Mysore
21
scattered clouds
Light
Dark

ಕೆಎಸ್‌ಆರ್‌ಟಿಸಿ ಬಸ್ಸು; ಸಮಸ್ಯೆಗಳು ಬೆಟ್ಟದಷ್ಟು

• ಸಾಲೋಮನ್

ಡಿಪೋಗಳು: ಮೈಸೂರು ಜಿಲ್ಲೆಯಲ್ಲಿ ಎರಡು ವಿಭಾಗಗಳು

1 ಮೈಸೂರು ನಗರ ವಿಭಾಗದ ಡಿಪೋಗಳು: ಕುವೆಂಪುನಗರ ಸಾತಗಳ್ಳಿ, ವಿಜಯನಗರ, ನಂಜನಗೂಡು

2 ಗ್ರಾಮಾಂತರ ವಿಭಾಗದ ಡಿಪೋಗಳು: ಗ್ರಾಮಾಂತರ ಘಟಕ-1, ಗ್ರಾಮಾಂತರ ಘಟಕ-2, ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಕೆ.ಆರ್.ನಗರ

• 45-50 ಮೈಸೂರು ವಿಭಾಗದಲ್ಲಿ 15 ವರ್ಷ ಮೇಲ್ಪಟ್ಟ ಬಸ್‌ ಗಳ ಸಂಖ್ಯೆ

• 80,000 ಕಿಮೀ ಸಂಚರಿಸಿದ ನಂತರ ಡಾಕಿಂಗ್ (ಬಸ್ ಇಂಜಿನ್ ಒಳಗೊಂಡಂತೆ ಎಲ್ಲ ಬಿಡಿ ಭಾಗಗಳ ಚಿಕಿಂಗ್ ಮತ್ತು ಆಯಿಲ್ ಸರ್ವೀಸ್, ವಾಸ್ತವವಾಗಿ 16,000 ಕಿಮೀ ಒಳಗೆ ಡಾಕಿಂಗ್ ಆಗಬೇಕು)

• 5,850 ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗಗಳಲ್ಲಿ ಒಟ್ಟಾರೆ ಸಿಬ್ಬಂದಿ

• 40 ಶೇಕಡಾವಾರು ಸಿಬ್ಬಂದಿಗಳ ಕೊರತೆ

• 12 ವರ್ಷಗಳಿಂದ ಸಿಬ್ಬಂದಿಗಳ ನೇಮಕಾತಿ ಇಲ್ಲ

• 10 ಡಿಪೋಗಳಿಗೂ ಏಕೈಕ ಮೆಕಾನಿಕಲ್ ಇಂಜಿನಿಯರ್ (ಮೈಸೂರು ನಗರ, ಗ್ರಾಮಾಂತರ ಡಿಪೋಗಳು ಸೇರಿ)

• 1:2 ಬಸ್‌ ಗಳಲ್ಲಿ ಪ್ರಯಾಣಿಕರ ದುಪ್ಪಟ್ಟು ಸಂಚಾರ

• ಶಕ್ತಿ ಯೋಜನೆಯಿಂದ ಸಂಸ್ಥೆಗೆ ಲಾಭ: ನೌಕರರಿಗಿಲ್ಲ ಅನುಕೂಲ

• ದುರಸ್ತಿಗೆ ಬಂದ ಬಸ್‌ಗಳಿಗೆ ನಕಲಿ ಸ್ಪೇರ್ ಪಾರ್ಟ್‌ಗಳ ಬಳಕೆ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮೈಸೂರು ವಿಭಾಗದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಆಗೆದಷ್ಟು ಕಷ್ಟ ಸಂಕಟಗಳು, ಹಗರಣಗಳು ಬೆಳಕಿಗೆ ಬರುತ್ತಿವೆ. ಇಲ್ಲಿನ ನೌಕರರಿಗಾಗಿ ವಿವಿಧ ಸಂಘಟನೆ ಗಳು ಹೋರಾಡುತ್ತಿದ್ದರೂ ಫಲ ಕಂಡು ಬರುತ್ತಿಲ್ಲ. ಸಾರಿಗೆ ಸಂಸ್ಥೆಯ ಪ್ರಮುಖ ಆಧಾರ ಸ್ತಂಭಗಳಾದ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ವರ್ಗದವರು ಇಕ್ಕಟ್ಟಿನಲ್ಲಿದ್ದಾರೆ. ನಿತ್ಯವೂ ಒತ್ತಡದಲ್ಲಿ, ಹೆದರಿಕೆಯಲ್ಲೇ ಕೆಲಸ ಮಾಡುವ ಪರಿಸ್ಥಿತಿಯಲ್ಲಿದ್ದಾರೆ.

ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಸ್.ಮಧುಸೂದನ ಹಾಗೂ ಇತ್ತೀಚೆಗಷ್ಟೇ ನಿವೃತ್ತರಾದ ಕೆಲವು ಚಾಲಕರು, ನಿರ್ವಾಹಕ ಹಾಗೂ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದ ವರು, ಈಗಲೂ ಸೇವೆಯಲ್ಲಿರುವವರು ಹೆಸರು ಹೇಳಲು ಇಚ್ಛಿಸದವರು ಸಂಸ್ಥೆಯಲ್ಲಿ ಇರುವ ಲೋಪದೋಷಗಳು, ಸಮಸ್ಯೆಗಳನ್ನು ‘ಆಂದೋಲನೆ ಪತ್ರಿಕೆಯ ಮುಂದೆ ಬಿಚ್ಚಿಟ್ಟರು.

ಸಂಸ್ಥೆಯಲ್ಲಿ ಬಹುತೇಕ ನೌಕರರು ಸಂಕಷ್ಟದಲ್ಲಿದ್ದಾರೆ. ನಿವೃತ್ತರಾದವರಿಗೆ ಸರಿಯಾಗಿ ಪಿಂಚಣೆ ಇಲ್ಲ. ನೌಕರಿಯಲ್ಲಿರುವವರಿಗೆ ಬಾಕಿ ಭತ್ಯೆ ಬರುತ್ತಿಲ್ಲ. ಸೇವೆಯಲ್ಲಿದಾಗಲೇ ಮೃತಪಟ್ಟವರ ಕುಟುಂಬದವರಿಗೆ ನೌಕರಿ ಕೊಡುತ್ತಿಲ್ಲ, ಸೇವೆಯಲ್ಲಿರುವವರಿಗೆ ಒಂದು ದಿನ ರಜೆ ಬೇಕಾದರೂ ಕಾಂಚಾಣ ಶಿಫಾರಸ್ಸು ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಇವೆಲ್ಲ ಮೇಲಾಧಿಕಾರಿಗಳಿಗೆ ಗೊತ್ತಿದ್ದರೂ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಎಲ್ಲರಿಗೂ ಸಮಜಾಯಿಷಿ ನೀಡುತ್ತಾ ಹೇಗೋ ಸರಿದೂಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಬಸ್‌ಗಳ ಸಾಮರ್ಥ್ಯ ಹಾಳಾಗಿದೆ: ಸಾರಿಗೆ ಕಾಯ್ದೆ ಪ್ರಕಾರ ಒಂದು ಬಸ್‌ಗೆ 15 ವರ್ಷ ತುಂಬಿದ ಮೇಲೆ ಅಥವಾ 15 ಲಕ್ಷ ಕಿ.ಮೀ. ಓಡಿದ ನಂತರ ಅದನ್ನು ಸ್ಕ್ರಾಪ್ ಎಂದು ಪರಿಗಣಿಸಲಾಗುತ್ತದೆ. ಮೈಸೂರು ವಿಭಾಗದಲ್ಲಿ ಇಂಥದ್ದು 45ರಿಂದ 50 ಬಸ್‌ಗಳು ಓಡಾಡುತ್ತಿವೆ ಎಂದು ಸಂಘಟನೆಯವರು ಹೇಳುತ್ತಾರೆ. ಇಂಥ ಬಸ್‌ಗಳನ್ನು ಮರು ನವೀಖರಣ ಮಾಡಿ ಅವುಗಳನ್ನು ಮತ್ತೆ ಗ್ರಾಮಾಂತರ ಪ್ರದೇಶಗಳಿಗೆ ಬಿಡುತ್ತಿರುವುದರಿಂದ ಅಪಘಾತಗಳಿಗೆ ಎಡೆ ಮಾಡಿ ಕೊಟ್ಟಂತಾಗಿದೆ. ನಮ್ಮಲ್ಲಿ ಉತ್ತಮ ಸಾಮರ್ಥ್ಯವಿರುವ ಬಸ್ ಸಂಖ್ಯೆ ವಿರಳವಾಗಿದೆ. ಕೆಲ ಬಸ್‌ಗಳಂತೂ ಮಳೆ ಬಂದರ ಸೋರುತ್ತವೆ ವಿಧಿಯಿಲ್ಲದೆ ಚಾಲಕರು ಮಳೆಯಲ್ಲಿ ಕೊಡೆ ಹಿಡಿದುಕೊಂಡು ಬಸ್ ಓಡಿಸುತ್ತಾರೆ.

ವಾಹನಗಳ ಡಾಕಿಂಗ್ ಆಗುತ್ತಿಲ್ಲ: ಒಂದು ಬಸ್ ಕಂಡೀಷನ್ ಆಗಿ ಇರಬೇಕಾದರೆ ಅದರ ಡಾಕಿಂಗ್ ಕೂಡ ಬಹಳ ಮುಖ್ಯ ಎಂದು ತಾಂತ್ರಿಕ ಸಿಬ್ಬಂದಿಗಳು ಹೇಳುತ್ತಾರೆ. ಒಂದು ಬಸ್ 16 ಸಾವಿರ ಕಿ. ಮೀ. ಓಡಿದರೆ ಆದರ ಡಾಕಿಂಗ್ ಆಗಬೇಕು. ಆದರೆ ಮೈಸೂರಿನ ಕೆಎಸ್‌ಆರ್‌ಟಿಸಿಯಲ್ಲಿ 80 ಸಾವಿರ ಕಿ.ಮೀ. ಓಡಿದ ನಂತರ ಡಾಕಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ವಾಹನಗಳ ಸಾಮರ್ಥ್ಯವೂ ಕುಸಿಯುತ್ತಿದೆ. ವಾಹನಗಳು ಚಲಿಸುವಾಗ ಏನೇನೋ ಶಬ್ದಗಳು ಬರುತ್ತವೆ. ವಾಹನಗಳು ಕಂಡೀಷನ್ ಇಲ್ಲದಿದ್ದರೆ ಹೀಗೆಯೇ ಆಗುವುದು ಎಂದರು. ಏನಿದು ಡಾಕಿಂಗ್ ?: ಇದು ಒಂದು ರೀತಿ ಆಯಿಲ್ ಸರ್ವಿಸ್. ಬಸ್‌ಗಳ ಆರೂ ಚಕ್ರಗಳನ್ನು ಕಳಚಿ ಬ್ರೇಕ್ ಆಯಿಲ್, ಸ್ಟೇರಿಂಗ್ ಆಯಿಲ್ ಬದಲಿಸುವುದು, ಗ್ರೀಸ್ ಹಾಕುವುದು, ಇಂಜಿನ್ ಆಯಿಲ್, ಡಿಸ್ಟಿಲ್ ವಾಟರ್ ಹಾಗೂ ಕೂಲೆಂಟ್ ಆಯಿಲ್ ಬದಲಿಸುವುದು, ವೈರಿಂಗ್ ಚೆಕ್ ಮಾಡುವುದು ಹಾಗೂ ಟಯ‌ರ್ ಗಳ ಸಾಮರ್ಥ್ಯ ಪರಿಶೀಲಿಸಿ ಹಾಳಾಗಿದ್ದರೆ ಬದಲಿಸುವುದು. ಹೀಗೆ ಇಡೀವಾಹನಫಿಟ್ ಆಗಿರುವುದನ್ನು ಖಾತರಿಪಡಿಸಿ ಸರ್ಟಿಫೈ ಮಾಡಬೇಕು, ಇದಕ್ಕೆ ಡಾಕಿಂಗ್ ಎನ್ನುತ್ತಾರೆ. ಒಂದು ಬಸ್ ದಿನಕ್ಕೆ ಒಂದು ಸಾವಿರ ಕಿಲೋ ಮೀಟರ್ ಓಡುತ್ತಿದರೆ ಎರಡು ವಾರಗಳಿಗೊಮ್ಮೆ ಅದರ ಡಾಕಿಂಗ್ ಆದರೆ ವಾಹನ ಕಂಡೀಷನ್ ನಲ್ಲಿ ಇರುತ್ತದೆ

ನಕಲಿ ಬಿಡಿ ಭಾಗಗಳ (ಸ್ಪೇರ್ ಪಾರ್ಟ್ಸ್) ಅಳವಡಿಕೆ: ಮೈಸೂರು ವಿಭಾಗದಲ್ಲಿ ಎರಡು ವರ್ಕ್ ಶಾಪ್ ಗಳಿವೆ. ನಗರ ಸಾರಿಗೆ ವಿಭಾಗ ಹಾಗೂ ಗ್ರಾಮಾಂತರ ಸಾರಿಗೆ ವಿಭಾಗದ ಬಸ್‌ಗಳು ರಿಪೇರಿಗೆ ಅಲ್ಲಿಗೇ ಬರುತ್ತವೆ.

ಒಂದು ಬಸ್‌ನ ಚಾಲಕ ತನ್ನ ಆಸ್ನಲ್ಲಿ ಏನಾದರೂ ದೋಷ ಇದ್ದರೆ, ವರ್ಕ್ ಶಾಪ್‌ ಗೆ ತಂದು ಬಿಟ್ಟು ಸಮಸ್ಯೆ ಬಗ್ಗೆ ಹೇಳಿದರೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅದನ್ನು ರಿಪೇರಿ ಮಾಡುವ ಮೊದಲು ಬೇರೆ ಚಾಲಕನಿಗೆ ಆದೇ ವಾಹನವನ್ನು ಕೊಟ್ಟು ಬೇರೆ ಮಾರ್ಗಕ್ಕೆ ಕಳುಹಿಸುತ್ತಾರೆ ಎನ್ನುವುದು ಚಾಲಕರ ಆರೋಪ.

ಒಂದು ವೇಳೆ ರಿಪೇರಿ ಮಾಡಿದರೂ ಬಳಸುವುದು ನಕಲಿ ಸ್ಪೇರ್ ಪಾರ್ಟ್ಸ್ (ಕೆಎಸ್‌ಆರ್‌ಟಿಸಿ ನೌಕರರು ಅದನ್ನು ಸರ್ದಾಜಿ: ಮಾಲ್ ಎನ್ನುತ್ತಾರೆ). ಈ ಪಾರ್ಟ್ಸ್ಗಳನ್ನು ಅಳವಡಿಸಿ ರಿಪೇರಿ ಮಾಡುವುದರಿಂದ ಆ ಕ್ಷಣಕ್ಕೆ ಸಮಸ್ಯೆ ಬಗೆಹರಿಯಬಹುದು. ಆದರೆ ಒಂದೆರಡು ದಿನಗಳಲ್ಲಿ ಬಸ್‌ಗೆ ಮತ್ತದೇ ಸಮಸ್ಯೆಯುಂಟಾಗುತ್ತದೆ. ಇದು ನಿರಂತರವಾಗಿ ನಡೆಯುತ್ತಿದೆ

12 ವರ್ಷಗಳಿಂದ ನೇಮಕಾತಿ ಆಗಿಲ್ಲ: ಯಾಕೆ ಸಮಸ್ಯೆಗಳು ಉಲ್ಬಣ ಆಗುತ್ತಲೇ ಇವೆ ಎನ್ನುವುದಾದರೆ, ಸದ್ಯಕ್ಕೆ ಮೈಸೂರಿನಲ್ಲಿ ನಗರ ಹಾಗೂ ಗ್ರಾಮಾಂತರ ವಿಭಾಗಗಳಲ್ಲಿ ಒಟ್ಟು 5,850 ಮಂದಿ ನೌಕರರಿದ್ದಾರೆ. ಸದ್ಯಕ್ಕೆ ಶೇ.40ರಷ್ಟು ಸಿಬ್ಬಂದಿಗಳ ಕೊರತೆ ಇದೆಯಂತೆ, ಕಳೆದ 12 ವರ್ಷಗಳಿಂದ ನೇಮಕಾತಿ ಆಗದ ಕಾರಣ ಎಲ್ಲರಿಗೂ ಕೆಲಸದ ಹೊರೆ ಸ್ವಲ್ಪ ಹೆಚ್ಚೇ ಆಗಿದೆ. ಕಚೇರಿಯಲ್ಲೇ ಆಗಲಿ ವರ್ಕ್ ಶಾಪ್ ನಲ್ಲಿ ಆಗಲಿಕೆಲಸಬೇಗ ಆಗುವುದಿಲ್ಲ ಎನ್ನುತ್ತಾರೆ. ಮೈಸೂರಿನಲ್ಲಿ ಆಡಳಿತಾಧಿಕಾರಿ, ವಿಭಾಗೀಯ ಯಾಂತ್ರಿಕ ಅಭಿಯಂತರ, ಕಾನೂನು ಅಧಿಕಾರಿ, ಅಂಕಿಅಂಶ ಅಧಿಕಾರಿ, ಚಾಲಕರು, ನಿರ್ವಾಹಕರು, ತಂತ್ರಜ್ಞರು, ಗುಮಾಸ್ತರು, ಕಚೇರಿ ಸಹಾಯಕರು ಹೀಗೆ ಯಾವುದೇ ವಿಭಾಗದಲ್ಲೂ ನೇಮಕಾತಿ ಆಗದ ಕೆಲಸ ಖಾಲಿ ಇದೆ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ ಎನ್ನುತ್ತಾರೆ.

ಮೈಸೂರು ಜಿಲ್ಲೆಯಲ್ಲಿರುವ ಡಿಪೋಗಳಲ್ಲಿ ಎರಡೂ ವಿಭಾಗಗಳಿದ್ದು, ಎರಡಕ್ಕೂ ಪ್ರತ್ಯೇಕ ವಿಭಾಗೀಯ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ.

ಎರಡು ವಿಭಾಗಗಳನ್ನು ಮಾಡಿದ ನಂತರ ಕೆಲವು ಸಮಸ್ಯೆಗಳು ಬಗೆಹರಿದಿವೆ: ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀನಿವಾಸ್ ಅವರು ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಮೊದಲು ಒಂದೇ ವಿಭಾಗ ಇತ್ತು ಎರಡು ವಿಭಾಗಗಳನ್ನು ಮಾಡಿದ ನಂತರ ಕೆಲವು ಸಮಸ್ಯೆಗಳು, ಒತ್ತಡಗಳು ಬಗೆಹರಿದಿವೆ. ಸದ್ಯಕ್ಕೆ ಗ್ರಾಮಾಂತರ ವಿಭಾಗದಲ್ಲಿ 754 ಬಸ್‌ಗಳಿದ್ದು, 697 ರೂಟ್(ಮಾರ್ಗ)ಗಳು ಇವೆ. ಸಾಕಷ್ಟು ಚಾಲಕರು ಇದ್ದಾರೆ. 130 ಮಂದಿ ಚಾಲಕರನ್ನು ತಾತ್ಕಾಲಿಕ ನೌಕರರನ್ನಾಗಿ ನೇಮಕ ಮಾಡಿಕೊಂಡಿದ್ದೇವೆ. ನಮ್ಮ ವಿಭಾಗದಲ್ಲಿ ಮೆಕಾನಿಕ್‌ ಗಳ ಕೊರತೆ ಇದೆ. ಈ ಬಗ್ಗೆ ಸಂಸ್ಥೆಗೆ ತಿಳಿಸಿದ್ದೇನೆ. ನೇಮಕಾತಿಯೂ ಇನ್ನೇನು ನಡೆಯಲಿದೆ. ಬೇರೆ ವಿಭಾಗಗಳಲ್ಲೂ ಸ್ವಲ್ಪ ಸಿಬ್ಬಂದಿಗಳ ಕೊರತೆ ಇದೆ. ಅದು * ಆದಷ್ಟು ಬೇಗ ಬಗೆಹರಿಯುತ್ತದೆ ಎಂದರು.

ಶಕ್ತಿ ಯೋಜನೆಯಿಂದ ಸಂಸ್ಥೆಗೆ ನಷ್ಟ ಆಗಿಲ್ಲ ಸರ್ಕಾರ ಹಣ ಕೊಡು ತಿದೆ. ಮೈಸೂರು ಗ್ರಾಮಾಂತರ ವಿಭಾಗದಲ್ಲಿ ದಿನಕ್ಕೆ 54ರಿಂದ 55 ಲಕ್ಷ ರೂ. ಸಂಗ್ರಹವಾಗುತ್ತಿದೆ. ಈ ವರ್ಷ ಮೈಸೂರಿಗೆ 70 ಹೊಸ ಬಸ್ ಗಳು ಬಂದಿವೆ. ಎಲ್ಲ ತಾಲ್ಲೂಕು ಕೇಂದ್ರಗಳಿಗೂ ಎರಡೆರಡು ಬಸ್‌ಗಳನ್ನು ಹಾಕಲಾಗಿದೆ. ಈಗ ಬಸ್ ಗಳ ಕೊರತೆ ನೀಗಿದೆ. ಇದರ ನಡುವೆ ಗ್ರಾಮಾಂತರ ವಿಭಾಗದಲ್ಲಿ 15 ವರ್ಷ ಮೀರಿದ 3 ಬಸ್ಗಳನ್ನು ಗುಜರಿಗೆ ಹಾಕಲಾಗಿದೆ. ಕೆಲವು ಬಸ್‌ ಗಳ ಬಾಡಿಯನ್ನೂ ರೀಬಿಲ್ಸ್ ಮಾಡಲಾಗಿದೆ ಎಂದು ತಿಳಿಸಿದರು.

ಇವಿ ಬಸ್‌ಗಳು: ಕೇಂದ್ರ ಸರ್ಕಾರದಿಂದ ಮೈಸೂರು ನಗರಕ್ಕೆ 100 ಎಲೆಕ್ನಿಕಲ್ ಬಸ್ಗಳನ್ನು (ಇವಿ) ಕೊಡುವ ಯೋಜನೆ ಇತ್ತು ಅದು ಇನ್ನೂ ಬಂದಿಲ್ಲ. ಇವಿ ಬಸ್ ಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆದಿದ್ದೇವೆ. ಗ್ರಾಮಾಂತರ ವಿಭಾಗದಲ್ಲಿ 14 ಎಲೆಕ್ಟ್ರಿಕ್‌ ಬಸ್‌ಗಳಿವೆ. ಈ ಎಲ್ಲಾ ಬಸ್‌ಗಳು ಬೆಂಗಳೂರು ಮಾರ್ಗವಾಗಿ ಓಡಾಡುತ್ತಿವೆ. ಈ ಬಸ್ ಗಳಲ್ಲಿರುವ ನಿರ್ವಾಹಕರು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಗಿರುತ್ತಾರೆ. ಇವಿ ಬಸ್‌ ಗಳಿಗೆ ಪ್ರತೀ ಕಿ.ಮೀ.ಗೆ 55 ರೂ. ಬಾಡಿಗೆ ನೀಡಲಾಗುತ್ತದೆ ಎಂದು ಶ್ರೀನಿವಾಸ್ ವಿವರಿಸಿದರು

ಕೋಟ್ಸ್‌))

ನಗರ ವಿಭಾಗಕೆ 66 ಹೊಸ ಬಸ್‌ಗಳು ಸೇರ್ಪೆಡೆ: ಮೈಸೂರು ನಗರ ವಿಭಾಗದ ವಿಭಾಗೀಯ ಅಧಿಕಾರಿ ವೀರೇಶ್ ಅವರು ‘ಆಂದೋಲನ’ ದೊಂದಿಗೆ ಮಾತನಾಡುತ್ತಾ ಕಳೆದ ಮೇ ತಿಂಗಳಲ್ಲಿ ಸರ್ಕಾರ 66 ಹೊಸ ಬಸ್ ಗಳನ್ನು ನೀಡಿದೆ. ಅದರಲ್ಲಿ 50 ಬಸ್ಗಳನ್ನು ನಗರ ಪ್ರದೇಶದಲ್ಲಿ (ಸಿಟಿ ಸರ್ವಿಸ್), 10 ಬಸ್ ಗಳನ್ನು ನಂಜನಗೂಡಿನಲ್ಲಿ ಹಾಗೂ 6 ಬಸ್ ಗಳನ್ನು ಗ್ರಾಮಾಂತರ ಮಾರ್ಗಗಳಲ್ಲಿ ಓಡಿಸುತ್ತಿದ್ದೇವೆ. 15 ವರ್ಷಗಳು ಮೀರುವುದಕ್ಕೆ ಮುಂಚಿತವಾಗಿ ಬಸ್‌ಗಳ ಬಾಡಿ ಹಾಳಾಗಿದ್ದರೆ ಅದನ್ನು ನಮ್ಮ ವರ್ಕ್ ಶಾಪ್ ನಲ್ಲೇ ರೀಬಿಲ್ಸ್ ಮಾಡುತ್ತೇವೆ. ಈ ವ್ಯವಸ್ಥೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ ಎಂದರು.

ನಗರ ವಿಭಾಗದಲ್ಲಿ 574 ಬಸ್ ಗಳಿದ್ದು, 517 ರೂಟ್ (ಮಾರ್ಗ)ಗಳು ಇವೆ. ಇದಕ್ಕೆ ಅಗತ್ಯ ಸಿಬ್ಬಂದಿಗಳೂ ಇದ್ದಾರೆ. ಸರ್ಕಾರದ ಆದೇಶದ ಪ್ರಕಾರ ತಾತ್ಕಾಲಿಕ ನೌಕರರಾಗಿ 174 ಮಂದಿ ಚಾಲಕರನ್ನು ತೆಗೆದುಕೊಂಡಿದ್ದೇವೆ. ಶಕ್ತಿ ಯೋಜನೆಯ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ ನಿಜ. ವಾಹನಗಳ ಸಾಮರ್ಥ್ಯ ಈಗ 169 ಹಾರ್ಸ್ ಪವರ್ (ಎಚ್.ಪಿ.) ಇದೆ. (ಹಿಂದೆ 130 ಹಾರ್ಸ್ ಪವರ್ ಇತ್ತು) ಎಂದು ವಿರೇಶ್‌ ತಿಳಿಸಿದರು.

ಈಗಾಗಲೇ ಕೆಎಸ್‌ಆ‌ರ್‌ಟಿಸಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಸ್ಥೆಯ ವಿವಿಧ ನೌಕರರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ. ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಸಂಬಂಧವಾಗಿ ಹಾಸನದಲ್ಲಿ ಸಮಾವೇಶ ನಡೆಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಮೈಸೂರಿನಲ್ಲಿ ಸಮಾವೇಶ ಹಮ್ಮಿಕೊಂಡಿ ದ್ದೇವೆ. ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಮುಷ್ಕರ ಮಾಡಲಿದ್ದೇವೆ.

-ಎಸ್.ಮಧುಸೂದನ, ಪ್ರಧಾನ ಕಾರ್ಯದರ್ಶಿ, ಕೆಎಸ್‌ಆರ್‌ಟಿಸಿ ಅಂಡ್‌ ಡಬ್ಲ್ಯೂ ಯೂನಿಯನ್‌, ಮೈಸೂರು.

ಕಳೆದ 12 ವರ್ಷ ಗಳಿಂದ ನೇಮಕಾತಿ ಮಾಡಿಲ್ಲ. ಅದರಲ್ಲೂ ಅನುಕಂಪದ ಆಧಾರದ ಮೇಲೆ ಯಾರಿಗೂ ಉದ್ಯೋಗ ನೀಡಿಲ್ಲ. ಕೆಲಸಕ್ಕಾಗಿ ಕಾದಿದ್ದ ಅನೇಕರಿಗೆ ವಯಸ್ಸು ಮೀರಿ ಹೋಗಿದೆ. ಇರುವ ನೌಕರರ ಮೇಲೆ ಹೊರೆ ಹೆಚ್ಚಾಗಿದೆ. ಇಂಥ ಅನ್ಯಾಯಗಳು ಸಂಸ್ಥೆಯ ಬೇರೆ ಬೇರೆ ಜಿಲ್ಲೆಗಳಲ್ಲೂ ಆಗಿವೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು, ಶೀಘ್ರವಾಗಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಕೆಲಸ ಕೊಡಲಿ

-ಸಿ.ಎನ್.ಬಾಲಕೃಷ್ಣ, ಅಧ್ಯಕ್ಷರು, ರಸ್ತೆ ಸಾರಿಗೆ ನಿಗಮ ನೌಕರರುಗಳ ಸೇವಾ ಸಂಘ, ಮೈಸೂರು