Mysore
18
scattered clouds

Social Media

ಸೋಮವಾರ, 12 ಜನವರಿ 2026
Light
Dark

ಕೇರಳ ಸರ್ಕಾರ ಭಾಷಾ ಸೌಹಾರ್ದತೆ ಕಾಪಾಡಲಿ  

ಏಪ್ರಿಲ್ ತಿಂಗಳ ಹೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಕೇರಳದಲ್ಲಿನ, ಸಿಪಿಐ(ಎಂ)ನ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎ- ಸರ್ಕಾರ, ರಾಜಕೀಯ ಕಾರಣಗಳಿಗಾಗಿ ನೆರೆಯ ಕರ್ನಾಟಕದ ಒಂದೊಂದೇ ವಿಷಯಗಳಲ್ಲಿ ಮೂಗು ತೂರಿಸಲಾರಂಭಿಸಿದೆ.

ವನ್ಯಜೀವಿಗಳ ಪಾಲಿಗೆ ಕಂಟಕ ಪ್ರಾಯವಾಗಿರುವ ಕಾರಣಕ್ಕೆ ಸ್ಥಗಿತಗೊಳಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಮೂಲಕ ಕೇರಳಕ್ಕೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿ ನೀಡುವಂತೆ ದಶಕಗಳಿಂದಲೂ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿರುವ ಕೇರಳ ಸರ್ಕಾರ, ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳನ್ನು ತೆರವುಗೊಳಿಸಿದ್ದನ್ನೂ ಖಂಡಿಸಿದ್ದಲ್ಲದೇ, ಸ್ವತಃ ಅಲ್ಲಿನ ಚುನಾಯಿತ ಪ್ರತಿನಿಧಿ ಕೋಗಿಲು ಬಡಾವಣೆಗೆ ಬಂದು ಪರಿಶೀಲನೆ ನಡೆಸಿ, ಸೂರು ಕಳೆದುಕೊಂಡವರ ಅಹವಾಲು ಆಲಿಸಿ, ಅವರ ಬೆಂಬಲಕ್ಕೆ ನಿಲ್ಲುವ ವಾಗ್ದಾನ ನೀಡಿ ಹೋಗುವ ದಾರ್ಷ್ಯ್ಟತನ ತೋರಿದ್ದಾರೆ. ಇದರ ಬೆನ್ನಲ್ಲೇ ಎಐಸಿಸಿಪ್ರಧಾನ ಕಾರ್ಯದರ್ಶಿ ಕೆ.ವೇಣುಗೋಪಾಲ್ ಅವರ ಸೂಚನೆ ಮೇರೆಗೆ ಕರ್ನಾಟಕ ಸರ್ಕಾರ ತಾನೇ ಕೆಡವಿದ ಅಕ್ರಮ ಸೂರುದಾರರಿಗೆ ಕನ್ನಡಿಗರ ತೆರಿಗೆ ಹಣದಲ್ಲಿ ನಿರ್ಮಿಸಿರುವ ಸುಸಜ್ಜಿತ ಬಹುಮಹಡಿ ಕಟ್ಟಡದಲ್ಲಿ ಮನೆಗಳ ಹಂಚಿಕೆಗೆ ಮುಂದಾಗಿರುವುದು ವಿವಾದಕ್ಕೆ ಎಡೆಮಾಡಿದೆ. ಇದರ ಬೆನ್ನಲ್ಲೇ ಇದೀಗ ಕೇರಳ ಸರ್ಕಾರ ಭಾಷೆಯಂತಹ ಭಾವನಾತ್ಮಕ ವಿಚಾರದಲ್ಲಿ ಕನ್ನಡಿಗರನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕಿದ್ದು, ಕೇರಳ ಸರ್ಕಾರ ಜಾರಿಗೆ ತಂದಿರುವ ‘ಮಲಯಾಳಂ ಭಾಷಾ ಮಸೂದೆ-೨೦೨೫’ ಅನ್ನು ವಿರೋಧಿಸಿ ನಾಡಿನಾದ್ಯಂತ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಸುದೀರ್ಘ ಪತ್ರ ಬರೆದು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ದೀರ್ಘಕಾಲದ ಸಂಬಂಧವನ್ನು ನೆನಪಿಸಿದ್ದಾರೆ.

ಸಿದ್ದರಾಮಯ್ಯ ಅವರು ಪತ್ರ ಬರೆದ ಬೆನ್ನಲ್ಲೇ ಕೇರಳ ಸರ್ಕಾರ ತನ್ನ ವರಸೆ ಬದಲಿಸಿದ್ದು, ಹೊರರಾಜ್ಯ, ವಿದೇಶಿ ವಿದ್ಯಾರ್ಥಿಗಳಿಗೆ ಮಲಯಾಳಂ ಪರೀಕ್ಷೆ ಕಡ್ಡಾಯವಲ್ಲ. ೯, ೧೦ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗೆ ಮಲಯಾಳಂ ಪರೀಕ್ಷೆ ಕಡ್ಡಾಯಗೊಳಿಸಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಪತ್ರಕ್ಕೆ ಪ್ರತ್ಯುತ್ತರ ಬರೆಯುವ ಸೌಜನ್ಯ ತೋರದ ಪಿಣರಾಯಿ ವಿಜಯನ್ ಅವರ ಎಕ್ಸ್ ಖಾತೆಯ ಒಕ್ಕಣೆಯನ್ನು ನಂಬಿ ಕುಳಿತರೆ ಮಲಯಾಳಂ ಭಾಷಾ ಮಸೂದೆ-೨೦೨೫ (ತಿದ್ದುಪಡಿ) ಕಾನೂನಾಗಿ ಜಾರಿಯಾಗಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ೧೩ನೇ ಕೇರಳ ವಿಧಾನಸಭೆಯಲ್ಲಿ ಮಂಡಿಸಲಾದ ಈ ಮಸೂದೆಯು ಭಾಷಾ ಅಲ್ಪಸಂಖ್ಯಾತರಿಗೆ ವಿರುದ್ಧವಾಗಿದೆ ಎಂದು ಅಂದಿನ ರಾಜ್ಯಪಾಲರು ಅಂಕಿತ ಹಾಕದೆ, ರಾಷ್ಟ್ರಪತಿ ಭವನಕ್ಕೆ ರವಾನಿಸಿದರು. ರಾಷ್ಟ್ರಪತಿಗಳು ಕೂಡ ಇದಕ್ಕೆ ಅನುಮೋದನೆ ನೀಡದಿರುವುದರಿಂದ ಪಿಣರಾಯಿ ವಿಜಯನ್ ಸರ್ಕಾರ ಮತ್ತೆ ತಿದ್ದುಪಡಿ ಮಸೂದೆಗೆ ರಾಜ್ಯಪಾಲರ ಅನುಮೋದನೆ ಪಡೆದಿದೆ. ಹೀಗಾಗಿ ಈ ಮಸೂದೆ ಕಾನೂನಾಗಿ ಜಾರಿಯಾದರೆ ಗಡಿಪ್ರದೇಶದ ಕನ್ನಡಿಗರ ಮೇಲೆ ಮಲಯಾಳಂ ಭಾಷಾ ಏರಿಕೆ ಮಾಡಿದಂತಾಗುತ್ತದೆ.

ಕೇರಳದ ಮಲಯಾಳಂ ಭಾಷಾ ಮಸೂದೆ-೨೦೨೫ರಲ್ಲಿ ಏನಿದೆ? ಅದರಿಂದ ಕನ್ನಡಿಗರಿಗೆ, ಕನ್ನಡ ಶಾಲೆಗಳಿಗೆ ಏಕೆ ಆತಂಕ ಎಂಬುದನ್ನು ನೋಡಹೊರಟರೆ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಾಸರಗೋಡು’ ಸಿನಿಮಾದಲ್ಲಿ ಗಡಿಭಾಗದ ಕನ್ನಡ ಶಾಲೆಯ ಮಕ್ಕಳಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಅದೇ ಮಾದರಿಯಲ್ಲಿ ಈ ಮಸೂದೆ ಕಾನೂನಾಗಿ ಜಾರಿಯಾದಲ್ಲಿ ಗಡಿಭಾಗದ ಮಕ್ಕಳ ಮೇಲೆ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಹೇರಿಕೆ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ. ಇದು ಕರ್ನಾಟಕದ ಗಡಿಭಾಗದ ಕನ್ನಡಿಗರ ಪ್ರಾಬಲ್ಯ ಹೆಚ್ಚಿರುವ ಕಾಸರಗೋಡು, ಮಂಜೇಶ್ವರ ಪ್ರದೇಶದ ಕನ್ನಡ ಭಾಷಿಕ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

” ಕೇರಳದಲ್ಲಿ ಸುಮಾರು ೨೦೨ ಕನ್ನಡ  ಮಾಧ್ಯಮ ಶಾಲೆಗಳಿವೆ. ಅದರಲ್ಲೂ ಕಾಸರಗೋಡು ಜಿಲ್ಲೆ ಒಂದರಲ್ಲೇ ೧೯೪ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಮಲಯಾಳ ಭಾಷಾ ಮಸೂದೆ ಕಾನೂನಾಗಿ ಜಾರಿಯಾದರೆ, ಕನ್ನಡ ಮಾಧ್ಯಮ ಶಾಲೆಗಳ ಮಲಯಾಳೀಕರಣ ವಾಗುವ ಆತಂಕ ಇದ್ದೇ ಇದೆ. ಕೇರಳದ ಗಡಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಜನರ ಜೀವನ ಕೂಡ ಸಂಪೂರ್ಣ ಕನ್ನಡ ಭಾಷೆಯೊಂದಿಗೆ ಬೆರೆತು ಹೋಗಿದೆ. ಹೀಗಾಗಿ ಕೇರಳ ಸರ್ಕಾರ ಬಾಯಿ ಮಾತಿಗೆ ಸೀಮಿತವಾಗದೇ ಉದ್ದೇಶಿತ ಮಸೂದೆಯನ್ನು ಹಿಂಪಡೆಯುವ ಪ್ರಾಮಾಣಿಕ ಕಳಕಳಿಯನ್ನು ತೋರುವ ಮೂಲಕ ಭಾಷಾ ಸೌಹಾರ್ದತೆ ಕಾಪಾಡಲು ಮುಂದಾಗಲಿ.”

Tags:
error: Content is protected !!