Mysore
26
overcast clouds

Social Media

ಸೋಮವಾರ, 09 ನವೆಂಬರ್ 2026
Light
Dark

ದೀಪಾವಳಿ ಜಾತ್ರೆಗೆ ಕಾರ್ಯ ಸಿದ್ದೇಶ್ವರಸ್ವಾಮಿ ಬೆಟ್ಟ ಸಜ್ಜು  

ಪಿ.ಶಿವಕುಮಾರ್

ಕಾರ್ಯ ಗ್ರಾಮದಲ್ಲಿ ನ.೧೧, ೧೨, ೧೩ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ದೊಡ್ಡ ಕವಲಂದೆ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾರ್ಯ ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟ ಸಜ್ಜಾಗಿದೆ.

ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಮಾರನೇ ದಿನ ಅಂದರೆ ನ.೧೧ರಂದು ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಲಿದೆ.

ದೈವ ಪುರುಷರಾದ ಶ್ರೀ ಸಿದ್ದೇಶ್ವರರು ಕಾರ್ಯ ಗ್ರಾಮದ ಬೆಟ್ಟದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಇದ್ದು ಈ ಬೆಟ್ಟ ಸಿದ್ದೇಶ್ವರ ಸ್ವಾಮಿ ಬೆಟ್ಟವೆಂದೇ ಪ್ರಖ್ಯಾತಿ ಪಡೆದಿದ್ದು, ಈ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದೆ.

ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನವು ತನ್ನದೇ ಆದ ಐತಿಹಾಸಿಕ ಇತಿಹಾಸವನ್ನು ಹೊಂದಿದೆ. ಚೋಳ ಸಾಮ್ರಾಜ್ಯದ ರಾಜ ರಾಜ ಚೋಳನು ಶ್ರೀ ಸಿದ್ದೇಶ್ವರ ಸ್ವಾಮಿಗಳು ನೆಲೆಸಲು ಬೆಟ್ಟದ ಮೇಲೆ ದೇವಸ್ಥಾನ ನಿರ್ಮಿಸಿಕೊಟ್ಟಿದ್ದಾನೆ ಎಂಬ ಐತಿಹ್ಯವಿದೆ.

ದೇವಸ್ಥಾನ ಪಕ್ಕದಲ್ಲಿ ಮಜ್ಜನದ ಸಣ್ಣ ಕೊಳವಿದ್ದು ಈ ಕೊಳದ ನೀರನ್ನೇ ಶ್ರೀ ಸಿದ್ದೇಶ್ವರರು ಮಜ್ಜನಕ್ಕೆ ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರೆಯ ಹಿಂದಿನ ದಿನವೇ ದನಕರುಗಳನ್ನು ಬೆಟ್ಟದ ತಪ್ಪಲಿನಲ್ಲಿ ಇರಿಸುತ್ತಾರೆ. ಮುಂಜಾನೆ ಶ್ರೀ ಸಿದ್ದೇಶ್ವರ ಸ್ವಾಮಿಗೆ ದೂರದ ಗ್ರಾಮಗಳಿಂದ ಜನರು ಕಾಲ್ನಡಿಗೆಯಲ್ಲಿ ದನ ಕರುಗಳೊಂದಿಗೆ ಬಂದು, ಜಾನುವಾರುಗಳ ಕೊಂಬಿಗೆ ಪಂಜು ಕಟ್ಟಿ, ಪಂಜಿನ ಸೇವೆ ಮಾಡಿಸುತ್ತಾರೆ. ಇದರಿಂದ ದನ-ಕರುಗಳಿಗೆ ಯಾವುದೇ ರೀತಿ ರೋಗ-ರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ರೈತರಲ್ಲಿದೆ.

ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಕಾರ್ಯ, ಬಾಣೂರು, ಅರಳಿಕಟ್ಟೆಹುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

೩ ದಿನಗಳ ಜಾತ್ರೆ: ದೀಪಾವಳಿ ಹಬ್ಬದ ಮರುದಿನ ಪ್ರಾರಂಭವಾಗುವ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸುಮಾರು ಮೂರು ದಿನಗಳ ಕಾಲ ನಡೆಯುತ್ತದೆ. ನ.೧೧ರಂದು ಬುಧವಾರ ಬೆಳಿಗ್ಗೆ ೯ ಗಂಟೆಗೆ ಶ್ರೀ ಸಿದ್ದೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ಗ್ರಾಮದಿಂದ ಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಸುಮಾರು ೨೫ ಅಡಿ ಎತ್ತರದ ಖುರ್ಜು (ತೇರು) ತಯಾರು ಮಾಡಿ ವಸ್ತ್ರಾಲಂಕಾರ, ಹೂವಿನ ಅಲಂಕಾರಗಳಿಂದ ಆ ತೇರನ್ನು ಶೃಂಗರಿಸಿ ಕಳಸಾರೋಹಣ ಮಾಡಿ ಮಧ್ಯಾಹ್ನ ೧೨ ಗಂಟೆಗೆ ಸರಿಯಾಗಿ ಆರು ಅಡಿ ಎತ್ತರದ ರಥದ ಸಹಾಯದಿಂದ ಕಾರ್ಯ ಗ್ರಾಮದ ಕೊನೆಯ ಭಾಗದವರೆಗೂ ಆ ರಥವನ್ನು ಎಳೆದುಕೊಂಡು ಹೋಗಿ ತದನಂತರ ಎರಡು ಟನ್ ಭಾರವುಳ್ಳ ತೇರನ್ನು ಸುಮಾರು ೨೦೦ಕ್ಕೂ ಹೆಚ್ಚು ಜನರು ಹೆಗಲ ಮೇಲೆ ಹೊತ್ತು ಸುಮಾರು ೬೦೦ ಅಡಿ ಎತ್ತರದ ಶ್ರೀ ಸಿದ್ದೇಶ್ವರ ಬೆಟ್ಟಕ್ಕೆ ಹೊತ್ತುಕೊಂಡು ಹೋಗುತ್ತಾರೆ. ಅದನ್ನು ವೀಕ್ಷಿಸಲು ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಾರೆ.

ನ.೧೨ರಂದು ಗುರುವಾರ ಪಲ್ಲಕ್ಕಿ ಉತ್ಸವ, ಪಂಚ ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ಗ್ರಾಮದಲ್ಲಿ ನಡೆಯುತ್ತದೆ. ನ.೧೩ರಂದು ಶುಕ್ರವಾರ ಗ್ರಾಮದ ದರೋಬರೋ ಕೆರೆಯಲ್ಲಿ ರಾತ್ರಿ ೮ ಗಂಟೆಗೆ ಶ್ರೀ ಸ್ವಾಮಿಯ ತೆಪ್ಪೋತ್ಸವ ಜರುಗಲಿದೆ. ನ.೧೮ರಂದು ಬುಧವಾರ ಶ್ರೀ ಸಿದ್ದೇಶ್ವರ ಸ್ವಾಮಿಯ ಬೆಟ್ಟದಲ್ಲಿ ಚಿಕ್ಕ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ.

” ಚೋಳರ ಕಾಲದ ದೇವಸ್ಥಾನ ಚೋಳರ ಕಾಲದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಯವರ ದೇವಾಲಯ ನಿರ್ಮಾಣವಾಗಿದೆ. ಈ ದೇವಾಲಯದಲ್ಲಿ ಚಂಡಿಕೇಶ್ವರಿ, ಮನ್ಮಥಕಾಳಿ ದೇವರ ವಿಗ್ರಹವಿದೆ. ಪ್ರತಿ ಭಾನುವಾರ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಪ್ರತಿ ವರ್ಷ ದೀಪಾವಳಿ ಹಬ್ಬದ ಮಾರನೇ ದಿನ ಸುತ್ತಮುತ್ತಲಿನ ಗ್ರಾಮಸ್ಥರು ಸಡಗರ ಸಂಭ್ರಮದಿಂದ ಜಾತ್ರೆಯನ್ನು ಆಚರಿಸುತ್ತಾರೆ.”

 

 

Tags:
error: Content is protected !!