Mysore
16
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಕೋಟೆ ಠಾಣೆ ; ರಾತ್ರಿ ಕಾಣೆ !

  • ಸಂಜೆಯಾದರೆ ಪೊಲೀಸ್ ಠಾಣೆ ಬಾಗಿಲು ಬಂದ್
  • ೨೪ ಗಂಟೆ ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರ ಬೇಜವಾಬ್ದಾರಿ ನಡೆ
  • ೮೦ ಗ್ರಾಮಗಳನ್ನು ಒಳಗೊಂಡ ಠಾಣೆ

ಎಚ್. ಡಿ. ಕೋಟೆ: ಪೊಲೀಸ್ ಠಾಣೆಗಳಿರುವುದು ನೊಂದವರು, ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಹಾಗೂ ರಕ್ಷಣೆ ಒದಗಿಸಲು. ಅದಕ್ಕಾಗಿ ದಿನದ ೨೪ ಗಂಟೆಗಳ ಕಾಲವೂ ಠಾಣೆಯ ಬಾಗಿಲು ತೆರೆದು ಕೆಲಸ ನಿರ್ವಹಿಸಬೇಕಾಗಿದ್ದ ಪೊಲೀಸರೇ ರಾತ್ರಿಯಿಂದ ಬೆಳಿಗ್ಗೆಯವರೆಗೆ ಠಾಣೆಯ ಬಾಗಿಲು ಮುಚ್ಚುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಎಚ್. ಡಿ. ಕೋಟೆಯ ಕೇಂದ್ರ ಸ್ಥಾನದಲ್ಲಿರುವ ಪೊಲೀಸ್ ಠಾಣೆಯಲ್ಲಿ ಇಂತಹ ಬೇಜವಾಬ್ದಾರಿ ಕೆಲಸ ಅನೇಕ ತಿಂಗಳಿಂದ ನಡೆಯುತ್ತಿದೆ.

ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ೮೦ಕ್ಕೂ ಹೆಚ್ಚು ಹಳ್ಳಿಗಳು ಸೇರುತ್ತವೆ. ತಾಲ್ಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ, ಜಮೀನಿನ ವಿಚಾರವಾಗಿ ಗಲಾಟೆ, ಹೊಡೆದಾಟ, ಕುಡುಕರ ಹಾವಳಿ ಇತ್ಯಾದಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ನೊಂದವರು, ದೌರ್ಜನ್ಯಕ್ಕೆ ಒಳಗಾದವರು ನ್ಯಾಯಕ್ಕಾಗಿ ಹಗಲು ರಾತ್ರಿ ಎನ್ನದೆ ಪೊಲೀಸ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ಎದುರಾಗಿದೆ.

ಇಂತಹ ಸಂದರ್ಭದಲ್ಲಿ ಪಟ್ಟಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ದಿನದ ೨೪ ಗಂಟೆಗಳ ಕಾಲವೂ ಕಾರ್ಯನಿರ್ವಹಿಸಬೇಕಾದ ಪೊಲೀಸರು ರಾತ್ರಿ ವೇಳೆ ಠಾಣೆಯ ಬಾಗಿಲು ಮುಚ್ಚುತ್ತಿದ್ದಾರೆ. ಬೆಳಗಿನ ಜಾವ ಬಾಗಿಲು ತೆರೆದು ಕೆಲಸ ನಿರ್ವಹಿಸುತ್ತಿದ್ದಾರೆ.

ಯಾರಾದರೂ ದೂರು ನೀಡಲು ರಾತ್ರಿ ಸಮಯ ಬಂದರೆ ಬಾಗಿಲು ಮುಚ್ಚಿರುವುದನ್ನು ನೋಡಿ ವಾಪಸ್ ಹೋಗಬೇಕು. ಇಲ್ಲದಿದ್ದರೆ ಬೆಳಿಗ್ಗೆವರೆಗೆ ಕಾದು ಬಾಗಿಲು ತೆರೆದ ಮೇಲೆ ದೂರು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಿಯಮದಂತೆ ಯಾವುದೇ ಪೊಲೀಸ್ ಠಾಣೆಗಳು ದಿನದ ೨೪ ಗಂಟೆಗಳ ಕಾಲವೂ ಬಾಗಿಲು ತೆರೆದು ಕಾರ್ಯನಿರ್ವಹಿಸುತ್ತಾ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಆದರೆ, ಇದಕ್ಕೆ ತದ್ವಿರುದ್ಧವಾಗಿ ತಾಲ್ಲೂಕಿನ ಕೇಂದ್ರ ಸ್ಥಾನದಲ್ಲಿರುವ ಪೊಲೀಸ್ ಠಾಣೆಯಲ್ಲೇ ಇಂಥ ಪರಿಸ್ಥಿತಿ ಎದುರಾದರೆ ಇನ್ನು ಗ್ರಾಮಾಂತರ ಪ್ರದೇಶದ ಪೊಲೀಸ್ ಠಾಣೆಗಳ ಪರಿಸ್ಥಿತಿ ಏನೆಂಬುದನ್ನು ಊಹಿಸಬಹುದಾಗಿದೆ. ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಹಿಂದುಳಿದ, ಗಡಿ ಭಾಗದ ಪೊಲೀಸ್ ಠಾಣೆಗಳಲ್ಲಿ ಪೊಲೀಸರ ಕಾರ್ಯಗಳನ್ನು ಚುರುಕುಗೊಳಿಸಿ ಈ ರೀತಿಯ ಸಮಸ್ಯೆಗಳು ಮರುಕಳಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪೊಲೀಸ್ ಠಾಣೆಗಳಲ್ಲಿ ಪೊಲೀಸರು ೨೪ ಗಂಟೆಗಳ ಕಾಲವೂ ಸಕ್ರಿಯವಾಗಿ ಕೆಲಸ ನಿರ್ವಹಿಸಬೇಕು. ಠಾಣೆಗಳ ಬಾಗಿಲು ಮುಚ್ಚುವಂತಿಲ್ಲ. ಬಾಗಿಲು ಮುಚ್ಚಿದ ಪೊಲೀಸ್ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. -ವಿಷ್ಣುವರ್ಧನ್, ಎಸ್‌ಪಿ

 

Tags:
error: Content is protected !!