ಹೇಮಂತ್‌ಕುಮಾರ್
ಅಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರು ಬಿಡುಗಡೆ: ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜು
ಮಂಡ್ಯ: ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಜಲಾಶಯ ಈ ವರ್ಷದಲ್ಲಿ ಮೂರನೇ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ದಾಖಲೆ ನಿರ್ಮಿಸಿದೆ. ಕಳೆದ ಜೂನ್ ಅಂತ್ಯದ ವೇಳೆಗೆ ಜಲಾಶಯವು ಭರ್ತಿಯಾಗುವ ಮೂಲಕ ಇತಿಹಾಸ ನಿರ್ಮಿಸಿತ್ತು. ಕೆಆರ್‌ಎಸ್ ನಿರ್ಮಾಣವಾದ ನಂತರ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾದ ಜಲಾಶಯಕ್ಕೆ ಜೂ.೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದರು.
ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ಕಟ್ಟು ಪದ್ಧತಿಯಲ್ಲಿ ನೀರು ಹಾಗೂ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ನಿರಂತರವಾಗಿ ಒದಗಿಸುತ್ತಿದ್ದರೂ ಅಣೆಕಟ್ಟೆ ವರ್ಷದಲ್ಲಿ ಸತತ ೩ನೇ ಬಾರಿಗೆ ಗರಿಷ್ಠ ಮಟ್ಟವನ್ನು ಕಾಯ್ದುಕೊಂಡಿದೆ. ಜೂನ್ ನಂತರ ಅಕ್ಟೋಬರ್ ೨ನೇ ವಾರದಲ್ಲಿ ಮತ್ತೊಮ್ಮೆ ಅಣೆಕಟ್ಟೆ ಭರ್ತಿಯಾಗಿತ್ತು. ಅ.೧೮ ರಿಂದ ೨೩ರ ವರೆಗೆ ಅಣೆಕಟ್ಟೆಯಲ್ಲಿ ೧೨೪.೮೦ ಅಡಿಗಳಷ್ಟು ಪೂರ್ಣಮಟ್ಟದಲ್ಲಿ ನೀರು ಭರ್ತಿಯಾಗಿ ದಾಖಲೆ ನಿರ್ಮಿಸಿದೆ.
ಜಲಾಶಯದಿಂದ ಅ.೨೩ರಂದು ೨೫,೦೦೦ ದಿಂದ ೪೦,೦೦೦ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ. ಹೊರಹರಿವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ನದಿಯ ತಗ್ಗು ಪ್ರದೇಶದ ಎರಡೂ ದಂಡೆಗಳಲ್ಲಿನ ರೈತರು, ಸಾರ್ವಜನಿಕರು, ಗ್ರಾಮಸ್ಥರು ತಮ್ಮ ಆಸ್ತಿಪಾಸ್ತಿ, ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಮತ್ತು ಅಗತ್ಯವಿದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕೆಆರ್‌ಎಸ್ ವಿಭಾಗದ ಅಧೀಕ್ಷಕ ಅಭಿಯಂತರ ರಘುರಾಮ್ ಎಚ್ಚರಿಸಿದ್ದಾರೆ.
ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜು: ಹವಾಮಾನ ಇಲಾಖೆಯ ವರದಿಯ ಪ್ರಕಾರ ಇನ್ನೂ ಮೂರು ಅಥವಾ ನಾಲ್ಕು ದಿನಗಳ ಕಾಲ ಈ ಭಾಗದಲ್ಲಿ ಮಳೆ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಯ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಡಿಸಿ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಹೇಮಾವತಿ ಜಲಾಶಯದಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ೪,೬೦೦ ಕ್ಯೂಸೆಕ್ಸ್ ನೀರು ಬಿಡಲಾಗಿದೆ ಎಂದರು. ಕಾವೇರಿ ನದಿಪಾತ್ರದಲ್ಲಿ ವಿಪತ್ತು ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಽಕಾರಿಗಳಿಗೆ ತಾಕೀತು ಮಾಡಿದರು. ಮಳೆಯಿಂದಾಗಿ ಕೆ.ಆರ್. ಪೇಟೆಯ ೨೪ ಶಾಲೆಗಳಿಗೆ ಹಾನಿಯಾಗಿದೆ ಎಂದು ವರದಿ ನೀಡಲಾಗಿದೆ, ತಹಸಿಲ್ದಾರ್ ಖುದ್ದಾಗಿ ೨೪ ಶಾಲೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.
ಕೆ.ಆರ್.ಪೇಟೆ- ನಾಗಮಂಗಲ ಬಸ್‌ನಿಲ್ದಾಣದ ಗೋಳು; ನಾಗಮಂಗಲ ಹಾಗೂ ಕೆ.ಆರ್.ಪೇಟೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೀರು ನಿಲ್ಲದಂತೆ ಕಾಮಗಾರಿ ಕೈಗೊಳ್ಳಬೇಕಿದ್ದು, ಈ ಸಂಬಂಧ ಕ್ರಮವಹಿಸಲು ಟೆಂಡರ್ ಕರೆಯಲಾಗಿತ್ತು, ಈಗಾಗಲೇ ಶೇ.೨೫ ಕೆಲಸ ನಡೆದಿದೆ. ಉಳಿದ ಕಾಮಗಾರಿಯನ್ನು ತಿಂಗಳೊಳಗೆ ಮುಗಿಸಬೇಕು. ಎಣ್ಣೆಹೊಳೆ ಕೊಪ್ಪಲು ತಡೆಗೋಡೆ ಕಾಮಗಾರಿಯೂ ಶೇ.೫೦ ಮುಗಿದಿದ್ದು, ತಹಸಿಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿ ಮುಗಿಸುವಂತೆ ತಿಳಿಸಿದ್ದಾರೆ.
೨೩ ದಿನದಲ್ಲಿ ೭೩ ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ೨೩ ದಿನಗಳಲ್ಲಿ ೭೪ಮನೆಗಳು ಹಾನಿಗೊಳಗಾಗಿವೆ. ಸಂಬಂಧ ಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಜರುಗಿಸಬೇಕು,.ಈಗಾಗಲೇ ತಹಸಿಲ್ದಾರ್‌ಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ, ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಽಕಾರಿ ತಾಕೀತು ಮಾಡಿದರು.
ಅ.೨೯ ರೊಳಗೆ ಬೆಳೆ ಸಮೀಕ್ಷೆ ಮುಗಿಸಿ:
” ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮಾಡಲು ಅ.೨೪ ಕೊನೆಯ ದಿನವಾಗಿತ್ತು. ಮಳೆ ಹಿನ್ನೆಲೆಯಲ್ಲಿ ಅ.೨೬ರ ವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಅ.೨೬ರೊಳಗೆ ಬೆಳೆ ಸಮೀಕ್ಷೆಯನ್ನು ಮುಗಿಸಬೇಕು, ಮಳವಳ್ಳಿ ಹಾಗೂ ಶ್ರೀರಂಗಪಟ್ಟಣ ಬೆಳೆ ಸಮೀಕ್ಷೆಯಲ್ಲಿ ಹಿಂದುಳಿದಿದೆ. ೨೯ರ ಒಳಗಾಗಿ ಬೆಳೆ ಸಮೀಕ್ಷೆ ಮುಗಿಯದಿದ್ದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.”
-ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ




