Mysore
18
scattered clouds

Social Media

ಭಾನುವಾರ, 25 ಜನವರಿ 2026
Light
Dark

ಇಂದು ಕೇರಳ ಬೈತೂರು ದೇವಾಲಯದ ಪತ್ತೂಟ

ಕಾಂಗೀರ ಬೋಪಣ್ಣ

ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ  ಹಬ್ಬಕ್ಕೆ  ಅಗತ್ಯ ಸಿದ್ಧತೆ 

ವಿರಾಜಪೇಟೆ: ಕೇರಳ ಹಾಗೂ ಕೊಡಗಿನ ಬಾಂಧವ್ಯ ಬೆಸೆಯುವ ವಿಶಿಷ್ಟ ಕೇರಳದ ಬೈತೂರು ದೇವಾಲಯದ ಪ್ರಮುಖ ವಾರ್ಷಿಕ ಹಬ್ಬ ಪತ್ತೂಟ ಜ.೨೪ರ ಶನಿವಾರ ನಡೆಯಲಿದ್ದು, ಜಿಲ್ಲೆಯ ಜನರು ಉತ್ಸವದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.

ಕೇರಳದ ಉಳಿಕಲ್ಲ್ ಸಮೀಪವಿರುವ ಆದಿ ಬೈತೂರು ದೇವಾಲಯದ ವಾರ್ಷಿಕ ಹಬ್ಬ ಈಗಾಗಲೇ ಜ.೧೩ರಿಂದ ಆರಂಭವಾಗಿದ್ದು, ಜ.೨೬ರವರಗೆ ನಡೆಯಲಿದೆ. ಇದರಲ್ಲಿ ಕೊಡಗಿನ ಜನರು ಭಾಗವಹಿಸುವ ಪತ್ತೂಟ (ಹತ್ತೂಟ) ಹಬ್ಬವೂ ಶನಿವಾರ ವಿಜೃಂಭಣೆಯಿಂದ ನಡೆಯಲಿದೆ. ವಿವಿಧ ಪೂಜೆ ಪುನಸ್ಕಾರ, ಅನ್ನದಾನ ನಡೆಯಲಿದ್ದು, ಮಧ್ಯಾಹ್ನ ೨.೩೦ ಗಂಟೆಗೆ ಆನೆಯ ಮೇಲೆ ಮೂರ್ತಿ ಇರಿಸಿ ದೇವಾಲಯದ ಸುತ್ತಲೂ ಏಳು ಸುತ್ತು ಪ್ರದಕ್ಷಿಣೆ ಮುಂತಾದ ಧಾರ್ಮಿಕ ಆಚರಣೆ ನಡೆಯಲಿದೆ. ಜ.೨೫ರಂದು ದೇವಾಲಯದಲ್ಲಿ ಮೈ ಮೇಲೆ ದೇವರು ಬರುವವರು ಇಲ್ಲಿ ಸೇರಿ ಬೈತೂರಪ್ಪನ ಆಶೀರ್ವಾದ ಪಡೆಯು ವರು. ಹೊಸದಾಗಿ ದೇವರು ಬರುವವರನ್ನು ಇಲ್ಲಿನ ಕೊರತ್ತಚ್ಚ ಮಾತನಾಡುವಂತೆ ಪ್ರೇರೇಪಿಸುತ್ತದೆ. ನಂತರಅವರು ಆಶೀರ್ವಾದ ನೀಡುವುದು ವಾಡಿಕೆಯಾಗಿದೆ.

ಪುರಾತನ ಮೃತುಂಜಯ ದೇವಾಲಯವಾಗಿರುವ ಇದು ಶಿವನ ಆಲಯವಾಗಿದ್ದು, ಕೊಡಗು ಮತ್ತು ಕೇರಳದ ನಡುವೆ ಸಾಂಸ್ಕೃತಿಕ ಬಾಂಧವ್ಯ ಬೆಸೆದಿರುವ ದೇವಾಲಯವಾಗಿದೆ. ಈ ದೇವಾಲಯ ಮತ್ತು ಕೊಡಗಿನ ಜನರ ನಡುವೆ ಪುರಾತನ ಕಾಲದಿಂದಲೂ ಅವಿನಾಭಾವ ಸಂಬಂಧ ಇದೆ.

ಕೊಡಗಿನ ಪುಗ್ಗೇರ ಕುಟುಂಬಕ್ಕೆ ಹಿಂದಿನ ಕಾಲದಲ್ಲಿ ಇಲ್ಲಿನ ದೇವರು ಯುದ್ಧ ಕಾಲದಲ್ಲಿ ಸ್ವಯಂ ರಕ್ಷಣೆ ನೀಡಿದ ಪ್ರತೀತಿ ಇದೆ. ಹೀಗಾಗಿ ಕೊಡಗಿನ ಪುಗ್ಗೇರ ಕುಟುಂಬದವರು ವಾರ್ಷಿಕ ಹಬ್ಬಕ್ಕೆ ಎತ್ತುಗಳ ಮೂಲಕ ಅಕ್ಕಿಯನ್ನು ತೆಗೆದು ಕೊಂಡು ಹೋಗುವ ಸಂಪ್ರದಾಯ (ಎತ್ತ್‌ಪೋರಾಟ) ಇದೆ. ಹೀಗಾಗಿ ಕೇರಳದ ಇರಟ್ಟಿಗೆ ಹತ್ತಿರದ ಉಳಿಕಲ್ಲ್ ಸಮೀಪದ ಬೈತೂರು ದೇವಾಲಯಕ್ಕೆ ಪತ್ತೂಟದಂದು ಕೊಡಗಿನ ಜನ ಬಾರಿ ಸಂಖ್ಯೆಯಲ್ಲಿ ಹೋಗಿ ಬರುವುದು ವಿಶಿಷ್ಠ.

ಹೀಗೆ ಪ್ರಕೃತಿಯ ರಮ್ಯತೆಯ ನಡುವೆ ಮೃತ್ಯುಂಜಯನಾಗಿ ನೆಲೆಗೊಂಡ ಶಿವನ ಆಲಯ ಸುಂದರವಾಗಿ ಕಾಣಿಸುತ್ತದೆ. ಇಲ್ಲಿ ಮೃತುಂಜಯ ಜಪ ಪ್ರಮುಖ ಪೂಜೆಯಾಗಿದ್ದು, ಕೆಲವೆ ಮೃತ್ಯುಂಜಯ ದೇವಾಲಯದಲ್ಲಿ ಇದು ಒಂದಾಗಿ ಕೊಡಗು-ಕೇರಳದ ಜನರ ನಡುವಿನ ಬಾಂಧವ್ಯ ವೃದ್ಧಿಸಿದೆ.

” ಕೇರಳದ ಉಳಿಕಲ್ಲ್ ಸಮೀಪವಿರುವ ಆದಿ ಬೈತೂರು ದೇವಾಲಯದ ವಾರ್ಷಿಕ ಹಬ್ಬ ಜ.೧೩ರಿಂದ ಆರಂಭವಾಗಿದ್ದು, ಜ.೨೪ರಂದು ಪತ್ತೂಟ ಹಬ್ಬವೂ ವಿಜೃಂಭಣೆಯಿಂದ ನಡೆಯಲಿದೆ. ಶನಿವಾರ ನಡೆಯುವ ಧಾರ್ಮಿಕ ಕಾರ್ಯಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇರಳ ಹಾಗೂ ಕೊಡಗಿನ ಜನರನ್ನು ಬೆಸೆಯುವ ಈ ವಿಭಿನ್ನ ಹಬ್ಬದಾಚರಣೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.”

-ಪುಗ್ಗೇರ ಪೊನ್ನಪ್ಪ, ತಕ್ಕ ಮುಖ್ಯಸ್ಥರು, ಆದಿ ಬೈತೂರು ದೇವಾಲಯ, ಕೇರಳ

ಪೌರಾಣಿಕ ಹಿನ್ನೆಲೆ…:  ಪೌರಾಣಿಕವಾಗಿ ಮಹಾಭಾರತ ಕಾಲದಲ್ಲಿ ಅರ್ಜುನ ಶಿವನನ್ನು ಕುರಿತು ತಪಸ್ಸು ಮಾಡಿದ ಸ್ಥಳ ಇದು ಎಂಬ ನಂಬಿಕೆಯಿದೆ. ಜೊತೆಗೆ ಇಲ್ಲಿಯೇ ಶಿವ ಪಾರ್ವತಿ ಪ್ರತ್ಯಕ್ಷರಾಗಿ ಪಾಶುಪತಾಸ್ತ್ರವನ್ನು ಅರ್ಜುನನಿಗೆ ನೀಡಿದಾಗಿ ಐತಿಹ್ಯದಲ್ಲಿ ಹೇಳಲಾಗುತ್ತದೆ. ಇದಕ್ಕೆ ಪೂರಕವಾಗಿ ಇಲ್ಲಿಗೆ ಸಮೀಪದಲ್ಲಿಯೇ ಅರ್ಜುನ ಕುನ್ನ್ (ಬೆಟ್ಟ) ಇದ್ದು, ಈಗಿನ ದೇವಾಲಯ ಸಮೀಪವೇ ಅರ್ಜುನನಿಗೆ ಪಾಶುಪತಾಸ್ತ್ರ ನೀಡಿದ ಸ್ಥಳವನ್ನು ಕಾಣಬಹುದಾಗಿದೆ

Tags:
error: Content is protected !!