Mysore
25
broken clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಕೋಟೆ ಆಸ್ಪತ್ರೆ ಆವರಣದಲ್ಲಿದ್ದ ಜನಔಷಧಿ ಕೇಂದ್ರ ಬಂದ್

ಮಂಜು ಕೋಟೆ

ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ದುಬಾರಿ ದರ ನೀಡಿ ಔಷಧಿ ಖರೀದಿಸಬೇಕಾದ ಪರಿಸ್ಥಿತಿ; ಜನರ ಆಕ್ರೋಶ

ಎಚ್.ಡಿ.ಕೋಟೆ: ಬಡರೋಗಿಗಳಿಗೆ ಆಶ್ರಯವಾಗಿದ್ದ ಜನಔಷಧಿ ಕೇಂದ್ರವನ್ನು ನ್ಯಾಯಾಲಯದ ತಡೆ ಆದೇಶದ ನಡುವೆಯೂ ಎಂಎಸ್‌ಐಎಲ್‌ನವರು ಬಂದ್ ಮಾಡಿರುವ ಘಟನೆ ನಡೆದಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ, ಬಡರೋಗಿಗಳಿಗೆ ಅನುಕೂಲಕರವಾದ ಜನಔಷಧಿ ಕೇಂದ್ರವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗಿತ್ತು. ಆದರೆ, ಈಗ ಅದನ್ನು ಬಂದ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ೭-೮ ವರ್ಷಗಳ ಹಿಂದೆ ಈ ಯೋಜನೆ ಜಾರಿಗೊಂಡಾಗ ಎಂಎಸ್ಐಎಲ್‌ನವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಪ್ರಾರಂಭ ಮಾಡಿ, ಪ್ರತಿನಿತ್ಯ ನೂರಾರು ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಬಹುತೇಕ ಕಾಯಿಲೆಗಳಿಗೆ ಔಷಧಿಯನ್ನು ನೀಡುತ್ತಿದ್ದರು. ಇದರಿಂದ ತಾಲ್ಲೂಕಿನ ಬಹುತೇಕ ಭಾಗಗಳ ರೋಗಿಗಳಿಗೆ ಅನುಕೂಲವಾಗಿತ್ತು.

ರಾಜ್ಯ ಸರ್ಕಾರ ಇತ್ತೀಚೆಗೆ ಆಸ್ಪತ್ರೆ ಆವರಣದಲ್ಲಿರುವ ಜನಔಷಧಿ ಕೇಂದ್ರಗಳನ್ನು ಮುಚ್ಚಿ, ಆಸ್ಪತ್ರೆಗಳಲ್ಲಿಯೇ ಔಷಧಿಗಳನ್ನು ವಿತರಿಸಲಾಗುವುದು ಎಂದು ಆದೇಶ ಹೊರಡಿಸಿತ್ತು. ಇದರಿಂದ ಆತಂಕಗೊಂಡ ಬಹುತೇಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯವು ಪರಿಶೀಲಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಇದರಿಂದ ಬಡ ರೋಗಿಗಳು ನಿಟ್ಟುಸಿರು ಬಿಟ್ಟಿದ್ದರು.

ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿದ್ದ ಜನ ಔಷಧಿ ಕೇಂದ್ರವನ್ನು ಎಂಎಸ್‌ಐಎಲ್‌ನವರು ಸಂಪೂರ್ಣವಾಗಿ ಬಂದ್ ಮಾಡಿ ಅಲ್ಲಿದ್ದ ಔಷಧಿ, ಮತ್ತಿತರ ಪರಿಕರಗಳನ್ನು ಸಾಗಿಸಿದ್ದಾರೆ. ಇದರಿಂದಾಗಿ ವೃದ್ಧರು, ಬಡ ರೋಗಿಗಳು ಅಕ್ಕ ಪಕ್ಕದ ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ದುಬಾರಿ ಬೆಲೆ ನೀಡಿ ಔಷಧಿಗಳನ್ನು ಖರೀದಿಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು.

” ಜನ ಔಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ಬಹಳಷ್ಟು ಔಷಧಿಗಳನ್ನು ಖರೀದಿಸುತ್ತಿದ್ದೆವು. ಈಗ ಅದನ್ನು ಬಂದ್ ಮಾಡಿರುವುದರಿಂದ ಬಹಳಷ್ಟು ಕಷ್ಟ ಎದುರಾಗುತ್ತಿದೆ. ತಾಲ್ಲೂಕಿನಲ್ಲಿ ಹೇಳುವರು ಮತ್ತು ಕೇಳುವರು ಇಲ್ಲದಂತಾಗಿರು ವುದರಿಂದ ಇಂಥ ಸಮಸ್ಯೆ ಎದುರಾಗಿದೆ.”

-ಅರುಣ್, ಪಟ್ಟಣದ ನಿವಾಸಿ

” ಕೆಲವೊಂದು ಕಾರಣಕ್ಕಾಗಿ ನಮ್ಮ ವ್ಯಾಪ್ತಿಯಲ್ಲಿರುವ ಜನ ಔಷಧಿ ಕೇಂದ್ರವನ್ನು ಬಂದ್ ಮಾಡುತ್ತಿದ್ದೇವೆ. ಎಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣದ ಜನ ಔಷಧಿ ಕೇಂದ್ರವನ್ನು ಶುಕ್ರವಾರ ಬಂದ್ ಮಾಡಿದ್ದೇವೆ. ನ್ಯಾಯಾಲಯದ ತಡೆ ಆದೇಶ ನಮಗೆ ಅನ್ವಯವಾಗುವುದಿಲ್ಲ. ಅದು ಕೆಲವೊಂದಕ್ಕೆ ಸೀಮಿತವಾಗಿದೆ.”

-ಶ್ರೀನಿವಾಸ್, ಜನರಲ್ ಸೀನಿಯರ್ ಮ್ಯಾನೇಜರ್, ಎಂಎಸ್‌ಐಎ

Tags:
error: Content is protected !!