Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೊಡಗು ಜಿಲ್ಲೆಯಲ್ಲಿ ಈ ವರ್ಷ ಉತ್ತಮ ವರ್ಷಧಾರೆ..!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ 2733.24 ಮಿ. ಮೀ. ಸರಾಸರಿ ಮಳೆಯಾಗಿದೆ. ಇನ್ನು ಒಂದೆರೆಡು ದಿನಗಳಲ್ಲಿ ವಾರ್ಷಿಕ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 2792 ಮಿ. ಮೀ. ಗಳಾಗಿದ್ದು, ಇನ್ನು 59 ಮಿ. ಮೀ. ಮಳೆಯಾದರೆ ವಾರ್ಷಿಕ ವಾಡಿಕೆ ಮಳೆಯಾದಂತಾಗಲಿದೆ.

ಬಳಿಕ ಆಗುವ ಮಳೆ ಹೆಚ್ಚುವರಿ ಮಳೆಯಾಗಿರಲಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾಧಾರಣ ಮಳೆ ಮುಂದುವರಿದಿದ್ದು, ಈ ವಾರದಲ್ಲಿಯೇ ವಾಡಿಕೆ ಮಳೆಯ ಸರಾಸರಿ ದಾಟುವ ಸಾಧ್ಯತೆ ಇದೆ. ಜಿಲ್ಲೆಯಾದ್ಯಂತ ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ಸೆಪ್ಟೆಂಬರ್ ೨ನೇ ವಾರವೂ ಮಳೆ ಮುಂದುವರಿದಿದೆ. ಗಣೇಶ ಚತುರ್ಥಿ ಸಂದರ್ಭದಲ್ಲೂ ಮಳೆಯಾಗಿದ್ದು, ಹಬ್ಬದ ಬಳಿಕವೂ ಮಳೆ ಮುಂದುವರಿದಿದೆ. ಮಡಿಕೇರಿ ಸೇರಿದಂತೆ ಹಲವೆಡೆ ದಿನವಿಡೀ ಮಳೆಯ ವಾತಾವರಣ ಕಂಡು ಬರುತ್ತಿದೆ. ಆಗೊಮ್ಮೆ- ಈಗೊಮ್ಮೆ ಸ್ವಲ್ಪ ಬಿಸಿಲು ಕಾಣಿಸಿಕೊಂಡರೂ ಬಳಿಕ ದಿಢೀರನೇ ಜೋರು ಮಳೆ ಸುರಿಯುತ್ತಿದೆ. ಸೆ. 17ರವರೆಗೂ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾಗಿ ಚದುರಿದ ಮತ್ತು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಈ ಬಾರಿ ಅತಿ ಹೆಚ್ಚು ಮಳೆಯಾಗಿದ್ದು, ಈಗಾಗಲೇ 3953. 12 ಮಿ. ಮೀ ಮಳೆಯಾಗಿದೆ. ತಾಲ್ಲೂಕಿನ ವಾರ್ಷಿಕ ವಾಡಿಕೆ ಮಳೆ 2923 ಮಿ. ಮೀ ಆಗಿದ್ದು, ಈಗಾಗಲೇ 959.13 ಮಿ. ಮೀ ಹೆಚ್ಚುವರಿ ಮಳೆ ಸುರಿದಿದೆ. ಈ ಬಾರಿ ಮಾನ್ಸೂನ್‌ಗೂ ಮೊದಲು ಹವಾಮಾನ ಇಲಾಖೆ ಅಂದಾಜಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಗೌರಿ-ಗಣೇಶ ಹಬ್ಬದಂದೂ ಹೆಚ್ಚಿನ ಮಳೆಯಾಗಿತ್ತು. ಇದರಿಂದ ಗಣೇಶೋತ್ಸವದ ಪೂಜಾ ಕೈಂಕರ್ಯಗಳಿಗೆ ಸಮಸ್ಯೆಯಾಗಿತ್ತು. ಜನರು ದೇವಾಲಯಗಳಿಗೆ ತೆರಳಿ ದರ್ಶನ ಪಡೆಯುವುದಕ್ಕೂ ಅನನುಕೂಲವಾಗಿತ್ತು. ಈಗಲೂ ಮಳೆ ಮುಂದುವರಿದಿರುವುದರಿಂದ ದಸರಾ ವೇಳೆಗೂ ಮಳೆ ಕಾಡಲಿದೆಯಾ ಎಂಬ ಆತಂಕ ಸೃಷ್ಟಿಯಾಗಿದೆ. ಮಳೆಯಿದ್ದರೆ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ಜನರು ಸೇರುವ ಸಾಧ್ಯತೆ ಕಡಿಮೆ. ಹಾಗಾಗಿ ದಸರಾ ಆರಂಭವಾಗುವಷ್ಟರಲ್ಲಿ ಮಳೆ ಸ್ವಲ್ಪ ವಿರಾಮ ನೀಡಲಿ ಎಂಬುದು ಜಿಲೆಯ ಜನರ ನಿರೀಕ್ಷೆಯಾಗಿದೆ. ಮತ್ತೊಂದೆಡೆ ಕೊಡಗಿನ ಪ್ರವಾಸೋದ್ಯಮವೂ ಮಳೆ ಕಡಿಮೆ ಯಾಗುವುದನ್ನೇ ಕಾಯುತ್ತಿದ್ದು, ಮಳೆ ಕಡಿಮೆಯಾದರಷ್ಟೇ ಚೇತರಿಕೆ ಕಾಣುವ ಸಾಧ್ಯತೆಯಿದೆ.

ತಾಲೂಕುವಾರು ಮಳೆ ವಿವರ ( ಜನವರಿಯಿಂದ ಇಲ್ಲಿಯವರೆಗೆ ): ಮಡಿಕೇರಿ – ಈ ವರ್ಷ: 3953. 12, ಕಳೆದ ವರ್ಷ: 2407.50. ವಿರಾಜಪೇಟೆ- ಈ ವರ್ಷ: 2430, ಕಳೆದ ವರ್ಷ: 1084.21. ಪೊನ್ನಂಪೇಟೆ – ಈ ವರ್ಷ: 2556.99, ಕಳೆದ ವರ್ಷ: 1205.07. ಸೋಮವಾರಪೇಟೆ- ಈ ವರ್ಷ: 3093.91, ಕಳೆದ ವರ್ಷ: 1468.14. ಕುಶಾಲನಗರ – ಈ ವರ್ಷ: 1631.50, ಕಳೆದ ವರ್ಷ: 838.40.

 

Tags: