ಮಾ.೨೫ರವರೆಗೆ ಒಂದು ತಿಂಗಳ ಕಾಲ ನಡೆಯುವ ಪೂಜಾ ಕೈಂಕರ್ಯ
ಭೇರ್ಯ ಮಹೇಶ್
ಕೆ.ಆರ್.ನಗರ: ತಾಲ್ಲೂಕಿನ ಕಪ್ಪಡಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಮಹಾ ಶಿವರಾತ್ರಿ ದಿನದಿಂದ ಆರಂಭವಾಗಿದ್ದು, ಮಾ.೨೫ ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ.
ಘರ್ಷಣೆ, ಕಲಹ, ಒಡಕು ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳು ಕಂಡು ಬಂದರೆ ಇಂದಿಗೂ ಯಾವುದೇ ಕುಲ, ಜಾತಿ, ಧರ್ಮ, ಸಮುದಾಯದ ಭೇದವಿಲ್ಲದೆ ಕಪ್ಪಡಿಗೆ ಬಂದು ಸತ್ಯ ಮಾಡು ಎಂಬುದು ವಾಡಿಕೆಯಾಗಿದೆ.
ಕಪ್ಪಡಿ ಕ್ಷೇತ್ರವು ಜಾನಪದ ಕಾವ್ಯ ಹಾಗೂ ಧಾರ್ಮಿಕ ಆಚರಣೆಯ ಪ್ರಮುಖ ಕೇಂದ್ರ ಬಿಂದುವಾಗಿದ್ದು, ಮೈಸೂರಿನಿಂದ ೫೦ ಕಿ.ಮೀ. ಮತ್ತು ಕೆ.ಆರ್.ನಗರದಿಂದ ೮ ಕಿಲೋ ಮೀಟರ್ ದೂರದ ಕಾವೇರಿ ನದಿ ದಡದಲ್ಲಿದೆ. ಕಪ್ಪಡಿಯಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕ ಜಾತ್ರೆಯು ವಿಶಿಷ್ಟವಾಗಿದ್ದು, ಮಹಾ ಶಿವರಾತ್ರಿಯಂದು ಆರಂಭವಾಗಿ ಯುಗಾದಿ ಹಬ್ಬದವರೆಗೂ ಒಂದು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ. ಇಲ್ಲಿಗೆ ಕೇರಳ ರಾಜ್ಯದ ಗಡಿಭಾಗ ಸೇರಿದಂತೆ ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ ಮತ್ತು ಉತ್ತರ ಕರ್ನಾಟಕದ ನಾನಾ ಭಾಗಗಳಿಂದಲೂ ಭಕ್ತ ಸಾಗರ ಹರಿದು ಬರುತ್ತದೆ.
ಕ್ಷೇತ್ರದಲ್ಲಿ ಮೂರ್ತಿ ಇಲ್ಲ: ಇಲ್ಲಿ ಯಾವುದೇ ರೀತಿಯ ಮೂರ್ತಿ, ವಿಗ್ರಹ ಇರುವುದಿಲ್ಲ. ಇಲ್ಲಿರುವ ಉರಿಗಣ್ಣು ರಾಚಪ್ಪಾಜಿಯವರ ಗದ್ದುಗೆಯೇ ಸಮಸ್ತ ಪೂಜೆಯ ಕೇಂದ್ರ ಬಿಂದುವಾಗಿದೆ. ಅದಕ್ಕೆ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಆದರೆ ಇಲ್ಲಿಗೆ ಭಕ್ತರು ಪೂಜೆಗೆ ತರುವ ತೆಂಗಿನಕಾಯಿಯನ್ನು ಒಡೆಯುವುದಿಲ್ಲ, ಭಕ್ತರಿಗೂ ಹಿಂದಿರುಗಿಸುವುದಿಲ್ಲ. ಇದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಹುಣ್ಣಿಮೆಯ ಬಳಿಕ ಜನ ಸಾಗರವೇ ಹರಿದು ಬರುತ್ತದೆ. ಧರೆಗೆ ದೊಡ್ಡವರೆಂದೇ ಹೆಸರುವಾಸಿಯಾಗಿರುವ ರಾಚಪ್ಪಾಜಿ, ಚನ್ನಾಜಮ್ಮ ಆ ಕಾಲದ ಆರ್ಥಿಕ, ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದವರು. ಮೈಸೂರು ಅರಸರಿಂದ ಪೂಜೆ ಸ್ವೀಕರಿಸಿ ಎಡತೊರೆ, ಚಂದಗಾಲು ಮಾರ್ಗವಾಗಿ ಸಾಗಿ ದಟ್ಟ ಕಾಡಿನಿಂದ ಆವೃತವಾದ ಕಪ್ಪಡಿ ಕ್ಷೇತ್ರದಲ್ಲಿ ನೆಲೆ ನಿಂತರೆಂದು ಇತಿಹಾಸ ತಿಳಿಸುತ್ತದೆ.
ಉರಿಗದ್ದುಗೆ ಮಹಿಮೆ ಅಪಾರ: ಒಮ್ಮೆ ಎಡತೊರೆಯ ಉಪ್ಪಲಗಶೆಟ್ಟಿ ಎಂಬಾತನ ಕನಸಿನಲ್ಲಿ ಕಾಣಿಸಿಕೊಂಡ ರಾಚಪ್ಪಾಜಿಯವರು ತಮಗೆ ಶಿವಯೋಗ ಮಂದಿರವನ್ನು ನಿರ್ಮಾಣ ಮಾಡಿಕೊಡುವಂತೆ ಪ್ರೇರಣೆ ನೀಡಿದರು. ಗುರುವಿನ ಆಣತಿಯಂತೆ ಜಲ ಬಾವಿಯನ್ನು ತೋಡಿ ನಂದಾದೀವಿಗೆ ಗೂಡನ್ನು ಕೊರೆದ ಆತ ವರವೊಂದನ್ನು ಬೇಡುತ್ತಾನೆ. ಉಪ್ಪಲಗಶೆಟ್ಟಿಯ ತನ್ನ ಬಯಕೆಯಂತೆ ಉರಿ ಗದ್ದುಗೆಯ ಮೇಲೆ ಇರುವ ರುಮಾಲು ಪಡೆಯಬೇಕೆಂದು ಆರತಿ ಇಡುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಹೆಸರಿನಂತೆಯೇ ಬಹಳ ಶಕ್ತಿಶಾಲಿ, ಉರಿ ಗದ್ದುಗೆಯಾಗಿದ್ದು, ಈಗಲೂ ಈ ಗದ್ದುಗೆ ಮೇಲಕ್ಕೆ ಜೋಳವನ್ನು ಎಸೆದರೆ ಪುರಿಯಾಗಿ ಸಿಡಿಯುತ್ತವೆ. ಈ ನರರ ಹಂಗು ನಮಗಿನ್ನು ಬೇಡವೆಂದು ರಾಚಪ್ಪಾಜಿ ತನ್ನ ಸಹೋದರಿ ಚನ್ನಾಜಮ್ಮನವರೊಡನೆ ಬಾವಿಗಿಳಿದು ಶಾಶ್ವತ ಶಿವಯೋಗದಲ್ಲಿ ನೆಲೆಸಿದ್ದಾರೆ ಎಂಬುದನ್ನು ಪುರಾಣದಿಂದ ತಿಳಿಯಬಹುದು.
ಅಂದಿನಿಂದಲೂ ಕಪ್ಪಡಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಮೈಸೂರು ಅರಸರಿಂದ ಪೂಜಾ ಕೈಂಕರ್ಯಗಳು ನಡೆದು ಬಂದಿವೆ. ನೀಲಗಾರರು, ಕಂಸಾಳೆಯವರು ಹಾಡುವ ಮಂಟೇಸ್ವಾಮಿ ಕಾವ್ಯದಲ್ಲಿ ಕಪ್ಪಡಿ ರಾಚಪ್ಪಾಜಿಯ ಮಹಿಮೆ ಮತ್ತು ಪವಾಡಗಳ ದರ್ಶನವಾಗುತ್ತದೆ.
ಪ್ರತಿ ವರ್ಷ ಶಿವರಾತ್ರಿಯಿಂದ ಯುಗಾದಿಯವರೆಗೆ ನಡೆಯುವ ಕಪ್ಪಡಿ ಜಾತ್ರೆಯಲ್ಲಿ ಭಕ್ತಾದಿಗಳು ಗುಮ್ಮಿನಿರ್ಮಿಸಿಕೊಂಡು ವಾರಗಟ್ಟಲೆ ಉಳಿದುಕೊಂಡು ತಮ್ಮ ಸಂಬಂಧಿಕರು, ನೆಟ್ಟರಿಷ್ಟರನ್ನು ಕರೆದು ಪ್ರಾಣಿಬಲಿ ನೀಡಿ, ದೇವರಿಗೆ ನೈವೇದ್ಯ ರೂಪದಲ್ಲಿ ಪೂಜೆ ಸಲ್ಲಿಸುತ್ತಾರೆ. ಸಿದ್ದಪ್ಪಾಜಿ ಗುಡ್ಡರು ಪೂಜೆ ಸಲ್ಲಿಸಿದ ನಂತರ ಊಟ ಬಡಿಸಲಾಗುತ್ತದೆ.
ಮಳವಳ್ಳಿ ಹಾಗೂ ಬೊಪ್ಪೇಗೌಡನಪುರದ ಗುರು ಮನೆತನದವರು ಪ್ರತಿ ವರ್ಷ ಸರದಿಯಂತೆ ಜಾತ್ರೆ ಪ್ರಾರಂಭವಾದಾಗಿನಿಂದ ಮುಗಿಯುವವರೆಗೂ ಇಲ್ಲಿಯೇ ಇದ್ದು, ಪೂಜಾ ಕೈಂಕರ್ಯಗಳನ್ನು ನಡೆಸಿಕೊಡುತ್ತಾರೆ. ಈ ಬಾರಿ ಮಳವಳ್ಳಿ ತಾಲ್ಲೂಕಿನ ರಾಜ ಬೊಪ್ಪೇಗೌಡನಪುರದ ಮಂಟೇಸ್ವಾಮಿ ಮಠದ ಬಿ.ಎಸ್.ಜ್ಞಾನಾನಂದ ಚನ್ನರಾಜೇ ಅರಸ್ ಅವರ ಉಸ್ತುವಾರಿಯಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ.
” ಮೈಸೂರು ಜಿಲ್ಲೆಯಲ್ಲಿ ತಿಂಗಳ ಕಾಲ ನಡೆಯುವ ಜಾತ್ರೆ ಇದ್ದರೆ ಅದು ಕಪ್ಪಡಿ ಕ್ಷೇತ್ರದ ಮಂಟೇಸ್ವಾಮಿಜಾತ್ರೆ. ರಾಜಕೀಯ ಘರ್ಷಣೆ, ಕಲಹ, ಒಡಕು ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳು ಕಂಡು ಬಂದರೆ ಇಂದಿಗೂ ಯಾವುದೇ ಕುಲ, ಜಾತಿ, ಧರ್ಮ, ಸಮುದಾಯದ ಭೇದವಿಲ್ಲದೆ ಕಪ್ಪಡಿಗೆ ಬಂದು ಸತ್ಯ ಮಾಡು ಎಂಬುದು ವಾಡಿಕೆಯಾಗಿದೆ.”
-ಮಧು ಕಪ್ಪಡಿ, ಮಠದ ಭಕ್ತ.





