Mysore
22
broken clouds

Social Media

ಶುಕ್ರವಾರ, 02 ಜನವರಿ 2026
Light
Dark

ಕಾವೇರಿ ಆರತಿ, ಅಮ್ಯೂಸ್‌ ಮೆಂಟ್ ಪಾರ್ಕ್: ಜಟಾಪಟಿ

ಮಂಡ್ಯ, ಮೈಸೂರು ಸಾರ್ವಜನಿಕರ ಮಿಶ್ರ ಪ್ರತಿಕ್ರಿಯೆ

ಮೈಸೂರು: ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಸಮೀಪ ಕಾವೇರಿ ಆರತಿ ಯೋಜನೆ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದನ್ನು ರೈತ ಸಂಘ, ಪ್ರಗತಿಪರ ಸಂಘಟನೆಗಳು, ಚಿಂತಕರು ವಿರೋಧಿಸಿದ್ದಾರೆ. ಸರ್ಕಾರ ಪಟ್ಟು ಬಿಡದೆ ಯೋಜನೆ ಜಾರಿಗೆ ಯತ್ನಿಸುತ್ತಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಏತನ್ಮಧ್ಯೆ ರೈತ ಸಂಘದ ಮಹಿಳಾ ನಾಯಕರಾದ ಸುನಂದಾ ಜಯರಾಂ ಮತ್ತಿತರರು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು, ೨ ವಾರಗಳೊಳಗೆ ವರದಿ ನೀಡುವಂತೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ವಿವಾದದ ನಡುವೆಯೇ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ‘ಆಂದೋಲನ’ದೊಂದಿಗೆ ಕಾವೇರಿ ಆರತಿ ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಸರ್ಕಾರದ ಯೋಜನೆಗಳಿಗೆ ವಿರೋಧ ಸರಿಯಲ್ಲ:  ಅಮ್ಯೂಸ್‌ಮೆಂಟ್ ಪಾರ್ಕ್ ಆಗಲಿ, ಕಾವೇರಿ ಆರತಿ ಯೋಜನೆಯಾಗಲಿ ಸುಖಾಸುಮ್ಮನೆ ಜಾಗ ಕಬಳಿಸುವುದಲ್ಲ. ಇಲ್ಲಿ ವಾಣಿಜ್ಯ ಚಟುವಟಿಕೆಗಳು ಚಿಗುರೊಡೆದು ದೊಡ್ಡ ಮಟ್ಟದಲ್ಲಿ ಸ್ಥಳೀಯರ ಅಭಿವೃದ್ಧಿಗೆ ಅನುಕೂಲವಾಗಲಿದೆ. ಆದ್ದರಿಂದ ಈ ಯೋಜನೆಗಳಿಗೆ ವಿರೋಧ ಮಾಡುವುದು ಸರಿಯಲ್ಲ. ಆದರೆ, ಸ್ಥಳೀಯರಿಗೆ ಸೂಕ್ತ ಅವಕಾಶ ಸಿಗಬೇಕು.

-ಗುರುಮೂರ್ತಿ, ಮರಳಾಗಾಲ

” ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡುತ್ತೇವೆಂದು ೨,೬೬೦ ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದು ಸರಿಯಲ್ಲ. ಸಾರ್ವಜನಿಕರ ತೆರಿಗೆ ಹಣ ಸಾರ್ವಜನಿಕರಿಗೆ ಉಪಯುಕ್ತವಾಗುವ ಕೆಲಸಕ್ಕೆ ಬಳಕೆಯಾಗಬೇಕೆ ಹೊರತು, ಇಂತಹ ಅನರ್ಥ ಕೆಲಸಗಳಿಗೆ ಸಲ್ಲದು. ಅಲ್ಲದೆ, ಕಾವೇರಿ ಆರತಿಯನ್ನು ಮಾಡಲು ೯೨ ಕೋಟಿ ರೂ. ವ್ಯಯಿಸುವ ಅಗತ್ಯವೇನಿದೆ? ಧಾರ್ಮಿಕ ನಂಬಿಕೆಯಿರುವ ಜನರು ನದಿಯ ಬಳಿ ಆರತಿ ಮಾಡುತ್ತಾರೆ. ಇದಕ್ಕೆ ಕೋಟಿ ಕೋಟಿ ರೂ.ಗಳನ್ನು ಸುರಿಯುವುದು ಬೇಕಿಲ್ಲ.”

-ಜೆ.ದೇವೇಗೌಡ, ಸುಂಕಾತೊಣ್ಣೂರು

” ರೈತರ ಸಮಸ್ಯೆ ಪರಿಹಾರಕೆ ಹಣ ಬಳಸಲಿ ಕೆಆರ್‌ಎಸ್‌ನಿಂದ ಮೈಸೂರು, ಮಂಡ್ಯ, ಬೆಂಗಳೂರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಕಾವೇರಿ ಆರತಿ ಮಾಡುವುದರಿಂದ ನೀರು ಕಲುಷಿತಗೊಳ್ಳುವ ಸಾಧ್ಯತೆ ಇದೆ. ಕಾವೇರಿ ಆರತಿಗೆ ಖರ್ಚು ಮಾಡಲು ಉದ್ದೇಶಿಸಿರುವ ಹಣವನ್ನು ರೈತರ ಸಮಸ್ಯೆಗಳ ಪರಿಹಾರಕ್ಕೆ ಬಳಸುವುದು ಸೂಕ್ತ. ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡುವ ಬದಲಿಗೆ ಈಗಿರುವ ಬೃಂದಾವನವನ್ನು ಸರಿಯಾಗಿ ನಿರ್ವಾಹಣೆ ಮಾಡಿದರೆ ಸಾಕು.”

-ಎಸ್.ಎಚ್.ಸಹನಾ, ಮೈಸೂರು

” ಎಲ್ಲವೂ ಇಲ್ಲಿದೆ, ಇನ್ನೇನೂ ಬೇಕಿಲ್ಲ:  ಕೆ.ಆರ್‌ಎಸ್‌ನಲ್ಲಿ ಈಗಾಗಲೇ ಸಾಕಷ್ಟು ವಾಣಿಜ್ಯ ಚಟುವಟಿಕೆಗಳು ತಲೆಯೆತ್ತಿರುವುದರಿಂದ ಅಲ್ಲಿ ಸಹಜ ಪರಿಸರವೆಂಬುದೇ ಕಾಣೆಯಾಗಿದೆ. ಎತ್ತ ನೋಡಿದರೂ ಲಾಡ್ಜ್‌ಗಳು, ರೆಸ್ಟೋರೆಂಟ್‌ಗಳು, ಬಟ್ಟೆ, ಸೀರೆ ಮಳಿಗೆಗಳು, ಶೋರೂಂಗಳು, ಟೀ, ಕಾಫಿ ಅಂಗಡಿಗಳು, ಇವುಗಳ ನಡುವೆ ಖಬಾಬ್ ಸೆಂಟರ್ ಗಳು ನಾಯಿ ಕೊಡೆಗಳಂತೆ ಎದ್ದಿವೆ. ಇಲ್ಲಿ ಪ್ರವಾಸಿಗರ ಸುಲಿಗೆ ನಡೆಯುತ್ತಿದೆಯೇ ಹೊರತು, ಸ್ಥಳೀಯ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಇಲ್ಲಿ ಬೇರಾವುದೇ ದೊಡ್ಡ ಯೋಜನೆಗಳು ಬೇಕಿಲ್ಲ.”

-ಶಿವಸ್ವಾಮಿ, ನಗುವನಹಳ್ಳಿ 

” ಕಾವೇರಿ ನದಿಗೆ ಆರತಿ ಮುಖಾಂತರ ಗೌರವ ನೀಡುವುದನ್ನು ಬಿಟ್ಟು ಕಾವೇರಿ ನೀರನ್ನು ಸಮರ್ಪಕವಾಗಿ ರೈತರ ಬೆಳೆಗಳಿಗೆ ಬಳಸಿಕೊಳ್ಳಬೇಕು ಹಾಗೂ ಅಣೆಕಟ್ಟೆಯಲ್ಲಿ ಹೂಳೆತ್ತುವ ಕೆಲಸವನ್ನು ಮಾಡಿಸಬೇಕು. ಅಲ್ಲದೆ, ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲಿನ ಕ್ರಷರ್ ಅನ್ನು ನಿಷೇಧಿಸುವ ಮೂಲಕ ಕಾವೇರಿ ನದಿಗೆ ಗೌರವ ಸೂಚಿಸಬೇಕು. ಅಮ್ಯೂಸ್‌ಮೆಂಟ್ ಪಾರ್ಕ್‌ನ್ನು ನಿರ್ಮಿಸಿದರೆ, ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಅದರಿಂದ ಅಣೆಕಟ್ಟೆಯ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ.”

-ಮಂಜು ಕಿರಣ್, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ 

” ಕಾವೇರಿ ಆರತಿ, ಅಮ್ಯೂಸ್‌ಮೆಂಟ್ ಪಾರ್ಕ್ ಸೂಕ್ತ ಅಲ್ಲ:  ಕಾವೇರಿ ಆರತಿಯನ್ನು ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ಮಾಡುವುದರಲ್ಲಿ ಅರ್ಥವಿದೆ. ಶ್ರೀರಂಗಪಟ್ಟಣ ಅಥವಾ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ ಮಾಡುವುದಾದರೆ ಜನರ ಸಹಮತವಿರುತ್ತದೆ. ಆದರೆ ಕೆಆರ್‌ಎಸ್ ಡ್ಯಾಂನಲ್ಲಿ ಎಲ್ಲವೂ ವಾಣಿಜ್ಯೀಕರಣವಾಗಿದ್ದು, ಅಲ್ಲಿ ಆರತಿ ಮಾಡುವುದು ಸೂಕ್ತವಲ್ಲ. ಅಮ್ಯೂಸ್  ಮೆಂಟ್ ಪಾರ್ಕ್‌ನ್ನು ಕೂಡ ಈ ಕಿಷ್ಕಿಂಧೆಯಲ್ಲಿ ಮಾಡುವುದು ಸರಿಯಲ್ಲ.”

-ವಿ.ಎಸ್.ಲಿಂಗೇಗೌಡ, ವಡ್ಡರಹಳ್ಳಿ 

” ಸುಸ್ಥಿರ ಅಭಿವೃದ್ಧಿಗೆ ಅಗತ್ಯ ಸುಸ್ಥಿರ ಅಭಿವೃದ್ಧಿಗೆ ಈ ರೀತಿಯ ಯೋಜನೆಗಳು ಅಗತ್ಯವಾಗಿರುತ್ತವೆ. ಇದನ್ನು ಸರ್ಕಾರವು ಕಾನೂನಾತ್ಮಕವಾಗಿ ಮತ್ತು ನ್ಯಾಯ ಸಮ್ಮತವಾಗಿ ಮಾಡುತ್ತಿದೆ. ಅಭಿವೃದ್ಧಿ ದೃಷ್ಟಿಕೋನ, ಉದ್ಯೋಗದ ಸೃಷ್ಟಿ ಮತ್ತು ಸೃಜನಾತ್ಮಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ಸಹಕಾರಿಯಾಗಲಿದೆ.”

-ಮಂಜು ಸುಬೇದಾರ್, ಸಂಶೋಧನಾ ವಿದ್ಯಾರ್ಥಿ, ಮೈಸೂರು

ನದಿ ಸ್ವಚ್ಛತೆಗೆ ‘ಆರತಿ’ ಪರಿಹಾರ ಅಲ್ಲ:  ಕಾವೇರಿ ನದಿ ಉಗಮ ಸ್ಥಾನದಿಂದ ಹಿಡಿದು ಸಮುದ್ರ ಸೇರುವ ತನಕ ಬಹುತೇಕ ಎಲ್ಲಾ ನಗರಗಳು, ಪಟ್ಟಣಗಳು, ಗ್ರಾಮಗಳು ಕೊಳಚೆ ನೀರು, ಪ್ಲಾಸ್ಟಿಕ್, ಕೈಗಾರಿಕೆ ತಾಜ್ಯ, ಒಳ ಚರಂಡಿ ನೀರು ಸೇರಿ ಮಲಿನವಾಗಿದೆ. ಅದರ ಸ್ವಚ್ಛತೆ, ನದಿಯಲ್ಲಿರುವ ಜೀವ ವೈವಿಧ್ಯತೆ ರಕ್ಷಣೆಗೆ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡಬೇಕು. ಕಾವೇರಿ ಆರತಿಯಿಂದ ನದಿಯ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.”

-ಕಿರಣ್, ಹದಿನಾರು, ನಂಜನಗೂಡು ತಾ.

Tags:
error: Content is protected !!