಹರಿದು ಬಂದು ಮನೆಯೊಳಗಡೆ ಹೊಕ್ಕಿರುವುದೂ ಇದೆ.
ಪಾಲಿಕೆಯ ನಿರ್ಲಕ್ಷ್ಯ ಆರೋಪ: ಈ ಸಮಸ್ಯೆ ಕುರಿತು ನಗರಪಾಲಿಕೆಗೆ ನಿರಂತರವಾಗಿ ದೂರು ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಾಲಿಕೆ ಅಧಿಕಾರಿಗಳು ದೂರವಾಣಿ ಕರೆಗೂ ಲಭ್ಯವಾಗುತ್ತಿಲ್ಲ. ಖುದ್ದಾಗಿ ಹೋಗಿ ಪಾಲಿಕೆಯಲ್ಲಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.
” ನಗರಪಾಲಿಕೆ ಅಧಿಕಾರಿಗಳು ಒಳಚರಂಡಿ ಸಂಪರ್ಕ ಸರಿಪಡಿಸದೆನಿರ್ಲಕ್ಷ್ಯ ವಹಿಸುತ್ತಿದ್ದಾರೆ. ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ ಯಾವುದೇ ರೀತಿಯ ಅನಾಹುತ ಸಂಭವಿಸಿದರೆ ಪಾಲಿಕೆಯೇ ಹೊಣೆಯಾಗಬೇಕಾಗುತ್ತದೆ.”
-ಚಂದ್ರಶೇಖರ್, ಸ್ಥಳೀಯರು
” ಈಗಷ್ಟೇ ಈ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಮಸ್ಯೆ ಬಗೆಹರಿಸಲು ಅಽಕಾರಿಗಳಿಗೆ ಸೂಚಿಸಲಾಗುವುದು. ಒಳಚರಂಡಿ ಕಾಮಗಾರಿ ನಡೆಸಿ ಸಮರ್ಪಕವಾಗಿ ಕೊಳಚೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗುವುದು.”
-ಶೇಖ್ ತನ್ವೀರ್ ಆಸಿ-, ಆಯುಕ್ತ, ನಗರಪಾಲಿಕೆ.





