ಪುನೀತ್ ಮಡಿಕೇರಿ
೧೦ದಿನಗಳಲ್ಲಿ ೨ ಟನ್ ತ್ಯಾಜ್ಯ ಸಂಗ್ರಹಿಸಿ ಮರುಬಳಕೆಗೆ ರವಾನೆ; ಸಾಥ್ ನೀಡಿದ ಬೆಂಗಳೂರಿನ ವೇದನ್ ಟ್ರಸ್ಟ್
ಮಡಿಕೇರಿ:ಕೊಡವ ಕುಟುಂಬಗಳ ವಿವಿಧ ತಂಡಗಳ ನಡುವೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾವಳಿ ಈಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ.
ಹಾಗಾಗಿ ಈ ಬಾರಿಯ ಪಂದ್ಯಾವಳಿಯ ಆತಿಥ್ಯ ವಹಿಸಿರುವ ಮುದ್ದಂಡ ಕುಟುಂಬ ಪಂದ್ಯಾವಳಿಯನ್ನು ಸಾರ್ಥಕ ಗೊಳಿಸಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಭಾಗವಾಗಿ ಹಾಕಿ ಉತ್ಸವವನ್ನು ಶೂನ್ಯ ತ್ಯಾಜ್ಯ ಉತ್ಸವವನ್ನಾಗಿ ಮಾಡಲು ಶ್ರಮಿಸುತ್ತಿದ್ದು, ಬೆಂಗಳೂರಿನ ವೇದನ್ ಟ್ರಸ್ಟ್ ಇದಕ್ಕೆ ಸಾಥ್ ನೀಡಿದೆ.
ಸ್ವಚ್ಛ ಕೊಡಗು ಪರಿಕಲ್ಪನೆಗೆ ಪೂರಕವಾಗಿ ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಪರಿಸರ ಜಾಗೃತಿಗೆ ಆದ್ಯತೆ ನೀಡಿ ಮಾದರಿ ಕೆಲಸ ಮಾಡಲಾಗಿದೆ. ಇಲ್ಲಿ ಉತ್ಪಾದನೆ ಆಗುವ ತ್ಯಾಜ್ಯವನ್ನು ಮರುಬಳಕೆಗೆ ಬಳಸುವ ಮೂಲಕ ಶೂನ್ಯ ತ್ಯಾಜ್ಯ ನಿರ್ವಹಣೆಯ ಮಹತ್ವದ ಉದ್ದೇಶವನ್ನು ಸಂಘಟಕರು ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಈ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಬೆಂಗಳೂರಿನ ವೇದನ್ ಟ್ರಸ್ಟ್ ಕೂಡ ಕೈ ಜೋಡಿಸಿದ್ದು, ಹಾಕಿ ಉತ್ಸವ ನಡೆಯುತ್ತಿರುವ ಪ್ರದೇಶದಲ್ಲಿ ೧೦ ದಿನಗಳಲ್ಲಿ ೨ ಟನ್‌ಗಳಷ್ಟು ತ್ಯಾಜ್ಯ ಸಂಗ್ರಹಿಸಿ ಮರುಬಳಕೆಗೆ ಕಳುಹಿಸಲಾಗಿದೆ.
ಸಾಮಾನ್ಯವಾಗಿ ಕೊಡಗಿನವರು ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ. ಕ್ರೀಡಾಕೂಟಕ್ಕೆ ಬಂದವರು ತ್ಯಾಜ್ಯವನ್ನು ಕಸದ ಬುಟ್ಟಿಗೇ ಹಾಕುತ್ತಿರುವುದು ವೇದನ್ ಟ್ರಸ್ಟ್ ಸ್ವಯಂ ಸೇವಕರ ಕೆಲಸವನ್ನು ಹಗುರವಾಗಿಸಿದೆ. ಹಾಕಿ ಉತ್ಸವ ಮುಗಿಯುವ ವೇಳೆಗೆ ಸುಮಾರು ೧೦ ಟನ್‌ಗಳಿಗೂ ಅಧಿಕ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಹಾಕಿ ಪಂದ್ಯಾವಳಿ ನಡೆಯುವ ಪ್ರದೇಶದಲ್ಲಿನ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ ನಿಗದಿಮಾಡಿರುವ ಕಸದ ಬುಟ್ಟಿಗಳಿಗೆ ಹಾಕಿದರೆ ಶೂನ್ಯ ತ್ಯಾಜ್ಯ ಸಂಗ್ರಹಕ್ಕೆ ಜನರು ಮಹತ್ವದ ಕೊಡುಗೆ ಕೊಟ್ಟಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಕಸ ವಿಂಗಡಣೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಇಲ್ಲಿ ನಡೆಯುತ್ತಿದೆ.
ಮುದ್ದಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಯಿಂದ ಪರಿಸರಕ್ಕೆ ಸಾಕಷ್ಟು ಲಾಭ ಆಗಲಿದೆ. ಈಗ ನಡೆಯುತ್ತಿರುವ ಈ ಪ್ರಯತ್ನದಿಂದ ಪರಿಸರಕ್ಕೆ ಸೇರುತ್ತಿದ್ದ ಇಂಗಾಲವು ಎಷ್ಟು ಪ್ರಮಾಣದಲ್ಲಿ ಕಡಿಮೆಯಾಯಿತು ಎನ್ನುವ ಕುರಿತು ಸಂಪೂರ್ಣ ವರದಿಯನ್ನು ಉತ್ಸವ ಮುಗಿದ ನಂತರ ಬಹಿರಂಗಪಡಿಸಲು ಸಂಘಟಕರು ಯೋಜನೆ ರೂಪಿಸಿದ್ದಾರೆ.
ಏಕ ಬಳಕೆಯ ವಸ್ತುಗಳನ್ನು ಬಳಸದೇ ಇರುವುದು ಮತ್ತು ಕಡಿಮೆ ಮಾಡುವುದರ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಹಾಕಲು ಚೀಲ ಹಾಗೂ ಡ್ರಮ್‌ಗಳನ್ನು ಇರಿಸಲಾಗಿದೆ. ಒಣ ತ್ಯಾಜ್ಯಗಳಾದ ಪ್ಲಾಸ್ಟಿಕ್ ಬಾಟಲಿ, ಕಾಗದದ ತಟ್ಟೆ, ಲೋಟ, ಹರಿದ ಕಾಗದ, ಬಣ್ಣದ ಕಾಗದ, ಹಾಲಿನ ಪ್ಯಾಕೆಟ್, ಟೆಟ್ರಾ ಪ್ಯಾಕೆಟ್, ರಟ್ಟು, ಗಟ್ಟಿ ಪ್ಲಾಸ್ಟಿಕ್, ಸ್ಟ್ರಾಗಳು, ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಕವರ್ ಮತ್ತು ಎಂಎಲ್‌ಪಿಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಮರುಬಳಕೆಗೆ ಕಳುಹಿಸಲಾಗುತ್ತಿದೆ.
ಈ ಶೂನ್ಯ ತ್ಯಾಜ್ಯ ನಿರ್ವಹಣೆಯ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಹಾಕಿ ಪ್ರಿಯರಲ್ಲೂ ಪರಿಸರ ಕಾಳಜಿ ಮೂಡಿಸುವುದು ನಮ್ಮ ಉದ್ದೇಶವಾಗಿದ್ದು, ಪ್ರತಿ ವರ್ಷ ನಡೆಯುವ ಹಾಕಿ ಉತ್ಸವದಲ್ಲಿ ಇದೇ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವ ಆಶಯವನ್ನು ಇಟ್ಟುಕೊಳ್ಳಲಾಗಿದೆ ಎನ್ನುತ್ತಾರೆ ವೇದನ್ ಟ್ರಸ್ಟ್‌ನ ಪ್ರಮುಖರು.ಮೂಡಬಿದಿರೆಯ ಕಂಬಳ ಮತ್ತು ಗಣೇ ಶೋತ್ಸವವನ್ನು ಶೂನ್ಯ ತ್ಯಾಜ್ಯ ಕಾರ್ಯ ಕ್ರಮಗಳನ್ನಾಗಿ ಮಾಡುವಲ್ಲಿ ವೇದನ್ ಟ್ರಸ್ಟ್ ಯಶಸ್ವಿಯಾಗಿದೆ.
ಬೆಂಗಳೂರಿನ ವಿವಿಧ ಶಾಲೆ, ಕಾಲೇಜು ಮತ್ತು ಕಚೇರಿಗಳನ್ನು ಶೂನ್ಯ ತ್ಯಾಜ್ಯ ಆವರಣವನ್ನಾಗಿ ರೂಪಿಸಲು ಶ್ರಮಿಸಲಾ ಗುತ್ತಿದೆ. ಈ ಕೆಲಸ ಇದೀಗ ಮಡಿಕೇರಿಯಲ್ಲೂ ನಡೆದಿದೆ.
” ಮುದ್ದಂಡ ಹಾಕಿ ಉತ್ಸವದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಯ ವಿನೂತನ ಪ್ರಯತ್ನ ಇಡೀ ದೇಶಕ್ಕೆ ಮಾದರಿಯಾಗಿದೆ. ಜನರಲ್ಲಿ ಪರಿಸರ ಕುರಿತು ಕಾಳಜಿ ಮೂಡಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದನ್ನು ನಗರಸಭೆ ಮೂಲಕವೂ ಮಡಿಕೇರಿಯಲ್ಲಿ ಅನುಷ್ಠಾನಕ್ಕೆ ತರಬಹುದಾಗಿದೆ. ಈ ರೀತಿಯ ತ್ಯಾಜ್ಯ ನಿರ್ವಹಣೆ ಆದಾಯದ ಮೂಲವೂ ಆಗಬಹುದು.”
-ರಶಿನ್ ಸುಬ್ಬಯ್ಯ, ಅಧ್ಯಕ್ಷ, ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ
” ಪ್ರಕೃತಿ ಸೌಂದರ್ಯದ ಕಣಜ ಕೊಡಗು ಜಿಲ್ಲೆಯಲ್ಲಿ ಸ್ವಚ್ಛ ಪರಿಸರ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬುದು ಗುರಿ. ಇದಕ್ಕಾಗಿ ಮುದ್ದಂಡ ಹಾಕಿ ಉತ್ಸವದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ. ಈ ಮೊದಲು ಮೂಡಬಿದಿರೆಯ ಕಂಬಳ ಮತ್ತು ಗಣೇಶೋತ್ಸವಗಳನ್ನು ಶೂನ್ಯ ತ್ಯಾಜ್ಯ ಕಾರ್ಯಕ್ರಮ ಮಾಡಿ ಯಶಸ್ವಿ ಆಗಿದ್ದೇವೆ.”
-ಎಸ್.ಸಿ. ಗಣೇಶ್, ವೇದನ್ ಟ್ರಸ್ಟ್ ಪ್ರಮುಖರು
” ಮುದ್ದಂಡ ಹಾಕಿ ನಮ್ಮೆಯಲ್ಲಿ ನಡೆದಿರುವ ನಮ್ಮ ಈ ಪ್ರಯತ್ನ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುವ ದೊಡ್ಡ ಕ್ರೀಡೋತ್ಸವ ಮತ್ತು ಇತರ ಸಮಾರಂಭಗಳಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಗೆ ಪ್ರೇರಣೆ ನೀಡಿದೆ. ಈಗಾಗಲೇ ಹುದಿಕೇರಿಯಲ್ಲಿ ನಡೆಯುತ್ತಿರುವ ಚೆಕ್ಕೇರ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರೊಂದಿಗೆ ವೇದನ್ ಟ್ರಸ್ಟ್‌ನಿಂದ ಮಾತುಕತೆ ನಡೆದಿದೆ. ಸ್ವಚ್ಛ ಕೊಡಗು ಮಾಡುವ ನಿಟ್ಟಿನಲ್ಲಿ ಇದೊಂದು ವಿಶೇಷ ಹೆಜ್ಜೆಯಾಗಿದೆ.”
-ಆದ್ಯ ತಿಮ್ಮಯ್ಯ, ಕಾರ್ಯದರ್ಶಿ, ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ





