Mysore
18
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೃಗಾಲಯದ ಜಿಂಕೆ, ಕೃಷ್ಣ ಮೃಗಗಳ ಮೇಲೆ ನಿಗಾ!

ಮೈಸೂರು: ಬೆಳಗಾವಿಯ ರಾಣಿ ಚೆನ್ನಮ್ಮ ಮೃಗಾಲಯದಲ್ಲಿನ ಕೃಷ್ಣಮೃಗಗಳ ದಾರುಣ ಸಾವು ಪ್ರಕರಣ ರಾಜ್ಯದ ಇತರ ಮೃಗಾಲಯಗಳನ್ನು ಬೆಚ್ಚಿ ಬೀಳಿಸಿರುವ ಬೆನ್ನಲ್ಲಿಯೇ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಂಕೆ ಮತ್ತು ಕೃಷ್ಣಮೃಗಗಳ ರಕ್ಷಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

‘ಹೆಮೊರಾಜಿಕ್ ಸೆಪ್ಟಿ ಸೆಮಿಯಾ’(ಗಂಟಲು ಬೇನೆ-ಗಳಲೆ ರೋಗ) ಎಂಬ ಬ್ಯಾಕ್ಟೀರಿಯಾಸೋಂಕಿನಿಂದ ೩೧ ಕೃಷ್ಣಮೃಗಗಳು ಮೃತ ಪಟ್ಟಿದ್ದವು. ಉಳಿದವುಗಳನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಮೈಸೂರು ಮೃಗಾಲಯದ ಪ್ರಾಣಿಗಳ ಮೇಲೆ ತೀವ್ರ ನಿಗಾವಿರಿಸಿ ಅಗತ್ಯ ಮುನ್ನೆಚ್ಚರಿಕೆಗೆ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ.

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸದ್ಯ ೪೬ ಕೃಷ್ಣಮೃಗಗಳು, ೭೨ ಜಿಂಕೆಗಳಿವೆ.ಹಲವು ಗರ್ಭಿಣಿ ಜಿಂಕೆಗಳೂ ಇದ್ದು, ಮರಿ ಹಾಕುವ ಹಂತದಲ್ಲಿವೆ. ಇಂತಹ ಸಂದರ್ಭದಲ್ಲಿ ‘ಪ್ಯಾಸ್ಚುರೆಲ್ಲಾ ಮಲ್ಟೋಸಿಡಾ’(ಗಂಟಲು ಬೇನೆ-ಗಳಲೆ ರೋಗ) ಎಂಬ ಬ್ಯಾಕ್ಟೀರಿಯಾ ಸೋಂಕು ಅಪ್ಪಳಿಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಆಂಟಿ ಬಯೋಟಿಕ್ ಚುಚ್ಚುಮದ್ದು ನೀಡುತ್ತಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಏನೇನು ಮುನ್ನೆಚ್ಚರಿಕೆ ಕ್ರಮಗಳು?” 

* ಮೃಗಾಲಯದ ಸಿಬ್ಬಂದಿ,ನೌಕರರು, ವನ್ಯಜೀವಿ ವೈದ್ಯರು ಪ್ರಾಣಿಗಳ ಚಲನ ವಲನಗಳ ಮೇಲೆ ನಿಗಾವಹಿಸಿದ್ದಾರೆ.

* ಪ್ರಾಣಿಗಳ ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ಚಿಕಿತ್ಸೆ ಕೊಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

* ವಿಶೇಷವಾಗಿ ಜಿಂಕೆ ಮತ್ತು ಕೃಷ್ಣಮೃಗಗಳಿಗೆ ಆಂಟಿ ಬಯೋಟಿಕ್ ಚುಚ್ಚುಮದ್ದು ನೀಡುವ ಮೂಲಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

* ಮೃಗಾಲಯದ ಎಲ್ಲಾ ಪ್ರಾಣಿಗಳ ಬೋನುಗಳಿಗೆ ಸ್ಯಾನಿಟೈಸರ್ ಸಿಂಪಡಿಸುವ ಕಾರ್ಯವೂ ನಡೆಯುತ್ತಿದೆ.

” ಮೃಗಾಲಯದಲ್ಲಿ ನಮ್ಮ ಸಿಬ್ಬಂದಿ ಎಲ್ಲ ಪ್ರಾಣಿಗಳ ಮೇಲೂ ನಿಗಾವಹಿಸಿದ್ದಾರೆ. ಕೃಷ್ಣಮೃಗಗಳು, ಜಿಂಕೆ, ಕಾಡೆಮ್ಮೆ, ಆನೆಗಳು, ನೀರಾನೆಗಳ ಮೇಲೆ ಹೆಚ್ಚಿನ ನಿಗಾವಹಿಸಿ ಆಂಟಿ ಬಯೋಟಿಕ್ ಚುಚ್ಚುಮದ್ದು ನೀಡಲಾಗುತ್ತಿದೆ. ಆತಂಕಪಡುವ ಅಗತ್ಯವಿಲ್ಲ.”

-ಅನುಷಾ, ಕಾರ್ಯನಿರ್ವಾಹಕ ನಿರ್ದೇಶಕಿ, ಚಾಮರಾಜೇಂದ್ರ ಮೃಗಾಲಯ

” ಗಂಟಲು ಬೇನೆ-ಗಳಲೆ ರೋಗ ದನ, ಎಮ್ಮೆ, ಮೇಕೆ ಹಾಗೂ ಕುರಿಗಳಲ್ಲಿ ಹೆಚ್ಚು ಕಂಡುಬರುತ್ತದೆ. ವನ್ಯಜೀವಿಗಳಲ್ಲಿ ಕೃಷ್ಣಮೃಗ, ಜಿಂಕೆ, ಕಾಡೆಮ್ಮೆ ಹಾಗೂ ಆನೆಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇವುಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಆದರೆ, ಮೃಗಾಲಯದ ಪ್ರಾಣಿಗಳಿಗೆ ಚುಚ್ಚುಮದ್ದು ನೀಡುವುದರಿಂದ ವೈರಸ್ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೂ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂದು ಪಶುವೈದ್ಯ ಡಾ.ನಾಗರಾಜು ಮಾಹಿತಿ ನೀಡಿದರು.”

ಅರಣ್ಯದಂಚಿನಲ್ಲಿ ಹೆಚ್ಚು ಜಾಗೃತಿ ಮುಖ್ಯ: 

ಗಳಲೆ ರೋಗವು ಜಾನುವಾರುಗಳಲ್ಲಿ ಹೆಚ್ಚು ಕಂಡುಬರುವ ಹಿನ್ನೆಲೆಯಲ್ಲಿ ಜಾನುವಾರುಗಳ ಸಾಕಣೆಯಲ್ಲಿ ತೊಡಗಿರುವವರು ಹೆಚ್ಚಿನ ನಿಗಾವಹಿಸಬೇಕು. ಅದರಲ್ಲಿಯೂ ಕಾಡಂಚಿನ ಪ್ರದೇಶದಲ್ಲಿರುವ ಗ್ರಾಮಗಳಲ್ಲಿನ ರೈತರು ತಮ್ಮ ಜಾನುವಾರುಗಳಿಗೆ ವ್ಯಾಕ್ಸಿನ್ ಮಾಡಿಸಿಕೊಳ್ಳಬೇಕು. ಇದರಿಂದವನ್ಯಜೀವಿಗಳು ಮತ್ತು ಜಾನುವಾರುಗಳಿಗೆ ತಗಲುವ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಡಾ.ನಾಗರಾಜು ಸಲಹೆ ನೀಡಿದರು.

Tags:
error: Content is protected !!