ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆಡಳಿತ ಕಚೇರಿ ಸ್ಥಳಾಂತರ
ಹಿಂದೆ ಕಾರಂಜಿ ಕಟ್ಟಡದಲ್ಲೇ ಮತ್ತೆ ಕಾರ್ಯನಿರ್ವಹಣೆ
ಕಚೇರಿಗೆ ೭೦ ಲಕ್ಷ ರೂ. ವೆಚ್ಚದಲ್ಲಿ ಕಾರ್ಪೊರೇಟ್
ಶೈಲಿಯಲ್ಲಿ ನವೀಕರಣ ಶಾಶ್ವತ ವಸ್ತು ಪ್ರದರ್ಶನಕ್ಕೆ ನಿರ್ಧಾರ
ಊಹಾಪೋಹಕ್ಕೆ ಅಯೂಬ್ ಖಾನ್ ಸಡ್ಡು
ಮೈಸೂರು: ಹಲವು ವರ್ಷಗಳಿಂದ ಸಮಪರ್ಕವಾಗಿ ಬಳಕೆ ಯಾಗದೆ ಪಾಳು ಬಿದ್ದಿದ್ದ ಕಾರಂಜಿ ಕಟ್ಟಡಕ್ಕೆ ಹೊಸ ಕಳೆ ಬಂದಿದೆ. ನಾನಾ ಕಾರಣಗಳಿಂದ ವಸ್ತು ಪ್ರದರ್ಶನ ಆವರಣದ ಕಾರಂಜಿ ಕಟ್ಟಡದಲ್ಲಿದ್ದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಕಚೇರಿ ಸ್ಥಳಾಂತರಗೊಂಡಿತ್ತು. ಈಗ ಕಚೇರಿ ಮತ್ತೆ ಕಾರಂಜಿ ಕಟ್ಟಡಕ್ಕೆ ದಶಕದ ಬಳಿಕ ಮರಳಿದ್ದು, ಕಾರ್ಯ ನಿರ್ವ ಹಿಸುತ್ತಿದೆ.
ಪ್ರಾಧಿಕಾರದ ಅಧ್ಯಕ್ಷರಾದವರಿಗೆ ಯಾವುದೇ ಏಳಿಗೆಯಾಗುವುದಿಲ್ಲ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ಕಚೇರಿಯನ್ನು ಕಾರಂಜಿ ಕಟ್ಟಡದಿಂದ ವಸ್ತು ಪ್ರದರ್ಶನದ ಪ್ರವೇಶ ದ್ವಾರದಲ್ಲಿರುವ ಶೆಡ್‌ಗೆ ಸ್ಥಳಾಂತರಿಸಲಾಗಿತ್ತು. ಈ ಬಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಯೂಬ್‌ಖಾನ್, ಯಾವುದೇ ಊಹಾಪೋಹಕ್ಕೆ ಕಿವಿಗೊಡದೆ, ಮೂಲ ಕಟ್ಟಡ ದಲ್ಲಿಯೇ ಕಚೇರಿ ಕಾರ್ಯ ನಿರ್ವಹಿಸುವಂತೆ ಆಗಬೇಕು ಎಂದು ನಿರ್ಧರಿಸಿ ಇಡೀ ಪ್ರಾಧಿ ಕಾರದ ಕಚೇರಿಯನ್ನು ಕಾರಂಜಿ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಆ ಮೂಲಕ ಪಾಳು ಬಿದ್ದ ಕಾರಂಜಿ ಕಟ್ಟಡ ಸದ್ಬಳಕೆಯಾಗುತ್ತಿದೆ.
ಇಡೀ ಪ್ರಾಧಿಕಾರದ ಕಚೇರಿ ಪಾಳುಬಿದ್ದಿದ್ದ ಕಟ್ಟಡವನ್ನುಯನ್ನು ೭೦ ಲಕ್ಷ ರೂ. ವೆಚ್ಚದಲ್ಲಿ ಕಾರ್ಪೊರೇಟ್ ಕಟ್ಟಡದ ಶೈಲಿಯಲ್ಲಿ ನವೀಕರಣ ಗೊಳಿಸಲಾಗಿದೆ. ಕಾರಂಜಿ ಕಟ್ಟಡ ಮೊದಲ ಅಂತಸ್ತಿ ನಲ್ಲಿ ಅಧ್ಯಕ್ಷರ ಕೊಠಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಅಧೀಕ್ಷಕರು, ಕಾರ್ಯಪಾಲಕ ಅಭಿಯಂತರರ ಕೊಠಡಿ ಮತ್ತು ಆಡಳಿತ ಕಚೇರಿಯೊಂದಿಗೆ ವಿಶಾಲವಾದ ಮೀಟಿಂಗ್ ಹಾಲ್ ನಿರ್ಮಿಸಲಾಗಿದೆ.
ವಸ್ತು ಪ್ರದರ್ಶನದ ಪ್ರವೇಶ ದ್ವಾರದಲ್ಲಿರುವ ಶೆಡ್‌ನಲ್ಲಿದ್ದ ಪ್ರಾಧಿಕಾರದ ಕಚೇರಿಯನ್ನು ೨೦೦೩ರಲ್ಲಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಆರ್.ರಘು ಅವರು ಕಾರಂಜಿ ಕಟ್ಟಡಕ್ಕೆ ಸ್ಥಳಾಂತರಿಸಿ ಅಲ್ಲಿಯೇ ಆಡಳಿತ ನಿರ್ವಹಿಸಿದ್ದರು. ಬಳಿಕ ಅಧ್ಯಕ್ಷ ರಾಗಿ ಬಂದ ಬಿ.ಪಿ.ಮಂಜುನಾಥ್ ಅವರು ಆಡಳಿತ ನಿರ್ವಹಣೆ ವೇಳೆ ಉಂಟಾದ ತೊಡಕು ಮತ್ತು ಗಲಾಟೆ ಗದ್ದಲದಿಂದ ಇಲ್ಲಿ ಕಾರ್ಯ ನಿರ್ವಹಿಸಿದರೆ ಸಮಸ್ಯೆಯಾಗಲಿದೆ ಎಂದು ಮತ್ತೆ ೨೦೦೮ರಲ್ಲಿ ಶೆಡ್‌ಗೆ ಕಚೇರಿಯನ್ನು ಸ್ಥಳಾಂತರಿಸಿದರು. ನಂತರ ಬಂದ ಆರ್.ಮೂರ್ತಿ, ಅಬ್ದುಲ್ ಅಜೀಜ್, ಎ.ಹೇಮಂತ ಕುಮಾರ್ ಗೌಡ ಮತ್ತು ಮಿರ್ಲೆ ಶ್ರೀನಿವಾಸ ಗೌಡ ಸೇರಿದಂತೆ ಎಲ್ಲ ಅಧ್ಯಕ್ಷರೂ ಅಲ್ಲಿಯೇ ಕಾರ್ಯ ನಿರ್ವಹಿಸಿದರು. ಹಾಗಾಗಿ ಒಂದೂವರೆ ದಶಕದವರೆಗೆ ಖಾಲಿ ಇದ್ದ ಕಾರಂಜಿ ಕಟ್ಟಡ ಸಂಪೂರ್ಣವಾಗಿ ಪಾಳುಬಿದ್ದಂತಾಗಿ, ಗುಬ್ಬಚ್ಚಿಗಳ ಆವಾಸಸ್ಥಾನ ವಾಗಿತ್ತು. ನೆಲ ಅಂತಸ್ತಿನಲ್ಲಿದ್ದ ಕಾವೇರಿ ಕಲಾ ಗ್ಯಾಲರಿ ಕೂಡ ವೀಕ್ಷಣೆಗೆ ಲಭ್ಯವಾಗದೆ ಇದ್ದುದರಿಂದ ಇಡೀ ಕಟ್ಟಡ ಸಂಪೂರ್ಣ ಬಂದ್ ಆಗಿ ನಿರುಪಯುಕ್ತವಾಗಿತ್ತು.
ಅಯೂಬ್‌ಖಾನ್ ಅವರು ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕಾರಂಜಿ ಕಟ್ಟಡವನ್ನು ಸದ್ಬಳಕೆಮಾಡಿ ಕೊಳ್ಳಬೇಕೆಂಬ ಉದ್ದೇಶದಿಂದ ನವೀಕರಣಕ್ಕೆ ಮುಂದಾದರು. ಮೊದಲ ಅಂತಸ್ತಿನಲ್ಲಿದ್ದ ಅರ್ಧ ಭಾಗವನ್ನು ಸಂಪೂರ್ಣ ನವೀಕರಣಗೊಳಿಸಿ ಇಡೀ ಪ್ರಾಧಿಕಾರದ ಕಚೇರಿಯನ್ನು ಸ್ಥಳಾಂತರಿಸಿದ್ದಾರೆ. ಉಳಿದ ಅರ್ಧ ಭಾಗವನ್ನು ಖಾಸಗಿ ಕಾಲೇಜಿಗೆ ಬಾಡಿಗೆ ನೀಡಿದ್ದು, ಪ್ರಾಧಿಕಾರಕ್ಕೆ ತಿಂಗಳಿಗೆ ಲಕ್ಷ ರೂ. ಬಾಡಿಗೆ ಬರುವಂತೆ ಮಾಡಿದ್ದಾರೆ.
ನಿತ್ಯ ವಸ್ತು ಪ್ರದರ್ಶನ: ಕಟ್ಟಡದ ನೆಲ ಅಂತಸ್ತಿನ ಅರ್ಧ ಭಾಗದಲ್ಲಿ ಕಾವೇರಿ ಕಲಾ ಗ್ಯಾಲರಿ ಇದ್ದು, ಈಗಾಗಲೇ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಇನ್ನೂ ಉಳಿದ ಅರ್ಧ ಭಾಗದಲ್ಲಿ ದಸರಾ ಪ್ರಯುಕ್ತ ಕರಕುಶಲ ವಸ್ತು ಪ್ರದರ್ಶನ ಆಯೋಜಿಸಲಾಗಿದ್ದು, ಮುಂದೆ ದಸರೆ ಬಳಿಕವೂ ವಸ್ತು ಪ್ರದರ್ಶನ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪ್ರಾಧೀಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದ್ದಾರೆ.
” ಕಾರಂಜಿ ಕಟ್ಟಡದಲ್ಲಿ ಪ್ರಾಧಿಕಾರದ ಕಚೇರಿ ಇದ್ದಾಗ ಅಲ್ಲಿ ಏಳಿಗೆ ಆಗುವುದಿಲ್ಲ ಎಂಬ ಮೌಢ್ಯತೆಯಿಂದಪ್ರವೇಶ ದ್ವಾರ ಬಳಿಯ ಶೆಡ್‌ಗೆ ಪ್ರಾಧಿಕಾರದ ಕಚೇರಿಯನ್ನು ಸ್ಥಳಾಂತರಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸರ್ಕಾರದಲ್ಲಿ ಇರುವ ನಾನು ಮೌಢ್ಯತೆಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಪ್ರಾಧಿಕಾರದ ಕಚೇರಿಯನ್ನು ಕಾರಂಜಿ ಕಟ್ಟಡಕ್ಕೆ ಸ್ಥಳಾಂತರಿಸಿ, ಇಡೀ ಕಟ್ಟಡ ಸದ್ಬಳಕೆಯಾಗುವುದರೊಂದಿಗೆ ಪ್ರಾಧಿಕಾರಕ್ಕೂ ಆದಾಯ ಬರುವಂತೆ ಮಾಡಿದ್ದೇನೆ.”
ಅಯೂಬ್ ಖಾನ್, ಅಧ್ಯಕ್ಷರು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಽಕಾರ





