ಪ್ರಾಧಿಕಾರಕ್ಕೆ ಪತ್ರ ಬರೆಯುವ ಅಧಿಕಾರವಿದೆ, ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ: ಬಿಳಿಮಲೆ
• ಸಂದರ್ಶನ: ರಡ್ಡಿ ಕೋಟಿ
ಕನ್ನಡದ ಸಮಸ್ಯೆಗಳು ಬೆಟ್ಟದ ಹಾಗೆ ಬೆಳೆಯುತ್ತಲೇ ಇವೆ. ಇಂದು ಕರ್ನಾಟಕದಲ್ಲಿ 45 ಸಾವಿರ ಸರ್ಕಾರಿ ಶಾಲೆಗಳು ಕಷ್ಟದಲ್ಲಿವೆ, 55 ಸಾವಿರ ಶಿಕ್ಷಕರ ನೇಮಕಾತಿ ಆಗಬೇಕು. ಈ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಕನಿಷ್ಠ ಶೇ.12 ಅನುದಾನವನ್ನು ಮೀಸಲಿಡಬೇಕು. ಇಲ್ಲದಿದ್ದರೆ ಕನ್ನಡ ಕೇವಲ ಆಡುಭಾಷೆಯಾಗಿ ಉಳಿದುಬಿಡುತ್ತದೆ. ಅಲ್ಲದೆ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನದ ಕೇಂದ್ರಕ್ಕೆ ಸ್ವಾಯತ್ತತೆ ಕೊಡಬೇಕು. ಹಾಗಾದಾಗ ಕನ್ನಡ ಭಾಷೆಯನ್ನು ಎತ್ತರಕ್ಕೆ ಕೊಂಡಯ್ಯಬಹುದು… ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಆಂದೋಲನಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡ ಅಭಿಪ್ರಾಯಗಳು ಇವು.
ಆಂದೋಲನ: ಬೇರೆ ಯಾವ ರಾಜ್ಯಗಳಲ್ಲೂ ಭಾಷೆ, ಕಲೆ ಮತ್ತು ಸಂಸ್ಕೃತಿ ಉಳಿವಿಗೆ ಸಚಿವಾಲಯ, ಇಷ್ಟೊಂದು ಅಕಾಡೆಮಿಗಳು, ಪ್ರಾಧಿಕಾರಗಳು ಇರುವ ನಿದರ್ಶನ ಇಲ್ಲ. ಇಷ್ಟೆಲ್ಲ ಇದ್ದರೂ ವರ್ಷದಿಂದ ವರ್ಷಕ್ಕೆ ಕನ್ನಡದ ಸಮಸ್ಯೆಗಳು ಬೆಟ್ಟದ ಹಾಗೆ ಬೆಳೆಯುತ್ತಲೇ ಇವೆ. ಹಾಗಾದರೆ ನಾವು ದಾರಿ ತಪ್ಪಿದ್ದು ಎಲ್ಲಿ? ಬಿಳಿಮಲೆ: ಶಿಕ್ಷಣ ಮತ್ತು ಆರೋಗ್ಯವನ್ನು ಬಹಳ ಮುಖ್ಯವಾದ ಘಟಕಗಳೆಂದು ಸರ್ಕಾರ ಪರಿಗಣಿಸಬೇಕು. ನಮ್ಮ ವಿಶ್ವವಿದ್ಯಾನಿಲಯ ಗಳು, ಶಿಕ್ಷಣ ಸಂಸ್ಥೆಗಳು ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಕೌಶಲ ತರಬೇತಿ ನೀಡಬೇಕು. ಶಿಕ್ಷಣವನ್ನು ಅತ್ಯಾಧುನಿಕಗೊಳಿಸಲು ಸರ್ಕಾರ ಮಾಡಬೇಕಾದ ತುರ್ತಾದ ಕೆಲಸ ಎಂದರೆ ಶಿಕ್ಷಣಕ್ಕೆ ಹೆಚ್ಚು ಹಣವನ್ನು ಮೀಸಲಿಡು ವುದು. ಎನ್‌ಇಪಿ ಶೇ.6 ಅನುದಾನವನ್ನು ಇಡಬೇಕೆಂದು ಹೇಳುತ್ತದೆ. ನಮ್ಮಲ್ಲಿ ಎನ್‌ಇಪಿ ಯನ್ನು ಅಳವಡಿಸಿಕೊಂಡಿದ್ದೇವೆ. ಆದರೆ ಹಣ ಇಟ್ಟಿರುವುದು ಶೇ.3ಕ್ಕಿಂತ ಕಡಿಮೆ. ಆದ್ದರಿಂದ ಕನ್ನಡ ಶಾಲೆಗಳನ್ನು ಉಳಿಸಬೇಕೆಂದರೆ ಅದಕ್ಕೆ ಕನಿಷ್ಠ ಶೇ.12ರಷ್ಟು ಅನುದಾನವನ್ನು ಬಜೆಟ್‌ನಲ್ಲಿ 5 ವರ್ಷಗಳ ಕಾಲ ಶಿಕ್ಷಣಕ್ಕೆ ಇಡಬೇಕು.
ಆಂದೋಲನ: ನಿಮಗೆ ಕೊಟ್ಟಿರುವ ಅನುದಾನ ಆಡಳಿತಾತ್ಮಕ ವೆಚ್ಚದ ಹೊರತಾಗಿ ಅಭಿವೃದ್ಧಿ ಕೆಲಸಗಳಿಗೆ ಸಾಕಾಗುತ್ತಿಲ್ಲದಿರುವಾಗ ನೀವು ಯಾಕೆ ದನಿ ಎತ್ತುತ್ತಿಲ್ಲ?
ಬಿಳಿಮಲೆ: ನಾನು ನೇಮಕವಾಗುವ ಮೊದಲೇ ಈ ವರ್ಷದ ಕೆಂಲಿನ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿ ಆಗಿತ್ತು. ಆದರೆ ಏಪ್ರಿಲ್ ಒಳಗೆ ಮಾಡಬೇಕಾದ ಕೆಲಸಗಳು ಬೇಕಾದಷ್ಟಿವೆ. ಹಾಗಾಗಿ 5 ವಿಶೇಷ ಕೋಟಿ ರೂ. ಅನ್ನು ಹೆಚ್ಚಾಗಿ ಕೇಳಿದ್ದೇನೆ. ಮುಂದಿನ ವರ್ಷಕ್ಕೆ 30 ಕೋಟಿ ರೂ. ಅನುದಾನ ನೀಡಬೇಕೆಂದು ಕೇಳಿದ್ದೇನೆ.
ಆಂದೋಲನ: ಕನ್ನಡ ನಾಮಫಲಕಗಳಿರಬೇಕು ಎಂದು ನಿಯಮ ಜಾರಿ ಮಾಡಲಾಗಿದೆ. ಆದರೆ ಸಂಪೂರ್ಣ ಪಾಲನೆಯಾಗುತ್ತಿಲ್ಲ?
ಬಿಳಿಮಲೆ: ನಾಮಫಲಕಗಳಲ್ಲಿ ಶೇ.60 ಕನ್ನಡ ಇರಬೇಕು. ಉಳಿದ ಶೇ.40 ಯಾವುದಾದರೂ ಭಾಷೆ ಇರಬಹುದು ಎಂಬುದು ಒಂದು ಪ್ರಜಾಪ್ರಭುತವಾದಿ ಸರ್ಕಾರ ತೆಗೆದುಕೊಳ್ಳಬಹುದಾದ ಅತ್ಯುತ್ತಮವಾದತೀರ್ಮಾನ ಆದರೆಸರ್ಕಾರಿ ಅಧಿಕಾರಿಗಳೇ ಅದಕ್ಕೆ ಆಸಕ್ತಿ ತೋರದಿದ್ದರೆ ಸಾಧ್ಯವಾಗುವುದಿಲ್ಲ. ನಾಮಫಲಕ ಗಳಲ್ಲಿ ಕನ್ನಡ ಕಾಣದಿದ್ದರೆ ಅವರ ಲೈಸೆನ್ಸ್ ವಿಸ್ತರಣೆಗೆ ಬಂದಾಗ ನಾಮಫಲಕವನ್ನು ಕನ್ನಡದಲ್ಲಿ ಬದಲಾಯಿಸದ ಹೊರತು ವಿಸ್ತರಣೆ ಮಾಡಬಾರದು, ಆಗ ಎಲ್ಲರೂ ಪಾಲಿಸುತ್ತಾರೆ.
ಆಂದೋಲನ: ಬೆಂಗಳೂರಲ್ಲಿ ಕನ್ನಡವೇ ಅಲ್ಪಸಂಖ್ಯಾತರ ಭಾಷೆಯಾಗಿ ಹೋಗಿದೆ. ಇಂಥ ಸನ್ನಿವೇಶದಲ್ಲಿ ನೀವು ಏನು ಮಾಡುತ್ತಿದ್ದೀರಿ?
ಬಿಳಿಮಲೆ: ಈಗ ಬೆಂಗಳೂರಿನಲ್ಲಿ ಕನ್ನಡಿಗರು ಶೇ.32 ಮಾತ್ರ ಇದ್ದಾರೆ. ಸಾಂವಿಧಾನಿಕವಾಗಿ ವಲಸೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಕರ್ನಾಟಕಕ್ಕೆ ಯಾರು ಬೇಕಾದರೂ ಬರಬಹುದು. ಆದರೆ ಹಾಗೆ ಬಂದವರು ಸ್ಥಳೀಯ ಭಾಷೆಯನ್ನು ಕಲಿಯಬೇಕು. ಪರ ಭಾಷಿಕರನ್ನು ವಿರೋಧ ಮಾಡುವ ಬದಲಾಗಿ ನಮ್ಮ ಭಾಷೆಯನ್ನು ಅವರೊಂದಿಗೆ ಮಾತನಾಡಿದರೆ ಅವರು ಕಲಿತೇ ಕಲಿಯುತ್ತಾರೆ. ಬೆಂಗಳೂರಿನಲ್ಲಿ ಈಗ 34 ಕಡೆ ಕನ್ನಡಿಗರಲ್ಲದವರಿಗೆ ಬೇಸಿಕ್ ಕನ್ನಡ ಕಲಿಕಾ ಕೇಂದ್ರಗಳನ್ನು ಆರಂಭಿಸಿದ್ದೇವೆ. ಉದಾಹರಣೆಗೆ ನಿಮ್ಹಾನ್ಸ್‌ನಲ್ಲಿ, ಆರ್‌ಬಿಐನಲ್ಲಿ, ಹಲವು ಕಾಲೇಜುಗಳಲ್ಲಿ ಅನ್ಯ ಭಾಷಿಕರಿಗೆ ಕನ್ನಡ ಕಲಿಸುತ್ತಿದ್ದೇವೆ. ಅದಕ್ಕಾಗಿಯೇ 36 ಗಂಟೆಗಳ ಹೊಸ ಪಠ್ಯಕ್ರಮವನ್ನು ತಯಾರು ಮಾಡಿದ್ದೇನೆ.
ಆಂದೋಲನ: ಬ್ಯಾಂಕ್‌ಗಳಿಗೆ ಹೋದರೆ ಅಲ್ಲಿ ಕನ್ನಡದಲ್ಲಿ ಮಾತನಾಡುವುದಿಲ್ಲ. ಕನ್ನಡ ಬಿಟ್ಟು ಬೇರೆ ಭಾಷೆ ಬಾರದ ಕನ್ನಡಿಗರು ಏನು ಮಾಡಬೇಕು?
ಬಿಳಿಮಲೆ: ಬ್ಯಾಂಕ್‌ಗಳಲ್ಲಿ ಸ್ಥಳೀಯರಿರಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಅದು ಜಾರಿಯಾಗುತ್ತಿಲ್ಲ ಇದನ್ನು ಹಣಕಾಸು ಸಚಿವರೊಂದಿಗೆ ಮಾತನಾಡಿ ಆದೇಶ ಹೊರಡಿಸುವಂತೆ ಮಾಡಬೇಕೆಂದು ಮನವಿ ಮಾಡಲಿದ್ದೇವೆ. ಸ್ಥಳೀಯ ಶಾಖೆಗಳಲ್ಲಿ ಫ್ರೆಂಟ್ ಡೆಸ್ಕ್‌ಗಳಲ್ಲಿ ಒಬ್ಬರಾದರೂ ಕನ್ನಡದವರು ಇರಬೇಕು. ಒಂದು ವೇಳೆ ಕನ್ನಡ ಬಾರದವರಾದರೆ, ಕನ್ನಡ ಕಲಿತು ಪರೀಕ್ಷೆ ಪಾಸಾಗಬೇಕು. ಇಲ್ಲದಿದ್ದರೆ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂಬ ಕಾನೂನು ಮಾಡಬೇಕೆಂದು ಮನವಿ ಮಾಡಲಿದ್ದೇವೆ.
ಆಂದೋಲನ: ರೈಲ್ವೆ ಇಲಾಖೆಯಲ್ಲೂ ಕನ್ನಡಿಗರು ಕಾಣುವುದಿಲ್ಲ?
ಬಿಳಿಮಲೆ: ಸಂವಿಧಾನದ 8ನೇ ಷೆಡ್ಯೂಲ್‌ನಲ್ಲಿರುವ 22 ಭಾಷೆಗಳಲ್ಲೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಸಂಸ್ಥೆಗಳ ಪರೀಕ್ಷೆಗಳು ನಡೆಯಬೇಕು. ಈ ಕುರಿತು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಸಭೆ ನಡೆಸಿ ಇದಕ್ಕೊಂದು ಪರಿಹಾರ ಮಾಡಬೇಕೆಂದಿದ್ದೇವೆ.
ಆಂದೋಲನ: ಬೆಂಗಳೂರಲ್ಲಿ ಕನ್ನಡ ಸಂಘ ಸಂಸ್ಥೆಗಳ ಲಾಬಿಯೇ ನಡೆಯು ತ್ತಿದೆ. ಕನ್ನಡದ ಹೆಸರಿನಲ್ಲಿ ದುಡ್ಡನ್ನು ಲೂಟಿ ಮಾಡುತ್ತಿವೆ. ಅದನ್ನು ಹತ್ತಿಕ್ಕಲು ನೀವು ಏನು ಮಾಡುತ್ತಿದ್ದೀರಿ?
ಬಿಳಿಮಲೆ: ಶೀಘ್ರದಲ್ಲೇ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ಕುವೆಂಪು ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಸೇರಿದಂತೆ ಸರ್ಕಾರದ ಅಂಗಸಂಸ್ಥೆಗಳೆಲ್ಲ ಸಭೆ ಸೇರಿ, ಸಂಘ ಸಂಸ್ಥೆಗಳಿಗೆ ಅನುದಾನ ಕೊಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನಿರ್ಧರಿಸಲಿದ್ದೇವೆ.
ಆಂದೋಲನ: ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಣೆ ಮಾತ್ರ ಮಾಡಲಾಗಿದೆ. ಆದರೆ ಅದಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಹಾಗೂ ಅದಕ್ಕೆ ಸ್ವಾಯತ್ತತೆಯೂ ದೊರೆತಿಲ್ಲವಲ್ಲ?
ಬಿಳಿಮಲೆ: ಕೇಂದ್ರ ಸರ್ಕಾರವು ಸ್ವಾಯತ್ತತೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸುವ ಸಾಧ್ಯತೆಗಳು ತುಂಬಾ ಕಡಿಮೆ.
ಆಂದೋಲನ: ಹಾಗಾದರೆ ತಮಿಳುನಾಡಿನವರು ಹೇಗೆ ಪಡೆದುಕೊಂಡರು?
ಬಿಳಿಮಲೆ: ಅದು 2008ರಲ್ಲಿ ಆದದ್ದು. ಈಗ 11 ಶಾಸ್ತ್ರೀಯ ಭಾಷೆಗಳಿವೆ. ಇದು ಕೇಂದ್ರ ಸರ್ಕಾರದ ಯೋಜನೆಯಾದ್ದರಿಂದ ಅದನ್ನು ರಾಜ್ಯ ಸರ್ಕಾರಕ್ಕೆ ವಹಿಸಲು ಸಮ್ಮತಿಸುತ್ತಿಲ್ಲ. ಬದಲಾಗಿ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಮೈಸೂರಿನಲ್ಲೂ ಸ್ಥಾಪಿಸಿ, ಅದಕ್ಕೆ ಸ್ವಾಯತ್ತತೆಯನ್ನು ನೀಡಲಾಗುತ್ತದೆ. ಜೊತೆಗೆ ಬೆಂಗಳೂರಿನಲ್ಲಿ ಅದರ ಒಂದು ಟೆಕ್ನಿಕಲ್ ಸೆಂಟರ್ ಅನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಆಂದೋಲನ: ನಿರುದ್ಯೋಗ ಇದ್ದರೂ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡುತ್ತಿಲ್ಲವೇಕೆ?
ಬಿಳಿಮಲೆ: ಈ ಬಗ್ಗೆ ಸರ್ಕಾರವನ್ನೇ ಕೇಳಬೇಕು. ಶೇ.10 ರಷ್ಟು ಹಣವನ್ನಾದರೂ ಶಿಕ್ಷಣಕ್ಕೆ ಮೀಸಲಿಟ್ಟರೆ ಇದು ಆಗುತ್ತದೆ. ಸರ್ಕಾರ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಹಣ ಕೊಟ್ಟು ಸಹಕರಿಸಿದರೆ ಕರ್ನಾಟಕ ಒಂದು ಬಲಿಷ್ಠ ರಾಜ್ಯವಾಗಿ ಉಳಿಯುತ್ತದೆ. ಇಲ್ಲದಿದ್ದರೆ 21ನೇ ಶತಮಾನ ಕೊನೆಯಾಗುವುದರೊಳಗೆ ಕನ್ನಡ ಒಂದು ಆಡುಭಾಷೆಯಾಗಿ ಮಾತ್ರ ಉಳಿದು ಬಿಡುತ್ತದೆ.
ಆಂದೋಲನ: ನಿಮ್ಮ ಹೊಸ ಯೋಜನೆಗಳೇನು?
ಬಿಳಿಮಲೆ: ನನ್ನ ಅಧಿಕಾರಾವಧಿಯಲ್ಲಿ ಅನುಷ್ಠಾನಗೊಳಿ ಸಲು 4 ಯೋಜನೆಗಳನ್ನು ಹಾಕಿಕೊಂಡಿದ್ದೇನೆ.
- ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ಮೇಲೆ ನೂರು ಪುಸ್ತಕಗಳನ್ನು ತಯಾರು ಮಾಡುವುದು. ಈಗಾಗಲೇ 20 ಪುಸ್ತಕಗಳು ಬಂದಿವೆ.
- ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ತರಬೇಕಿದೆ. ಸಿಐಐಎ ನಿಂದ ಹೊರ ತಂದರೆ ಸ್ವಲ್ಪ ಕೆಲಸ ಆಗುತ್ತದೆ.
- ಶತಮಾನ ಪೂರ್ಣಗೊಳಿಸಿದ ಶಾಲೆಗಳ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ.
- ಕರ್ನಾಟಕದಲ್ಲಿ 65,000 ಊರಿನ ಹೆಸರುಗಳಿವೆ. ಈ ಊರಿನ ಹೆಸರುಗಳು ನಶಿಸಿ ‘ಹೋಗುತ್ತಿವೆ. ಇಲ್ಲವೇ ಬದಲಾಯಿಸಲಾಗುತ್ತಿದೆ. ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಭಾರತೀಯ ಸ್ಟೇಟ್ಸ್ ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರು ನಾಮಫಲಕಗಳಲ್ಲಿ ಊರಿನ ಹೆಸರು ಇರುವಂತೆ ನೋಡಿಕೊಳ್ಳುವ ತರಬೇತಿಯನ್ನು ನೀಡಲಿದ್ದೇವೆ.
ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದಕ್ಕೆ ಏನು ಕ್ರಮ ತೆಗೆದುಕೊಳ್ಳುತ್ತಿದ್ದೀರಿ?
ಬಿಳಿಮಲೆ: ಇಂದು ಕರ್ನಾಟಕದಲ್ಲಿ 45 ಸಾವಿರ ಸರ್ಕಾರಿ ಶಾಲೆಗಳು ಕಷ್ಟದಲ್ಲಿವೆ, 55 ಸಾವಿರ ಶಿಕ್ಷಕರ ನೇಮಕಾತಿ ಆಗಬೇಕು. ಈ ಸಮಸ್ಯೆ ಎಷ್ಟು ದೊಡ್ಡ ದಾಗಿದೆ ಎಂದರೆ, ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸಲು ಸಾಧ್ಯವಿಲ್ಲ. ಆದರೆ ಕನ್ನಡ ಶಾಲೆಗಳು ಮುಚ್ಚುತ್ತಿರುವ ಸಮಯದಲ್ಲಿ ಸುಮ್ಮನೆ ಕುಳಿತು ಕೊಳ್ಳಲೂ ಸಾಧ್ಯವಿಲ್ಲ. ಪ್ರಾಧಿಕಾರ ಹಲ್ಲಿಲ್ಲದ ಹಾವಿನಂತೆ. ಅದಕ್ಕೆ ಪತ್ರ ಬರೆಯುವ ಅಧಿಕಾರ ಇದೆ, ಆದರೆ ಶಿಕ್ಷೆ ಕೊಡುವ ಅಥವಾ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ. ಹಾಗಾಗಿ ಕನ್ನಡದ ವಿಷಯಕ್ಕೆ ಸಂಬಂಧಿಸಿದ ಸಣ್ಣ ಸಣ್ಣ ತೀರ್ಮಾನಗಳನ್ನಾದರೂ ತೆಗೆದುಕೊಳ್ಳುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಬೇಕು. ನಮಗೂ ಸೂಕ್ತವಾದ ವಕೀಲರನ್ನು ಇಟ್ಟುಕೊಂಡು ಕಾನೂನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ಕೊಡುವ ಅಧಿಕಾರವನ್ನು ಕೊಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದೇನೆ.