Mysore
28
few clouds

Social Media

ಮಂಗಳವಾರ, 10 ಮಾರ್ಚ್ 2026
Light
Dark

ಅಭಿವೃದ್ಧಿಯತ್ತ ಕೊಡಗಿನ ಸರ್ಕಾರಿ ಗೋಶಾಲೆ

ನವೀನ್ ಡಿಸೋಜ

೨೦೨೨ರಲ್ಲಿ ಕೆ.ನಿಡುಗಣೆ ಗ್ರಾಮದಲ್ಲಿ ನಿರ್ಮಾಣವಾದ ಗೋಶಾಲೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ

ಮತ್ತಷ್ಟು ಜಾನವಾರುಗಳಿಗೆ ಆಶ್ರಯ ಒದಗಿಸಲು ಚಿಂತನೆ 

 ಮಡಿಕೇರಿ: ಕೊಡಗು ಜಿಲ್ಲೆಯಲ್ಲಿರುವ ಸರ್ಕಾರಿ ಗೋಶಾಲೆಯ ಅಭಿವೃದ್ಧಿಗೆ ನಿರ್ಧರಿಸಲಾಗಿದ್ದು, ಹೆಚ್ಚುವರಿ ಕೊಟ್ಟಿಗೆ, ಮೇವು ದಾಸ್ತಾನು ಕೊಠಡಿ, ಫೆನ್ಸಿಂಗ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

೨೦೨೨ರಲ್ಲಿ ಮಡಿಕೇರಿ ಸಮೀಪದ ಕೆ.ನಿಡುಗಣೆ ಗ್ರಾಮದಲ್ಲಿ ಸುಮಾರು ೫೩ ಲಕ್ಷ ರೂ. ವೆಚ್ಚದಲ್ಲಿ ಗೋಶಾಲೆಯನ್ನು ನಿರ್ಮಿಸಲಾಯಿತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಗೋಶಾಲೆ ಉದ್ಘಾಟಿಸಿದ್ದರು. ಆದರೆ, ಮಂಜೂರಾದ ೮ ಎಕರೆಯಲ್ಲಿ ಕೇವಲ ೨ ಎಕರೆ ಜಾಗದಲ್ಲಿ ಮಾತ್ರ ಫೆನ್ಸಿಂಗ್ ಅಳವಡಿಸಿ ಗೋಶಾಲೆ ನಿರ್ಮಿಸಲಾಗಿತ್ತು. ಇದರಿಂದ ಜಾನುವಾರುಗಳನ್ನು ಮೇಯಲು ಬಿಡಲು ಜಾಗದ ಕೊರತೆಯುಂಟಾಗುತ್ತಿತ್ತು. ಈ ಹಿನ್ನೆಲೆ ಯಲ್ಲಿ ೮ ಎಕರೆಗೂ ಫೆನ್ಸಿಂಗ್ ಮಾಡಿಸಲು ನಿರ್ಧರಿಸಲಾಗಿದೆ.

ಸದ್ಯ ಗೋಶಾಲೆಯಲ್ಲಿ ೩೭ ಜಾನುವಾರುಗಳು ಆಶ್ರಯ ಪಡೆದಿದ್ದು, ಜಾನುವಾರುಗಳ ನಿರ್ವ ಹಣೆಗೆ ೩ ಮಂದಿ ಹೊರಗುತ್ತಿಗೆ ಡಿ ದರ್ಜೆ ನೌಕರರನ್ನು ನೇಮಿಸಲಾಗಿದೆ. ೩ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು, ಸ್ವಚ್ಛತೆ, ಮೇವು ಒದಗಿಸುವುದು, ಗೋವುಗಳನ್ನು ಕೊಟ್ಟಿಗೆ ಒಳಗೆ- ಹೊರಗೆ ಬಿಡುವುದು ಸೇರಿದಂತೆ ಮತ್ತಿತರ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಗೋಶಾಲೆಗೆ ಹೆಚ್ಚುವರಿ ಜಾನುವಾರುಗಳ ಸೇರ್ಪಡೆಗೆ ಬೇಡಿಕೆಯಿದ್ದು, ಸದ್ಯ ಪೊಲೀಸ್ ಇಲಾಖೆಯಿಂದ ವಶಪಡಿಸಿಕೊಂಡ ಜಾನುವಾರುಗಳಿಗೆ ಮೊದಲ ಆದ್ಯತೆಯಲ್ಲಿ ಇಲ್ಲಿ ಆಶ್ರಯ ಕಲ್ಪಿಸಲಾಗುತ್ತಿದೆ. ಬಿಡಾಡಿ ಜಾನುವಾರುಗಳನ್ನು ಕೂಡ ಗೋಶಾಲೆಗೆ ಸೇರಿಸಬೇಕೆನ್ನುವ ಬೇಡಿಕೆಯಿದೆ. ಹೀಗಾಗಿ ಇನ್ನೂ ೫೦ ಜಾನುವಾರುಗಳ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇನ್ನು ಜಾನುವಾರುಗಳಿಗೆ ಈ ಬಾರಿಯೂ ಮೇವಿನ ಕೊರತೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಟೆಂಡರ್ ಮೂಲಕ ಒಣಮೇವಿನ ಪೂರೈಕೆಯಾಗುತ್ತಿದ್ದು, ಹಸಿಮೇವನ್ನು ಗೋಶಾಲೆ ಆವರಣದಲ್ಲಿಯೇ ಬೆಳೆಸಲಾಗುತ್ತಿದೆ. ಹೀಗಾಗಿ ಈ ಬಾರಿಯೂ ಮೇವಿನ ಕೊರತೆ ಆಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಾನುವಾರುಗಳಿಗೆ ಬೇಕಾದ ಔಷಧವನ್ನು ದಾಸ್ತಾನು ಇರಿಸಲಾಗಿದೆ. ಬೋರ್‌ವೆಲ್ ಮೂಲಕ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಗೋಶಾಲೆ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಗೋಬರ್ ಅನಿಲ ಘಟಕವನ್ನು ಕೂಡ ನಿರ್ಮಿಸಲಾಗಿದೆ. ಒಂದಷ್ಟು ಕೆಲಸ ಬಾಕಿಯಿದ್ದು, ಪೂರ್ಣಗೊಳ್ಳಬೇಕಿದೆ.

ಫೆನ್ಸಿಂಗ್ ಅಳವಡಿಕೆಯೊಂದಿಗೆ ದನದ ಕೊಟ್ಟಿಗೆಯನ್ನೂ ವಿಸ್ತರಿಸಬೇಕಿದೆ. ಜೊತೆಗೆಮೇವು ದಾಸ್ತಾನು ಕೊಠಡಿಯನ್ನೂ ವಿಸ್ತರಿಸಬೇಕಿದ್ದು, ಈ ಎಲ್ಲ ಕಾಮಗಾರಿಗಳ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನು ಮೋದನೆ ದೊರೆತಲ್ಲಿ ಶೀಘ್ರ ಗೋಶಾಲೆ ಅಭಿವೃದ್ಧಿಗೊಳ್ಳಲಿದೆ.

” ಶಾಲೆಯಲ್ಲಿ ೩೭ ಜಾನುವಾರುಗಳನ್ನು ಸಾಕಲಾಗುತ್ತಿದೆ. ಜಾನುವಾರುಗಳ ನಿರ್ವಹಣೆಗೆ ೩ ಜನ ಹೊರಗುತ್ತಿಗೆ ಡಿ ದರ್ಜೆ ನೌಕರರು ೩ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೮ ಎಕರೆ ಜಾಗಕ್ಕೂ ಫೆನ್ಸಿಂಗ್ ಅಳವಡಿಸಿದರೆ ಅನುಕೂಲವಾಗಲಿದೆ. ಸದ್ಯ ಇರುವ ಜಾನುವಾರುಗಳಿಗೆ ಎಲ್ಲಾ ವ್ಯವಸ್ಥೆಗಳು ಇವೆ.”

-ಡಾ.ಎಂ.ಸಿ.ಲತಾ, ಗೋಶಾಲೆ ಉಸ್ತುವಾರಿ ಅಧಿಕಾರಿ

” ಗೋಶಾಲೆಗೆ ಹೆಚ್ಚುವರಿ ಜಾನುವಾರುಗಳ ಸೇರ್ಪಡೆಗೆ ಬೇಡಿಕೆ ಇದೆ. ಹೆಚ್ಚುವರಿ ದನದ ಕೊಟ್ಟಿಗೆ, ಒಣ ಮೇವು ದಾಸ್ತಾನು ಕೊಠಡಿ ನಿರ್ಮಾಣ ಹಾಗೂ ಹೆಚ್ಚುವರಿ ಜಾನುವಾರುಗಳನ್ನು ಮೇಯಲು ಬಿಡಲು ಗೋಶಾಲೆಗೆ ಮಂಜೂರಾದ ೮ ಎಕರೆ ಜಾಗದ ಪೈಕಿ ಬಾಕಿ ಉಳಿದಿರುವ ೬ ಎಕರೆ ಜಾಗಕ್ಕೆ ಚೈನ್ ಲಿಂಕ್ ಪೆನ್ಸ್ ಅಥವಾ ಭದ್ರವಾದ ತಂತಿ ಬೇಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.”

-ಲಿಂಗರಾಜ ದೊಡ್ಡಮನಿ, ಉಪನಿರ್ದೇಶಕರು, ಪಶುಪಾಲನೆ ಇಲಾಖೆ 

 

 

Tags:
error: Content is protected !!