ಕೆ.ಬಿ.ರಮೇಶನಾಯಕ
ಹೆಚ್ಚುವರಿ ೫ ಲಕ್ಷ ರೂ.ವಂತಿಗೆ ಪಾವತಿಗೆ ರಾಜ್ಯ ಸರ್ಕಾರ ಸಮ್ಮತಿ
ಶಾಸಕ ಟಿ.ಎಸ್.ಶ್ರೀವತ್ಸ ಅವರ ಕಾಳಜಿಗೆ ಸ್ಪಂದನೆ
೧,೪೪೦ ಫಲಾನುಭವಿಗಳ ಆರ್ಥಿಕ ಹೊರೆ ಇಳಿಸಿದ ಸರ್ಕಾರ
ವಸತಿ ಸಮುಚ್ಚಯದ ೩ ಅಂತಸ್ತಿನ ಕಾಮಗಾರಿ ಪೂರ್ಣ
ಮೈಸೂರು: ಹಲವಾರು ವರ್ಷಗಳಿಂದ ಸ್ವಂತ ಸೂರು ಕಾಣದೆ ಇರುವ ಬಡವರು, ಮಧ್ಯಮ ವರ್ಗದ ಜನರಿ ಗಾಗಿ ಲಲಿತಾದ್ರಿಪುರದಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ವಸತಿ ಸಮುಚ್ಚಯದಲ್ಲಿ ಮನೆ ಮಂಜೂ ರಾಗಿರುವ ಕೃಷ್ಣರಾಜ ಮತ್ತು ವರುಣ ಕ್ಷೇತ್ರಗಳ ಆಶ್ರಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡುವ ಮೂಲಕ ಆರ್ಥಿಕ ಹೊರೆಯನ್ನು ಇಳಿಸಿದೆ.
ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳಿಗೆ ಫಲಾನುಭವಿಗಳು ಕಟ್ಟಬೇಕಾದ ದೊಡ್ಡ ಮೊತ್ತವನ್ನು ಪಾವತಿಸಲು ಕಷ್ಟಕರವಾಗಿರುವ ಕಾರಣ ಸರ್ಕಾರವೇ ಹೆಚ್ಚುವರಿಯಾಗಿ ೫ ಲಕ್ಷ ರೂ. ಪಾವತಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ.
ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಲಲಿತಾದ್ರಿಪುರದ ೧೩.೫ ಎಕರೆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸಲಾಗಿತ್ತು. ಆದರೆ, ಈ ಜಾಗವು ವರುಣ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದರಿಂದ ಕೃಷ್ಣರಾಜ ಕ್ಷೇತ್ರಕ್ಕೆ ಮಂಜೂರಾಗಿದ್ದ ೧,೪೪೦ ಮನೆಗಳಲ್ಲಿ ಕೆ.ಆರ್. (ಕೃಷ್ಣರಾಜ) ಕ್ಷೇತ್ರಕ್ಕೆ ೯೪೦ ಮತ್ತು ವರುಣ ಕ್ಷೇತ್ರಕ್ಕೆ ೫೦೦ ಮನೆಗಳನ್ನು ಹಂಚಿಕೆ ಮಾಡಲಾಗಿತ್ತು.
ಕಳೆದ ವರ್ಷ ಲಲಿತಾದ್ರಿಪುರದಲ್ಲಿ ೨೦೨ ಕೋಟಿ ರೂ. ವೆಚ್ಚದಲ್ಲಿ ೧,೪೪೦ ಮನೆಗಳ ನಿರ್ಮಾಣ ಕಾರ್ಯ ಶುರು ಮಾಡಿದ್ದು, ಈಗಾಗಲೇ ಮೂರು ಅಂತಸ್ತಿನ ಕಾಮಗಾರಿ ಮುಗಿದಿದೆ. ಯೋಜನೆ ಮುಗಿಯಲು ಒಂದೂವರೆ ವರ್ಷಗಳು ಬಾಕಿ ಇರುವ ಹೊತ್ತಲ್ಲೇ ಫಲಾನುಭವಿಗಳ ವಂತಿಗೆ ಮತ್ತು ರಾಜ್ಯ, ಕೇಂದ್ರ ಸರ್ಕಾರಗಳ ಸಹಾಯ ಧನ ಪಾವತಿಸುವ ಕೆಲಸ ಮಾಡಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳ ಸಹಾಯಧನ ೩.೫೦ ಲಕ್ಷ ರೂ. ಹಿಂದುಳಿದ ವರ್ಗಗಳು, ಸಾಮಾನ್ಯ ವರ್ಗದವರಿಗೆ ೨.೭೦ ಲಕ್ಷ ರೂ.ಗಳ ಸಹಾಯಧನವನ್ನು ಪಾವತಿಸಲಾಗುತ್ತದೆ.
ಉಳಿದಂತೆ, ಎಸ್‌ಸಿ, ಎಸ್‌ಟಿ ಫಲಾನುಭವಿಗಳು ೯.೯೪ ಲಕ್ಷ ರೂ. ಮತ್ತು ಹಿಂದುಳಿದ ವರ್ಗಗಳ ಫಲಾನುಭವಿಗಳು ೧೦.೭೪ ಲಕ್ಷ ರೂ. ವಂತಿಗೆ ಹಣವನ್ನು ಕಟ್ಟಬೇಕಿದೆ. ಆದರೆ, ಮನೆ ಮಂಜೂರಾಗಿರುವ ಫಲಾನುಭವಿಗಳು ಆರ್ಥಿಕವಾಗಿ ಬಲಹೀನರಾಗಿರುವ ಕಾರಣ ಇಷ್ಟೊಂದು ಮೊತ್ತದ ಹಣವನ್ನು ಭರಿಸಲಾಗದೆ ಆರು ತಿಂಗಳುಗಳಿಂದ ಸಮಯ ದೂಡುತಲೇ ಬಂದಿದ್ದರು. ವಂತಿಗೆ ಹಣವನ್ನು ಡಿಸೆಂಬರ್ ತಿಂಗಳೊಳಗೆ ಪಾವತಿಸುವಂತೆ ರಾಜೀವ್ ಗಾಂಧಿ ವಸತಿ ನಿಗಮ ಸೂಚನೆ ನೀಡಿದ್ದರಿಂದ ಫಲಾನುಭವಿಗಳು ಕಂಗಾಲಾಗಿದ್ದರು. ಇದನ್ನು ಅರಿತ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಫಲಾನುಭವಿಗಳ ಸಮಸ್ಯೆಯನ್ನು ವಸತಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಅವರ ಗಮನಕ್ಕೆ ತರುವ ಜತೆಗೆ, ಸರ್ಕಾರವು ವಂತಿಗೆ ಹಣವನ್ನು ೧೫೦ ಲಕ್ಷ ರೂ.ಗಳಿಂದ ೫ ಲಕ್ಷ ರೂ.ಗೆ ಹೆಚ್ಚಿಸುವಂತೆ ಪತ್ರ ಬರೆದಿದ್ದರು. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ವಸತಿ ಸಚಿವರು ಐದು ಲಕ್ಷ ರೂ.ವಂತಿಗೆ ಹಣವನ್ನು ಕೊಡುವುದಕ್ಕೆ ಬೇಕಾದ ಪ್ರಕ್ರಿಯೆ ಆರಂಭಿಸಿರುವುದು ಕಂಡುಬಂದಿದೆ.
ಹೆಚ್ಚುವರಿಯಾಗಿ ೨೫ ಕೋಟಿ ರೂ.: ೧,೪೪೦ ಫಲಾನುಭವಿಗಳಿಗೆ ತಲಾ ೫ ಲಕ್ಷ ರೂ. ವಂತಿಗೆಯಂತೆ ಅಂದಾಜು ೨೫ ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ನೇರವಾಗಿ ಬಿಡುಗಡೆ ಮಾಡಲು ಒಪ್ಪಿಕೊಳ್ಳಲಾಗಿದೆ. ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಜಂಪನ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ಗೆ ಫಲಾನುಭವಿಗಳ ವಂತಿಗೆಯಲ್ಲಿ ೫ ಲಕ್ಷ ರೂ. ಪಾವತಿಸಲಿದ್ದು, ಫಲಾನುಭವಿಗಳೂ ಉಳಿಕೆ ಐದು ಲಕ್ಷ ರೂ.ಗಳನ್ನು ಬ್ಯಾಂಕ್‌ನಿಂದ ಸಾಲ ಪಡೆದು ಅಥವಾ ವೈಯಕ್ತಿಕವಾಗಿ ಕೂಡಿಟ್ಟಿದ್ದರೆ ನೇರವಾಗಿ ಕಟ್ಟಬಹುದಾಗಿದೆ.
ಶಾಸಕರ ಪಾತ್ರ: ಕೃಷ್ಣರಾಜ ಕ್ಷೇತ್ರದ ಶಾಸಕರ ಒತ್ತಡ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅವರು ತಮ್ಮ ಕ್ಷೇತ್ರದ ಫಲಾನುಭವಿಗಳ ಆರ್ಥಿಕ ಪರಿಸ್ಥಿತಿಯನ್ನು ಕಂಡು ಮಾಡಿರುವ ಪ್ಲಾನ್‌ನಿಂದಾಗಿ ಫಲಾನುಭವಿಗಳಿಗೆ ೫ ಲಕ್ಷ ರೂ. ಕಟ್ಟುವುದು ಉಳಿತಾಯವಾಗಿದೆ.
” ಲಲಿತಾದ್ರಿಪುರದಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ವಸತಿ ಸಮುಚ್ಚಯದ ಮನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳು ವಂತಿಗೆಯನ್ನು ಕಟ್ಟಲು ಸಾಧ್ಯವಾಗದ ಕಾರಣ ಸರ್ಕಾರ ೫ ಲಕ್ಷ ರೂ. ಪಾವತಿಸಲು ವಸತಿ ಸಚಿವರು ಒಪ್ಪಿಕೊಂಡಿರುವುದು ದೊಡ್ಡ ಭಾರ ಇಳಿಸಿದಂತಾಗಿದೆ. ಉಳಿದ ಹಣ ಪಾವತಿಗೆ ಬ್ಯಾಂಕ್ ಸಾಲ ಮೇಳ ನಡೆಸಲಾಗುತ್ತಿದೆ.”
-ಟಿ.ಎಸ್.ಶ್ರೀವತ್ಸ, ಶಾಸಕ





