Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ದುರಸ್ತಿಯಾದ ಬೆನ್ನಲ್ಲೇ ಗುಂಡಿಮಯವಾದ ಕರಡಿಗೋಡು ರಸ್ತೆ

ಕೃಷ್ಣ ಸಿದ್ದಾಪುರ

ಕಳಪೆ ರಸ್ತೆ ಕಾಮಗಾರಿ; ೩೦ ಲಕ್ಷ ರೂ. ಅನುದಾನ ವ್ಯರ್ಥ

ಸಿದ್ದಾಪುರ: ಇಲ್ಲಿನ ಕರಡಿಗೋಡು ಗ್ರಾಮದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಸಿದರೂ ರಸ್ತೆಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಈ ರಸ್ತೆಯನ್ನು ಸಂಪೂರ್ಣವಾಗಿ ಮರು ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ದಶಕಗಳಿಂದ ಡಾಂಬರು ಕಾಣದೆ ಗುಂಡಿಮಯವಾಗಿದ್ದ ಕರಡಿಗೋಡು ಗ್ರಾಮದ ರಸ್ತೆಗೆ ಶಾಸಕ ಎ.ಎಸ್.ಪೊನ್ನಣ್ಣ ಅವರ ವಿಶೇಷ ಮುತುವರ್ಜಿಯಿಂದ ೩೦ ಲಕ್ಷ ರೂ. ಅನುದಾನ ಕಲ್ಪಿಸಿ, ಗುದ್ದಲಿಪೂಜೆಯನ್ನೂ ನೆರವೇರಿಸಿ ಗುಣ ಮಟ್ಟದ ಕಾಮಗಾರಿ ನಡೆಸುವ ಬಗ್ಗೆ ಗಮನ ನೀಡುವಂತೆ ಕಾರ್ಯಕರ್ತರು ಹಾಗೂ ಗ್ರಾಮ ಸ್ಥರಿಗೆ ಸೂಚಿಸಿದ್ದರು. ಕಾಮಗಾರಿ ಮುಗಿದ ೧೮ ತಿಂಗಳಲ್ಲೇ ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಸಿದ್ದಾಪುರದಿಂದ ಕರಡಿಗೋಡು, ಚಿಕ್ಕನಹಳ್ಳಿ, ಬಸವನಳ್ಳಿ, ಅವರೆಗುಂದ ದುಬಾರೆ ಸೇರಿದಂತೆ ಅರಣ್ಯದಂಚಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ೩ ಕಿ.ಮೀ. ಉದ್ದದ ರಸ್ತೆ ಇದಾಗಿದೆ. ವನ್ಯ ಜೀವಿಗಳ ಉಪಟಳ ಹೆಚ್ಚಿರುವ ಈ ರಸ್ತೆಯಲ್ಲಿ ನಿತ್ಯ ವಿದ್ಯಾರ್ಥಿಗಳು, ಕಾರ್ಮಿಕರು ಸಂಚರಿಸುತ್ತಿದ್ದು, ಇದೀಗ ಸಮಸ್ಯೆ ಎದುರಿಸುತ್ತಿದ್ದಾರೆ.

ಕಾಮಗಾರಿ ನಡೆಯುವ ವೇಳೆಯಲ್ಲೇ ಗುಣಮಟ್ಟವಲ್ಲದ ಕಾಮಗಾರಿ ಬಗ್ಗೆ ಗ್ರಾಮ ಸ್ಥರು, ಆಟೋಚಾಲಕರು, ಗುತ್ತಿಗೆದಾರನನ್ನು ಪ್ರಶ್ನಿಸಿ, ಕಾಮಗಾರಿಯ ಗುಣಮಟ್ಟ ಕಾಪಾಡು ವಂತೆ ಸೂಚಿಸಿದ್ದರು. ಇಷ್ಟಾದರೂ ಇದೀಗ ಇಡೀ ರಸ್ತೆ ಗುಂಡಿಮಯವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಸಿದ್ದಾಪುರ ಪಟ್ಟಣ ಹಾಗೂ ಆಸ್ಪತ್ರೆಗೆ ಹೋಗಲು ಜನರು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಇಲ್ಲಿ ಕಳೆದ ವರ್ಷ ಆನೆಗಳ ದಾಳಿಗೆ ೩ ಮಂದಿ ಬಲಿಯಾಗಿದ್ದಾರೆ. ಈ ಭಾಗದಲ್ಲಿ ರೆಸಾರ್ಟ್ ಸೇರಿದಂತೆ, ಹೋಂಸ್ಟೇಗಳು ಹೆಚ್ಚು ಇದ್ದು, ರಸ್ತೆ ಅವ್ಯವಸ್ಥೆಯಿಂದಾಗಿ ಪ್ರವಾಸಿಗರು ಇಲ್ಲಿಗೆ ಬರಲು ಹಿಂಜರಿಯುತ್ತಿದ್ದಾರೆ.

ಬಸ್ ಸೌಕರ್ಯವೂ ಇಲ್ಲದ ಇಲ್ಲಿನ ಗ್ರಾಮಗಳಿಗೆ ಬಾಡಿಗೆ ವಾಹನಗಳ ಚಾಲಕರು ಬರಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ. ಕೂಡಲೇ ಈ ರಸ್ತೆಯನ್ನು ಮತ್ತೆ ಸಂಪೂರ್ಣವಾಗಿ ದುರಸ್ತಿ ಮಾಡುವ ಮೂಲಕ ಸ್ಥಳೀಯರ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಇಲ್ಲಿನ ನಿವಾಸಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

” ನಾನು ಆಟೋ ಚಲಾಯಿಸಿ ಜೀವನ ನಡೆಸುತ್ತಿದ್ದೇನೆ. ರಸ್ತೆ ಕಾಮಗಾರಿ ನಡೆಯುವಾಗಲೇ ಕಳಪೆಯಾಗಿರುವುದನ್ನು ಗುತ್ತಿಗೆದಾರರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದೆವು. ಸ್ಥಳೀಯ ಮುಖಂಡರು ಗುತ್ತಿಗೆದಾರನ ಓಲೈಕೆಗೆ ಮಣಿದು ನಮ್ಮ ಕೋರಿಕೆಯನ್ನು ಕಡೆಗಣಿಸಿದರು. ಇದೀಗ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಾವು ದುಡಿದ ಹಣವನ್ನೆಲ್ಲ ಗ್ಯಾರೇಜ್‌ಗೆ ವಿನಿಯೋಗಿಸುವಂತಾಗಿದೆ.”

-ಮುಸ್ತಫ್, ಆಟೋ ಚಾಲಕ, ಸಿದ್ದಾಪುರ 

” ಶಾಸಕ ಎ.ಎಸ್. ಪೊನ್ನಣ್ಣ ಅವರ ವಿಶೇಷ ಕಾಳಜಿಯಿಂದ ಕರಡಿಗೋಡು- ಸಿದ್ದಾಪುರದ ೩ ಕಿ.ಮೀ. ಸಂಪರ್ಕ ರಸ್ತೆ ಅಭಿವೃದ್ಧಿಗೆ ೩೦ ಲಕ್ಷ ರೂ. ಅನುದಾನ ದೊರಕಿತ್ತು. ಸ್ಥಳೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಕೈಗೊಂಡ ಕಾಮಗಾರಿ ಕಳಪೆಯಾಗಿ ೧೮ ತಿಂಗಳುಗಳಲ್ಲೆ, ಇಡೀ ರಸ್ತೆ ಗುಂಡಿಮಯವಾಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.”

-ಕೆ.ಬಿ. ಸುರೇಶ್, ಕರಡಿಗೋಡು ಗ್ರಾಮ

” ರಸ್ತೆ ಸಂಪೂರ್ಣಗುಂಡಿಮಯವಾಗಿದೆ. ದಿನನಿತ್ಯ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಆದರೆ ಈ ರಸ್ತೆ ಅಗಲೀಕರಣವಾಗಿಲ್ಲ. ಒಂದು ವಾಹನ ಮತ್ತೊಂದು ವಾಹನಕ್ಕೆ ದಾರಿ ಕೊಡಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ತಂಡೋಪತಂಡವಾಗಿ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಈಗ ಬಂದು ಇಲ್ಲಿನ ಸ್ಥಿತಿಗತಿಗಳು, ಅಭಿವೃದ್ಧಿ ಕಾಮಗಾರಿಗಳ ಪರಿಯನ್ನು ಪರಿಶೀಲಿಸಬೇಕು. ತಪ್ಪಿತಸ್ಥ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

-ಅಲವಿ, ಆಟೋಚಾಲಕ, ಸಿದ್ದಾಪುರ

 

 

Tags:
error: Content is protected !!